ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ಕಮಲ ಪರ್ವ

Last Updated 12 ಮಾರ್ಚ್ 2017, 6:38 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶವನ್ನು ಮತ್ತು ನೆರೆಹೊರೆಯ ಉತ್ತರಾಖಂಡವನ್ನು ದೈತ್ಯ ಬಹುಮತದಿಂದ ಬಿಜೆಪಿಗೆ ಗೆದ್ದು ಕೊಟ್ಟಿರುವ ಪ್ರಧಾನಮಂತ್ರಿ  ನರೇಂದ್ರ ಮೋದಿ, ಅಧಿಕಾರ ಹಿಡಿದು ಮೂರು ವರ್ಷಗಳು ಉರುಳಿದ್ದರೂ ತಮ್ಮ ವರ್ಚಸ್ಸಿಗೆ ಒಂದಿನಿತೂ ಮುಕ್ಕು ಬಂದಿಲ್ಲ ಎಂಬುದನ್ನು ತಮ್ಮ ರಾಜಕೀಯ ಎದುರಾಳಿಗಳಿಗೆ ಸಾರಿ ಹೇಳಿದ್ದಾರೆ.

ರಾಮಮಂದಿರ ರಾಜಕಾರಣದ ಹೆಗಲೇರಿ ಅಧಿಕಾರ ಹಿಡಿದ ನಂತರ ಒದಗಿ ಬಂದ ಹದಿನಾಲ್ಕು ವರ್ಷಗಳ ವನವಾಸದಿಂದ ಬಿಜೆಪಿಯನ್ನು ಹೊರತಂದು ಭವ್ಯಶೈಲಿಯಲ್ಲಿ ಮರುಪ್ರತಿಷ್ಠಾಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮರು ಆಯ್ಕೆಗೆ ಭದ್ರ ಅಡಿಪಾಯ ಹಾಕುವ ಸವಾಲನ್ನು ಅವರು ಕಣ್ಣು ಕೋರೈಸುವಂತೆ ಗೆದ್ದಿರುವುದು ಈ ಫಲಿತಾಂಶದ ವಿಶೇಷ.

ಭಾರೀ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಪಂಜಾಬಿನ ಅಕಾಲಿದಳ-ಬಿಜೆಪಿ ಮೈತ್ರಿಕೂಟದ ಸರ್ಕಾರವನ್ನು ಉಳಿಸಿಕೊಡುವಲ್ಲಿ ಖುದ್ದು ಮೋದಿಯವರ ವರ್ಚಸ್ಸು ಕೂಡ ಕೆಲಸ ಮಾಡಿಲ್ಲ. ಗೋವಾದಲ್ಲಿಯೂ ಬಿಜೆಪಿ ಸರ್ಕಾರದ ಮರು ಆಯ್ಕೆಗೆ ಅವರ ಶಕ್ತಿ ಸಾಮರ್ಥ್ಯ ನೆರವಾಗಿಲ್ಲ. ಮಣಿಪುರದಲ್ಲಿ ಸೊನ್ನೆಯಿಂದ ಗೆಲುವಿನ ಅಂಚಿಗೆ ಪಕ್ಷವನ್ನು ಒಯ್ದು ನಿಲ್ಲಿಸಿರುವ ಕೀರ್ತಿ ಅವರಿಗೆ ಸಂದಿದೆ. ಈ ಎರಡೂ ರಾಜ್ಯಗಳಲ್ಲಿಯೂ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ.

ಒಂದು ಆಳದಿಂದ ಮತ್ತೊಂದು ಆಳಕ್ಕೆ ಒಂದು ಬಿಕ್ಕಟ್ಟಿನಿಂದ ಮತ್ತೊಂದಕ್ಕೆ ಕುಸಿಯುತ್ತಲೇ ನಡೆದಿರುವ ಕಾಂಗ್ರೆಸ್ಸಿನ ಮಾನವನ್ನು ಆ ಪಕ್ಷದ ಬಲಿಷ್ಠ ಪ್ರಾದೇಶಿಕ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬಿನಲ್ಲಿ ಉಳಿಸಿಕೊಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ- ಕಾಂಗ್ರೆಸ್ ಮೈತ್ರಿ ಕೂಟದ ಜೊತೆಗೆ ಮಾಯಾವತಿ ಅವರ ಬಹುಜನಸಮಾಜ ಪಕ್ಷ ಹಾಗೂ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಪಕ್ಷಗಳು ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿವೆ.

ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಡವಿ ಸರ್ಕಾರ ರಚಿಸಬಹುದು ಎಂಬುದಾಗಿ ಹೇಳಲಾಗುತ್ತಿದ್ದ ಆಮ್ ಆದ್ಮಿ ಪಾರ್ಟಿಯ ಕಳಪೆ ಸಾಧನೆ ಮತ್ತು ಗೋವೆಯಲ್ಲಿ ಆ ಪಕ್ಷದ ಕಣ್ಣು ಕುಕ್ಕುವ ಸೋಲು ಬಿಜೆಪಿಯ ಪಾಲಿಗೆ ಬೋನಸ್ ಸಿಹಿ ಸುದ್ದಿ.

ಹಿಂದುಳಿದ ಉತ್ತರಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ 71ನ್ನು ಮೂರು ವರ್ಷಗಳ ಹಿಂದೆ ತಾವು ಗೆದ್ದ ವಿದ್ಯಮಾನ ಯಾವ ಬಗೆಯಲ್ಲೂ ಹುಸಿಯಲ್ಲವೆಂದು ಮೋದಿಯವರು ಕಿವಿ ಗಡಚಿಕ್ಕುವಂತೆ ರುಜುವಾತು ಮಾಡಿ ತೋರಿದ್ದಾರೆ. ಅವರ ಈ ಘನ ಗೆಲುವು ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳನ್ನು ಸದ್ಯಕ್ಕಂತೂ ಗುಡಿಸಿ ಸಾರಿಸಿ ಒಗೆದಂತಾಗಿದೆ. ಅವರು, ಭಾರೀ ಜನಸಮೂಹಗಳ ಭಾವನೆಗಳನ್ನು ಬಡಿದೆಬ್ಬಿಸುವ ನಿಸ್ಸೀಮ ನಾಯಕನಾಗಿ ಇನ್ನಷ್ಟು ಗಟ್ಟಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನಗಳಲ್ಲಿ ಮೋದಿ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳು ಹೊಸ ಬಗೆಯ ರಾಜಕಾರಣ ನಡೆಸಬೇಕಿರುವ ಕಡು ಕಷ್ಟದ ಸವಾಲನ್ನು ಎದುರಿಸಲಿವೆ.

ಉತ್ತರ ಪ್ರದೇಶದಲ್ಲಿ ಏಕ ಅಂಕಿಯ ಫಲಿತಾಂಶದ ಅವಹೇಳನವನ್ನು ಶತಾಯುಷಿ ಕಾಂಗ್ರೆಸ್ ಪಕ್ಷ ಎದುರಿಸಿದೆ. ಅಪ್ಪ-ಚಿಕ್ಕಪ್ಪ-ಮಲತಾಯಿ ವಿರುದ್ಧ ಬಂಡೆದ್ದು ಸಮಾಜವಾದಿ ಪಕ್ಷದ ಲಗಾಮುಗಳನ್ನು ಕಸಿದ ಹೊಸಪೀಳಿಗೆಯ ನಾಯಕ ಅಖಿಲೇಶ್ ಯಾದವ್ ಅವರಿಗೆ ವೈಯಕ್ತಿಕವಾಗಿ ಭಾರೀ ಹಿನ್ನಡೆ. ಅವರ ತಲೆದಂಡಕ್ಕೆ ಆ ಪಕ್ಷದ ಭಿನ್ನಮತೀಯರು ಕತ್ತಿ ಮಸೆಯುವುದು ನಿಶ್ಚಿತ.

ಒಂದು ವೇಳೆ ಈ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೆ ಮೋದಿ-ಷಾ ಜೋಡಿಯ ವಿರುದ್ಧ ಅವರ ಪಕ್ಷದಲ್ಲೇ ಹಿರಿಯಬಹುದಿದ್ದ ಖಡ್ಗಗಳು ಈ ಫಲಿತಾಂಶದಿಂದ ತೆಪ್ಪಗೆ ಒರೆಗಳಲ್ಲೇ ಉಳಿಯುವಂತಾಗಿದೆ. ಮೋದಿ ಸರ್ಕಾರ ಸಂಸತ್ತಿನಲ್ಲಿ ಎದುರಿಸಿದ್ದ ದೊಡ್ಡ ‘ಅಡ್ಡಗಲ್ಲು’ ಕೂಡ ನಿವಾರಣೆ ಆಗಿದೆ. ಸಂಸತ್ತಿನ ಮೇಲ್ಮನೆಯಲ್ಲೂ ಬಿಜೆಪಿಯನ್ನು ಇನ್ನು ತಡೆದು ನಿಲ್ಲಿಸಲಾಗದು. ಲೋಕಸಭೆಗೆ ಸೀಮಿತವಾಗಿದ್ದ ಬಿಜೆಪಿ ಬಹುಮತ ಸದ್ಯದಲ್ಲೇ ರಾಜ್ಯಸಭೆಗೂ ವಿಸ್ತರಿಸಲಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಮುಂದೆ ಮಾಡದೆ ಕಣಕ್ಕಿಳಿದಿದ್ದ ಬಿಜೆಪಿಗೆ ಶೇ 80ರಷ್ಟು ಸೀಟುಗಳನ್ನು  ಗೆಲ್ಲಿಸಿಕೊಟ್ಟಿರುವ ಮೋದಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮರು ಆಯ್ಕೆಗೆ  ಅಡಿಪಾಯ ಹಾಕಿಕೊಂಡಿರುವುದು ನಿಚ್ಚಳ.

ಭ್ರಷ್ಟಾಚಾರ- ಕಪ್ಪುಹಣ- ಬಡತನದ ವಿರುದ್ಧ ಸಮರ ಸಾರಿದ್ದೇನೆಂದೂ, ಮುಸ್ಲಿಮರನ್ನು ಓಲೈಸದೆ ಎಲ್ಲರನ್ನೂ ಸರಿಸಮವಾಗಿ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತೇನೆಂದು ವಾಕ್ಚಾತುರ್ಯದ ವಿಶಿಷ್ಟ ಸಂವಾದವನ್ನು ಜನಸಮೂಹದೊಂದಿಗೆ ಕಟ್ಟಿ ನಿಲ್ಲಿಸಿದ ಪ್ರಧಾನಿ ಜಾತಿಮತಗಳನ್ನು ಮೀರಿದ ವಿಶ್ವಾಸ ಸಂಪಾದಿಸಿರುವುದನ್ನು ಫಲಿತಾಂಶಗಳು ಸ್ಪಷ್ಟಗೊಳಿಸಿವೆ. ಮೂರನೆಯ ಹಂತದ ಮತದಾನದ ನಂತರ ಅಭಿವೃದ್ಧಿಯ ಸಂವಾದಕ್ಕೆ ಹಿಂದು-ಮುಸ್ಲಿಂ ಕೋಮು ಧ್ರುವೀಕರಣದ ಸ್ಪರ್ಶ ನೀಡಿದ ತಂತ್ರ ಫಲಿತಾಂಶದ ಇಳುವರಿಯನ್ನು ಇನ್ನಷ್ಟು ಧಾರಾಳ ಆಗಿಸಿದೆ. ಪ್ರತಿಕೂಲ ಆಗಬಲ್ಲದೆಂದು ತಮ್ಮ ಸಹೋದ್ಯೋಗಿಗಳು ಹೆದರಿದ್ದ ನೋಟು ರದ್ದತಿ ‘ಗಂಡಾಂತರ’ವನ್ನು ವರವಾಗಿ ತಿರುಗಿಸಿಕೊಂಡ ಮೋದಿ, ವಾಕ್ಪ್ರತಿಭೆ  ಮುಂದೆ ವಿರೋಧ ಪಕ್ಷಗಳು ಹತಪ್ರಭವಾದದ್ದು ಸ್ಪಷ್ಟ.

ಜಾತಿವಾದವನ್ನು ಬದಿಗಿರಿಸಿ ಕೇವಲ ಅಭಿವೃದ್ಧಿ ಸಂವಾದ ಮುಂದಿಟ್ಟು ಗಳಿಸಿದ ಗೆಲುವಿದು ಎಂಬ ಬಿಜೆಪಿ ತಲೆಯಾಳುಗಳ ಹೇಳಿಕೆಯನ್ನು ಟೀಕಾಕಾರರು ಒಪ್ಪುವುದಿಲ್ಲ. ಅಭಿವೃದ್ಧಿ ಸಂವಾದದ ಮೇಲ್ಮೈಯನ್ನು ಕೆರೆದು ನೋಡಿದರೆ  ಯಾದವರ ಹೊರತಾದ ಹಿಂದುಳಿದ ಜಾತಿಗಳು, ‘ಮೇಲ್ಜಾತಿ’ಗಳು, ಹಾಗೂ ಚಮ್ಮಾರೇತರ ದಲಿತರನ್ನು ಒಟ್ಟುಗೂಡಿಸಿದ ಮಳೆಬಿಲ್ಲು ಮೈತ್ರಿಕೂಟವನ್ನು ಕಟ್ಟುವ ಕ್ರಿಯೆಯಲ್ಲಿ ಬಿಜೆಪಿ ಚುನಾವಣಾ ಯಂತ್ರ ಕಳೆದ ಎರಡು ವರ್ಷಗಳಿಂದ ಎಡೆಬಿಡದೆ ನಿರತವಾಗಿತ್ತು. ಈ ಕ್ರಿಯೆಯ ಮುಂಚೂಣಿಯಲ್ಲಿ ಶ್ರಮಿಸಿದವರು ಖುದ್ದು ಅಮಿತ್ ಷಾ ಎನ್ನುವುದು ಗುಟ್ಟೇನೂ ಅಲ್ಲ.

ಪರ್ಯಾಯ ಅಭಿವೃದ್ಧಿ ಮಾದರಿಗಳಿಲ್ಲದೆ ಕೇವಲ ಮೋದಿ ವಿರೋಧವನ್ನೇ ಕೇಂದ್ರವನ್ನಾಗಿರಿಸಿಕೊಂಡ ರಾಜಕಾರಣ ನಡೆಯುವುದಿಲ್ಲವೆಂದು ಫಲಿತಾಂಶಗಳು ಸಾರಿ ಹೇಳಿವೆ. ಈ ಹಿಂದೆ ಪ್ರತಿಪಕ್ಷಗಳು ಒಟ್ಟುಗೂಡಿ ‘ಇಂದಿರಾ ವಿರೋಧ’ದ ಏಕೈಕ  ಕಾರ್ಯಸೂಚಿಯ ರಾಜಕಾರಣ ನಡೆಸಿ ನೆಲಕಚ್ಚಿದ್ದ ದಿನಗಳನ್ನು ನೆನಪಿಗೆ ತರುವ ಚಾರಿತ್ರಿಕ ಸನ್ನಿವೇಶವಿದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾವು ‘ಗರೀಬಿ ಹಠಾವೊ’ ಎಂದರೆ ವಿರೋಧಪಕ್ಷಗಳು ‘ಇಂದಿರಾ ಹಠಾವೋ’ ಎನ್ನುತ್ತಿವೆ ಎಂದು ಜನಸಮೂಹಗಳ ಮುಂದೆ ದೂರುತ್ತಿದ್ದರು ಇಂದಿರಾಗಾಂಧಿ. ‘ಈ ಮೋದಿ ಕಪ್ಪು ಹಣ-ಭ್ರಷ್ಟಾಚಾರ-ಬಡತನ ತೊಲಗಿಸಲು ಹಗಲಿರುಳು ಶ್ರಮಿಸುತ್ತಿದ್ದಾನೆ. ಆದರೆ ಮೋದಿಯನ್ನು ತೊಲಗಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿವೆ ವಿರೋಧಪಕ್ಷಗಳು’ ಎಂದು ದೂರಿದ ಮೋದಿಯವರು ಇಂದಿರಾ ಯುಗದ ನಂತರದ ಹೊಸ ‘ಬಡವರ ಬಂಧು’ವರ್ಚಸ್ಸು ಗಳಿಕೆಯ ದಾರಿಯಲ್ಲಿ ದಾಪುಗಾಲು ಇರಿಸಿದ್ದಾರೆ.

ಬಹುಸಂಖ್ಯಾತರನ್ನು ಓಲೈಸುವ ಹೊಸ ರಾಜಕಾರಣದಲ್ಲಿ ಭಾರೀ ಯಶಸ್ಸು ಕಾಣುತ್ತಿರುವ ಮೋದಿ ಮತ್ತು ಅವರ ಪಕ್ಷ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ (ಸರ್ವರ ಜೊತೆ ಜೊತೆಯಲ್ಲಿ ಸರ್ವರ ವಿಕಾಸ) ಎಂದು ಹೇಳುತ್ತಲೇ ಉತ್ತರಪ್ರದೇಶದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಗೂ ಟಿಕೆಟ್ ನೀಡದೆ ಕೋಮು ಧ್ರುವೀಕರಣದ ಸಂದೇಶವನ್ನು ತನ್ನ ಮತದಾರರಿಗೆ ಮಗುಮ್ಮಾಗಿ ದಾಟಿಸಿರುವ ಟೀಕೆಯನ್ನು ಎದುರಿಸಿದೆ.

ಬಿಜೆಪಿಯ ಉತ್ತರಪ್ರದೇಶ ಚುನಾವಣಾ ಸಮರತಂತ್ರಗಳ ಪೈಕಿ ಈ ರಾಜ್ಯದ ಶೇ19 ರಷ್ಟಿರುವ ಮುಸ್ಲಿಂ ಮತಗಳನ್ನು ಒಡೆಯುವುದು ಪ್ರಮುಖ ಕಾರ್ಯಸೂಚಿಯಾಗಿತ್ತು. ಸಮಾಜವಾದಿ ಪಾರ್ಟಿಯನ್ನು ಇಬ್ಭಾಗವಾಗಿ ಒಡೆಯುವ ತಂತ್ರ ನೇರ ಫಲ ನೀಡಲಿಲ್ಲ. ಆದರೆ ಮಾಯಾವತಿ ಅವರು ಮುಸಲ್ಮಾನರನ್ನು ಓಲೈಸಲು ಆ ಕೋಮಿನ 98 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ ನಡೆ ಬಿಜೆಪಿಯ ಹಂಚಿಕೆಯನ್ನು ಸಫಲ ಆಗಿಸಿತು. ಮುಸಲ್ಮಾನರ ಮತಗಳು ಸಮಾಜವಾದಿ ಪಾರ್ಟಿ ಮತ್ತು ಬಹುಜನಸಮಾಜ ಪಕ್ಷದ ನಡುವೆ ಹಂಚಿ ಹೋಗಿರುವ ಸ್ಪಷ್ಟ ಸೂಚನೆಗಳು ಫಲಿತಾಂಶದಲ್ಲಿ ಕಂಡು ಬಂದಿವೆ.

ಬಿಹಾರದಲ್ಲಿ ಮಣ್ಣುಪಾಲಾಗಿದ್ದ ಪ್ರತಿಷ್ಠೆಯನ್ನು ಉತ್ತರಪ್ರದೇಶದಲ್ಲಿ ಘನವಾಗಿ ಮರಳಿ ಗಳಿಸಿಕೊಂಡಿದ್ದಾರೆ ಮೋದಿ. ಇಂತಹ ಚಾರಿತ್ರಿಕ ಗೆಲುವನ್ನು ಖುದ್ದು ಬಿಜೆಪಿಯೂ ನಿರೀಕ್ಷಿಸಿರಲಿಕ್ಕಿಲ್ಲ. ಗೆಲುವಿನ ಜೊತೆ ಜೊತೆಗೆ ನಿರೀಕ್ಷೆಗಳ ಹೊಸ ಬೃಹತ್ ಬೆಟ್ಟ ಹೆಗಲೇರಿರುವ ವಾಸ್ತವವನ್ನು ಮೋದಿ ಎದುರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT