ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ನಮ್ಮನೆ?

ಅಮೆರಿಕನ್ನಡತಿಯ ಅನುಭವ ಕಥನ
Last Updated 12 ಮಾರ್ಚ್ 2017, 6:42 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಮನೆ ಕೊಳ್ಳುವ ಪ್ರಕ್ರಿಯೆ ಹೇಗಿರುತ್ತದೆ? ಅಮೆರಿಕನ್ನಡತಿಯೊಬ್ಬರು ತಾವು ಮನೆ ಕೊಳ್ಳಲು ನಡೆಸಿದ ಹುಡುಕಾಟದ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ಅನುಭವ ಕಥನ ಈಗಾಗಲೇ ಮನೆ ಕೊಂಡವರಿಗೆ ನೆನಪುಗಳ ಮರುಕಳಿಕೆಯಂತಿದ್ದರೆ, ಮನೆ ಕೊಳ್ಳುವವರ ಪಾಲಿಗೆ ಅವರ ಕನಸಿಗೆ ನೀರೆರೆಯುವಂತಿದೆ.

‘ಸುತ್ತಲೂ ಹಸಿರು, ಪಕ್ಕದಲ್ಲಿಯೇ ಪುಟ್ಟ ನೀರಿನ ಕೊಳ, ಮಧ್ಯದಲ್ಲಿ ಕಾರಂಜಿ, ಮನೆಯ ಹಿಂದೆ ಶಿವಮೊಗ್ಗದ ಹಸಿರನ್ನು ನೆನಪಿಸುವ ಮರಗಳ ಕಾಶಿ, ಚಿಂವ್‌ಗುಡುವ ಪಕ್ಷಿಗಳು...’ – ಚಿಕ್ಕವಯಸ್ಸಿನ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಬಹಳ ಸಹಜವಾದ ಕನಸಿದು. ದೂರದ ಅಮೆರಿಕದಲ್ಲಿ ನನ್ನ ಈ ಕನಸು ನನಸಾಗಬಹುದೆಂದು ನಾನೆಂದೂ ನಿರೀಕ್ಷಿಸಿರಲಿಲ್ಲ.

ಹೌದು, ನಾನು ಕನಸು ಕಂಡ ರೀತಿಯದೇ ಪರಿಸರದಲ್ಲಿ ನಮ್ಮ ಮನೆಯಿದೆ. ಅದು ನನಸಾದ ಬಗೆ ನನಗೊಂದು ಸ್ವಾರಸ್ಯವಾದ ಅನುಭವ. ಈ ಅನುಭವವು ನನಗೊಂದು ಹೊಸ ಆಯಾಮವನ್ನೇ ಅನಾವರಣಗೊಳಿಸಿತು. ನಾವು ಮನೆಯನ್ನು ಖರೀದಿಸುವ ನಿರ್ಧಾರವನ್ನು ಮಾಡಿದಾಗ  ನನ್ನ ಪತಿ, ‘ನಾವು ಏಜೆಂಟ್‌ ಜೊತೆ ಒಪ್ಪಂದ ಮಾಡಿಕೋಬೇಕು. ಆ ಸಮಯದಲ್ಲಿ ಅವರನ್ನು ಬಿಟ್ಟು ಬೇರೆ ಏಜೆಂಟ್‌ರನ್ನು ನೋಡೋಕ್ಕಾಗಲ್ಲ’ ಎಂದು ಹೇಳಿದ್ದರು.

‘ಏನಂದ್ರೂ ಆರು ತಿಂಗಳು ಬೇಕಾಗತ್ತೆ. ಸಹನೆ ಬೇಕು. ಎಲ್ಲ ವಿವರಗಳದ್ದೂ ಡೇಟಾಬೇಸ್ ಮಾಡು’ ಎಂದು ಇಲ್ಲಿರುವ ನಮ್ಮ ಸಮೀಪದ ಬಂಧುಗಳು ಎಚ್ಚರಿಸಿದಾಗ – ‘ಅರೆ... ಇಷ್ಟೆಲ್ಲಾ ಔಪಚಾರಿಕವಾಗಿ ಮಾಡಬೇಕೆ?’ ಎಂದು ನನಗೆ ಗೊಂದಲವಾಗಿದ್ದು ನಿಜ.

ಮನೆಯ ಬಾಗಿಲು ದಕ್ಷಿಣ ದಿಕ್ಕಿನಲ್ಲಿರಬಾರದು, ಮನೆಯೊಳಗೆ ಹೋಗಲು ಬಹಳ ಮೆಟ್ಟಿಲಿರಬಾರದು, ಹಾಲ್‌ನಲ್ಲಿ ಕಾರ್ಪೆಟ್ ಇರಬಾರದು – ಇತ್ಯಾದಿ ‘ಬಾರದು’ಗಳು ಬೆಳೆದುನಿಂತವು. ಮೊದಲ ಸಾಲಿನಲ್ಲಿ ಹೇಳಿದಂತೆ ಮನೆಯಲ್ಲಿ ಏನಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಗಿಡಗಳನ್ನು ಬೆಳೆಸಲು ಒಂದಿಷ್ಟು ಜಾಗ ಇರಲೇಬೇಕು, ಸಾಧ್ಯವಾದರೆ ಮೆಟ್ರೋ ಹಾಗೂ ಬಸ್‌ ನಿಲ್ದಾಣಕ್ಕೆ ಹತ್ತಿರವಿರಬೇಕು, ಸಮೀಪದಲ್ಲಿ ದಿನಸಿ/ತರಕಾರಿ ಸಿಗುವ ಅಂಗಡಿಯಿರಬೇಕು.. ಇತರೇ ‘ಬೇಕು’ಗಳು ನಮ್ಮ ಪಟ್ಟಿಯಲ್ಲಿ ಸೇರಿಕೊಂಡವು.

ನಮ್ಮ ಬೆಂಗಳೂರಿನಂತೆ ಇಲ್ಲಿ ಮನೆಯ ಬೆಲೆಯನ್ನು ಇಷ್ಟಬಂದಂತೆ ನಿಗದಿಪಡಿಸಲಾಗುವುದಿಲ್ಲ. ಸಾಮಾನ್ಯವಾಗಿ ಯಾವ ಪ್ರದೇಶದಲ್ಲಿ ಅತ್ಯುತ್ತಮ ಶಾಲೆಗಳಿರುತ್ತವೆಯೋ ಅಲ್ಲಿ ಮನೆಯ ಬೆಲೆ ಹೆಚ್ಚಿರುತ್ತದೆ. ಇದನ್ನು ’School District' ಎಂದು ಕರೆಯುತ್ತಾರೆ. ಜೊತೆಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ಬಡಾವಣೆಯಲ್ಲಿ ದಕ್ಷಿಣ ದಿಕ್ಕಿಗೆ ಬಾಗಿಲಿರದಂತೆ, ವಾಸ್ತುಪ್ರಕಾರವಾಗಿ ಮನೆಗಳನ್ನು ಕಟ್ಟುತ್ತಾರೆ ಎಂದೂ ತಿಳಿಯಿತು.

ಇನ್ನು ಅದನ್ನು ಕೊಳ್ಳುವವರು ನಮ್ಮವರೇ ಎಂದು ಬೇರೆ ಹೇಳಬೇಕಿಲ್ಲ. ಅಲ್ಲದೇ ತಮ್ಮ ಹೆತ್ತವರು ಹಾಗೂ ಅತ್ತೆ–ಮಾವ ಬಂದಾಗ ಸುಲಭವಾಗುವಂತೆ ಮೊದಲ ಅಂತಸ್ತಿನಲ್ಲಿ ಮಲಗುವ ಕೋಣೆಯಿರುವ ಮನೆಗಳೂ ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಕಟ್ಟಿರುತ್ತಾರೆ. ಇಂತಹ ಗ್ರಾಹಕೀಯಗೊಳಿಸಿರುವ ಮನೆಗಳಿಗೆ ಬೆಲೆ ಹೆಚ್ಚಾಗಿರುತ್ತದೆ.

ನಮ್ಮ ಬೆಂಗಳೂರಿಗೆ ಹೋಲಿಸಿಕೊಂಡಲ್ಲಿ ಇಲ್ಲಿ ಮನೆ ಹುಡುಕಾಟ ವ್ಯವಸ್ಥಿತವೆಂದೇ ಹೇಳಬಹುದು. ಏಕೆಂದರೆ ಜಾಲತಾಣಗಳಲ್ಲಿ ಮನೆಯ ವಿಳಾಸ ಕೊಟ್ಟರೆ ಅದರ ಸಂಪೂರ್ಣ ಜಾತಕವೇ ಬಯಲಾಗುತ್ತದೆ! ಮನೆ ಕಟ್ಟಿದ ವರ್ಷ, ಹಿಂದಿನ ಮಾರಾಟದ ಬೆಲೆ, ತೆರಿಗೆ ಪಾವತಿಯ ದಾಖಲೆಯ ವಿವರ, ಮನೆಯ ಸಂಪೂರ್ಣ ಚಿತ್ರಗಳು... ಹೀಗೆ, ಪ್ರತಿಯೊಂದು ವಿವರವೂ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಡಬಲ್‌ ರಿಜಿಸ್ಟ್ರೇಶನ್‌’ ಭಯವಾಗಲೀ, ‘ಲಿಟಿಗೇಷನ್‌ ಪ್ರಾಪರ್ಟಿ’ ಎಂಬ ಅಂಜಿಕೆಯಾಗಲೀ ಇರುವುದಿಲ್ಲ.

ಹಾಗೆಯೇ ಶಾಲೆಗಳ ‘ರೇಟಿಂಗ್’ ಕೂಡ ಅಲ್ಲಿದೆ. ಅತ್ಯುತ್ತಮ ಶಾಲೆಯಾಗಿದ್ದರೆ ‘10/10’ ಕ್ರಮಾಂಕವು ಹಸಿರು ಬಣ್ಣದಿಂದ ಕಂಗೊಳಿಸುತ್ತದೆ. ನಮ್ಮ ಭಾರತೀಯ ಮೂಲದ ಅನೇಕರು ಅತ್ಯುತ್ತಮ ‘ಸ್ಕೂಲ್ ಡಿಸ್ಟ್ರಿಕ್ಟ್‌’ನಲ್ಲಿ ಮನೆಯನ್ನು ಕೊಂಡು, ಮಕ್ಕಳನ್ನು ಓದಿಸಿ ‘ಕುಡುಮಿ’ಗಳನ್ನಾಗಿಸಲು ಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದು ಪ್ರತೀತಿಯಿದೆ – ‘ಅಷ್ಟು ಚೆನ್ನಾಗಿರದ ಸ್ಕೂಲ್ ಡಿಸ್ಟ್ರಿಕ್ಟ್‌’ಗಳಲ್ಲಿ ನಮ್ಮ ಭಾರತೀಯ ಮೂಲದ ಮಕ್ಕಳನ್ನು ಬಿಟ್ಟರೆ ಸಾಕು, ಕೆಲವೇ ವರ್ಷಗಳಲ್ಲಿ ಆ ಬಡಾವಣೆಯ ಮನೆಯ ಬೆಲೆ ಹೆಚ್ಚಾಗುತ್ತದೆ’ ಎಂದು.

ಪ್ರತಿದಿನವೂ ಈ ತಾಣಗಳಲ್ಲಿ ಸೂಕ್ತವೆನಿಸುವ ಮನೆಗಳ ಪಟ್ಟಿ ಮಾಡುವುದೇ ನನ್ನ ಕೆಲಸವಾಯಿತು. ಸಂಜೆಯಾಗುತ್ತಲೇ ನನ್ನ ಪತಿ ಕೆಲಸದಿಂದ ಮರಳಿದ ಕೂಡಲೇ ಅವರಿಗೆ ಪಟ್ಟಿಯನ್ನು ಒಪ್ಪಿಸುತ್ತಿದ್ದೆ. ಅಂತೂ ನಮಗೆ ಭಾರತೀಯ ಮೂಲದವರೇ ಆದ ಏಜೆಂಟ್‌ರೊಬ್ಬರು ಸಿಕ್ಕಿದರು. ಇಲ್ಲಿ ಅಂದುಕೊಂಡ ತಕ್ಷಣವೇ ‘ರಿಯಲ್‌ ಎಸ್ಟೇಟ್‌ ಏಜೆನ್ಸಿ’ ಎಂದು ಕಚೇರಿಯನ್ನು ತೆರೆಯಲಾಗುವುದಿಲ್ಲ.

ಪ್ರತಿಯೊಬ್ಬ ಏಜೆಂಟ್‌ ಕೆಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಲೈಸನ್ಸ್‌ ಪಡೆಯಬೇಕು. ಕೊಳ್ಳುವವರೂ ಹಾಗೂ ಮಾರುವವರು ಇಬ್ಬರೂ ಏಜೆಂಟ್‌ನನ್ನು ಗೊತ್ತು ಮಾಡಿಕೊಂಡಿರುತ್ತಾರೆ. ಇಲ್ಲಿಯ ನಿಯಮಗಳ ಪ್ರಕಾರ ಕೊಳ್ಳುವವರು ಏಜೆಂಟರಿಗೆ ಯಾವುದೇ ಕಮೀಷನ್‌ ಕೊಡಬೇಕಿಲ್ಲ. ಅದನ್ನು ಮಾರುವವರು ಕೊಡುತ್ತಾರೆ. ಹೀಗಾಗಿ ನಮಗೆ ಈ ಹುಡುಕಾಟದಲ್ಲಿ ಪೆಟ್ರೋಲಿನ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿತ್ತು ಅಷ್ಟೇ.

ಸಂಭವನೀಯ ಪಟ್ಟಿಯನ್ನು ಹಿಡಿದು ಒಂದು ಶುಭಮಹೂರ್ತದಲ್ಲಿ ನಮ್ಮ ಯಾತ್ರೆ ಆರಂಭವಾಯಿತು. ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ವಾರಾಂತ್ಯವೂ ಗೃಹಾನ್ವೇಷಣೆಯಲ್ಲಿ ನಾವು ಕಳೆದುಹೋಗಿದ್ದೆವು.

ನಮ್ಮ ಹುಡುಕಾಟದಲ್ಲಿ ದಾರಿಯುದ್ದಕ್ಕೂ ಕೆಲವು ಹಳ್ಳಿಗಳನ್ನು ಹಾದು ಹೋಗಬೇಕಿತ್ತು. ಇಲ್ಲಿ ಎಲ್ಲವೂ ‘Larger than life' ಎನ್ನುವಂತಿರಬೇಕು. ಹಳ್ಳಿಗಳ ಹೊಲ, ಗದ್ದೆಗಳೂ ಅದಕ್ಕೆ ಹೊರತಲ್ಲ. ಕನಿಷ್ಠ ಐವತ್ತರಿಂದ ನೂರು ಎಕರೆಯಾದರೂ ಇರದಿದ್ದರೆ ಅದು ಹೊಲವೆನ್ನಿಸುವುದಿಲ್ಲ. ಆಗ ಬೇಸಿಗೆಯಾದ್ದರಿಂದ ಹೊಲಗಳು ಮುಸುಕಿನ ಜೋಳ, ಕೋಸು, ಸೌತೇಕಾಯಿ ಇತರೆ ತರಕಾರಿಗಳಿಂದ ಆವೃತವಾಗಿ ಅದರ ಹಸಿರು ಕಣ್ಣಿಗೆ ತಂಪೆರೆಯಿತು.

ಆದರೆ ಈ ಕ್ಷಣಗಳನ್ನು ಆಸ್ವಾದಿಸುತ್ತಿರುವಾಗಲೇ, ಮುಂದೆ ಕೊಂಚ ದೂರದಲ್ಲಿ ಹಳ್ಳಿಯೊಂದು ನಗರೀಕರಣನೆಂಬ ಬಕಾಸುರನ ಹೊಟ್ಟೆಗೆ ‘ಸ್ವಾಹಾ’ ಆಗುವುದರಲ್ಲಿತ್ತು.

ಈ ವಿಷಯಕ್ಕೆ ಬಂದಾಗ ಹತ್ತು ವರ್ಷಗಳ ಹಿಂದೆಯೂ ಬೆಂಗಳೂರಿನಲ್ಲಿ ಹೆಬ್ಬಾಳ ಕೆರೆಯನ್ನು ದಾಟಿದರೆ ಕಾಣುತ್ತಿದ್ದ ಅನೇಕ ಹೊಲಗದ್ದೆಗಳು ನೆನಪಾಗುತ್ತವೆ. ಈಗ ಕೆಂಪಾಪುರದ ಜಾಗದಲ್ಲಿ ಭುವನೇಶ್ವರಿ ನಗರ, ಕಾಫಿ ಬೋರ್ಡ್‌ ಲೇಔಟ್‌ ತಲೆಯೆತ್ತಿದೆ. ಜಕ್ಕೂರಿನ ಬದಲಾಗಿ ಶಿವರಾಮ ಕಾರಂತ್‌ ನಗರ (ಟೆಲಿಕಾಂ ಬಡಾವಣೆ) ಎನ್ನಬೇಕು. ಜಗತ್ತಿನ ಯಾವುದೇ ಪ್ರದೇಶವಾಗಲೀ ನಗರೀಕರಣಕ್ಕೆ ಹಳ್ಳಿಗಳು ಬಲಿಯಾಗುವುದು ಅಭಿವೃದ್ಧಿಯೆಂಬ ಮಾರಿಯ ಅಡ್ಡ ಪರಿಣಾಮವೇನೋ.

ಕೆಲವೇ ಕೆಲವು ಕೆಲಸಗಾರರು, ಮೇರುಮಟ್ಟದ ತಂತ್ರಜ್ಞಾನವುಳ್ಳ ಯಂತ್ರಗಳು ಕಾರ್ಯಸನ್ನದ್ಧರಾಗಿ ಹೊಸ ಬಡಾವಣೆಯೊಂದರ ನಿರ್ಮಾಣದಲ್ಲಿ ತೊಡಗಿದ್ದರು. ಬಹುತೇಕ ಹಳೆಯ ಮನೆಗಳು ಧ್ವಂಸವಾಗಿ ಅದರ ಸ್ಥಳದಲ್ಲಿ ರಸ್ತೆ ಹಾಗೂ ಹೊಸ ಕಟ್ಟಡಗಳು ಬಂದಿದ್ದವು. ಹಾಗಿದ್ದೂ ಕೆಲ ಗಟ್ಟಿಗರು ಮನೆಯೆಂಬುದು ತಮ್ಮ ಗುರುತೆಂದು ಖಾಲಿ ಮಾಡದೇ ಅಲ್ಲಿಯೇ ವಾಸವಿದ್ದರು.

ಬಹುತೇಕ ಬಾರಿ ಚಿಕ್ಕ ಊರುಗಳಲ್ಲಿ ಒಂದು ಮೈಲಿಯ ಅಂತರದಲ್ಲಿ ಒಂದೋ ಎರಡೋ ಮನೆಗಳು ಕಾಣಸಿಗುತ್ತವೆ. ಸುಮಾರು ಮೂರು ಎಕರೆ ಪ್ರದೇಶದ ನಡುವೆಯಿರುವ ಮನೆಯಲ್ಲಿ ವಾಸಿಸುವ ಬಿಳಿಯರು ಏಕಾಂತಪ್ರಿಯರು. ನಮ್ಮ ಭಾರತೀಯರು ಅಪ್ಪಿತಪ್ಪಿಯೂ ಇಂತಹ ಏಕಾಂತ ಪ್ರದೇಶಗಳಲ್ಲಿ ಮನೆಯನ್ನು ಕೊಳ್ಳುವುದಿಲ್ಲ.

ಒಂದು ವೇಳೆ ಬಿಳಿಯರು ತಾವಿರುವ ಬಳಿ ವಲಸೆಗಾರರ ಸಂಖ್ಯೆ ಹೆಚ್ಚಾದರೆ, ಆ ಸ್ಥಳವನ್ನು ಖಾಲಿ ಮಾಡಿ ಮತ್ತೊಂದಿಷ್ಟು ದೂರ ಹೋಗುತ್ತಾರೆ. ಅಂತಹ ಊರುಗಳನ್ನು ‘ರೆಡ್‌ ನೆಕ್‌ ಏರಿಯಾ’ ಎನ್ನುತ್ತಾರೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಬೆಂಗಳೂರಿನಲ್ಲಿ ನಾವು ನಮ್ಮ ಮನೆಗಳನ್ನು ಮಾರಿ ದೂರ ಹೋಗುವುದು ಕಡಿಮೆ ಹಾಗೂ ವಲಸಿಗರು ಹೆಚ್ಚಾಗಿ ಕಾಣಸಿಗುವುದು ಹೊಸಬಡಾವಣೆಗಳಲ್ಲಿ. 

ಮೊದಮೊದಲಿಗೆ ನಮ್ಮ ಏಜೆಂಟ್‌ ಸಾಹೇಬರೇ ರಸ್ತೆಯಲ್ಲಿ ನಿಲ್ಲಿಸಿರುತ್ತಿದ್ದ ಕಾರುಗಳನ್ನು ನೋಡಿ, ಮನೆಯನ್ನು ನೋಡುವುದೋ ಬೇಡವೋ ಎಂದು ನಿರ್ಧರಿಸುತ್ತಿದ್ದರು. ನನಗೋ ಪಟ್ಟಿಯಲ್ಲಿದ್ದ ಮನೆ ಅಷ್ಟು ಚೆನ್ನಾಗಿದ್ದೂ ಏಕಿವರು ನೋಡಲಿಕ್ಕೆ ಬಿಡುತ್ತಿಲ್ಲವೆಂಬ ಕುತೂಹಲ. ಕೊನೆಗೆ ನನ್ನ ಅಸಹನೆಯನ್ನು ತೋಡಿಕೊಂಡೆ. ಅದಕ್ಕವರು – ‘ಮನೆಯ ಮುಂದೆ ನಿಲ್ಲಿಸಿರುವ ಕಾರುಗಳಿಂದಲೇ ಅಲ್ಲಿ ವಾಸಿಸುವ ಜನರು ಎಂಥವರು ಎಂದು ತಿಳಿಯುತ್ತದೆ.

ಉದಾಹರಣೆಗೆ, ಮೆಕ್ಸಿಕೋ ಜನರು ಹೆಚ್ಚಾಗಿರುವ ಬಳಿ ಮನೆ ಕೊಳ್ಳುವುದು ಸೂಕ್ತವಲ್ಲ. ಅವರ ಶಬ್ದ, ಗಲಾಟೆ ನಿಮಗೆ ತಡೆಯಲಾಗುವುದಿಲ್ಲ’ ಎಂದು ಸಮಜಾಯಿಷಿ ನೀಡಿದರು. ನಂತರ ನನ್ನ ಪತಿಯು, ‘ಸಾಮಾನ್ಯವಾಗಿ ಭಾರತೀಯ ಮೂಲದವರು ಮೆಕ್ಸಿಕೋ ಹಾಗೂ ಕರಿಯರು (ನೀಗ್ರೋ ಜನರು) ಹೆಚ್ಚಾಗಿರುವ ಬಡಾವಣೆಗಳಲ್ಲಿ ಮನೆಯನ್ನು ಕೊಳ್ಳುವುದಿಲ್ಲ. ಅಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚು ಹಾಗೂ ಅಸುರಕ್ಷಿತ ಕೂಡ’ ಎಂದು ತಿಳಿಹೇಳಿದರು.

ಅಮೆರಿಕ ಎಷ್ಟೇ ಶ್ರೀಮಂತ ದೇಶವಾದರೂ ಅಲ್ಲಿ ಕರಿಯರ ಮೇಲೆ ನಡೆಯುವ ದಬ್ಬಾಳಿಕೆ ಹಾಗೂ ಶೋಷಣೆ ಇಂದಿಗೂ ತಪ್ಪಿಲ್ಲ ಹಾಗೂ ನಿಂತಿಲ್ಲ. ಸರಿಯಾದ ವಿದ್ಯಾಭ್ಯಾಸವಿಲ್ಲದೇ ಓಡಾಡಲು ಕಾರಿಲ್ಲದೇ ಚಿಕ್ಕಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಬಡತನದಲ್ಲಿಯೇ ಜೀವನವನ್ನು ಸವೆಸುವ ಕರಿಯರು ವಾಸಿಸುವುದು ನಗರಗಳಲ್ಲಿ. ಕಾರಣವಿಷ್ಟೆ, ಅಲ್ಲಿ ಅವರಿಗೆ ಓಡಾಡಲು ಬಸ್ಸು ಹಾಗೂ ಮೆಟ್ರೋರೈಲಿನ ವ್ಯವಸ್ಥೆಯಿರುತ್ತದೆ.

ಬೆಂಗಳೂರಿನ ಕೊಳೆಗೇರಿಗಳನ್ನು ನೆನಪಿಸುವ ಬಡಾವಣೆಗಳನ್ನು ನೋಡಿದ ಕೂಡಲೇ ಇವು ಕರಿಯರು ವಾಸಿಸುವ ಸ್ಥಳಗಳು ಎಂದು ಹೇಳಿಬಿಡಬಹುದು. ಇನ್ನು ಇವರ ಮಕ್ಕಳು ಹೋಗುವ ಶಾಲೆಗಳಲ್ಲಿ ವಿದ್ಯಾವಂತರ ಮಕ್ಕಳು ಹೋಗುವುದು ಬಹಳ ಕಡಿಮೆ. ಡ್ರಗ್ಸ್‌, ಗುಂಪುಗಾರಿಕೆ, ಅಪರಾಧಗಳ ಸಂಖ್ಯೆ ಹೆಚ್ಚಾಗಿ ಇತರರು ಅಂತಹ ಬಡಾವಣೆಗಳಿಂದ ದೂರವುಳಿಯುವಂತೆ ಆಗುತ್ತದೆ.

ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ ನಗರದ ಹೃದಯಭಾಗದಲ್ಲಿರುವ ಇಂತಹ ಆಸ್ತಿ ಆಕರ್ಷಣೆಯಾಗಿರುತ್ತದೆ. ಅದಕ್ಕಾಗಿ ವ್ಯವಸ್ಥಿತವಾಗಿ  ಪಾಳುಬಿದ್ದಿರುವ ಮನೆ ಹಾಗೂ ಕಟ್ಟಡ ಪ್ರದೇಶಗಳನ್ನು ಕೆಡವಿ, ಅದನ್ನು ಅಭಿವೃದ್ಧಿಗೊಳಿಸಿ ಅಲ್ಲಿ ಆಸ್ತಿಯ ಬೆಲೆಯನ್ನು ಗಗನಕ್ಕೇರಿಸುತ್ತಾರೆ. ಇದರಿಂದ ಸುತ್ತಮುತ್ತಲೂ ಇರುವ ಹಳೆಯ ಮನೆ ಹಾಗೂ ಅಂಗಡಿಗಳ ಬಾಡಿಗೆಯೂ ಏರುತ್ತದೆ. ಆಸ್ತಿ ತೆರಿಗೆಯಲ್ಲಿಯೂ ಹೆಚ್ಚಳವಾಗುತ್ತದೆ.

ಹೆಚ್ಚಿನ ಆರ್ಥಿಕ ಹೊರೆ ಹೊರಲಾರದ ಬಡವರು, ಕರಿಯರು ಗತ್ಯಂತರವಿಲ್ಲದೇ ತಮ್ಮ ಸ್ಥಳವನ್ನು ತೊರೆದು ಇನ್ನೆಲ್ಲೋ ಹೋಗುತ್ತಾರೆ. ಅವು ಬಿಳಿಯರ, ಶ್ರೀಮಂತರ ವಾಸಸ್ಥಾನಗಳಾಗಿಯೋ ವ್ಯಾಪಾರಕೇಂದ್ರಗಳಾಗಿಯೋ ಮಾರ್ಪಾಡಾಗುತ್ತವೆ. ಈ ಪ್ರಕ್ರಿಯೆಯನ್ನು ‘Gentrification’ ಎಂದು ಕರೆಯಲಾಗುತ್ತದೆ.

ಇದಕ್ಕೆ ವ್ಯತಿರಿಕ್ತವೆಂಬಂತೆ ನಮ್ಮ ಏಜೆಂಟ್‌ ಶಿಫಾರಸು ಮಾಡಿದ, ಭಾರತೀಯ ಮೂಲದವರೇ ಹೆಚ್ಚಿದ್ದ ಪ್ರದೇಶಗಳು ನಮಗೆ ಬೇಡವಾದವು. ಕಾರಣವಿಷ್ಟೇ – ಸದಾಶಿವನಗರದ ಬಂಗಲೆಗಳನ್ನೂ ನಾಚಿಸುವ ಮನೆಗಳಿರುವ ಬಡಾವಣೆಯದು. ಸದಾ ಪಾರ್ಟಿ ಮಾಡುವ, ಪ್ರತಿದಿನವೂ ಡಿಸೈನರ್‌ ಬಟ್ಟೆಗಳಲ್ಲಿ ಕಂಗೊಳಿಸುವ ಇವರು, ‘ಕರಣ್‌ ಜೋಹರ್‌’ ಮಾಡುವ ಚಿತ್ರಗಳಲ್ಲಿನ ‘ಎನ್‌ಆರ್ಐ' ಪಾತ್ರಗಳಿಗೆ ಸ್ಫೂರ್ತಿಯೆಂದರೆ ಆಶ್ಚರ್ಯವಿಲ್ಲ.

ನನಗೆ ಅಮೆರಿಕದಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ ಎಲ್ಲ ರಸ್ತೆಗಳೂ ಮನೆಗಳೂ ವೈವಿಧ್ಯವಿಲ್ಲದೇ ಇರುವ ಏಕತಾನತೆ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಒಮ್ಮೊಮ್ಮೆ ಅತಿಯೆನಿಸುವ ಅಚ್ಚುಕಟ್ಟುತನ, ಸುವ್ಯವಸ್ಥೆ ನನಗೆ ಉಸಿರು ಕಟ್ಟಿಸುವುದುಂಟು. ಹೀಗಾಗಿ ನಾನು ನ್ಯೂಯಾರ್ಕ್‌ ಹಾಗೂ ಹವಾಯ್‌ಗೆ ಹೋದಾಗ ಅಲ್ಲಿನ ಒಂದಿಷ್ಟು ಗದ್ದಲ, ಜನ, ರಸ್ತೆಯಲ್ಲಿನ ವ್ಯಾಪಾರಿಗಳು, ಕಸ, ಟ್ರಾಫಿಕ್‌  ಕಂಡು ‘ಅಬ್ಬಾ’ ಎಂದು ಸಮಾಧಾನ ಪಟ್ಟುಕೊಂಡೆ.

ಇಲ್ಲಿ ಎಲ್ಲವೂ ಒಂದೇ ರೀತಿಯಲ್ಲಿ ಕಾಣುವ ನನಗೆ ಎಲ್ಲಿಗೆ ಹೋಗುತ್ತೇನೆ ಬರುತ್ತೇನೆ, ಮನೆ ಹೇಗಿತ್ತು ಎಂದು ನೆನಪಿನಲ್ಲಿ ಉಳಿಯುವುದೇ ಇಲ್ಲ. ಇಲ್ಲಿಯ ಮನೆಗಳನ್ನು ‘ಕುಕಿ ಕಟರ್‌’ ಎಂದು ಕರೆಯುತ್ತಾರೆ. ಸಕ್ಕರೆ ಅಚ್ಚಿನಲ್ಲಿ ಹೊರಬಂದಂತೆ ಮನೆಯ ಹೊರಗಿನ ಬಣ್ಣ ಹಾಗೂ ಒಳಗಿನ ವಿನ್ಯಾಸ ಒಂದೇ ತೆರನಾಗಿರುತ್ತದೆ.

ಮೊದಮೊದಲಿಗೆ ಹತ್ತು ಹನ್ನೆರಡು ಮನೆಗಳನ್ನು ನೋಡಿ ಮನೆಗೆ ಬಂದು ನಿರ್ಧರಿಸಲು ತೊಡಗಿದರೆ, ನನಗೆ ಯಾವ ಚಿತ್ರಣವೂ ನೆನಪಿನಲ್ಲಿ ಉಳಿಯುತ್ತಿರಲಿಲ್ಲ! ತಲೆ ಚಿಟ್ಟುಹಿಡಿದಂತಾಗುತ್ತಿತ್ತು. ಹೋಗಲಿ ಮನೆಯ ಹೊರಗೋಡೆಗಳಿಗೆ ಒಂದು ನೀಲಿ, ತಿಳಿ ಗುಲಾಬಿ, ತಿಳಿ ಹಳದಿ  ಇತರೇ ಬಣ್ಣಗಳನ್ನು ಹಚ್ಚಿ ವರ್ಣಮಯವಾಗಿಸುತ್ತಾರೆಯೇ .... ಉಹೂಂ... ಇಲ್ಲ. ಹಾಗಿದ್ದಲ್ಲಿ ಹಳದಿ ಮನೆ, ಕೆಂಪು ಮನೆ... ಎಂದಾದರೂ ನೆನಪಿನಲ್ಲಿ ಇರುತ್ತಿತ್ತು. ಕೊನೆಗೆ ನಾನು ಪ್ರತಿಯೊಂದು ಮನೆಯ ವಿವರಗಳನ್ನು ಅಲ್ಲಿಯೇ ಬರೆದಿಡಲುತೊಡಗಿದೆ.

ಇಲ್ಲಿನ ಮನೆಗಳ ಏಕತಾನತೆಗೆ ಇಲ್ಲಿನ ‘ಗೃಹ ಸಂಘ’ಗಳೂ ಕಾರಣವೆಂದರೆ ತಪ್ಪಿಲ್ಲ. ಈ ಸಂಘದ ಕಾರ್ಯಚಟುವಟಿಕೆಗಳನ್ನು ಬಹಳ ವ್ಯವಹಾರ ಜಾಣ್ಮೆಯಿಂದ, ನಯವಾಗಿ ಮಾಫಿಯಾದಂತೆ ನಡೆಸಲಾಗುತ್ತದೆ. ಮನೆ ನಮ್ಮದೇ ಆದರೂ, ನಾವು ಕಿಟಕಿಗೆ ಹಾಕುವ ಪರದೆಗಳಿಂದ ಹಿಡಿದು ಮನೆಯ ಹಿಂದೆ ಇಡುವ ಸಾಮಾನುಗಳಿಗೂ ಅನೇಕ ನಿರ್ಬಂಧಗಳಿವೆ. ಒಂದು ವೇಳೆ ಅವರ ನಿಯಮಗಳನ್ನು ಮೀರಿದಲ್ಲಿ ಭಾರೀ ಶುಲ್ಕವನ್ನು ವಿಧಿಸುತ್ತಾರೆ. ಎಲ್ಲವೂ ಏಕಪ್ರಕಾರದಲ್ಲಿ ಇರದಿದ್ದರೆ ಸುತ್ತಮುತ್ತಲೂ ಇರುವ ಮನೆಗಳ ಬೆಲೆ ಕುಸಿಯುವ ಸಾಧ್ಯತೆಯಿದೆ ಎಂಬ ಮಾನಸಿಕ ಅಭದ್ರತೆ ಇಲ್ಲಿ ಹೆಚ್ಚು.

ಈ ಏಕತಾನತೆಯ ನಡುವೆಯೂ ನಾವು ನೋಡಿದ ಮೊದಲ ಮನೆಯ ಚಿತ್ರಣ ಮನದಲ್ಲಿ ಅಚ್ಚಳಿಯದೇ ನಿಂತಿದೆ. ಆ ಮನೆಯಲ್ಲಿ ಐರ್ಲಂಡ್‌ ದೇಶದ ನಕಾಶೆಗಳಿದ್ದ ಕಾರಣ, ಮನೆಯ ಮಾಲೀಕರು ಐರ್ಲಂಡ್‌ ಮೂಲದವರಾಗಿದ್ದರೆಂದು ಭಾವಿಸಿದೆ. ಬಹಳ ಮುತುವರ್ಜಿ ವಹಿಸಿ ಮನೆಯನ್ನು ಅಲಂಕರಿಸಿದ್ದರು. ಬ್ರಿಟಿಷ್‌ ಕಾಲದ ಪೀಠೋಪಕರಗಳು, ಪಿಂಗಾಣಿ ವಸ್ತುಗಳ ಇರಿಸುವಿಕೆಯಲ್ಲೂ ಅಚ್ಚುಕಟ್ಟು.

ಮನೆಯ ಸುತ್ತಲೂ ಇದ್ದ ಗುಲಾಬಿ ಗಿಡಗಳು ಮನಸ್ಸಿಗೆ ಮುದವನ್ನು ನೀಡಿದ್ದವು. ನಾನೋ, ಮನೆಯನ್ನು ನೋಡುತ್ತಾ ‘ನಾವು ಈ ಮನೆಯನ್ನು ಕೊಂಡರೆ, ನನ್ನ ಬಂಧು ಬಾಂಧವರು ಬಂದಾಗ ಅವರಿಗೆಷ್ಟು ಹರ್ಷವಾಗಬಹುದು’ ಎಂದೆಲ್ಲಾ ಕನಸು ಹೆಣೆಯತೊಡಗಿದೆ. ನಾವು ಆ ಮನೆಯನ್ನು ಕೊಳ್ಳಲಿಲ್ಲ ಎನ್ನುವುದು ಬೇರೆಯ ಮಾತುಬಿಡಿ.

ಹಾಗೆಯೇ ಪ್ರತಿಯೊಂದು ಚಿಕ್ಕವಿಷಯಕ್ಕೂ ಬಹಳ ಮಹತ್ವವನ್ನು ಕೊಡುತ್ತಾ ವಿಷಯವನ್ನು ಜನರಿಗೆ ಮಂಡಿಸುವ, ಪ್ರಸ್ತುತಪಡಿಸುವ ಕಲೆಯನ್ನು ನಾವು ಅಮೆರಿಕನ್ನರಿಂದ ಕಲಿಯಬೇಕು. ಬೇಕಿದ್ದಲ್ಲಿ ಸಗಣಿಯನ್ನೂ ಚಿತ್ತಾಕರ್ಷಕವಾಗಿ ಪ್ಯಾಕೇಜ್‌ ಮಾಡಿ ಮಾರುವ ಕಲೆ ಇವರಿಗೆ ಕರತಲಾಮಲಕ. ಬಹುತೇಕ ಮನೆಗಳಲ್ಲಿ ಮಾಲೀಕರು ವಾಸವಿರಲಿ, ಬಿಡಲಿ ಗ್ರಾಹಕರು ನೋಡಲು ಬರುತ್ತಾರೆ ಎಂದಾಗ, ಮನೆಯನ್ನು ಬಹಳ ಅಚ್ಚುಕಟ್ಟಾಗಿ ಪ್ರಸ್ತುತಪಡಿಸುತ್ತಾರೆ.

ಅಡುಗೆಮನೆಯಲ್ಲಿ ಊಟದ ಮೇಜಿನ ಮೇಲಿನ ಹಣ್ಣುಗಳ ಜೋಡಣೆಯಾಗಲಿ, ಪುಸ್ತಕಗಳ ಕಪಾಟಿನಲ್ಲಿ ಪುಸ್ತಕಗಳ ಇರಿಸುವಿಕೆಯಾಗಲಿ, ಮಕ್ಕಳ ಕೋಣೆಯಲ್ಲಿ ಅವರ ಗೊಂಬೆಗಳನ್ನು ಆಕರ್ಷಕವಾಗಿ ಕೂಡಿಸುವುದೇ ಆಗಲಿ, ಎಲ್ಲೆಲ್ಲೂ ಶಿಸ್ತು ಮತ್ತು ಅಚ್ಚುಕಟ್ಟುತನ ಕಂಡುಬರುತ್ತದೆ. ಜೊತೆಗೆ ಕೊಳ್ಳುವವರ ಮನಸ್ಸಿಗೂ ಮುದ ನೀಡುವಂತೆ ಈ ಅಲಂಕಾರ ಇರುತ್ತದೆ.

ಒಂದು ಮನೆಯನ್ನು ನೋಡಲು ಹೋದಾಗ ನಮ್ಮನ್ನು ಸ್ವಾಗತಿಸಿದ್ದು ನನ್ನಷ್ಟೇ ಎತ್ತರವಿದ್ದ ನಾಯಿ.  ಅದು ಒಮ್ಮೆಲೇ ನನ್ನತ್ತ ಜೋರಾಗಿ ‘ಬೌ’ ಎಂದಾಗ ನಾನು ಭಯದಿಂದ ಚೀರಿ ಮನೆಯ ಹೊರಗೆ ಹೋಗಿ ನಿಂತೆ. ಸರಿ, ಆ ಅಂಜಿಕೆಯೊಡನೆಯೇ ಮನೆಯೊಳಗೆ ಕಾಲಿಟ್ಟಾಗ ಗಪ್ಪನೇ ಸತ್ತ ಹೆಗ್ಗಣದಂತಹ ಅಡುಗೆಯ ವಾಸನೆ ಮುಂದಿನ ಸ್ವಾಗತವಾಗಿತ್ತು. ಚೀನಿಯರ ಮನೆಯಾದ್ದರಿಂದ ನಾನು ಅದನ್ನು ಸಹಜವೆಂದುಕೊಂಡೆ.

ಕಷ್ಟದಿಂದ ಮೂಗನ್ನು ಮುಚ್ಚಿಕೊಂಡೇ ಮನೆಯನ್ನು ನೋಡಿದೆವು. ಮನೆಯಂತೂ ತಿಪ್ಪೆಯ ರಾಶಿಯೇ ಸರಿ. ಎಲ್ಲೆಲ್ಲೂ ಬಟ್ಟೆಗಳು, ಸಾಮಾನುಗಳು... ಅಲ್ಲಿಂದ ಕಾರಿನಲ್ಲಿ ಕುಳಿತಾಗಲೇ ನೆಮ್ಮದಿಯಿಂದ ಉಸಿರಾಡಿದ್ದು. ಮತ್ತೊಂದು ಮನೆಯಂತೂ ಸಿಗರೇಟ್‌ ವಾಸನೆಯಿಂದ ಆವೃತವಾಗಿ ನಾವು ಒಳಹೊಕ್ಕ ಮರುಕ್ಷಣವೇ ಹೊರಬರುವಂತಾಗಿತ್ತು.

ಹೀಗೆಯೇ ನೋಡನೋಡುತ್ತಾ ವಾರಗಳು ಸರಿದವು. ಒಂದಲ್ಲಾ ಒಂದು ಕಾರಣಕ್ಕೆ ನಮ್ಮ ಕನಸಿನ ಗೂಡು ನನಸಾಗುತ್ತಿರಲಿಲ್ಲ. ನಾವು ಆ ತನಕ ನೋಡಿದ ಮನೆಗಳೆಲ್ಲವೂ ಪಕ್ಕದ ರಾಜ್ಯದಲ್ಲಾಗಿತ್ತು. ಕೊನೆಗೆ, ನಾವು ವಾಸವಿದ್ದ (ಬಾಡಿಗೆ ಮನೆಯ) ಬಡಾವಣೆಯಲ್ಲಿ ಏಕೆ ಹುಡುಕಬಾರದು ಎಂಬ ಯೋಚನೆ ಬಂದಿತು.

ಒಂದು ಭಾನುವಾರದ ಸಂಜೆ ಯಾವುದೇ ನಿರೀಕ್ಷೆಯಿಲ್ಲದೆ ಒಂದು ಮನೆಯನ್ನು ನೋಡಿದೆವು. ನಂಬುತ್ತೀರೋ ಇಲ್ಲವೋ ‘ಅಂಗೈಯಲ್ಲಿ ಬೆಣ್ಣೆ’ಯ ಗಾದೆಯಂತೆಯೇ ಆಯಿತು. ನಮ್ಮ ಬಹುತೇಕ ನಿರೀಕ್ಷೆಗಳು ಮುಟ್ಟಿದ್ದವು. ಕೇವಲ ಮನೆಯೊಂದು ಮೆಚ್ಚುಗೆಯಾಗಿ ಕರಾರು ಪತ್ರವನ್ನು ಸಹಿ ಮಾಡಿದರೆ ನಮ್ಮ ಕೆಲಸವಾಗುವುದಿಲ್ಲ. ಮುಂದಿನ ಹಂತದಲ್ಲಿ ಅಧಿಕೃತ ‘ಗೃಹ ಪರೀಕ್ಷಕ’ರಿಂದ ಮನೆಯ ಪ್ರತಿಯೊಂದು ಅಂಶಗಳನ್ನೂ ಪರೀಕ್ಷಿಸಲಾಗುತ್ತದೆ.

ಪರೀಕ್ಷಕರು ಅಡುಗೆಮನೆಯ ಡಿಷ್‌ ವಾಷರ್‌ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದರಿಂದ ಹಿಡಿದು, ಮೇಲ್ಛಾವಣಿಯಲ್ಲಿ ಏನಾದರೂ ಸೋರಿಕೆಯುಂಟೇ? ಹವಾನಿಯಂತ್ರಕ ಯಂತ್ರ ಎಷ್ಟು ಹಳೆಯದು? ಬಚ್ಚಲು ಮನೆಯಲ್ಲಿ ಫ್ಲಶ್‌ ಸರಿಯಾಗಿ ಆಗುತ್ತಿದೆಯೇ? ಹೀಗೆ ಅನೇಕ ಮಾನದಂಡಗಳನ್ನು ವಿವರವಾಗಿ ಪರೀಕ್ಷಿಸುತ್ತಾರೆ.

ದೇವರ ಕೃಪೆಯಿಂದ ನಮ್ಮ ಗೃಹತಪಾಸಣೆ ತೇರ್ಗಡೆಯಾಗಿ ಮುಂದುವರೆಯಬಹುದು ಎಂಬ ಭರವಸೆಯು ಸಿಕ್ಕಿತು. ಜೊತೆಗೆ ಅಂದುಕೊಂಡಿದ್ದಕ್ಕಿಂತಲೂ ಮನೆಯ ಬೆಲೆಯಲ್ಲಿ ಹೆಚ್ಚಿನ ರಿಯಾಯಿತಿಯೂ ದೊರೆಯಿತು! ಒಂದು ಶುಭಮುಹೂರ್ತದಲ್ಲಿ ಗೃಹಪ್ರವೇಶವಾಗಿ ಬೆಚ್ಚನೆಯ ಗೂಡಿಗೆ ವಾಸಕ್ಕೆ ಬಂದೆವು.
ಈಗ ‘House For Sale’ ಎಂದು ಎಲ್ಲಿಯಾದರೂ ಕಂಡಾಗ ನನ್ನ ಈ ಅನುಭವಗಳು ಧುತ್ತನೇ ಕಣ್ಣ ಮುಂದೆ ಬರುತ್ತವೆ. ಆದರೆ ಇಲ್ಲಿಯ ಜನರು ನಮ್ಮ ಭಾರತದಂತೆ ಮನೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿಲ್ಲದಿರುವುದನ್ನು ಕಂಡಾಗ ಚಿಂತೆಗೀಡಾಗುವಂತೆ ಮಾಡುತ್ತದೆ.

ಬಿರುಕುಗೊಂಡಿರುವ ಕುಟುಂಬ ವ್ಯವಸ್ಥೆ, ಅತಿ ಹೆಚ್ಚು ಪ್ರಮಾಣದಲ್ಲಿರುವ ವಿಚ್ಛೇದನಗಳು, ವರ್ಷಕ್ಕೆ ಕೆಲವೇ ಬಾರಿ ಸಂಧಿಸುವ ಕುಟುಂಬದ ಸದಸ್ಯರು, ಮನುಷ್ಯರಿಗಿಂತಲೂ ಸಾಕು ಪ್ರಾಣಿಗಳ ಜೊತೆ ವಾಸಿಸುವುದೇ ಒಳಿತೆಂದು ಭಾವಿಸಿರುವ ಸಮಾಜ... ಹೀಗೆ ಮಾನವ ಸಂಬಂಧಗಳೇ ಇಂದು ಭದ್ರ ಬುನಾದಿಯಿಲ್ಲದೇ ಕುಸಿಯುತ್ತಿರುವಾಗ ನಿರ್ಜೀವ ವಸ್ತುವಿನೊಡನೆ ಎಂತಹ ನಂಟು? ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಅದಕ್ಕಾಗಿಯೇ ನನ್ನ ಪಾಲಿಗೆ ‘ಅಲ್ಲಿದೆ (ಭಾರತದಲ್ಲಿ) ನಮ್ಮನೆ ಇಲ್ಲಿ(ಅಮೆರಿಕಗೆ) ಬಂದೆ ಸುಮ್ಮನೆ’ ಎಂಬುದು ಎಂದೆಂದಿಗೂ ಪ್ರಸ್ತುತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT