ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ, ಮನ್ವಂತರ, ಪರಿಚಯದ ಮಂತ್ರ

ಜಿಲ್ಲೆಯ ವಿದ್ಯಾರ್ಥಿಗಳ ನೆರವಿಗೆ ಮೂರು ಯೋಜನೆಗಳ ಅನುಷ್ಠಾನ: ಜಿಲ್ಲಾ ಪಂಚಾಯಿತಿ ಸಿಇಓ ವಿಕಾಸ್‌ ಹೇಳಿಕೆ
Last Updated 11 ಮಾರ್ಚ್ 2017, 12:12 IST
ಅಕ್ಷರ ಗಾತ್ರ
ಬಾಗಲಕೋಟೆ:  ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಮಕ್ಕಳು ಸಾಧನೆಯ ಹಾದಿಯಲ್ಲಿ ಸಾಗಲು ನೆರವಾಗುವ ನಿಟ್ಟಿನಲ್ಲಿ ದಿಶಾ (ದಿಕ್ಸೂಚಿ), ಮನ್ವಂತರ ಹಾಗೂ ಪರಿಚಯ ಎಂಬ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
ಏನಿದು ದಿಶಾ:  ಪ್ರತಿ ಶಾಲೆಯಿಂದ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆರು ಮಂದಿ ವಿದ್ಯಾರ್ಥಿಗಳನ್ನು (ತಲಾ ಮೂವರು ಬಾಲಕರು ಹಾಗೂ ಬಾಲಕಿಯರು) ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೇರೆ ಬೇರೆ ರಂಗದ ಸಾಧಕರನ್ನು ಹಾಗೂ ಗಣ್ಯರನ್ನು ಕರೆಸಿ ಅವರಿಗೆ ವೃತ್ತಿ ಮಾರ್ಗದರ್ಶನ ಕೊಡಿಸಲಾಗುತ್ತದೆ.
 
ಐಎಎಸ್,ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಯಶಸ್ವಿ ಉದ್ಯಮಿಗಳು, ವೈದ್ಯರು, ಶಿಕ್ಷಣ ಕ್ಷೇತ್ರದ ತಜ್ಞರು, ಕೃಷಿ, ಕ್ರೀಡೆ, ಕಲೆ ಸೇರಿದಂತೆ ಬೇರೆ ಬೇರೆ ರಂಗದಲ್ಲಿ ಸಾಧನೆ ಮಾಡಿದವರನ್ನು ಕರೆಸಿ ಅವರಿಂದ ಮಾರ್ಗದರ್ಶನ ಮಾಡಿಸಲಾಗುತ್ತದೆ. ಆ ನಿಟ್ಟಿನಲ್ಲಿ ಈಗಾಗಲೇ ಸಾಧಕರ ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಶೂನ್ಯದಿಂದ ಆರಂಭಿಸಿ ಇಂದು ಮಹತ್ವದ ಸಾಧನೆ ಮಾಡಿದವರು ಈ ಪಟ್ಟಿಯಲ್ಲಿ ಇದ್ದಾರೆ ಎಂದು ತಿಳಿಸಿದರು.
 
ಜೊತೆಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರವನ್ನು ಈ ಮಕ್ಕಳಿಗಾಗಿ ಆಯೋಜಿಸಲಾಗುತ್ತಿದೆ. ಇದು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ ಎಂದು ವಿಕಾಸ್ ಮಾಹಿತಿ ನೀಡಿದರು. ಓದುವ ಹವ್ಯಾಸದ ‘ಮನ್ವಂತರ’:  ಶಾಲಾ–ಕಾಲೇಜು ಮಕ್ಕಳಲ್ಲಿ ಓದುವ ಹವ್ಯಾಸವನ್ನು ರೂಢಿಸಲು ‘ಮನ್ವಂತರ’ ಯೋಜನೆ ನೆರವಾಗಲಿದೆ. 
 
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಂಥಾಲಯಗಳು, ಶಾಲಾ–ಕಾಲೇಜು, ನಗರ ಸ್ಥಳೀಯ ಸಂಸ್ಥೆಗಳ ಗ್ರಂಥಾಲಯಗಳನ್ನು ಗುರುತಿಸಿ ಅಲ್ಲಿ ಮಕ್ಕಳು,ಕಾಲೇಜು ವಿದ್ಯಾರ್ಥಿಗಳು ಓದಬಹುದಾದ ಪುಸ್ತಕಗಳ ಪಟ್ಟಿ ಸಂಗ್ರಹಿಸಿ ಅವುಗಳನ್ನು ಪೂರೈಸುವ ಜೊತೆಗೆ ಅಲ್ಲಿ ಓದಲು ಅವಕಾಶ ಮಾಡಿಕೊಡಲಾಗುವುದು.

ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಶಿಕ್ಷಕರು ಮಕ್ಕಳಿಂದ ಓದಿಸಿ ಹೇಳುವ ಮೂಲಕ ಅವರಲ್ಲಿ ಭಾಷೆಯ ಬೆಳೆಯುವ ಜೊತೆಗೆ ಅವರ ಕಲಿಕೆಯ ಸಾಮರ್ಥ್ಯವನ್ನು ಅರಿಯಲು ಇದು ನೆರವಾಗಲಿದೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತೀ ಶಾಲೆಯಲ್ಲೂ ಒಂದು ವಾರ ಕಾಲ ಪುಸ್ತಕ ಓದುವ ಹವ್ಯಾಸದ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದರು.
 
ಪ್ರತಿಭಾವಂತರ ‘ಪರಿಚಯ’: ಜಿಲ್ಲೆಯ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ವೃತ್ತಿ ಬದುಕು ಕಂಡುಕೊಳ್ಳಲು ನೆರವಾಗುವುದು ‘ಪರಿಚಯ’ದ ಉದ್ದೇಶ ಎಂದು ವಿಕಾಸ್ ಹೇಳಿದರು. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ‘ಪರಿಚಯ’ ಕಾರ್ಯಕ್ರಮಕ್ಕೆ ಅರ್ಹರಾಗಲಿದ್ದಾರೆ.

ಜಿಲ್ಲೆಯಲ್ಲಿರುವ ವಿವಿಧ ಕ್ಷೇತ್ರಗಳ ಮಾದರಿ ವ್ಯಕ್ತಿಗಳನ್ನು ಗುರುತಿಸಿ ಅವರೊಂದಿಗೆ ಈ ಮಕ್ಕಳು ಏಳು ದಿನ ಕಾಲ ಕಳೆಯಲು ಅವಕಾಶ ಮಾಡಿಕೊಡಲಾಗುವುದು. ಯಶಸ್ವಿ ವೈದ್ಯರೊಬ್ಬರೊಂದಿಗೆ ಈ ಮಕ್ಕಳು ಏಳು ದಿನ ಕಾಲ ಇದ್ದರೆ ಅವರ ದೈನಂದಿನ ಚಟುವಟಿಕೆ, ಕೆಲಸದ ಶೈಲಿ, ಸಾಧನೆಯ ಹಿನ್ನೆಲೆ ತಿಳಿಯಲು ನೆರವಾಗಲಿದೆ.
 
ಬೇಕಿದ್ದರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆಗೂ ಒಂದು ವಾರ ಕಾಲ ಇದ್ದು, ದೈನಂದಿನ ಕಾರ್ಯಶೈಲಿಯನ್ನು ಅರಿಯಬಹುದಾಗಿದೆ.  ವಿದ್ಯಾರ್ಥಿಗಳು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಬೆಳೆಯಲು ಅನುಕೂಲವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT