ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚಾನಕ್ಕಾಗಿ ಎದುರಾಗುವ ಅವಳು

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇವಳು ಸುಲಭವಾಗಿ ದಕ್ಕುವುದಿಲ್ಲ
ಸಿಕ್ಕರೆ ಎದೆಯ ಕವಾಟಗಳಲ್ಲಿ ಮಿಂಚುಹುಳಗಳ ಸುರಿಯುತ್ತಾಳೆ
ವಿಷಾದಗಳ ಗುತ್ತಿಗೆ ಪಡಕೊಂಡ ನನ್ನಂತವನ  ಹುಟ್ಟಿಗೆ
ಇವಳು ಬೊಗಸೆ ಹಿಡಿವಾಗಲೆಲ್ಲ
ಬೆರಳಸಂಧಿಗಳಲ್ಲೇ ಬದುಕ ಜಾಲಾಡುತ್ತಾಳೆ
ಅವಳು ಕೇರುವ ತತ್ವದ ಮೊರದಲ್ಲಿ
ಹಾರಿಬೀಳುವ ಹುಸಿಗಳು
ಅಂತರಂಗಕ್ಕೆ ಹಾಕಿದ ಪ್ರಶ್ನೆಯ ಗಾಳದಲ್ಲಿ
ಕಕ್ಕಾಬಿಕ್ಕಿ ಸಿಕ್ಕಿಬೀಳುತ್ತವೆ ಮತಿಗೆಟ್ಟ ನಿಲುವುಗಳು
ಶಂಕೆಗಳಿಗೆ ಇವಳು ಕಟ್ಟುವ ಗೋರಿ
ಬೇರುಗಳ ಬಿಗಿತಕ್ಕೆ ಬಿರುಕು ಬಿಡುವುದಿಲ್ಲ
ಇವಳು ಉತ್ತರಗಳಿಂದ ಹಾಕುವ ಕಗ್ಗಂಟಿನಾಚೆ
ತೆಪರು ಪ್ರಶ್ನೆಗಳು ಮೂಗು ತೂರಿಸುವುದಿಲ್ಲ

ಇವಳು ಸುಲಭವಾಗಿ ಒಪ್ಪುವುದಿಲ್ಲ
ಕಣ್ಣುಗಳಲ್ಲೇ ಬೀರಿದ ಸಾಕ್ಷಾತ್ಕಾರದ ಪ್ರಭೆ ಮೊನಚು
ಕಟ್ಟಿದ ಹಿಮಖೇದಗಳನ್ನು ಕರಗಿಸುತ್ತಿದೆ
ಸಪಾಟಾಗಿ ಕತ್ತರಿಸುವ ಕೊಂಕು ಮುಳ್ಳ ಬೇಲಿಯ
ಮಟ್ಟಸವಾಗಿ ಸವರಿ ಹೊರಡುವ ಕಟು ಕೊಡಲಿಯಂತೆ
ಧುತ್ತನೆ ಮಾತಿಗೆ ನಿಲ್ಲುವಾಗೆಲ್ಲ ಸಿದ್ಧವಾಗಿರಬೇಕು
ಬೆತ್ತಲೆಯಾಗುವುದಕ್ಕೆ ಮತ್ತು ಕತ್ತಲ ಕಳೆದುಕೊಳ್ಳುವುದಕೆ
ಸಲೀಸಾಗಿ ಕಳಚಿಸಲು ಶುರುವಿಡುವ ಮಾಯೆ ಒಂದೊಂದೇ?
ಮೋಹದ ಪರಿಮಳ ಸವರಿಕೊಂಡ ದ್ರವದೊಳಗೆ ಹರಿವ
ಕಹಿಚಲನೆ ನುಡಿವ ಲಲನೆ
ಸುಮ್ಮನೆ ನಿಂತುಬಿಡಬೇಕಷ್ಟೆ ಪ್ರಶ್ನೆಯ ಸುರಿಮಳೆಗೆ
ಅಥವ ನಿಜದ ಮೊನಚು ಬಾಣಗಳಿಗೆ ಮೈಯೊಡ್ಡಿ

ಅಡ್ದಾದಿಡ್ಡಿ ಹರಿವ ಗರಗಸದ ಊಳು ಉರಿ ಉಳಿಪೆಟ್ಟು
ನಿಷ್ಕರುಣಿ ಇವಳು
ನೆಲವು ಪಕ್ಕಾಗುತಿದೆ ನೋಡಿ
ಗಂಧ ಫಲ ಪುಷ್ಪಗಳಿಗೆ
ಒಳಗನ್ನು ತೊಳೆದು ಹೋಗುವ ಇಂತಹವಳನ್ನು ನೀವೂ ಕಾಣಬೇಕು
ಇವಳೆಂಬ ನೇಗಿಲನ್ನು ಒಮ್ಮೆ ಒಳಗಿಳಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT