ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರಿಂದ ರ್‍ಯಾಲಿ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ
Last Updated 11 ಮಾರ್ಚ್ 2017, 11:21 IST
ಅಕ್ಷರ ಗಾತ್ರ
ಹಾವೇರಿ: ‘ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ, ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಪಡೆದ ಸಾಲದ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. 
 
ಹುಕ್ಕೇರಿಮಠದಿಂದ ಹೊಸಮನಿ ಸಿದ್ದಪ್ಪನ ವೃತ್ತದ ವರೆಗೆ ರ್‍ಯಾಲಿ ಮೂಲಕ ಬಂದ ಪ್ರತಿಭಟನಾಕಾರರು ಬಳಿಕ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.    
 
ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಹನುಮಂತಗೌಡ ಆರ್‌.ಪಾಟೀಲ್‌ ಮಾತನಾಡಿ, ‘ರಾಜ್ಯದಲ್ಲಿ ಸತತ ಬರಗಾಲದ ಹಿನ್ನೆಲೆಯಲ್ಲಿ, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸರ್ಕಾರದಿಂದ ಸಮರ್ಪಕ ಮೇವು ಹಾಗೂ ಗೋಶಾಲೆಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು. 
 
‘ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಅಂಥಹ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.
 
‘ಮಹಿಳೆಯರು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ (ಮೈಕ್ರೋ ಫೈನಾನ್ಸ್‌) ಹಾಗೂ ಸ್ವಸಹಾಯ ಸಂಘಗಳಲ್ಲಿ ಮಾಡಿದ ಸಾಲವನ್ನು ಮನ್ನಾ ಮಾಡಬೇಕು. ಮಹಾದಾಯಿ ನದಿ ಜೋಡಣೆ ಯೋಜನೆ ಜಾರಿಮಾಡ ಬೇಕು’ ಎಂದು ಒತ್ತಾಯಿಸಿದರು. 
 
‘ಬೆಳೆವಿಮೆ ಪರಿಹಾರದಲ್ಲಿ ಉಂಟಾದ ತಾರತಮ್ಯವನ್ನು ಸರಿಪಡಿಸಿ, ಎಲ್ಲ ರೈತರಿಗೆ ಬೆಳೆ ಪರಿಹಾರ ನೀಡಬೇಕು. ರೈತರ ಜಾನುವಾರುಗಳು ಸತ್ತರೆ ಸರ್ಕಾರವೇ ಪರಿಹಾರ ನೀಡಬೇಕು’ ಎಂದರು.
 
‘ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು. ಯೋಜನೆಗಳ ನಿರ್ವಸಿತ ರೈತರಿಗೆ ಪರಿಹಾರ ನೀಡಬೇಕು. ಎಲ್ಲ ಕೆರೆಗಳಿಗೆ ನದಿ ನೀರು ತುಂಬಿಸಬೇಕು. ಸಣ್ಣ ರೈತರಿಗೆ ಬಗರ್‌ ಹುಕುಂ ಹಕ್ಕುಪತ್ರಗಳನ್ನು ನೀಡಬೇಕು’ ಎಂದರು.
 
ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ‘ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 10 ಗಂಟೆ ವಿದ್ಯುತ್‌ ನೀಡಬೇಕು. ಅಡುಗೆ ಅನಿಲದ ದರವನ್ನು ಕಡಿಮೆ ಮಾಡಬೇಕು. ಕಳಪೆ ರಾಸಾಯಿನಿಕ ಗೊಬ್ಬರ ಹಾಗೂ ಬೀಜಗಳ ಪೂರೈಕೆಯನ್ನು ಸರಿಪಡಿಸ ಬೇಕು’ ಎಂದು ಒತ್ತಾಯಿಸಿದರು.
 
ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಮಿತಿಯ ಫಕ್ಕೀರಪ್ಪ ಜಂಗಣ್ಣನವರ, ನಾಗೇಂದ್ರಪ್ಪ ದೊಡ್ಡಮನಿ, ಚಂದ್ರಶೇಖರ ಗೊಬ್ಬರಮಠ, ಡಾ.ವೀರಯ್ಯ ಪುರಾಣಿಕಮಠ, ಶಾರದಾ ಕಾಳಣ್ಣನವರ, ಜಿಲ್ಲಾ ಉಪಾಧ್ಯಕ್ಷ ಶಂಭಣ್ಣ ಗಂಗಯಿಕೊಪ್ಪ, ಸವಣೂರ ತಾಲ್ಲೂಕ ಘಟಕದ ಅಧ್ಯಕ್ಷ ಸರ್ವೆಶ ನೆಗಳೂರ, ಬಸವರಾಜ ಸೂರಟೂರ, ಮಂಜುನಾಡಗೌಡ, ಚಂದ್ರಶೇಖರ ಮಾಳಶೆಟ್ಟಿ, ವಿಶ್ವರಾಧ್ಯಾ ಹಿರೇಮಠ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT