ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪರಾಧ ತಡೆಗಾಗಿ ಪ್ರತಿಯೊಬ್ಬರೂ ಪೊಲೀಸರಾಗಿ’

ಜಿಲ್ಲಾ ಪೊಲೀಸರಿಂದ ನಡೆದ ‘ಪ್ರಾಪರ್ಟಿ ಪರೇಡ್‌’ ಸಮಾರಂಭ: ಜಿಲ್ಲಾ ನ್ಯಾಯಾಧೀಶ ಆರ್‌.ಜೆ. ಸತೀಶ್‌ಸಿಂಗ್‌ ಹೇಳಿಕೆ
Last Updated 11 ಮಾರ್ಚ್ 2017, 11:30 IST
ಅಕ್ಷರ ಗಾತ್ರ
ಬೆಳಗಾವಿ:  ಪ್ರತಿಯೊಬ್ಬ ನಾಗರಿಕರೂ ಪೊಲೀಸರಾಗಬೇಕು. ಆಗ ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಆರ್‌.ಜೆ. ಸತೀಶಸಿಂಗ್‌ ಇಲ್ಲಿ ಹೇಳಿದರು.
 
ಜಿಲ್ಲಾ ಪೊಲೀಸ್‌ ವತಿಯಿಂದ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಪರಾಧ ತಡೆ  ತ್ರೈಮಾಸಾಚರಣೆ ಸಮಾರೋಪ ಹಾಗೂ ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸುವ (ಪ್ರಾಪರ್ಟಿ ಪರೇಡ್‌) ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಯಾರ ಮೇಲೋ ದೌರ್ಜನ್ಯ ನಡೆಯುತ್ತಿದ್ದರೆ, ಅಪರಾಧ ನಡೆಯುತ್ತಿದ್ದರೆ ನಾಗರಿಕರು ನೋಡಿಕೊಂಡು ಸುಮ್ಮನಿರಬಾರದು. ಯಾರಾದರೊಬ್ಬರೂ ದನಿ ಎತ್ತಬೇಕು. ಪೊಲೀಸರಿಗೆ ಮಾಹಿತಿ ನೀಡಬೇಕು. ಆಗ, ಅಲ್ಲಿ ನೆರೆದಿದ್ದ ಎಲ್ಲರೂ ಕೈಜೋಡಿಸುತ್ತಾರೆ. ಇಂಥ ಧೈರ್ಯವನ್ನು ನಾಗರಿಕರು ಬೆಳೆಸಿಕೊಳ್ಳಬೇಕು. ಅಪರಾಧಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.
 
ಗಾಂಧೀಜಿ ಕನಸು ನನಸಾಗಿಸಲು: ‘ಎಲ್ಲವನ್ನೂ ಪೊಲೀಸರೇ ಮಾಡುವುದಕ್ಕೆ ಆಗುವುದಿಲ್ಲ. ಅಷ್ಟು ಸಂಖ್ಯೆಯಲ್ಲಿ ಪೊಲೀಸರೂ ಇಲ್ಲ. ಮಧ್ಯರಾತ್ರಿಯಲ್ಲಿಯೂ ಮಹಿಳೆಯರು ನಿರಾತಂಕವಾಗಿ ಓಡಾಡುವಂಥ ದೇಶ ನಿರ್ಮಾಣವಾಗಬೇಕು ಎನ್ನುವ ಮಹಾತ್ಮ ಗಾಂಧೀಜಿ ಅವರ ಕನಸು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
 
ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ಮಾತನಾಡಿ, ‘ಜಿಲ್ಲೆಯಲ್ಲಿ ಎಸ್ಪಿ ರವಿಕಾಂತೇಗೌಡ ನೇತೃತ್ವದಲ್ಲಿ ಹಲವು ಮಹತ್ವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ ಉಪ ಗಸ್ತು ವ್ಯವಸ್ಥೆಯು ಎಲ್ಲೆಡೆಯೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಎಲ್ಲ ಗ್ರಾಮೀಣ ಪ್ರದೇಶದಲ್ಲಿಯೂ ಜಾರಿಗೆ ತರಲು ಸರ್ಕಾರವು ನಿರ್ಧರಿಸಿದೆ. ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾದ ಕೈದಿಗಳನ್ನು ಉಪಗಸ್ತು ವ್ಯವಸ್ಥೆಯ ಸದಸ್ಯರನ್ನಾಗಿ ನೇಮಿಸಿಕೊಂಡಿರುವುದು ಉತ್ತಮ ಕಾರ್ಯವಾಗಿದೆ’ ಎಂದು ಹೇಳಿದರು.
 
ಎಲ್ಲೆಡೆಯೂ ಜಾರಿ: ಅಧ್ಯಕ್ಷತೆ ವಹಿಸಿದ್ದ ಉತ್ತರವಲಯ ಐಜಿಪಿ ಕೆ. ರಾಮಚಂದ್ರರಾವ್‌ ಮಾತನಾಡಿ, ‘ಬೀಟ್‌ ವ್ಯವಸ್ಥೆಯು ಎಲ್ಲ ಜಿಲ್ಲೆಗಳಲ್ಲಿಯೂ ಇದೆ. ಆದರೆ, ಬೆಳಗಾವಿಯಲ್ಲಿ ಪ್ರತಿ ಗ್ರಾಮಕ್ಕೊಬ್ಬ ಪೊಲೀಸ್ ಎನ್ನುವ ಮಾದರಿಯಲ್ಲಿ ಉಪ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಮಾದರಿಯಾಗಿದೆ.
 
ಪೊಲೀಸ್‌ ಮಹಾನಿರೀಕ್ಷಕರೂ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆಯೂ ಜಾರಿಗೊಳಿಸುವ ಸೂಚನೆಯನ್ನೂ ನೀಡಿದ್ದಾರೆ. ಪ್ರತಿ ಹಳ್ಳಿಗೂ ಕಾನ್‌ಸ್ಟೆಬಲ್‌ ಗಸ್ತು ವ್ಯವಸ್ಥೆ ಮಾಡಿರುವುದರಿಂದ ಪೊಲೀಸರ ಹಾಗೂ ಜನರ ನಡುವಿನ ಅಂತರ ಕಡಿಮೆಯಾಗಿದೆ. ಅಲ್ಲದೇ, 2015ಕ್ಕೆ ಹೋಲಿಸಿದರೆ 2016ನೇ ಸಾಲಿನಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣವೂ ಕಡಿಮೆಯಾಗಿದೆ.
 
ಇದಕ್ಕೆ ಉಪ ಗಸ್ತು ವ್ಯವಸ್ಥೆ ನೆರವಾಗಿದೆ’ ಎಂದು ಶ್ಲಾಘಿಸಿದರು.‘ಉತ್ತರವಲಯದ ವ್ಯಾಪ್ತಿಯಲ್ಲಿ 2016ನೇ ಸಾಲಿನಲ್ಲಿ 200 ಅಪಘಾತ ಪ್ರಮಾಣಗಳು ಇಳಿಕೆಯಾಗಿವೆ. ಪೊಲೀಸರು ಶ್ರಮಪಟ್ಟು ಕೆಲಸ ಮಾಡಿದರೆ ಫಲಿತಾಂಶ ಖಚಿತ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದರು.
 
ಪೊಲೀಸರು ಸಾಕಾಗುವುದಿಲ್ಲ:  ‘ಜಿಲ್ಲೆಯಲ್ಲಿ 42 ಲಕ್ಷ ಜನಸಂಖ್ಯೆ ಇದೆ. ಪೊಲೀಸರಿರುವುದು 1,200 ಮಾತ್ರ. ಇವರೊಂದಿಗೆ 55,000 ಸದಸ್ಯರನ್ನು ಉಪಗಸ್ತು ವ್ಯವಸ್ಥೆಯ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರು ನಿರಂತರವಾಗಿ ಸಾರ್ವಜನಿಕರು ಸಂಪರ್ಕದಲ್ಲಿ ಇರುವುದರಿಂದ, ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯ ಬೆಳೆಯುತ್ತಿದೆ. ಸಮಸ್ಯೆಗಳ ಪರಿಹಾರಕ್ಕೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಕಾನೂನು–ಸುವ್ಯವಸ್ಥೆ ಹಾಳಾಗಿಲ್ಲ’ ಎಂದು ಹೇಳಿದರು.
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ, ‘ಜಿಲ್ಲೆಯಲ್ಲಿ ಅಪರಾಧ ತಡೆ  ತ್ರೈಮಾಸಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗಿದೆ. 562 ಹಳ್ಳಿಗಳಲ್ಲಿ, ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಸಭೆ ನಡೆಸಿ ಅಪರಾಧ ತಡೆ ಕುರಿತು ಮಾಹಿತಿ ನೀಡಲಾಗಿದೆ. ಬೀದಿ ನಾಟಕಗಳನ್ನು ನಡೆಸಲಾಗಿದೆ’ ಎಂದು ತಿಳಿಸಿದರು.
 
‘ಜಿಲ್ಲೆಯಲ್ಲಿ ಜುಲೈ 1ರಿಂದ ಫೆಬ್ರುವರಿವರೆಗೆ 90 ಪ್ರಕರಣಗಳನ್ನು ಪತ್ತೆ ಹಚ್ಚಿ, 152 ಮಂದಿ ಆರೋಪಿಗಳನ್ನು ಬಂಧಿಸಿ, ₹ 2.52 ಕೋಟಿ ಮೌಲ್ಯದ ಚಿನ್ನಾಭರಣ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಕೋರ್ಟ್‌ನಿಂದ ಅನುಮತಿ ಪಡೆದು ವಾರಸುದಾರರಿಗೆ ವಾಪಸ್‌ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಡಿಸಿಪಿಗಳಾದ ಅಮರನಾಥರೆಡ್ಡಿ, ಜಿ. ರಾಧಿಕಾ ಭಾಗವಹಿಸಿದ್ದರು. ಎಎಸ್ಪಿ ರವೀಂದ್ರ ಗಡಾದಿ ವಂದಿಸಿದರು.
 
ವಲಯದ ಎಸ್ಪಿಗಳ ಸಭೆ ಇಂದು
ಉತ್ತರ ವಲಯ ಐಜಿಪಿ ಕೆ. ರಾಮಚಂದ್ರರಾವ್‌ ಅವರ ಅಧ್ಯಕ್ಷತೆಯಲ್ಲಿ ವಲಯದ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಭೆಯನ್ನು ಇಲ್ಲಿನ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಮಾರ್ಚ್‌ 11ರಂದು ಬೆಳಿಗ್ಗೆ 10.30ಕ್ಕೆ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT