ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಕೋಟೆ ಮೇಲೆ ಬಿಜೆಪಿ ಕಣ್ಣು

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ: ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 11 ಮಾರ್ಚ್ 2017, 7:42 IST
ಅಕ್ಷರ ಗಾತ್ರ
ಕೆ.ಎಚ್.ಓಬಳೇಶ್‌
ಚಾಮರಾಜನಗರ:  ಉಪ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ.
 
ಕಾಂಗ್ರೆಸ್‌ ಮತ್ತು ಬಿಜೆಪಿ ಈ ಉಪ ಚುನಾವಣೆಯನ್ನು ಮಿನಿ ಸಮರವೆಂದು ಪರಿಗಣಿಸಿವೆ. ಈ ಚುನಾವಣೆಯ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದೆ. ಹಾಗಾಗಿ, ಎರಡೂ ರಾಜಕೀಯ ಪಕ್ಷಗಳು ಪ್ರಬಲ ಪೈಪೋಟಿಗೆ ಇಳಿದಿವೆ. ಈ ನಡುವೆ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಜೆಡಿಎಸ್‌ ಮತ್ತು ಬಹುಜನ ಸಮಾಜ ಪಕ್ಷ ಕೂಡ ಹಿಂದೆ ಬಿದ್ದಿಲ್ಲ.
 
14 ಚುನಾವಣೆ ಕಂಡಿರುವ ಈ ಕ್ಷೇತ್ರದ ಮತದಾರರು 7 ಬಾರಿ ಕೈಪಾಳಯ ಬೆಂಬಲಿಸಿದ್ದಾರೆ. ಜನತಾದಳ, ಜೆಡಿಯು, ಜೆಡಿಎಸ್‌ಗೆ ಒಂದು ಬಾರಿ ಒಲವು ತೋರಿದ್ದಾರೆ. 4 ಬಾರಿ ಪಕ್ಷೇತರರು ಈ ಕ್ಷೇತ್ರದಲ್ಲಿ ಕೈಚಳಕ ತೋರಿರುವುದು ಉಂಟು. ಆದರೆ, ಒಮ್ಮೆಯೂ ಕ್ಷೇತ್ರದಲ್ಲಿ ಕಮಲ ಅರಳಿಲ್ಲ. ಉಪ ಚುನಾವಣೆಯಲ್ಲಿಯಾದರೂ ಕಮಲ ಅರಳಿಸುವ ತವಕ ಬಿಜೆಪಿ ವರಿಷ್ಠರದ್ದು. ಹಾಗಾಗಿ, ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ಮೇಲೆ ಬಿಜೆಪಿ ಕಣ್ಣುನೆಟ್ಟಿದೆ.
 
ಗುಂಡ್ಲುಪೇಟೆ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ. ಕೆ.ಎಸ್‌. ನಾಗರತ್ನಮ್ಮ ಅವರೇ 5 ಬಾರಿ ಕಾಂಗ್ರೆಸ್‌ನಿಂದ ಜಯ ಗಳಿಸಿದ್ದರು (2 ಬಾರಿಪಕ್ಷೇತರಾಗಿಯೂ ಸೇರಿದಂತೆ ಅವರು ಗೆದ್ದಿದ್ದು 7 ಬಾರಿ). ಸಚಿವರಾಗಿದ್ದ ಎಚ್‌.ಎಸ್‌. ಮಹದೇವಪ್ರಸಾದ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಮೊದಲು ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವ ಜೋರಿತ್ತು. ಅವರು ಕಾಂಗ್ರೆಸ್‌ ಸೇರಿದ ಬಳಿಕ ‘ಕೈ’ಕೋಟೆ ಭದ್ರವಾಯಿತು.
 
2008 ಮತ್ತು 2013ರ ವಿಧಾನ ಸಭಾ ಚುನಾವಣೆಯಲ್ಲಿ ಮಹದೇವ ಪ್ರಸಾದ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದರು. ಜತೆಗೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿಯೂ ಕಾಂಗ್ರೆಸ್‌ ಅತಿಹೆಚ್ಚು ಸ್ಥಾನಗೆದ್ದಿದೆ. 
 
20 ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಪೈಕಿ ಕಾಂಗ್ರೆಸ್‌ 15 ಮತ್ತು ಬಿಜೆಪಿ 5ರಲ್ಲಿ ಜಯಗಳಿಸಿದೆ. ಕ್ಷೇತ್ರದ ವ್ಯಾಪ್ತಿಗೆ ಸೇರಿದ 6 ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪೈಕಿ 5ರಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಒಂದು ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಜಯ ಸಾಧಿಸಿದೆ. ಆದರೆ, ಈ ಎರಡು ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಳಿಗೆ ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿರುವುದು ಸ್ಪಷ್ಟ.
 
2008ರ ಚುನಾವಣೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯು ಪ್ರಬಲ ಪೈಪೋಟಿ ನೀಡುತ್ತಿದೆ. ಈ ಚುನಾವಣೆಯಿಂದಲೇ ಮಹದೇವಪ್ರಸಾದ್್ ಅವರ ಗೆಲುವಿನ ಅಂತರವೂ ಕಡಿಮೆಯಾಯಿತು ಎನ್ನುವುದು ಸ್ಪಷ್ಟ. 2008ರ ಚುನಾವಣೆ ಯಲ್ಲಿ ಮಹದೇವಪ್ರಸಾದ್‌ ಕೇವಲ 2,056 ಮತಗಳ ಅಂತರದಿಂದ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ 7,675 ಮತಗಳ ಅಂತರದಿಂದ ಗೆದ್ದಿದ್ದರು.
 
ಆದರೆ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿ ಬಲಿಷ್ಠವಾಗಿರುವ ಕೈಕೋಟೆಯನ್ನು ಭೇದಿಸುವುದು ಬಿಜೆಪಿಗೆ ಸುಲಭವಾಗಿಲ್ಲ. ಕಾಂಗ್ರೆಸ್‌ ರಾಜ್ಯ ಸರ್ಕಾರದ ಸಾಧನೆಯ ಮೇಲೆ ಅಖಾಡಕ್ಕೆ ಇಳಿಸಲು ಸಜ್ಜಾಗಿದೆ. ಇನ್ನೊಂದೆಡೆ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ.
 
ದೂರು ನಿರ್ವಹಣಾ ಕೇಂದ್ರದ ಸ್ಥಾಪನೆ
ಚಾಮರಾಜನಗರ:
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ದೂರು ಸ್ವೀಕರಿಸಲು ನಗರದ ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ 104ರಲ್ಲಿ ಜಿಲ್ಲಾಮಟ್ಟದ ದೂರು ನಿರ್ವಹಣಾ ಕೇಂದ್ರ ತೆರೆಯಲಾಗಿದೆ.

ದೂರು ನಿರ್ವಹಣಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08226-223160 ಆಗಿದೆ.  ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಚುನಾ ವಣೆಗೆ ಸಂಬಂಧಿಸಿದ ಅಹವಾಲು ಮತ್ತು ದೂರುಗಳನ್ನು 24*7 ಅವಧಿಯಲ್ಲಿ ಸಲ್ಲಿಸಬಹುದು. ದೂರು ನಿರ್ವಹಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ನೌಕರರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT