ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವಚನಕಾರರ ಜಯಂತಿ; ಸಭಾಂಗಣ ಭಣಭಣ

ಪ್ರಚಾರದ ಕೊರತೆ, ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿದ ಕನ್ನಡಪರ ಸಂಘಟನೆಗಳು
Last Updated 11 ಮಾರ್ಚ್ 2017, 6:31 IST
ಅಕ್ಷರ ಗಾತ್ರ
ಯಾದಗಿರಿ: ಬೃಹತ್‌ ಸಭಾಂಗಣ... ಒಂದಷ್ಟು ಸರ್ಕಾರಿ ನೌಕರರು, ಶಾಸಕ ಮಾಲಕರೆಡ್ಡಿ ಸೇರಿದಂತೆ ಒಂದಷ್ಟು ಮಂದಿ ಗಣ್ಯರು ಮಾತ್ರ ಕಂಡುಬಂದದ್ದು ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿ ಸಮಾರಂಭದಲ್ಲಿ. ಪ್ರಚಾರದ ಕೊರತೆಯಿಂದಾಗಿ ನೂತನ ಜಿಲ್ಲಾಡಳಿತ ಭವನದ ಸಭಾಂಗಣ ಭಣಭಣ ಎನ್ನುತ್ತಿತ್ತು. 
 
ನಗರದಲ್ಲಿ ಬಹುತೇಕ ದಲಿತರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ದಲಿತ ಸಂಘಟನೆಗಳೂ ಸಹ ನಗರದಲ್ಲಿ ಹೆಚ್ಚಿವೆ. ಆದರೂ, ದಲಿತ ವಚನಕಾರರ ಜಯಂತಿಯಲ್ಲಿ ಮಾತ್ರ  ಜನರೇ ಇರಲಿಲ್ಲ. ಪ್ರಚಾರದ ಕೊರತೆಯಿಂದಾಗಿ ದಲಿತರು, ಜನರು ಜಯಂತಿಯಿಂದ ದೂರ ಉಳಿಯುವಂತಾಯಿತು. ಜಿಲ್ಲಾಡಳಿತ ನಗರದಿಂದ ದೂರ ಇರುವುದು ಜನರ ಕೊರತೆಗೆ ಕಾರಣ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದದ್ದು ಕಂಡುಬಂತು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಸಮಗ್ರ ಅಧಿಕಾರಿಗಳು ಸೇರಿ ವೇದಿಕೆ ತುಂಬಿತ್ತು. ಆದರೆ, ಅಧಿಕಾರಿಗಳ, ಉಪನ್ಯಾಸಕರ ಭಾಷಣ ಕೇಳಲು ಬೆರಳೆಣಿಕೆಯಷ್ಟು ಮಂದಿ ಜನರೊಂದಿಗೆ ಸುದ್ದಿಗಾರರು ಮಾತ್ರ ಇದ್ದರು. ಇದರಿಂದ ಭಾಷಣಕಾರರು ಇರುಸುಮುರುಸು ಅನುಭವಿಸಿದರು.
 
‘ಅಧಿಕಾರಿಗಳು ಕನ್ನಡಪರ ಸಂಘಟನೆಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಹಾಗಾಗಿ, ದಲಿತ ವಚನಕಾರರ ಜಯಂತಿಯಂತಹ ಅಪೂರ್ವ ಸಮಾರಂಭಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಸಂಘಟನೆಗಳಿಗೆ ಸಮಪರ್ಕ ಮಾಹಿತಿ ನೀಡಿದರೆ ಜನರಿಗೆ ಮಾಹಿತಿಯನ್ನು ಮುಟ್ಟಿಸುವಂತಹ ಕೆಲಸ ಕೂಡ ಕನ್ನಡಪರ ಸಂಘಟನೆಗಳು ಮಾಡುತ್ತವೆ. ಆದರೆ, ಅಧಿಕಾರಿಗಳು ಸಂಘಟನೆಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ರೂಪಿಸಲಾಗುವುದು’ ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
 
‘ಮುಖ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುವುದಿಲ್ಲ. ಜಿಲ್ಲಾಧಿಕಾರಿಗೆ ಸಮಾರಂಭ ನಡೆಸಿರುವ ಬಗ್ಗೆ ಚಿತ್ರವರದಿ ಮಾಹಿತಿ ನೀಡಿದರೆ ಸಾಕು ಎಂಬಂತೆ ವರ್ತಿಸುತ್ತಿದ್ದಾರೆ. ಕನ್ನಡದ ಸಂಸ್ಕೃತಿ ಕಟ್ಟುವ ಹೊಣೆಹೊತ್ತ ಅಧಿಕಾರಿ ಸಂಘಟನೆಗಳಿಗೆ, ಜನರಿಗೆ ಮಾಹಿತಿ ನೀಡಿ ಸಮಾರಂಭಕ್ಕೆ ಆಹ್ವಾನಿಸಬೇಕು.
 
ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಟೋಕರಿ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಮುದ್ನಾಳ್ ಎಚ್ಚರಿಸಿದರು. ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಸಡರಗಿ ಅವರು ಕೂಡ ಕಾರ್ಯಕ್ರಮ ಆಯೋಜಿಸಿದ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿದರು.
 
ದಲಿತ ವಚನಕಾರರಿಗೆ ಅಪಮಾನ–ಆರೋಪ
ಶಹಾಪುರ:
ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ದಲಿತ ವಚನಕಾರರ ಜಯಂತ್ಯುತ್ಸವ’ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಾರದ ಕಾರಣ ಸಮಾರಂಭವನ್ನು ಮೊಟಕುಗೊಳಿಸಿದ ಘಟನೆ ನಗರಸಭೆಯ ಆವರಣದಲ್ಲಿ ಶುಕ್ರವಾರ ನಡೆದಿದೆ.

ದಲಿತ ವಚನಕಾರರಾದ ಮಾದರ ಚೆನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಅವರ ನೆನಪಿಗಾಗಿ ತಾಲ್ಲೂಕು ಆಡಳಿತ ಜಯಂತ್ಯುತ್ಸವ ಹಮ್ಮಿಕೊಂಡಿತ್ತು.  ಸಮಾರಂಭ ಆಯೋಜನೆ ಕುರಿತು ಯಾವುದೇ ಸಂಘಟನೆಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ದಲಿತ ಮುಖಂಡ ತಿಪ್ಪಣ್ಣ ಲಂಡನಕರ್ ದೂರಿದ್ದಾರೆ.

ಆದರೆ ದಲಿತ ವಚನಕಾರರ ಬಗ್ಗೆ ಉಪನ್ಯಾಸ ನೀಡುವಂತೆ ಉಪನ್ಯಾಸಕ ಡಾ.ರವೀಂದ್ರನಾಥ ಹೊಸ್ಮನಿ ಯವರಿಗೆ ತಾಲ್ಲೂಕು ಆಡಳಿತ ಮನವಿ ಮಾಡಿತ್ತು. ನಿಗದಿಪಡಿಸಿದ ಸಮಯಕ್ಕೆ ಉಪನ್ಯಾಸ ನೀಡಲು  ವೇದಿಕೆ  ಬಳಿ  ಬಂದು ಕುಳಿತರು ಯಾರು ಅತ್ತ ಸುಳಿಯಲಿಲ್ಲ. ಅನಿವಾರ್ಯವಾಗಿ ದಲಿತ ವಚನಕಾರರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಕೈ ತೊಳೆದುಕೊಂಡರು ಎಂದು ದಲಿತ ಮುಖಂಡ ಶಿವಪುತ್ರಪ್ಪ ಜವಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT