ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಕೃಷಿ ಸಾಲಮನ್ನಾ ಮಾಡಲು ಆಗ್ರಹ

ಜಿಲ್ಲೆಯ ವಿವಿಧೆಡೆ ಬಿಜೆಪಿ ಪ್ರತಿಭಟನೆ
Last Updated 11 ಮಾರ್ಚ್ 2017, 7:02 IST
ಅಕ್ಷರ ಗಾತ್ರ
ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿವೆ. ಬಜೆಟ್‌ನಲ್ಲಿ ರೈತರ ಎಲ್ಲ ಕೃಷಿ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದರು.
 
ನಗರದ ಸರ್‌ ಎಂ.ವಿ. ಪ್ರತಿಮೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಗ್ರಾಮದ ರೈತರು ಎತ್ತಿನ ಗಾಡಿಗಳಲ್ಲಿ ಜಮಾಯಿಸಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
 
ಮೈಷುಗರ್‌ ಕಾರ್ಖಾನೆ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕಾರ್ಖಾನೆ ಪ್ರಾರಂಭಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು. ಮೇವು ಬ್ಯಾಂಕ್‌ ಸ್ಥಾಪನೆ ಆಗಬೇಕು. ಆ ಮೂಲಕ ರೈತರು ಹಾಗೂ ಜನರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
 
ಮುಖಂಡರಾದ ಇಂಡುವಾಳು ಚಂದ್ರಶೇಖರ್‌, ಕೆ.ಎಸ್‌.ಸುಧೀರ್‌ ಕುಮಾರ್‌, ಹೆಮ್ಮಿಗೆ ಚಂದ್ರಶೇಖರ್‌, ಮಧು ಹನಿಯಂಬಾಡಿ, ಇಂಡುವಾಳು ಬಸವರಾಜು, ಎಂ.ಎಸ್‌.ಲಕ್ಷ್ಮಣ ಭಾಗವಹಿಸಿದ್ದರು. 
 
ಪ್ರಯಾಣಿಕರಿಗೆ ತೊಂದರೆ
ಶ್ರೀರಂಗಪಟ್ಟಣ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
 
ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಲ್ಲಿ ಕೆಲಕಾಲ ವಾಹನ ತಡೆದು ಪ್ರತಿಭಟಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಹೆದ್ದಾರಿ ತಡೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮೇಳಾಪುರ ಸ್ವಾಮಿಗೌಡ, ತಮ್ಮಣ್ಣ, ಡಿ.ಎಸ್‌.ಚಂದ್ರಶೇಖರ್‌, ಸಬ್ಬನಕುಪ್ಪೆ ಸುರೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 
ಹೆದ್ದಾರಿ ತಡೆ 
ಮದ್ದೂರು: ಕೃಷಿಯ ಎಲ್ಲ ಬಗೆಯ ಸಾಲಮನ್ನಾಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಕೊಪ್ಪ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. 
 
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದ ಅವರು, ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ಮಾಡಿದರು. ಹೀಗಾಗಿ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. 
 
ಸ್ಥಳಕ್ಕೆ ಬಂದ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಅವರಿಗೆ ರೈತ ಮುಖಂಡರು, ‘ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡದಂತೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು 144ನೇ ಕಾಯಿದೆಯನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಇದು ರೈತ ಹೋರಾಟವನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಈ ಕೂಡಲೇ ನಿಷೇದಾಜ್ಞೆ ಹಿಂಪಡೆಯ ಬೇಕು’ ಎಂದು ಒತ್ತಾಯಿಸಿದರು. 
 
ರೈತರನ್ನು ಸಮಾಧಾನಪಡಿಸಿದ ಡಿವೈಎಸ್‌ಪಿ ಮ್ಯಾಥ್ಯೂ, ತಾಲ್ಲೂಕಿನ ತೊಪ್ಪನಹಳ್ಳಿ ಸೇರಿದಂತೆ ವಿವಿಧೆಡೆ ಗಲಭೆ ಪ್ರಕರಣಗಳು ನಡೆದ ಕಾರಣ ದಿಂದ ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ನಿಷೇದಾಜ್ಞೆ ಜಾರಿಮಾಡಲಾಗಿದೆ. ಈ ವಿಚಾರವಾಗಿ ಶೀಘ್ರ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. 
 
ಕೆ.ರಾಮಲಿಂಗೇಗೌಡ, ಕೆ.ಜಿ. ಉಮೇಶ್, ಟಿ.ರಮೇಶ್‌, ವಿಶ್ವನಾಥ್, ಸೋ.ಸಿ.ಪ್ರಕಾಶ್,  ವೈ.ಕೆ.ರಾಮೇಗೌಡ, ಎಲ್.ರಾಮಲಿಂಗಯ್ಯ, ಪ್ರಭುಲಿಂಗು, ಶ್ರೀಧರ್, ತಮ್ಮಯ್ಯ, ಮಾದೇಗೌಡ, ಕೆಂಪೇಗೌಡ, ಮಹೇಶ್ ಇದ್ದರು. 
 
ರೈತರ ಬದುಕು ಶೋಚನೀಯ 
ಮಳವಳ್ಳಿ:  ರಾಜ್ಯ ಸರ್ಕಾರ ರೈತರ ಎಲ್ಲ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತ ಸಂಘದ ಮೂಲ ಸಂಘಟನೆ ಕಾರ್ಯಕರ್ತರು ಪಟ್ಟಣದ ಅನಂತರಾಂ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
 
ತಾಲ್ಲೂಕು ಶಾಖೆ ಅಧ್ಯಕ್ಷ ಹಿಟ್ಟನಹಳ್ಳಿ ಶಿವರುದ್ರ ಮಾತನಾಡಿ, ಮೂರು ವರ್ಷಗಳಿಂದ ಮಳೆ ಇಲ್ಲದೆ ಬೀಕರ ಬರಗಾಲ ಆವರಿಸಿದ್ದು, ರೈತರ ಬದುಕು ಶೋಚನೀಯವಾಗಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ತಾಲ್ಲೂಕು ಆಡಳಿತ ಮೇವು ಸಂಗ್ರಹ ಮಾಡಿದ್ದರೂ, ವಿತರಣೆ ಮಾಡಿಲ್ಲ. ಇದರ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಿದರು.
 
ದೇವಿಪುರದ ಬಸವರಾಜು, ಬಸವ ರಾಜೇ ಅರಸು, ನಾಗರಾಜು, ಮಹೇಶ್, ಚಿನ್ನಸ್ವಾಮಿ, ಪುಟ್ಟಮಾದು ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT