ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಲ್ಲಿ ನೋವು ಮರೆಸುವ ಶಕ್ತಿ ಇದೆ

ದಲಿತ ವಚನಕಾರರ ಜಯಂತಿ ಕಾರ್ಯಕ್ರಮ: ಕಾಳೇಗೌಡ ನಾಗವಾರ ಅಭಿಮತ
Last Updated 11 ಮಾರ್ಚ್ 2017, 7:11 IST
ಅಕ್ಷರ ಗಾತ್ರ
ಮಂಡ್ಯ: ವಚನಗಳನ್ನು ತಾಳ್ಮೆಯಿಂದ ಕೇಳುವ ಮನೋಭಾವ ಬೆಳೆಸಿಕೊಳ್ಳ ಬೇಕು. ವಚನಗಳಿಗೆ ನೋವು ಮರೆಯಿಸುವ ಶಕ್ತಿ ಇದೆ ಎಂದು ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.
 
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಉರಿಲಿಂಗ ಪೆದ್ದಿ, ಮಾದಾರ ದೂಳಯ್ಯ, ಪುಣ್ಯಸ್ತ್ರೀ ಕಾಳವ್ವ ಸೇರಿಂದತೆ ಹಲವು ವಚನಕಾರರು ಸಮಾಜದಲ್ಲಿನ ಸಮಾನತೆ ಬಗ್ಗೆ ಅಚ್ಚುಕಟ್ಟಾಗಿ ವಚನಗಳ ಮೂಲಕ ಜನರ ಕಣ್ಣು ತೆರೆಯಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ, ವಚನಗಳ ಆಶಯ ಅರ್ಥ ಮಾಡಿಕೊಳ್ಳಬೇಕು ಎಂದರು.
 
ಸಮಾಜದಲ್ಲಿ ದಲಿತರೆಂದರೆ ಅಸಮಾನತೆ ಇದೆ. ಇದನ್ನು ಹೋಗ ಲಾಡಿಸಲು ದಲಿತ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ಇಂದು ನಡೆದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 
ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಲಿಂಗಬೇಧವು ಭಾರತ ನೆಲಕ್ಕೆ ಕಾಲಿಟ್ಟು ಸಾವಿರಾರು ವರ್ಷಗಳೇ ಕಳೆದಿವೆ. ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆಯಿಂದ ನೋಡುವ ಚಿಂತನೆ ಬಂದಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾ ವವೂ ಹೆಚ್ಚುತ್ತಿದೆ ಎಂದು ತಿಳಿಸಿದರು.
 
ಪ್ರಕೃತಿಯಲ್ಲಿ ಜೀವಿಸುವ ಪ್ರಾಣಿ, ಪಕ್ಷಿ ಹಾಗೂ ಗಿಡ ಮರಗಳಿಗೆ ಯಾವುದೇ ಬೇಧವಿಲ್ಲ. ಆದರೆ, ಮನುಷ್ಯ ಜೀವಿಯಲ್ಲಿ ಬೇಧ ಯಾಕೆ ಎಂದು ಪ್ರಶ್ನಿಸುವ ಮೂಲಕ ಬದಲಾವಣೆ ತರಲು ಗೌತಮಬುದ್ಧರು ಶ್ರಮ ವಹಿಸಿದ್ದರು ಎಂದರು.
 
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಮಾತನಾಡಿ, ಜಾತಿ ವ್ಯವಸ್ಥೆಗೆ ಕಟ್ಟುಬಿದ್ದು ಕೇವಲ ನಮ್ಮ ವರ್ಗಕ್ಕೆ ಮಾತ್ರ ‘ಸಾಧಕರು’ ಮೀಸಲು ಎಂಬ ಭಾವನೆಯಿಂದ ನಡೆದುಕೊಳ್ಳುತ್ತಿದ್ದೇವೆ ಅದನ್ನು ಬಿಡಬೇಕು ಎಂದರು.
 
ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್‌ಬಾಬು, ಸದಸ್ಯ ಮಹೇಶ್‌ಕೃಷ್ಣ, ಕಸಾಪ ಜಿಲ್ಲಾ ಘಕಟದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎಂ. ಶಾಂತಮ್ಮ, ನೆಹರೂ ಯುವ ಕೇಂದ್ರದ ಸಿದ್ದರಾಮಪ್ಪ ಮುಖಂಡರಾದ ಎಂ.ಬಿ. ಶ್ರೀನಿವಾಸ್‌, ಚಂದ್ರಶೇಖರ್‌, ಪಾಪಣ್ಣ, ಸಿ. ಚಂದ್ರಶೇಖರ್‌, ಚಿಕ್ಕಸ್ವಾಮಿ ಉಪಸ್ಥಿತರಿದ್ದರು.
 
ಮುಖಂಡರಿಂದ ವಚನಕಾರರ ಕಾರ್ಯಕ್ರಮಕ್ಕೆ ಅಡ್ಡಿ
ಮಂಡ್ಯ:
ದಲಿತ ವಚನಕಾರರ ಜಯಂತಿ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರೂ ಯುವ ಕೇಂದ್ರವರು ಹೆಚ್ಚಿನ ಪ್ರಚಾರ ನೀಡಿಲ್ಲ. ಇದರಲ್ಲಿ ಜಿಲ್ಲಾಡಳಿತದ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಸಮಾರಂಭದಲ್ಲಿ ವಿವಿಧ ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದರು.

ನಗರದ ಕಲಾಮಂದಿರ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ್‌, ಸಿ.ಕೆ.ಪಾಪಣ್ಣ, ಎಂ.ಬಿ. ಶ್ರೀನಿವಾಸ್‌, ಜೆ.ರಾಮಯ್ಯ ಸೇರಿದಂತೆ ಹಲವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಂ.ಶಾಂತಮ್ಮ ಹಾಗೂ ಸಿದ್ದರಾಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ದಲಿತರು ಎಂದರೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ದಲಿತ ಮಹನೀಯರ ಜಯಂತಿ ಕಾರ್ಯ ಕ್ರಮಗಳ ಬಗ್ಗೆ ಸಭೆಯನ್ನು ಕೇವಲ ಕಾಟಾಚಾರಕ್ಕೆ ನಡೆಸಲಾಗುತ್ತದೆ. ಸಭೆ ನಿರ್ಣಯದಂತೆ ಕೆಲಸ ಮಾಡುವುದಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ತಾಲ್ಲೂಕು ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಜನರಿಗೂ ಆಹ್ವಾನ ನೀಡಿಲ್ಲ ಎಂದು ಟೀಕಿಸಿದರು.
ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಲಾಗುವುದು. ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಮಾಧಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT