ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಮೀಟರ್‌ ಅಳವಡಿಕೆ

ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ; ನಗರಸಭೆಯಲ್ಲಿ ಮಹತ್ವದ ತೀರ್ಮಾನ
Last Updated 11 ಮಾರ್ಚ್ 2017, 7:15 IST
ಅಕ್ಷರ ಗಾತ್ರ
ಮಡಿಕೇರಿ:  ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೋಲಾಗುವುದನ್ನು ತಡೆಯಲು ನಲ್ಲಿಗಳಿಗೆ ಮೀಟರ್‌ ಅಳವಡಿಸುವ ಮಹತ್ವದ ನಿರ್ಧಾರವನ್ನು ಇಲ್ಲಿನ ನಗರಸಭೆ ಶುಕ್ರವಾರ ತೆಗೆದುಕೊಂಡಿತು.
 
ಶಾಸಕ ಅಪ್ಪಚ್ಚು ರಂಜನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರ ಒತ್ತಾಯದಿಂದ ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
 
ತಿಂಗಳ ಒಳಗಾಗಿ ನಗರಸಭೆ ಆಯುಕ್ತರು ಹಾಗೂ ಎಲ್ಲ ಸದಸ್ಯರ ಮನೆಗಳಿಗೆ ಮೀಟರ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಪರೀಕ್ಷಿಸಲಾಗುವುದು. ಇದು ಯಶಸ್ಸು ಬೆನ್ನಲ್ಲೇ ನಗರ ವ್ಯಾಪ್ತಿಯ ಎಲ್ಲ ಮನೆಗಳಿಗೂ ಮೀಟರ್‌ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು. 
 
ನಗರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌.ರಮೇಶ್‌, ನಗರ ಬಹುತೇಕ ಮನೆಗಳಲ್ಲಿ ನೀರು ಪೋಲಾಗುತ್ತಿದೆ. ಜತೆಗೆ, ಹೋಂಸ್ಟೆಗಳು ಸಿಕ್ಕಾಪಟ್ಟೆ ನೀರು ಬಳಕೆ ಮಾಡುತ್ತಿವೆ. ಆದರೆ, ಕಂದಾಯವನ್ನು ಮಾತ್ರ ಸಮರ್ಪಕವಾಗಿ ಪಾವತಿ ಮಾಡುತ್ತಿಲ್ಲ. ಮೀಟರ್‌ ಅಳವಡಿಕೆಯಿಂದ ನೀರಿನ ಸಮಸ್ಯೆ ನೀಗಲಿದೆ ಎಂದು ಹೇಳಿದರು.
 
ಜಲಮೂಲಗಳನ್ನು ನಗರದಲ್ಲಿ ಮುಚ್ಚಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಾಗ ನಗರದ ಕೆರೆಗಳನ್ನು ಸಮೀಕ್ಷೆ ನಡೆಸಿ ವರದಿ ನೀಡಿ. ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು. 
 
ನಗರದ ಎಲ್ಲಾ ಬಡಾವಣೆಗಳಿಗೆ ಕುಂಡಾಮೇಸ್ತ್ರಿ- ಕೂಟುಹೊಳೆ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯವೂ ನಗರದ ಜನರಿಗೆ ಕುಡಿಯುವ ನೀರು ಸಿಗಬೇಕು. ನಗರದ ಕನ್ನಂಡಬಾಣೆ, ಪಂಪಿನಕೆರೆ ಮತ್ತಿತರ ಬಡಾವಣೆಗಳಿಗೆ ಕೂಟುಹೊಳೆ ನೀರು ಪೂರೈಕೆಯಾಗುತ್ತಿಲ್ಲ. ನಗರದ ಎಲ್ಲಾ ಬಡಾವಣೆಗಳಿಗೆ ಕೂಟುಹೊಳೆಯ ನೀರು ಸರಬರಾಜು ಆಗಬೇಕು. ಆ ನಿಟ್ಟಿನಲ್ಲಿ ತುರ್ತು ಗಮನಹರಿಸಿ ಎಂದು ಸೂಚಿಸಿದರು. 
 
ಕೆ.ಎಸ್.ರಮೆಶ್, ಕೆಲವು ಕಡೆ ಜಲಮೂಲದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಸದಸ್ಯ ಪೀಟರ್ ಅವರು ಕನ್ನಂಡಬಾಣೆ ಬಡಾವಣೆಯ ಜನರು ಅಶುದ್ಧ ನೀರನ್ನು ಬಳಕೆ ಮಾಡುತ್ತಿದ್ದು, ಕೂಡಲೇ ಕೂಟುಹೊಳೆ ನೀರನ್ನು ಪೂರೈಕೆ ಮಾಡಬೇಕು ಎಂದರು.
 
ಕುಂಡಾಮೇಸ್ತ್ರಿಯಿಂದ ಕೂಟುಹೊಳೆಗೆ ನೀರು ತರಲಾಗುತ್ತಿದೆ. ಈ ಯೋಜನೆ ಅಡಿ ನಗರದ ಎಲ್ಲಾ ಬಡಾವಣೆಗಳಿಗೆ ಪ್ರತಿ ದಿನ ಕುಡಿಯುವ ನೀರು ಪೂರೈಕೆಯಾಗಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.       
 
ಕನ್ನಂಡಬಾಣೆಯಲ್ಲಿ ಕೆರೆ ಒತ್ತುವರಿಯಾಗಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ತೆರವುಗೊಳಿಸಬೇಕು. ನಗರದ ಎಲ್ಲಾ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಅಪ್ಪಚ್ಚು ರಂಜನ್ ಹೇಳಿದರು. 
 
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ; ಇಲ್ಲದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚನೆ ನೀಡಿದರು.
 
ಸಭೆಯಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿದೇವಯ್ಯ, ನಗರಸಭಾ ಸದಸ್ಯರಾದ ಉನ್ನಿಕೃಷ್ಣ, ಅನಿತಾ ಪೂವಯ್ಯ, ಜುಲೇಕಾಬಿ, ಸಂಗೀತಾ ಪ್ರಸನ್ನ, ಲಕ್ಷ್ಮಿ, ಶಿವಕುಮಾರಿ, ಪೌರಾಯುಕ್ತೆ ಬಿ.ಶುಭಾ ಹಾಗೂ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT