ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಬೆಳವಣಿಗೆಗೂ ಸಿನಿಮಾಗೂ ಸಂಬಂಧವಿಲ್ಲ

ವಾರದ ಸಂದರ್ಶನ
Last Updated 13 ಮಾರ್ಚ್ 2017, 4:53 IST
ಅಕ್ಷರ ಗಾತ್ರ

ಮಂಸೋರೆ ನೀವು ಡಬ್ಬಿಂಗ್‌ ಬೇಕು ಎನ್ನುತ್ತಿದ್ದೀರಿ? ಯಾಕಾಗಿ?
ಡಬ್ಬಿಂಗ್‌ನಿಂದಾಗಿ ಭಾಷೆಗೆ ಅಥವಾ ಸಂಸ್ಕೃತಿಗೆ ಹೊಡೆತ ಬೀಳುತ್ತದೆ ಎನ್ನುವ ವಾದದಲ್ಲಿ ನನಗೆ ನಂಬಿಕೆಯಿಲ್ಲ. ನಾವು ಚಿತ್ರರಂಗದವರು ಕನ್ನಡವನ್ನು ಬಳಸಿಕೊಂಡು ಸಿನಿಮಾ ಮಾಡುತ್ತಿದ್ದೇವೆಯೇ ಹೊರತು ಸಿನಿಮಾಗಳಿಗೂ ಕನ್ನಡದ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ಎನ್ನುವುದು ಒಂದು ವ್ಯಾಪಾರಿ ಉತ್ಪನ್ನ. ನಾನೂ ಸೇರಿದಂತೆ ಯಾರೊಬ್ಬರೂ ಕನ್ನಡ ಭಾಷೆಗಾಗಿ ಸಿನಿಮಾ ಮಾಡುತ್ತಿಲ್ಲ. ಕನ್ನಡ ಬಳಸಿಕೊಂಡು ನಮ್ಮ ವಿಚಾರ ಹೇಳುತ್ತಿದ್ದೇವೆ ಅಷ್ಟೆ. ಮತ್ತೆ ನಮ್ಮ ಕೆಲಸವನ್ನೂ ಉಚಿತವಾಗಿ ಮಾಡುತ್ತಿಲ್ಲ. ಭಾಷೆ ಬೆಳೆಸುವುದಕ್ಕಾಗಿ ಸಿನಿಮಾ ಮಾಡುತ್ತಿದ್ದೇವೆ ಎಂದು ಯಾರಾದರೂ ಹೇಳಿದರೆ ನನ್ನ ಪ್ರಕಾರ ಅದು ಸುಳ್ಳು. ಸಿನಿಮಾ ಮಾಡುವುದರಲ್ಲಿ ವ್ಯಾಪಾರಿ ಉದ್ದೇಶವೇ ಪ್ರಮುಖವಾಗಿರುತ್ತದೆ. ಡಬ್ಬಿಂಗ್‌ ಮಾಡುವುದು ಕೂಡ ಹಣಕ್ಕಾಗಿಯೇ. ಹಣಕ್ಕಾಗಿ ಸಿನಿಮಾ ಮಾಡುವ ನಾವು ಬೇರೆಯವರ ಉತ್ಪನ್ನವನ್ನು ವಿರೋಧಿಸುವಂತಿಲ್ಲ. ಆಯ್ಕೆಯನ್ನು ಗ್ರಾಹಕರ ಪಾಲಿಗೆ ಬಿಡಬೇಕು. ನಮ್ಮಲ್ಲಿ ‘ಚಲನಚಿತ್ರ ವಾಣಿಜ್ಯ ಮಂಡಳಿ’ ಇದೆ. ಅದು ಸೂಚಿಸುವುದು ಕೂಡ ವ್ಯಾಪಾರವನ್ನೇ.

* ಸೃಜನಶೀಲತೆಯನ್ನು ನೆಚ್ಚಿಕೊಂಡ ನಿರ್ದೇಶಕರಾಗಿ ಡಬ್ಬಿಂಗ್‌ ನಿಮಗೆ ಕಿರಿಕಿರಿ ಹುಟ್ಟಿಸುವುದಿಲ್ಲವೇ?
ಒಬ್ಬ ನಿರ್ದೇಶಕನಾಗಿ ನನಗೆ ಡಬ್ಬಿಂಗ್‌ ಇಷ್ಟವಿಲ್ಲ. ಹಾಗೆ ನೋಡಿದರೆ, ಚಿತ್ರೀಕರಣದ ನಂತರ ಸ್ಟುಡಿಯೊದಲ್ಲಿ ಮಾತು ಜೋಡಿಸುವ ಕ್ರಿಯೆಯೇ ನನಗಿಷ್ಟವಿಲ್ಲ. ನಾನು ‘ಲೈವ್‌’ ರೆಕಾರ್ಡಿಂಗ್‌ ಇಷ್ಟಪಡುವವನು. ಆದರೆ, ಈ ಕಾರಣದಿಂದಾಗಿ ಡಬ್ಬಿಂಗ್‌ ಬೇಡ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಅನುಭವದ ಪ್ರಕಾರ ಡಬ್ಬಿಂಗ್‌ ಚಿತ್ರಗಳು ಕರ್ನಾಟಕದಲ್ಲಿ ಗೆಲುವು ಕಾಣುವುದು ಕಷ್ಟ. ಇಲ್ಲಿನ ಜನ ಮೂಲ ಚಿತ್ರಗಳನ್ನೇ ಇಷ್ಟಪಡುತ್ತಾರೆ. ಹಾಗೆಂದು, ಯಾವುದೇ ಚಿತ್ರವನ್ನು ನಿರ್ಬಂಧಿಸುವುದು, ನಿಷೇಧಿಸುವುದು ಸರಿಯಲ್ಲ.

* ಡಬ್ಬಿಂಗ್‌ ಬೇಡ ಎನ್ನುವುದರ ಹಿಂದೆ ಕಾರ್ಮಿಕರ ಹೊಟ್ಟೆಪಾಡಿನ ಮಾನವೀಯ ಪ್ರಶ್ನೆಯೂ ಇದೆಯಲ್ಲವೇ?
ಈಗ ತಯಾರಾಗುತ್ತಿರುವ ಸಿನಿಮಾಗಳಲ್ಲಿ ಎಷ್ಟು ಜನ ಕನ್ನಡ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದೇವೆ? ಶೂಟಿಂಗ್‌ ನಂತರದ ಕೆಲಸಗಳಿಗಾಗಿ ಚೆನ್ನೈ ಅವಲಂಬನೆ ಈಗಲೂ ತಪ್ಪಿಲ್ಲ. ನಾಯಕಿಯರನ್ನು ಮುಂಬೈನಿಂದ, ತೆಲುಗಿನಿಂದ ಕರೆತರುತ್ತೇವೆ. ತಂತ್ರಜ್ಞರ ಆಮದು ನಿಂತಿಲ್ಲ. ಕೆಲವರು ನಿರ್ದೇಶಕರನ್ನೂ ತಮಿಳು, ತೆಲುಗಿನಿಂದ ಕರೆತರುತ್ತಿದ್ದಾರೆ. ಇದಾವುದನ್ನೂ ಪ್ರಶ್ನಿಸದ ನಾವು ಕಾರ್ಮಿಕರ ಹಿತಾಸಕ್ತಿ ಬಗ್ಗೆ ಮಾತನಾಡುತ್ತೇವೆ. ಸಂಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರ ನಡುವೆ ನಾಲ್ಕೈದು ವರ್ಷಗಳಿಂದ ಸಮಸ್ಯೆ ಇದೆ. ಅದನ್ನು ಬಗೆಹರಿಸಲು ಪ್ರಯತ್ನಿಸುವುದಿಲ್ಲ; ಡಬ್ಬಿಂಗ್‌ನಿಂದ ಕಾರ್ಮಿಕರಿಗೆ ಸಮಸ್ಯೆ ಎನ್ನುತ್ತೇವೆ. ಇದು ಅನುಕೂಲಸಿಂಧು ವಾದ.

* ಡಬ್ಬಿಂಗ್‌ ಚಿತ್ರಗಳಿಂದ ಯಾರಿಗೆ ತೊಂದರೆಯಾಗುತ್ತದೆ?
ರೀಮೇಕ್‌ ಚಿತ್ರಗಳನ್ನು ಮಾಡಿಕೊಂಡು ಬಂದಿರುವ ಒಂದು ಗುಂಪಿಗೆ ಡಬ್ಬಿಂಗ್‌ ಚಿತ್ರಗಳಿಂದ ದೊಡ್ಡ ಹೊಡೆತ ಬೀಳುತ್ತದೆ. ವಿತರಕರಿಗೂ ಸಮಸ್ಯೆಯಾಗುತ್ತದೆ. ಉದಾಹರಣೆಗೆ, ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಇದೆ. ತೆಲುಗು ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆ ಆಗುವಂತಾದರೆ, ಗಳಿಕೆ ಹಂಚಿಹೋಗುತ್ತದೆ. ಇದರಿಂದ ಚಿತ್ರದ ಮೂಲ ನಿರ್ಮಾಪಕರಿಗೆ ಲಾಭ ಹೆಚ್ಚು. ಪರಭಾಷಾ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುವ ಹಂಚಿಕೆದಾರರಿಗೆ ನಷ್ಟವಾಗುತ್ತದೆ.

‌* ಡಬ್ಬಿಂಗ್‌ ಬೇಕು ಎನ್ನುತ್ತಿರುವವರಲ್ಲಿ ಹೊಸ ತಲೆಮಾರಿನ ಕೆಲವು ನಿರ್ದೇಶಕರಿದ್ದಾರೆ. ಈ ನಿರ್ದೇಶಕರಿಗೆ ಕನ್ನಡ ಸಿನಿಮಾ ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಕಡಿಮೆ ಎನ್ನುವ ಮಾತಿದೆ...
ಡಬ್ಬಿಂಗ್‌ ಸಿನಿಮಾಕ್ಕೂ ನಮ್ಮ ನಾಡು–ನುಡಿ ಕಾಳಜಿಗೂ ತಾಳೆ ಹಾಕುವುದನ್ನು ನಾನು ಒಪ್ಪುವುದಿಲ್ಲ. ಈಗ ಸಿನಿಮಾ ಜಗತ್ತು ಜಾಗತಿಕವಾದುದು. ಕನ್ನಡಿಗರಿಗೆ ಜಾಗತಿಕ ಸಿನಿಮಾ ಬೇಕು. ಕನ್ನಡ ಮಾತ್ರ ಗೊತ್ತಿರುವ ಪ್ರೇಕ್ಷಕರನ್ನು ವಿಶ್ವ ಸಿನಿಮಾಗಳಿಂದ ವಂಚಿಸುವುದು ಸರಿಯಲ್ಲ. ಸಿನಿಮಾವನ್ನು ವ್ಯಾಪಾರಿ ದೃಷ್ಟಿಯಿಂದ ನೋಡಬೇಕೇ ಹೊರತು, ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡುವುದು ಸರಿಯಲ್ಲ.
* * *

ಸಿನಿಮಾ ಜೊತೆಗೆ ಕನ್ನಡ ಭಾಷೆಗೂ ಅಪಾಯ


ವಿ. ನಾಗೇಂದ್ರ ಪ್ರಸಾದ್‌
* ಡಬ್ಬಿಂಗ್‌ ಬೇಕು ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ‘ಡಬ್ಬಿಂಗ್‌ ಬೇಡ’ ಎನ್ನುವುದು ಜನಾಭಿಪ್ರಾಯವನ್ನು ವಿರೋಧಿಸಿದಂತೆ ಅಲ್ಲವೇ?
ಡಬ್ಬಿಂಗ್ ಬೇಕು ಎನ್ನುವ ಜನಾಭಿಪ್ರಾಯ ನೈಜವಾದುದಲ್ಲ. ಈ ನಿಟ್ಟಿನಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಡಬ್ಬಿಂಗ್‌ ಮೂಲಕ ‘ಬಾಹುಬಲಿ’, ‘ಅವತಾರ್’ನಂತಹ ಸಿನಿಮಾಗಳನ್ನು ಕನ್ನಡದಲ್ಲಿಯೇ ನೋಡಬಹುದು ಎಂದು ಜನರನ್ನು ನಂಬಿಸಲಾಗುತ್ತಿದೆ. ಇದು ಸೀಮಿತ ಮಾಹಿತಿ. ಡಬ್ಬಿಂಗ್‌ನಿಂದ ಉಂಟಾಗುವ ಅಪಾಯಗಳನ್ನು ಇವರು ಮುಚ್ಚಿಡುತ್ತಿದ್ದಾರೆ. ಇವರ ಬೇಡಿಕೆಯಲ್ಲಿ ತಂತ್ರಗಾರಿಕೆ ಇದೆ. ಮನೋವಿಕಾಸ ಹಾಗೂ ಜ್ಞಾನವಿಕಾಸಕ್ಕೆ ಪೂರಕವಾಗುವುದನ್ನು ಡಬ್ಬಿಂಗ್‌ ಮಾಡುವುದನ್ನು ನಾವು ವಿರೋಧಿಸಿಲ್ಲ.

ಸಿನಿಮಾದ ಮೂಲಭಾಷೆಯ ಜೊತೆಗೆ ನಮ್ಮ ಭಾಷೆಯೂ ಪ್ರಧಾನವಾಗಿ ಕೇಳಿಸುವ ‘ಪ್ಯಾರಾ ಡಬ್ಬಿಂಗ್‌’ ಬಗ್ಗೆ ಕೂಡ ನಮ್ಮ ವಿರೋಧವಿಲ್ಲ. ಕನ್ನಡದಲ್ಲಿ ಸಬ್‌ ಟೈಟಲ್‌ಗಳನ್ನು ಅಳವಡಿಸುವ ಮೂಲಕವೂ ಬೇರೆ ಭಾಷೆಯ ಸಿನಿಮಾಗಳನ್ನು ಆಸ್ವಾದಿಸಬಹುದಾಗಿದೆ. ಈ ದಾರಿಗಳ ಬಗ್ಗೆ ಡಬ್ಬಿಂಗ್‌ಪ್ರಿಯರು ಯೋಚಿಸುತ್ತಲೇ ಇಲ್ಲ. ಅವರಿಗೆ ಡಬ್ಬಿಂಗ್‌ನಿಂದ ಒದಗುವ ವ್ಯಾಪಾರಿ ಆಯಾಮದ ಬಗ್ಗೆಯಷ್ಟೇ ಆಸಕ್ತಿ.

* ಹಾಗಾದರೆ ಡಬ್ಬಿಂಗ್‌ ಅಪಾಯದ ಬಗ್ಗೆ ನಿಮ್ಮ ನಿಲುವುಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೀರಿ ಅಲ್ಲವೇ?
ಡಬ್ಬಿಂಗ್‌ ಕುರಿತ ಚರ್ಚೆಗಳು ಸಮರ್ಪಕ ದಾರಿಯಲ್ಲಿಲ್ಲ. ಬೇಕು ಎನ್ನುವವರು ವಾಣಿಜ್ಯದ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಮಂಡಿಸುತ್ತಿದ್ದಾರೆಯೇ ಹೊರತು, ಭಾಷೆಯ ಹಿನ್ನೆಲೆಯಲ್ಲಿ ಅಲ್ಲ. ನಾವು ಕಾರ್ಮಿಕರ ಬಗ್ಗೆ, ಅವರ ಹಸಿವಿನ ಬಗ್ಗೆ ಮಾತನಾಡುತ್ತಿದ್ದೇವೆ. ಇನ್ನೊಂದು ಬದಿಯವರು ಹೊಟ್ಟೆ ತುಂಬಿದ ವ್ಯಾಪಾರಿ ಅಗತ್ಯಗಳ ಕುರಿತು ಮಾತನಾಡುತ್ತಿದ್ದಾರೆ. ಇವರ ವಾದಗಳಲ್ಲಿ ಕಾರ್ಪೊರೇಟ್‌ ಕಂಪೆನಿಗಳ ಹಿತಾಸಕ್ತಿ ಅಡಗಿದೆ. ತೆಲುಗಿನಲ್ಲಿ, ತಮಿಳಿನಲ್ಲಿ ಡಬ್ಬಿಂಗ್‌ ಇದೆ ಎನ್ನುತ್ತಾರೆ. ಆದರೆ, ಅಲ್ಲಿ ರೂಪುಗೊಳ್ಳುತ್ತಿರುವ ‘ಡಬ್ಬಿಂಗ್‌ ವಿರೋಧಿ’ ಧ್ವನಿಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

* ಡಬ್ಬಿಂಗ್‌ ವಿರೋಧ ಕುರಿತಂತೆ ಕನ್ನಡ ಚಿತ್ರೋದ್ಯಮದಲ್ಲೇ ಒಗ್ಗಟ್ಟು ಇದ್ದಂತಿಲ್ಲ. ಈವರೆಗೆ ಹೋರಾಟದಲ್ಲಿ ಗುರುತಿಸಿಕೊಂಡವರು ಈಗ ನಿವೃತ್ತರಾಗಿರುವಂತಿದೆ.
ನಮ್ಮಲ್ಲಿ ವಿಭಿನ್ನ ಧ್ವನಿಗಳು ಮೊದಲಿನಿಂದಲೂ ಇವೆ. ಡಬ್ಬಿಂಗ್‌ ಬಗೆಗಿನ ಒಲವು ಉದ್ಯಮದೊಳಗೆ ಕೆಲವರಿಗೆ ಮೊದಲಿನಿಂದಲೂ ಇತ್ತು. ಆದರೆ ಅದು ಬಹಿರಂಗವಾಗಿ ಕೇಳಿಸುತ್ತಿರಲಿಲ್ಲ. ಈಗ ಕೇಳಿಸುತ್ತಿದೆ ಅಷ್ಟೆ. ಕೆಲವರನ್ನು ‘ಸಿಸಿಐ’ ಭಯ ಸುಮ್ಮನಿರಿಸಿದೆ. ಹೋರಾಟದಲ್ಲಿ ಇದೆಲ್ಲ ಇದ್ದದ್ದೇ.

* ‘ಸತ್ಯದೇವ ಐಪಿಎಸ್‌’ ಡಬ್ಬಿಂಗ್‌ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದೆ. ಅಲ್ಲಿಗೆ ನಿಮ್ಮ ಹೋರಾಟ ಮುಗಿಯಿತೇ?
ಇನ್ನು ಮುಂದೆ ಡಬ್ಬಿಂಗ್‌ ಸಿನಿಮಾಗಳು ಕನ್ನಡದಲ್ಲಿ ತೆರೆಕಾಣುವುದಿಲ್ಲ ಎಂದುಕೊಂಡಿದ್ದೇವೆ. ‘ಡಬ್ಬಿಂಗ್‌ ಸಿನಿಮಾ ಪ್ರದರ್ಶಿಸಬೇಡಿ’ ಎಂದು ಪ್ರದರ್ಶಕರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅವರ ಕನ್ನಡ ಪ್ರೀತಿಯ ಬಗ್ಗೆ ನಮಗೆ ನಂಬಿಕೆ ಇದೆ.

* ಕನ್ನಡ ಚಿತ್ರರಂಗದ ಹಿತಾಸಕ್ತಿಯ ಬಗ್ಗೆ ಮಾತನಾಡುವ ನೀವು ಉತ್ತಮ ಸಿನಿಮಾಗಳನ್ನು ರೂಪಿಸುವ ಬಗ್ಗೆ ಮಾತನಾಡುವುದಿಲ್ಲ ಎನ್ನುವ ಆರೋಪವಿದೆ. ಏನನ್ನುವಿರಿ?
ಕನ್ನಡ ಚಿತ್ರರಂಗಕ್ಕೆ ಎಂಟು ದಶಕಗಳ ಇತಿಹಾಸ ಇದೆ. ಗಳಿಕೆ, ಗುಣಮಟ್ಟ ಎರಡೂ ನಿಟ್ಟಿನಲ್ಲಿ ಒಳ್ಳೆಯ ಸಿನಿಮಾಗಳನ್ನು ರೂಪಿಸುತ್ತಿದ್ದೇವೆ. ಕನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನಸೆಳೆಯುತ್ತಿವೆ. ಹೀಗಿದ್ದರೂ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎನ್ನುವ ಮಾತಿನಲ್ಲಿ ಅರ್ಥವಿಲ್ಲ. ‘ಸುಧಾರಣೆ’ ಎಂದರೆ ಏನರ್ಥ? ಸುಧಾರಣೆ ಬಗ್ಗೆ ಮಾತನಾಡುವವರು ‘ಡಬ್ಬಿಂಗ್‌’ ಮೂಲಕ ದುಸ್ಥಿತಿಯತ್ತ ನಮ್ಮನ್ನು ತಳ್ಳುತ್ತಿದ್ದಾರೆ.

* ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ ಎಂದಾದಲ್ಲಿ ಡಬ್ಬಿಂಗ್‌ ಸ್ಪರ್ಧೆಗೆ ಏಕೆ ಹಿಂಜರಿಯುತ್ತಿದ್ದೀರಿ?
ನಮ್ಮ ಆತಂಕ ಕೇವಲ ಸಿನಿಮಾಕ್ಕೆ ಸಂಬಂಧಿಸಿದ್ದಲ್ಲ; ಸ್ಪರ್ಧೆಗೆ ಸೀಮಿತವಾದುದೂ ಅಲ್ಲ. ಅದು ಕನ್ನಡಕ್ಕೆ ಸಂಬಂಧಿಸಿದ್ದು. ಡಬ್ಬಿಂಗ್‌ನಿಂದ ಕನ್ನಡ ಸಿನಿಮಾ ಅಪಮೌಲ್ಯಗೊಳ್ಳುತ್ತದೆ. ಅದು ನಾಳೆ ಬೇರೆ ರೂಪದಲ್ಲೂ ಕನ್ನಡ ಭಾಷೆಗೆ ಬೀಳುವ ಪೆಟ್ಟಾಗಿರುತ್ತದೆ. ಆ ಕಾರಣದಿಂದಲೇ ಡಬ್ಬಿಂಗ್‌ ಅನ್ನು ಸಿನಿಮಾದ ದೃಷ್ಟಿಯಿಂದಷ್ಟೇ ನೋಡುವುದು ತಪ್ಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT