ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯಕ್ಕೆ ಮೆರುಗು ತಂದ ‘ಜಟ್ಟಿ’ ತಾಯಮ್ಮ

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಟ್ಟಿ ಕಾಳಗ ಮೈನವಿರೇಳಿಸುವ ರೋಮಾಂಚಕ ಕ್ರೀಡೆ. ಇದು ಮೈಸೂರು ಸಂಸ್ಥಾನದ ಕೊಡುಗೆ. ಕೆಂಪು ಮಣ್ಣಿನಲ್ಲಿ ಅಪ್ರತಿಮ ಶೌರ್ಯ ಸಾಹಸಗಳಿಂದ ಪ್ರಸಿದ್ಧವಾಗಿರುವ ಜಟ್ಟಿ ಕುಟುಂಬದ ಕುಡಿಯೇ ಮೈಸೂರು ಶೈಲಿ ಭರತನಾಟ್ಯ ಕ್ಷೇತ್ರದಲ್ಲಿ ಶ್ರೇಷ್ಠ ನೃತ್ಯಗುರು ಎಂದು ಪ್ರಸಿದ್ಧರಾದ ‘ಜಟ್ಟಿ’ ತಾಯಮ್ಮ.

ಮೈಸೂರು ಅರಸರ ಆಶ್ರಯದಲ್ಲಿದ್ದ ದಾಸಪ್ಪನವರು ವೃತ್ತಿಯಿಂದ ಜಟ್ಟಿಯಾದರೂ ಮೈಸೂರಿನ ಸಾಂಸ್ಕೃತಿಕ ವಾತಾವರಣದಿಂದ ಪ್ರಭಾವಿತರಾಗಿದ್ದವರು. ಅರಮನೆಯಲ್ಲಿ ಜರುಗುತ್ತಿದ್ದ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸದಾ ಹಾಜರಿರುತ್ತಿದ್ದ ದಾಸಪ್ಪನವರಿಗೆ ತಮ್ಮ ಮಗಳು ಲಕ್ಷ್ಮೀದೇವಮ್ಮನನ್ನು ಕಲಾವಿದೆಯನ್ನಾಗಿ ಮಾಡಬೇಕೆಂಬುದು ಹೆಬ್ಬಯಕೆ.

ಎಳೆಯ ವಯಸ್ಸಿನಲ್ಲೇ ತಾಯಿ ಕಳೆದುಕೊಂಡು ತಂದೆಯ ಮುದ್ದಿನ ‘ತಾಯಮ್ಮ’ನಾಗಿದ್ದ ಲಕ್ಷ್ಮೀದೇವಮ್ಮನಿಗೆ ಐದು–ಆರರ ಪ್ರಾಯದಲ್ಲಿಯೇ ಸಂಗೀತ, ನೃತ್ಯದತ್ತ ಒಲವು. ಪ್ರತಿಭಾವಂತ ಬಾಲೆ ತಾಯಮ್ಮ ಸಂಗೀತ, ಶ್ಲೋಕ, ಅಭಿನಯಗಳಲ್ಲೂ ತರಬೇತಿ ಪಡೆದುಕೊಂಡು ಬಹುಬೇಗ ನೃತ್ಯ ಕಲಾವಿದೆಯಾಗಿ ರೂಪುಗೊಂಡರು.

ಪ್ರತಿಭೆ ಇದ್ದವರಿಗೆ ಮನ್ನಣೆ ಸಿಕ್ಕುತ್ತಿದ್ದ ಮೈಸೂರು ದೊರೆಗಳ ಆಸ್ಥಾನದಲ್ಲಿ ಜಟ್ಟಿ ತಾಯಮ್ಮನವರಿಗೆ ಆಸ್ಥಾನ ವಿದುಷಿ ಸ್ಥಾನ ಸಿಗುವುದು ಕಷ್ಟವಾಗಲಿಲ್ಲ. ಆದರೆ ಹೊರಗಿನ ಸ್ವಾತಂತ್ರ್ಯ ಒಳಗೆ ಸಿಗದಿದ್ದಾಗ ಅರಮನೆ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡ ಅವರು, ಭರತನಾಟ್ಯ ಕ್ಷೇತ್ರದಲ್ಲಿ ಮುಂದೆ ಮಾಡಿದ್ದೆಲ್ಲ ಉಲ್ಲೇಖಾರ್ಹ. ಉತ್ತಮ ಕಲಾ ಪ್ರದರ್ಶಕಿಯಾಗಿ ಹೊರಹೊಮ್ಮಿದ ಜಟ್ಟಿ ತಾಯಮ್ಮ ಅಭಿನಯದ ಹೆಚ್ಚುಗಾರಿಕೆಯುಳ್ಳ ಮೈಸೂರು ಶೈಲಿ ಭರತನಾಟ್ಯಕ್ಕೆ ಹೊಸ ಆಯಾಮವಿತ್ತರು.

ಎತ್ತರದ ನಿಲುವಿನ ಸರಳ ಸುಂದರಿ ತಾಯಮ್ಮ ಬಳ್ಳಿಯಂತೆ ಬಳಕುವ ಶಿಲಾಬಾಲಿಕೆಯಂತಹ ಶರೀರ ಉಳ್ಳವರಾಗಿ, ನೋಡುಗರ ಮನ ತಣಿಸುವಂತಹ ಆಕರ್ಷಕ ನರ್ತಕಿ ಎನ್ನಿಸಿಕೊಂಡರು. ಮೈಸೂರು ಪ್ರಾಂತ್ಯದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಕಾರ್ಯಕ್ರಮ ನೀಡುವುದರ ಜೊತೆಗೆ ಮದುವೆ ಇನ್ನಿತರ ಶುಭ ಕಾರ್ಯಗಳಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು.

ಕಲಾರಸಿಕರು ಮತ್ತು ವಿದ್ವಜ್ಜನರ ಆಶಯಕ್ಕೆ ತಕ್ಕಂತೆ ನೃತ್ಯ ಪ್ರದರ್ಶನ ರೂಪಿಸುವುದು ತಾಯಮ್ಮನವರ ವಿಶೇಷ. ‘ಅಮರ ಶತಕ’, ‘ರಾಜಶೇಖರ ವಿಲಾಸ’ ಇನ್ನಿತರ ಕೃತಿಗಳ ಶ್ಲೋಕಗಳು, ವಚನಗಳಿಗೆ ಅನುಸಾರವಾಗಿ ಅಭಿನಯಿಸುವ ಕೌಶಲ್ಯವನ್ನು ರೂಢಿಸಿಕೊಂಡಿದ್ದ ಅವರಿಗೆ, ಪ್ರಸಿದ್ಧಿ ತಂದುಕೊಟ್ಟಿದ್ದು ಜಾವಳಿಗಳಿಗೆ ನೀಡುತ್ತಿದ್ದ ಅಭಿನಯ.

ಮೈಸೂರು ಶೈಲಿ ಭರತನಾಟ್ಯದಲ್ಲಿ ಜಾವಳಿಗಳಿಗೆ ಪ್ರಾಧಾನ್ಯತೆ ತಂದು ಕೊಟ್ಟವರು ತಾಯಮ್ಮ. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತಹ ಸಾಹಿತ್ಯ ಒಳಗೊಂಡು, ಶೃಂಗಾರ ರಸ ಪ್ರಧಾನವಾಗಿರುವುದು ಜಾವಳಿಗಳ ವಿಶೇಷ. ಕನ್ನಡ–ತೆಲುಗು ಜಾವಳಿಗಳಿಗೆ ವಿಶಿಷ್ಟ ಸ್ಪರ್ಶ ಕೊಟ್ಟ ತಾಯಮ್ಮನವರ ಜಾವಳಿಗಳಿಗಾಗಿ ಕಲಾಭಿಮಾನಿಗಳು ಕಾಯುತ್ತಿದ್ದ ಸಂದರ್ಭಗಳು ಇದ್ದವು.

ಬಗೆ ಬಗೆಯ ರಾಗಗಳಲ್ಲಿ ಕನ್ನಡದಲ್ಲಿ ರಚನೆಯಾದ ಜಾವಳಿಗಳನ್ನು ಪ್ರಯೋಗಿಸುವಲ್ಲಿ ಪಾರಂಗತರಾಗಿದ್ದ ತಾಯಮ್ಮನವರಿಗೆ ವಿದ್ವಾಂಸರು ಹೊಸ ಹೊಸ ಜಾವಳಿಗಳನ್ನು ರಚಿಸಿ ಕೊಡುತ್ತಿದ್ದರು.

ಆಸ್ಥಾನ ವಿದುಷಿ ಸ್ಥಾನ ತೊರೆದಿದ್ದರೂ ಮೈಸೂರು ಅರಮನೆ ಬಾಗಿಲು ತಾಯಮ್ಮನವರಿಗೆ ಸದಾ ತೆರೆದೇ ಇತ್ತು. ಮೈಸೂರು ದಸರಾ ಸೇರಿದಂತೆ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮ ಯಾದಿಯಲ್ಲಿ ಸ್ಥಾನ ಪಡೆಯುತ್ತಿದ್ದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ವಿವಾಹ ಮಹೋತ್ಸವದಲ್ಲೂ (1900) ನೃತ್ಯ ಪ್ರದರ್ಶನವಿತ್ತು ಮೆಚ್ಚುಗೆ ಗಳಿಸಿದ ಕಲಾವಿದೆ.

ಹದಿಹರೆಯದಲ್ಲಿ ಹಸೆಮಣೆ ಏರಿದ ತಾಯಮ್ಮನವರ ಸಾಂಸಾರಿಕ ಬದುಕು ಸುಸೂತ್ರವಾಗಿ ನಡೆದಿದ್ದಾಗ ಪತಿಯ ಅಕಾಲಿಕ ಮರಣವಾಯಿತು. ಇದರ ನಡುವೆ ಮುದ್ದಿನ ಮಗಳು ಕೂಡ ಕಣ್ಮುಚ್ಚಿದಳು. ಈ ಘಟನೆಗಳಿಂದ ಜರ್ಝರಿತರಾದ ಅವರು ಒಂದಿಷ್ಟು ಕಾಲ ನೃತ್ಯದಿಂದ ದೂರವುಳಿದಿದ್ದರು. ಆದರೆ, ನಂತರ ನೃತ್ಯ ಕ್ಷೇತ್ರವನ್ನು ಮತ್ತೆ ಸ್ವೀಕರಿಸಿದರಲ್ಲದೆ, ಅಧ್ಯಾತ್ಮದ ಕಡೆಗೂ ಮುಖ ಮಾಡಿದರು.

ಗುರು–ಶಿಷ್ಯ ಪದ್ಧತಿಯಲ್ಲಿ ನೃತ್ಯ ಶಿಕ್ಷಣ ನೀಡುವ ಕಾಯಕದಲ್ಲಿ ಮುಂದಡಿ ಇಟ್ಟ ತಾಯಮ್ಮ ಸಂಗೀತ, ಗಾಯನ, ನೃತ್ಯದೊಂದಿಗೆ ಉತ್ತಮ ದೇಹದಾರ್ಢ್ಯತೆ ಪಡೆಯುವ ಪಾಠಗಳನ್ನು ಹೇಳಿಕೊಟ್ಟರು. ಮೈಸೂರು ಭರತನಾಟ್ಯ ಶೈಲಿಗಳಲ್ಲಿ ಅಭಿನಯ ಪ್ರಧಾನ ನೆಲೆ ಆರಿಸಿಕೊಂಡು ಸಾಧನೆ ಮಾಡಿದ್ದ ತಮ್ಮ ಪರಂಪರೆಯನ್ನು ಮುಂದುವರೆಸುವಂತಹ ಶಿಷ್ಯರನ್ನು ಸಿದ್ಧಗೊಳಿಸಿದರು. ಅವರಲ್ಲಿ ನಕ್ಷತ್ರದಂತೆ ಹೊಳೆದವರು ಪದ್ಮಭೂಷಣ ಪುರಸ್ಕೃತೆ ಡಾ. ಕೆ. ವೆಂಕಟಲಕ್ಷ್ಮಮ್ಮ.

ಭಾರತೀಯ ನೃತ್ಯ ಶ್ರೀಮಂತಿಕೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ನೃತ್ಯ ಕಲಾವಿದ ಉದಯ ಶಂಕರ್, ರಾಮ್ ಗೋಪಾಲ್, ಖ್ಯಾತ ಚಿತ್ರಕಾರ ಎಸ್.ಎನ್. ಸ್ವಾಮಿ ಜಟ್ಟಿ ತಾಯಮ್ಮನವರಲ್ಲಿ ನೃತ್ಯಾಭ್ಯಾಸ ಕೈಗೊಂಡ ಕೆಲವರು.

ಶರೀರವನ್ನು ನಾಟ್ಯದ ಯಾವ ಸಂದರ್ಭಕ್ಕಾದರೂ ಒಗ್ಗಿಸುವಂತಹ ಕಠಿಣ ಪರಿಶ್ರಮದ ಪ್ರತಿಭೆ ತಾಯಮ್ಮನವರದಾಗಿತ್ತು. ನೃತ್ಯ ಮಾಡುತ್ತ ಮಾಡುತ್ತ ಹಾಗೆಯೇ ಹಿಂದಕ್ಕೆ ನೆಲದವರೆಗೂ ಬಗ್ಗಿ ಅಲ್ಲಿಡಲಾಗಿದ್ದ ಪದಾರ್ಥಗಳನ್ನು ಕಣ್ಣಿನ ರೆಪ್ಪೆಗಳಿಂದ ಎತ್ತಿಕೊಂಡು ಎದ್ದು ನಿಲ್ಲುತ್ತಿದ್ದರಂತೆ. ಹೀಗೆ ಅವರು ಎತ್ತಿದ ಪದಾರ್ಥಗಳಲ್ಲಿ ಕಾಸು, ಅರ್ಧಾಣೆ, ಪಾವಲಿ, ರೂಪಾಯಿ ಅಲ್ಲದೆ ಸೂಜಿಗಳೂ ಇರುತ್ತಿದ್ದವಂತೆ!

ಜಟ್ಟಿ ತಾಯಮ್ಮನವರಲ್ಲಿ ಸುದೀರ್ಘಕಾಲ ತರಬೇತಿ ಪಡೆದುಕೊಂಡ ಡಾ. ಕೆ. ವೆಂಕಟಲಕ್ಷ್ಮಮ್ಮನವರು ದಾಖಲಿಸಿರುವ ನೆನಪಿನ ಪ್ರಸಂಗವೊಂದು ಹೀಗಿದೆ:
‘‘ನೃತ್ಯದ ಬಗ್ಗೆ ಮಾತುಕತೆ ಆಗಾಗ ನಡೆಯುತ್ತಿತ್ತು. ಅವೆಲ್ಲಾ ನಾಟ್ಯದ ವಿಶೇಷತೆಯ ಬಗ್ಗೆ ಇರುತ್ತಿತ್ತು. ಜಟ್ಟಿ ತಾಯಮ್ಮನವರು ಮಗಳು ಪುಟ್ಟಣ್ಣಮ್ಮ ಹಾಗೂ ಮಗ ಅಪ್ಪಾ ಸ್ವಾಮಪ್ಪನವರೊಂದಿಗೆ ಮಾತನಾಡುತ್ತ ಸೂಜಿ (ಸೂಚಿ) ನೃತ್ಯದ ಬಗ್ಗೆ ಹೇಳಿದರು. ಇದು ಅತ್ಯಂತ ಕಷ್ಟದ ನೃತ್ಯ ವಿಧಾನ.

ಅದು ಅಸಾಧ್ಯವೆಂಬುದು ತಾಯಿಯೊಂದಿಗೆ ಮಕ್ಕಳ ವಾದ. ಜೋರು ಜೋರು ಮಾತು ನಡೆದು ಮಗಳು (ಆಕೆಯೂ ಉತ್ತಮ ನರ್ತಕಿ) ತಾಯಿಯನ್ನು ಕೆಣಕಿದ್ದೂ ಆಯಿತು. ಪರಿಸ್ಥಿತಿ ಕಾವೇರಿತು. ತಾಯಮ್ಮ ಎದ್ದರು. ಗೂಡಿನಲ್ಲಿದ್ದ ಮೇಣ ಕಡ್ಡಿಗಳ ಡಬ್ಬಿ ತರಹೇಳಿದರು. ಆನಂತರ ಕಡ್ಡಿಗಳ ತುದಿಗೆ ಮೇಣ ಹಚ್ಚಿ ಕಡ್ಡಿಗಳನ್ನು ಒಂದೊಂದಾಗಿ ನೆಲದ ಮೇಲೆ ಇಡುತ್ತಾ ಬಂದರು. ಅದು ಯಾವುದೋ ಬಂಧದ ರೀತಿಯಲ್ಲಿತ್ತು.

ಬಳಿಕ ಎದ್ದು  ಸೆರಗನ್ನು ನಡುವಿಗೆ ಕಟ್ಟಿ ಮೆಟ್ಟಿಂಗಾಲದ ಮೇಲೆ ನಿಂತು ಬಾಯಲ್ಲಿ ಜತಿಗಳನ್ನು ಹೇಳುತ್ತಾ ನರ್ತಿಸಲಾರಂಭಿಸಿದರು. ಝಣಕು ಝಣಕು ತಕಥಾ, ಕಿಟ, ಕಿಣಕು ಕಿಣಕು ತಕಥೈ.. ಹೀಗೆ ಬಹುವಾಗಿ ಝಣಕು, ಕಿಣಕು ಇದೇ ಶಬ್ದಗಳು ಬರುತ್ತಿದ್ದವು. ಕಡ್ಡಿಗಳ ಈ ಬಂಧದ ಒಂದು ಕೊನೆಯಿಂದ ಹೆಜ್ಜೆ ಹಾಕುತ್ತಿದ್ದರು. ನೇರವಾದ ನಡೆಯಲ್ಲ.

ಚತುರಂಗದಾಟದಲ್ಲಿ ಬರುವ ಹಾಗೆ, ಒಂದು ಸಲ ಹಾವಿನ ಹಾಗೆ ಸೊಟ್ಟ ಸೊಟ್ಟವಾಗಿ... ಹೀಗೆ ಕೊನೆಗೆ ಈ ಬಂಧವನ್ನು ಹಾಯಿದು ಮುಕ್ತಾಯದ ಜತೆ ಹೇಳಿ ನಿಂತರು. ‘ಇದೇ ಸೂಚಿ (ಸೂಜಿ) ನೃತ್ಯ. ಕಾಲು ಎಲ್ಲಿಯೂ ಕಡ್ಡಿಗೆ ಸೋಕಕೂಡದು, ಸೋಕಿದರೆ ನರ್ತಕಿ ಸೋತಂತೆ’ ಎಂದು ಹೇಳುತ್ತ ಮಗಳತ್ತ ನೋಡಿದರು ತಾಯಮ್ಮ’’.

ಅಸಾಧಾರಣ ನೃತ್ಯ ಪ್ರತಿಭೆ ಹೊಂದಿದ್ದ ಜಟ್ಟಿ ತಾಯಮ್ಮ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಒಮ್ಮೆ ನೃತ್ಯಪ್ರದರ್ಶನ ನೀಡಿದಾಗ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (ಮುಂದೆ ರಾಷ್ಟ್ರಪತಿಗಳಾದವರು) ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸುವುದರ ಜೊತೆಗೆ ತಾಯಮ್ಮನವರಿಗೆ ‘ನಾಟ್ಯ ಸರಸ್ಪತಿ’ ಎಂಬ ಬಿರುದು ನೀಡಿ ಗೌರವಿಸಿದರು.

ಖ್ಯಾತ ವಾಗ್ಗೇಯಕಾರ ವಾಸು ದೇವಾಚಾರ್ಯರಿಂದ ರಾಗಮಾಲಿಕೆಯ ಒಂದು ವಾಮನ ಸ್ತೋತ್ರವನ್ನೇ ಬಹುಮಾನವಾಗಿ ಪಡೆದಿದ್ದ ಜಟ್ಟಿ ತಾಯಮ್ಮ ನೃತ್ಯರಂಗವಲ್ಲದೆ ಚಲನಚಿತ್ರ ರಂಗದಲ್ಲೂ ಪ್ರತಿಭೆ ಪ್ರದರ್ಶಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಿಂದ ದೇಶ ವಿದೇಶಗಳ ಗಮನ ಸೆಳೆದಿದ್ದ ಮೈಸೂರು, ಕಲೆ ವಿಜ್ಞಾನಗಳ ಸಂಗಮವಾದ ಚಲನಚಿತ್ರ ಮಾಧ್ಯಮಕ್ಕೂ ತೆರೆದುಕೊಳ್ಳುತ್ತಿದ್ದ ಸಮಯದಲ್ಲಿ ಶೂದ್ರಕನ ‘ಮೃಚ್ಛಕಟಿಕ’ ಆಧರಿಸಿದ ‘ವಸಂತಸೇನಾ’ (1931) ಮೂಕಿ ಚಿತ್ರ ನಿರ್ಮಾಣಕ್ಕೂ ನೆಲೆ ಒದಗಿಸಿತು.

ಕನ್ನಡ ಹವ್ಯಾಸಿ ನಾಟಕ ರಂಗಕ್ಕೆ ತಿರುವನ್ನು ಕೊಟ್ಟ ಟಿ.ಪಿ. ಕೈಲಾಸಂ ಅವರ ಆಸಕ್ತಿಯಿಂದ ರೂಪುಗೊಂಡ ‘ವಸಂತಸೇನಾ’ ಚಿತ್ರಕ್ಕೆ ನೃತ್ಯಗಳನ್ನು ಸಂಯೋಜಿಸಿಕೊಟ್ಟವರು ಈ ನಾಟ್ಯಗುರು ತಾಯಮ್ಮ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ 1857ರಲ್ಲಿ ಜನಿಸಿದ ಜಟ್ಟಿ ತಾಯಮ್ಮ ಕಣ್ಮರೆಯಾಗಿದ್ದು ಭಾರತ ಪರಕೀಯರ ಸರಪಳಿಗಳಿಂದ ವಿಮುಕ್ತಿ ಪಡೆದ 1947ರಲ್ಲಿ. 9 ದಶಕಗಳ ಕಾಲ ಜೀವಿಸಿದ ಜಟ್ಟಿ ತಾಯಮ್ಮ ಕೈಕಾಲುಗಳು ಗಟ್ಟಿಯಾಗಿರುವವರೆಗೆ ನಿಂತು ನೃತ್ಯ ಮಾಡುತ್ತಿದ್ದವರು, ನಂತರ ಕುಳಿತುಕೊಂಡೇ ಮುಖಾಭಿನಯದಿಂದ ಕಲಾಸಕ್ತರನ್ನು ಮುದಗೊಳಿಸುತ್ತಿದ್ದರು.

‘ತಾಯಮ್ಮನವರು ಫ್ರಾನ್ಸ್ ದೇಶದಲ್ಲಿ ಇದ್ದಿದ್ದರೆ ಅಲ್ಲಿಯ ನೃತ್ಯಾಭಿಮಾನಿಗಳು ಆಕೆಯ ನೆನಪಿನಲ್ಲಿ ಚಿನ್ನದ ಪ್ರತಿಮೆ ಮಾಡಿ ಪ್ಯಾರಿಸ್‌ನ ಮುಖ್ಯ ರಸ್ತೆಯಲ್ಲಿಡುತ್ತಿದ್ದರು’ – ಹೀಗೆಂದು ಕನ್ನಡದ ಪ್ರಹಸನ ಪಿತಾಮಹ ಟಿ.ಪಿ. ಕೈಲಾಸಂ ಹೇಳಿದ್ದರು. ತಾಯಮ್ಮನವರ ಪ್ರತಿಭೆಯ ಹಿನ್ನೆಲೆಯಲ್ಲಿ ಕೈಲಾಸಂರ ಮಾತು ಉತ್ರ್ಪೇಕ್ಷೆ ಇರಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT