ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಪಕ್ಷೀಯ ನಿರ್ಧಾರ; ಡಿ.ಸಿ ವಿರುದ್ಧ ಕಿಡಿ

ಎತ್ತಿನಹೊಳೆ ಯೋಜನೆ ಸಂತ್ರಸ್ತರ ಭೂಮಿಗೆ ದರ ನಿಗದಿ ವಿವಾದ
Last Updated 11 ಮಾರ್ಚ್ 2017, 7:44 IST
ಅಕ್ಷರ ಗಾತ್ರ
ಸಕಲೇಶಪುರ: ಎತ್ತಿನಹೊಳೆ ಯೋಜನೆ ಸಂತ್ರಸ್ತರ ಭೂಮಿಗೆ ದರ ನಿಗದಿ ಮಾಡುವಲ್ಲಿ ಜಿಲ್ಲಾಧಿಕಾರಿ ಜನಪ್ರತಿನಿಧಿಗಳು ಹಾಗೂ ಬೆಳೆಗಾರ ಸಂಘಟನೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಾಸನ ಜಿಲ್ಲಾ ಪ್ಲಾಂಟರ್‌್ಸ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
 
ಜಿಲ್ಲಾಧಿಕಾರಿಯ ಈ ಏಕಪಕ್ಷೀಯ ನಿರ್ಧಾರ ತಡೆಯುವಂತೆ ಒತ್ತಾಯಿಸಿ ಪಟ್ಟಣಕ್ಕೆ ಬುಧವಾರ ಬಂದಿದ್ದ ಎಚ್‌.ಡಿ. ದೇವೇಗೌಡ ಅವರಿಗೆ ಸಂಘದ ಅಧ್ಯಕ್ಷ ಕಿರೇಹಳ್ಳಿ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ಹೆಬ್ಬಸಾಲೆ ಪ್ರಕಾಶ್‌ ಮನವಿ ಸಲ್ಲಿಸಿದರು.
 
ರೈತರ ಭೂಮಿಗೆ ಪರಿಹಾರ ವಿತರಿಸದೆ ಗುತ್ತಿಗೆದಾರರೇ ಒಂದಿಷ್ಟು ಹಣ ಕೊಟ್ಟು ಕರಾರು ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಭೂಮಿಗೆ ದರ ನಿಗದಿ ಮಾಡಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ನೀರಾವರಿ ಸಚಿವರಿಗೆ ಹಲವು ಬಾರಿ ಮನವಿ ನೀಡಲಾಗಿದೆ. ಆದರೆ, ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಕಿಡಿಕಾರಿದರು.
 
ಜಿಲ್ಲಾಧಿಕಾರಿ ಏಕಪಕ್ಷೀಯವಾಗಿ ದರ ನಿಗದಿ ಮಾಡಿರುವುದನ್ನು ಕೈಬಿಟ್ಟು ಸಂಸದರು, ಶಾಸಕರು ಹಾಗೂ ಬೆಳೆಗಾರ ಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಿ ಮತ್ತೆ ದರ ನಿಗದಿ ಮಾಡಲು ಸಭೆ ನಡೆಸುವಂತೆ ಒತ್ತಾಯಿಸಿದ್ದಾರೆ.
 
ಹಾಸನ– ಬೆಂಗಳೂರು ನಡುವಿನ ಪ್ರಯಾಣಿಕರ ರೈಲುಗಳನ್ನು ಸಕಲೇಶ ಪುರದವರೆಗೆ ವಿಸ್ತರಿಸಬೇಕು. ಸಕಲೇಶಪುರ– ಹಾಸನ–ಬೆಂಗಳೂರು ನಡುವೆ ಪ್ರಯಾಣಿಕರ ರೈಲು ಸಂಚರಿಸುವುದರಿಂದ ಈ ಭಾಗದವರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
 
ಮಲೆನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ 50 ಪ್ರಮಾಣ ಮಳೆ ಕಡಿಮೆ ಆಗಿದೆ. ಈ ಭಾಗದ ರೈತರು, ಬೆಳೆಗಾರರು ಬರದಿಂದ ತತ್ತರಿಸಿದ್ದಾರೆ. ಇವರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲದ ಅಸಲು ಮತ್ತು ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
 
ಕಾಫಿ, ಟೀ ಮತ್ತು ಸಾಂಬಾರ ಮಂಡಳಿ ವಿಲೀನಗೊಳಿಸುವ ಪ್ರಕ್ರಿಯೆಗೆ ಕಾಫಿ ಬೆಳೆಗಾರರ ಸಂಘಟನೆಯ ವಿರೋಧವಿದೆ. ಕಾಫಿ, ಟೀ ಹಾಗೂ ಸಾಂಬಾರ ಬೆಳೆ ಒಟ್ಟುಗೂಡಿಸಿದರೂ, ಅದರಲ್ಲಿ ಕಾಫಿ ಬೆಳೆಯುವ ಪ್ರಮಾಣ ಶೇ 98. ಹೀಗಾಗಿ, ಕಾಫಿ ಬೆಳೆಗಾರರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಕಾಫಿ ಮಂಡಳಿಗೆ ಬೇರೆ ಯಾವುದೇ ಮಂಡಳಿ ವಿಲೀನಗೊಳಿಸದಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ದೇವೇಗೌಡ ಅವರಿಗೆ ಬೇಡಿಕೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT