ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಆಸಂಗಿ ಬ್ಯಾರೇಜ್ : ಕಂಗಾಲಾದ ಬೆಳೆಗಾರ

ನವಿಲುತೀರ್ಥ ಜಲಾಶಯದಿಂದ ಬಿಡುಗಡೆ ಮಾಡಿದ ನೀರು ಬ್ಯಾರೇಜ್‌ ತಲುಪಿಲ್ಲ ; ಕುಸಿದ ಅಂತರ್ಜಲ: ಆತಂಕ
Last Updated 11 ಮಾರ್ಚ್ 2017, 12:17 IST
ಅಕ್ಷರ ಗಾತ್ರ
ಗುಳೇದಗುಡ್ಡ:  ಸಮೀಪದ ಆಸಂಗಿ ಬ್ಯಾರೇಜ್‌ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಪಟ್ಟಣ ಹಾಗೂ ಸುತ್ತಲಿನ 18ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಅದರಲ್ಲೂ, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ನವಿಲುತೀರ್ಥ ಜಲಾಶಯದಿಂದ ಕಳೆದ ವಾರ ಮಲಪ್ರಭಾ ನದಿಗೆ ನೀರು ಬಿಡಲಾಗಿದ್ದರೂ, ನೀರು ಇನ್ನೂ ಆಸಂಗಿ ಬ್ಯಾರೇಜ್‌ ತಲುಪಿಲ್ಲ. ಹೀಗಾಗಿ ಬ್ಯಾರೇಜ್‌ ಅನ್ನು ಅವಲಂಬಿಸಿರುವ ಗುಳೇದಗುಡ್ಡ ಹಾಗೂ ಗ್ರಾಮಗಳಲ್ಲಿ ಸಂಕಷ್ಟ ಮುಂದುವರಿಯುವ ಆತಂಕ ಜನರನ್ನು ಕಾಡುತ್ತಿದೆ.
 
ಇವಿಷ್ಟೇ ಗ್ರಾಮಗಳಲ್ಲ;  ಐಹೊಳ್ಳಿ, ನಿಂಬಲಗುಂದಿ, ಕಮತಗಿ, ಇಂಗಳಗಿ, ಚಿಕ್ಕಮಾಗಿಯಲ್ಲಿರುವ ಬ್ಯಾರೇಜ್‌ ಅವಲಂಬಿತ ಊರುಗಳ ಜನ ಮತ್ತುಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪುವುದಿಲ್ಲ ಎಂದು ಪ್ರಕಾಶ ಗೌಡರ ಆತಂಕ ವ್ಯಕ್ತಪಡಿಸುತ್ತಾರೆ. 
 
ಕಳೆದ 2–3 ವರ್ಷಗಳಿಂದ ಸಮರ್ಪಕವಾಗಿ ಮಳೆ ಬೀಳದ ಕಾರಣ ಈ ಭಾಗದ ಅಂತರ್ಜಲ ಮಟ್ಟ ಕುಸಿದಿದೆ. ನೂರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನದಿ ದಡದಲ್ಲಿರುವ ಊರುಗಳದ್ದೂ ಇದೇ ಪರಿಸ್ಥಿತಿ ಎನ್ನುವ ಮೂಲಕ ರೈತ ಶಿವಪ್ಪ ಹಾದಿಮನಿ ಈ ಬಾರಿ ಉದ್ಭವಿಸಿರುವ ಕುಡಿಯುವ ನೀರಿನ ತೊಂದರೆಯನ್ನು ವಿವರಿಸುತ್ತಾರೆ.
 
ಈ ಮಾತಿಗೆ ದನಿಗೂಡಿಸುವ ಮತ್ತೊಬ್ಬ ರೈತ ಚಂದಪ್ಪ ಗೌಡರ, ‘ನೀರು, ಮೇವಿನ ತೊಂದರೆಯಿಂದ ಕಂಗೆಟ್ಟಿರುವ ರೈತರು ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ಕೆಲಸ ಅರಸಿ ರಾಜ್ಯದ ಕರಾವಳಿ ಜಿಲ್ಲೆಗಳಿಗೆ, ನೆರೆಯ ಮಹಾರಾಷ್ಟ್ರ, ಗೋವಾಕ್ಕೆ ಗುಳೆ ಹೋಗುತ್ತಿದ್ದಾರೆ’ ಎಂದು ಅಲವತ್ತುಕೊಂಡರು.
 
ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಿಸಿದರೂ ಕಾಲುವೆಯಲ್ಲಿ ಹನಿ ನೀರು ಹರಿದಿಲ್ಲ. ಹಳ್ಳ, ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ನೀರಿಲ್ಲದೆ ಬತ್ತಿರುವ ಕೆರೆಗಳಿಗೆ ಕಾಲುವೆ ಮೂಲಕ ನೀರು ತುಂಬಿಸಿ ದನಕರುಗಳಿಗೆ ನೀರಿನ ವ್ಯವಸ್ಥೆ ಮಾಡಿ ಕೊಡುವಲ್ಲಿ ಜನಪ್ರತಿನಿಧಿ, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.  
 
ಆಸಂಗಿ–ಕಟಗಿನಹಳ್ಳಿ ಬ್ಯಾರೇಜ್‌ಗಳಿಗೆ ನೀರು ತಲುವಂತಾಗಲು ಮತ್ತೊಮ್ಮೆ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ರೈತರ ಒತ್ತಾಸೆ.  
 
* ವಾರದ ಹಿಂದೆ ನವಿಲುತೀರ್ಥ ಜಲಾಶಯದಿಂದ  ಮಲಪ್ರಭಾ ನದಿಗೆ ನೀರನ್ನು ಬಿಡಲಾಗಿದೆ. ಆದರೆ, ನೀರು ಇನ್ನೂ ಬ್ಯಾರೇಜ್‌ ತಲುಪಿಲ್ಲ
ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT