ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

Last Updated 11 ಮಾರ್ಚ್ 2017, 7:24 IST
ಅಕ್ಷರ ಗಾತ್ರ
ಮೈಸೂರು: ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವುದರಿಂದ ಮನನೊಂದ ರಾಜೇಶ್ವರಿ (52) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ರಹಾರದ ಬಸವೇಶ್ವರ ರಸ್ತೆಯ ನಿವಾಸಿ ರಾಜೇಶ್ವರಿ, ತಮ್ಮ ಪುತ್ರಿ ಸೌಮ್ಯಶ್ರೀ ಅವರನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೋಡು ಗ್ರಾಮದ ರವಿಕುಮಾರ್‌ ಎಂಬುವರಿಗೆ ಕೊಟ್ಟು ಎರಡು ವರ್ಷಗಳ ಹಿಂದೆ ಮದುವೆ ಮಾಡಿದ್ದರು. 

ವಿವಾಹವಾದ ನಾಲ್ಕು ತಿಂಗಳ ಬಳಿಕ ವರದಕ್ಷಿಣೆ ತರುವಂತೆ ಸೌಮ್ಯ ಅವರನ್ನು ರವಿಕುಮಾರ್‌ ತವರಿಗೆ ಕಳುಹಿಸಿದ್ದರು. ಈ ಸಂಬಂಧ ಶ್ರೀರಂಗಪಟ್ಟಣದ ಅರಕೆರೆ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು ಎಂದು ಕೆ.ಆರ್‌. ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಈ ನಡುವೆ ಅಳಿಯನ ಮನವೊಲಿಸಿ ಮಗಳನ್ನು ಪತಿಯ ಮನೆಗೆ ಕಳುಹಿಸಲು ರಾಜೇಶ್ವರಿ ಪ್ರಯತ್ನಿಸಿದ್ದರು. ರವಿಕುಮಾರ್‌ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದರು. ಇದಕ್ಕೆ ಒಪ್ಪದ ರವಿಕುಮಾರ್, ಪತ್ನಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಅರಕೆರೆ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ರಾಜೇಶ್ವರಿ ಹಾಗೂ ಸೌಮ್ಯಶ್ರೀ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.
 
ಗುರುವಾರ ಬೆಳಿಗ್ಗೆ ರಾಜೇಶ್ವರಿ ಅವರು ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿ ದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಪತ್ರದ ಆಧಾರದ ಮೇರೆಗೆ ಅಳಿಯ ರವಿ ಕುಮಾರ್‌, ಈತನ ತಂದೆ ಗೋವಿಂದ, ತಾಯಿ ಗೌರಮ್ಮ ವಿರುದ್ಧ ಕೆ.ಆರ್‌. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಬಟ್ಟೆ ಪಡೆಯಲು ಹೊರಟು ಮೃತಪಟ್ಟ ವಿದ್ಯಾರ್ಥಿ
ಮೈಸೂರು: ತೊಳೆದು ತಂದಿದ್ದ ಬಟ್ಟೆ ಯನ್ನು ತಂದೆಯಿಂದ ಪಡೆಯಲು ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಸಂತೋಷ್‌ (24) ಬಸ್‌ ನಿಲ್ದಾಣ ತಲುಪುವುದಕ್ಕೂ ಮುನ್ನ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯ ಗೊಂಡಿರುವ ಧನ್ವಂತ್ರಿ (23) ಕೆ.ಆರ್‌. ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
 
ನಂಜನಗೂಡು ತಾಲ್ಲೂಕಿನ ಅನಿಯಂಬಾಡಿ ನಿವಾಸಿ ಸಂತೋಷ್‌, ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಾಲೇಜಿನಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿ, ಬಟ್ಟೆ ತೊಳೆಯುವ ಅಭ್ಯಾಸ ರೂಢಿಸಿಕೊಂಡಿರಲಿಲ್ಲ. ಹೀಗಾಗಿ, ಕೊಳೆಯಾದ ಬಟ್ಟೆಯನ್ನು ಮನೆಗೆ ಕೊಂಡೊಯ್ಯುತ್ತಿದ್ದ.
 
ಶುಚಿಗೊಳಿಸಿದ ಬಟ್ಟೆಯನ್ನು ಸಂತೋಷ್‌ ತಂದೆ ಗುರುವಾರ ರಾತ್ರಿ ಮೈಸೂರಿಗೆ ತಂದಿದ್ದರು. ಬಸ್‌ ನಿಲ್ದಾಣದಿಂದ ಪುತ್ರನಿಗೆ ಕರೆ ಮಾಡಿ ಬಟ್ಟೆ ಪಡೆದುಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ, ಎಂ.ಸಿಎ ವಿದ್ಯಾರ್ಥಿ ಧನ್ವಂತರಿಯೊಂದಿಗೆ ಸಂತೋಷ್‌ ಬಸ್‌ ನಿಲ್ದಾಣಕ್ಕೆ ಹೊರಟಿದ್ದರು ಎಂದು ಕೆ.ಆರ್‌.ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
ತಿಲಕ್‌ ನಗರದ ರಮೇಶ್‌ ಬಾಬು ಎಂಬುವರಿಗೆ ಸೇರಿದ ದ್ವಿಚಕ್ರ ವಾಹನವನ್ನು ಮಾರಾಟದ ಪ್ರಕ್ರಿಯೆ ನಡೆಯುತ್ತಿತ್ತು. ಸಂತೋಷ್‌ ಸ್ನೇಹಿತರೇ ಈ ದ್ವಿಚಕ್ರ ವಾಹನವನ್ನು ಖರೀದಿಸಲು ಮುಂದಾಗಿದ್ದರು. ಟೆಸ್ಟ್‌ ಡ್ರೈವ್‌ಗೆ ಪಡೆದ ದ್ವಿಚಕ್ರ ವಾಹನದೊಂದಿಗೆ ಸಂತೋಷ್‌ ಬಸ್‌ ನಿಲ್ದಾಣಕ್ಕೆ ಹೊರಟಿದ್ದರು. ಕೌಟಿಲ್ಯ ವೃತ್ತದಿಂದ ಬಂದ ಬೈಕ್‌ ರಾಮಸ್ವಾಮಿ ವೃತ್ತದ ಕಡೆ ತಿರುವು ಪಡೆಯುತ್ತಿತ್ತು. ಇದೇ ವೇಳೆ ಮೆಟ್ರೊಪೋಲ್‌ ಕಡೆಯಿಂದ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸಂತೋಷ್‌ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
 
ಲೈಂಗಿಕ ದೌರ್ಜನ್ಯ
ಮೈಸೂರು: ಸಾಲದ ಕಂತು ಮರು ಪಾವತಿಸದ ಮಹಿಳೆಯನ್ನು ರಾಮ ನಗರದ ಲೇವಾದೇವಿದಾರ ಮನೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
 
ಅಸ್ವಸ್ಥಗೊಂಡಿರುವ ಮಹಿಳೆಗೆ ಇಲ್ಲಿನ ಚೆಲುವಾಂಬ ಆಸ್ಪತ್ರೆಯ ಮಹಿಳಾ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾ ಗುತ್ತಿದೆ. ವೈದ್ಯಕೀಯ ವರದಿಯ ಆಧಾ ರದ ಮೇರೆಗೆ ದೂರು ದಾಖಲಿ ಸಿಕೊಳ್ಳಲು ದೇವರಾಜ ಠಾಣೆಯ ಪೊಲೀಸರು ನಿರ್ಧರಿಸಿದ್ದಾರೆ.
 
ಶ್ರೀರಂಗಪಟ್ಟಣದ 25 ವರ್ಷದ ವಿವಾಹಿತೆಯೊಬ್ಬರು ರಾಮನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಪತಿಯಿಂದ ದೂರವಾದ ಪರಿಣಾಮ ತಂದೆ ಹಾಗೂ ತಾಯಿಯೊಂದಿಗೆ ವಾಸವಾಗಿದ್ದರು. ಶೇಖರ್‌ ಎಂಬುವ ರಿಂದ ₹ 22 ಸಾವಿರ ಸಾಲ ಪಡೆದಿದ್ದರು. ವಾರಕ್ಕೆ ಬಡ್ಡಿ ಸಮೇತ ₹ 2 ಸಾವಿರ ಸಾಲದ ಕಂತು ಪಾವತಿಸುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
 
ವಾರದ ಕಂತು ಪಾವತಿಸದ ಪರಿಣಾಮ ಎರಡು ದಿನಗಳ ಹಿಂದೆ ಶೇಖರ್‌ ಮಹಿಳೆಯ ಮನೆಗೆ ಬಂದಿದ್ದಾನೆ. ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇಲ್ಲದಿದ್ದರೆ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದೆ ಇದ್ದಾಗ ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದಿದ್ದಾನೆ. ಇನ್ನಿಬ್ಬರೊಂದಿಗೆ ಸೇರಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಜ್ಞೆ ಕಳೆದುಕೊಂಡ ಮಹಿಳೆಯನ್ನು ಮರಳಿ ಮನೆಗೆ ತಂದು ಬಿಟ್ಟಿದ್ದಾನೆ ಎಂದು ಜನಸಂಗ್ರಾಮ ಪರಿಷತ್ತಿನ ಪ್ರಸನ್ನ ಮಾಹಿತಿ ನೀಡಿದ್ದಾರೆ.
 
ಘಟನೆಯಿಂದ ಭೀತಿಗೆ ಒಳಗಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಸ್ವಗ್ರಾಮಕ್ಕೆ ಮರಳಿದ ಕುಟುಂಬ, ಜನಸಂಗ್ರಾಮ ಪರಿಷತ್‌ ಸಂಪರ್ಕಿಸಿದೆ. ಅವರನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಮೈಮೇಲೆ ಪರಚಿದ ಗುರುತುಗಳಿವೆ. ಸಾಕಷ್ಟು ಕಡೆ ಗಾಯಗಳಾಗಿರುವುದು ವೈದ್ಯಕೀಯ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ದೇವರಾಜ ಠಾಣೆಗೆ ದೂರು ನೀಡಲಾಗಿದೆ ಎಂದು ವಿವರಿಸಿದರು.
 
ವಂಚನೆ: ಬಂಧನ
ಮೈಸೂರು:  ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹ 2.80 ಲಕ್ಷ ಪಡೆದು ವಂಚಿಸಿದ್ದ ಹಾಸನದ ಪ್ರೀತಂ ಎಂಬಾತನನ್ನು ಕೆ.ಆರ್‌.ಠಾಣೆಯ ಪೊಲೀಸರು ಬಂಧಿಸಿದ್ದಾರೆ.
 
ಆರೋಪಿ ರಾಜ್ಯದ ವಿವಿಧೆಡೆ ಭಾರಿ ವಂಚನೆ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿ ಹಲವೆಡೆ ಈತನ ವಿರುದ್ಧ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.
 
ಕೆ.ಆರ್‌.ಮೊಹಲ್ಲಾದ ನಿವಾಸಿ ಎಸ್‌.ಉಮೇಶ್‌ ಎಂಬುವರನ್ನು ಪ್ರೀತಂ ಪರಿಚಯ ಮಾಡಿಕೊಂಡಿದ್ದ. ರೈಲ್ವೆ ಇಲಾಖೆಯಲ್ಲಿ ಉಮೇಶ್‌ ಪುತ್ರನಿಗೆ ಟಿಕೆಟ್‌ ಪರಿವೀಕ್ಷಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕೆ ₹ 10 ಲಕ್ಷ ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡು, ₹ 2.8 ಲಕ್ಷವನ್ನು ಪಡೆದಿದ್ದ. ಉಳಿದ ಹಣವನ್ನು ಕೆಲಸ ಸಿಕ್ಕ ಬಳಿಕ ನೀಡುವಂತೆ ತಾಕೀತು ಮಾಡಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.
 
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ
ಮೈಸೂರು: ಇಲ್ಲಿನ ಬಿ.ಎನ್‌.ರಸ್ತೆಯ ಭುವನೇಶ್ವರಿ ಮಿಲ್ಟ್ರಿ ಹೋಟೆಲ್‌ ಮುಂಭಾಗದ ಕಟ್ಟಡದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಸುನಿಲ್‌ನನ್ನು ಬಂಧಿಸಿದ್ದಾರೆ.
 
ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಹೊರರಾಜ್ಯದಿಂದ ಕರೆತರುತ್ತಿದ್ದ ಸುನಿಲ್‌ ಎಂಬಾತ ಅವರನ್ನು ವೇಶ್ಯಾವಟಿಕೆಗೆ ಬಳಸಿಕೊಳ್ಳುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಇನ್‌ಸ್ಪೆಕ್ಟರ್‌ ಚಂದ್ರಕಲಾ ನೇತೃತ್ವದ ತಂಡ ಅಡ್ಡೆಯ ಮೇಲೆ 
ದಾಳಿ ನಡೆಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಲಷ್ಕರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT