ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಿಸಿದ ಮೋದಿ ಮಾಂತ್ರಿಕತೆ ಆಡಳಿತ ವಿರೋಧಿ ಅಲೆ

ಸಂಪಾದಕೀಯ
Last Updated 12 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ಉತ್ತರಪ್ರದೇಶದ  403 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ 312 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳೂ ಹೇಳಿದ್ದವು. ಆದರೆ ಈ ಸಮೀಕ್ಷೆಗಳು ಅಂದಾಜು ಮಾಡಿದ್ದಕ್ಕಿಂತಲೂ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಈ ಮೂಲಕ  ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗಳ  ಈವರೆಗಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷ ಎಂಬ ಹೆಗ್ಗಳಿಕೆ ಸಾಧಿಸಿಕೊಂಡಿದೆ.

ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಜೋರಾಗಿಯೇ ಬೀಸಿರುವುದಕ್ಕೆ ಇದು ದ್ಯೋತಕ. ₹500 ಹಾಗೂ ₹1000 ನೋಟುಗಳ ರದ್ದತಿಯ ಬಗ್ಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ವಿವಾದಾತ್ಮಕ ನಿರ್ಧಾರ, ಈ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಾಳಧನಿಕರ ವಿರುದ್ಧ ಸಮರ ಸಾರಲು ಮೋದಿಯವರು ಕೈಗೊಂಡ ಪ್ರಮುಖ ಆರ್ಥಿಕ ಹಾಗೂ ರಾಜಕೀಯ ನಿರ್ಧಾರ ಇದು ಎಂಬಂತಹ ನಂಬಿಕೆ ಜನಸಾಮಾನ್ಯರಲ್ಲಿ ಬೇರೂರಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ. ಅಷ್ಟೇ ಅಲ್ಲ ನೋಟು ರದ್ದತಿಯ ನಂತರ ಅನೇಕ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ರಾಷ್ಟ್ರದ ಆರ್ಥಿಕತೆಯ ಮೇಲೆ ನೋಟು ರದ್ದತಿಯಿಂದಾದ ಹೊಡೆತದ ಬಗ್ಗೆ  ಅರ್ಥಶಾಸ್ತ್ರಜ್ಞರು ಹಾಗೂ ನೀತಿನಿರೂಪಕರು ಸಾಕಷ್ಟು ವಾದಗಳನ್ನು ಮಂಡಿಸಿದ್ದಾರೆ. ಜನಸಾಮಾನ್ಯರು  ತೊಂದರೆಗೊಳಗಾಗಿರುವುದೂ ನಿಜ. ಹೀಗಿದ್ದೂ ಕಾಳಧನದ ವಿರುದ್ಧ ಹೋರಾಡುತ್ತಿರುವ ಆದರ್ಶದ ಸಂಕೇತವಾಗಿ ಬಿಜೆಪಿಗೆ ಇದು ಚುನಾವಣೆಯಲ್ಲಿ
ಸಹಾಯವನ್ನೇ ಮಾಡಿದೆ ಎಂಬುದು ವಿಶೇಷವಾದ ಸಂಗತಿ.

2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಒಟ್ಟು 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಇತಿಹಾಸ ನಿರ್ಮಿಸಿತ್ತು. ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಈ ಅಲೆ ಮುಂದುವರಿದಂತಾಗಿದೆ. ಆದರೆ ಈ ಮೋದಿ ಅಲೆ 2015ರಲ್ಲಿ ನಡೆದ ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಯಾವುದೇ ಪರಿಣಾಮ ಬೀರಿರಲಿಲ್ಲ. ಮೋದಿ ಅಲೆಯ ಅಬ್ಬರ ಕುಸಿಯುತ್ತಿದೆ ಎಂಬಂತಹ ಭಾವನೆಗಳು ಮೂಡುತ್ತಿದ್ದಂತೆಯೇ ಈಗ ಉತ್ತರಾಖಂಡ ಹಾಗೂ  ಉತ್ತರಪ್ರದೇಶದಲ್ಲಿ ಮತ್ತೆ ಮೋದಿ ಅಲೆ ಬೀಸಿದಂತಾಗಿದೆ. ಅದರಲ್ಲೂ ರಾಷ್ಟ್ರದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಜನಪ್ರಿಯ ಯುವನಾಯಕರೊಬ್ಬರ ವಿರುದ್ಧ ಗೆದ್ದಿರುವುದು ಮುಖ್ಯ. ಉತ್ತರ ಪ್ರದೇಶದ ಯುವನಾಯಕ ಅಖಿಲೇಶ್ ಯಾದವ್ ಅವರ ವೈಯಕ್ತಿಕ ಜನಪ್ರಿಯತೆಯ ಮೇಲೆ ಸಮಾಜವಾದಿ ಪಕ್ಷ ಹೆಚ್ಚು ವಿಶ್ವಾಸವಿರಿಸಿತ್ತು. ಆದರೆ ಚುನಾವಣೆ ಸನಿಹದಲ್ಲಿದ್ದಾಗಲೇ ಹೆಡೆಯೆತ್ತಿದ ಕೌಟುಂಬಿಕ ವಿಚಾರಗಳ ಸಂಘರ್ಷದಿಂದಾಗಿ ಸಮಾಜವಾದಿ ಪಕ್ಷ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದೆ. ಜೊತೆಗೆ ಕಾಂಗ್ರೆಸ್  ಮೈತ್ರಿಯಿಂದ ಸಮಾಜವಾದಿ ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಆದರೆ ಪಂಜಾಬ್‌ನಲ್ಲಿ ನಿಚ್ಚಳ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷ  ಅಲ್ಲಿ ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ.

ಕೇವಲ ನಾಲ್ಕು ವರ್ಷಗಳ ಹಿಂದೆ, ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಜನ್ಮತಾಳಿ ದೆಹಲಿಯಲ್ಲಿ ಸರ್ಕಾರ ರಚಿಸಿರುವ ಆಮ್‌ ಆದ್ಮಿ ಪಕ್ಷ  (ಎಎಪಿ) ಈಗ ಪಂಜಾಬ್‌ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ವಿರೋಧ ಪಕ್ಷದ ಸ್ಥಾನ ಗಳಿಸಿಕೊಳ್ಳಲು ಸಜ್ಜಾಗುತ್ತಿದೆ ಎಂಬುದೂ ಮಹತ್ವದ ಸಂಗತಿ.  ಮಣಿಪುರದಲ್ಲಿ ಅತಿ ಹೆಚ್ಚಿನ ಸ್ಥಾನಗಳಿಸಿದ್ದರೂ ಸರಳ ಬಹುಮತ ಪಡೆಯಲು ಇನ್ನೂ ಮೂರು ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಕಡಿಮೆಯಾಗಲಿವೆ. ಹಾಗೆಯೇ  ಗೋವಾದಲ್ಲೂ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೂ ಸರ್ಕಾರ ರಚನೆಗೆ ಅಗತ್ಯವಾದ ಸರಳ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ಏರ್ಪಟ್ಟಿದೆ. ಒಟ್ಟಾರೆ ಈ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಗಳಲ್ಲಿ ಗೋಚರವಾಗುವ ಮತ್ತೊಂದು  ಅಂಶ ಎಂದರೆ  ಆಡಳಿತ ವಿರೋಧಿ ಅಲೆ.

‘ಗರೀಬಿ ಹಟಾವೊ’ ಘೋಷಣೆಯ ಮೂಲಕ ಜನಸಾಮಾನ್ಯರನ್ನು ಸೆಳೆದ ಇಂದಿರಾ ಗಾಂಧಿಯವರ ನಂತರ ಮೋದಿಯವರು ಜನಸಮೂಹದ ನಾಯಕರಾಗಿ ದೊಡ್ಡದಾಗಿ  ಬಿಂಬಿತರಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಸಿದ ಬೃಹತ್ ಚುನಾವಣಾ ಪ್ರಚಾರ ಸಭೆಗಳು, ತಂತ್ರಜ್ಞಾನದ ಸಮರ್ಪಕ ಬಳಕೆ ಹಾಗೂ ಅಮಿತ್ ಷಾ ಅವರ ಸಂಘಟನಾ ಚಾತುರ್ಯ ಬಿಜೆಪಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇದಕ್ಕೆ ಪರ್ಯಾಯವಾಗಿ ಪರಿಣಾಮಕಾರಿ ನಾಯಕತ್ವದ ಕೊರತೆ ಪ್ರತಿಪಕ್ಷಗಳಲ್ಲಿ ಎದ್ದು ಕಾಣಿಸುತ್ತಿದೆ.  2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಯಶಸ್ಸಿಗೆ ಉತ್ತರ ಪ್ರದೇಶದ ಈ ಚುನಾವಣಾ ಫಲಿತಾಂಶ ಮುನ್ನುಡಿಯಾಗಲಿದೆ ಎಂಬಂಥ ಮಾತುಗಳನ್ನೂ ಹೇಳಲಾಗುತ್ತಿದೆ. ಯಾವುದೇ ಪಕ್ಷಕ್ಕೆ ಅತಿಯಾದ ಬಹುಮತ,  ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. 2007ರ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಹೊಸ ಎತ್ತರ ತಲುಪಿದ್ದ ಬಹು ಜನಸಮಾಜ ಪಕ್ಷದ (ಬಿಎಸ್‌ಪಿ) ಮಾಯಾವತಿ,  ಹತ್ತು ವರ್ಷಗಳ ನಂತರದ ಈ ಚುನಾವಣೆಯಲ್ಲಿ ಕೇವಲ 19 ಸ್ಥಾನ ಗಳನ್ನು ಗೆದ್ದು ಅಂಚಿಗೆ ಸರಿದಿದ್ದಾರೆ. ಹೀಗಿದ್ದೂ ಮತ ಗಳಿಕೆ ಪ್ರಮಾಣದಲ್ಲಿ  ಬಿಜೆಪಿ  (39.7%)  ನಂತರ  ಬಿಎಸ್‌ಪಿ (22.2%)  ಎರಡನೇ ಸ್ಥಾನ ಗಳಿಸಿಕೊಂಡಿದೆ ಎಂಬುದನ್ನು ಗಮನಿಸಬೇಕು. ಸಮಾಜವಾದಿ ಪಕ್ಷ ಗಳಿಸಿಕೊಂಡಿರುವ ಮತ ಗಳಿಕೆ ಪ್ರಮಾಣ 21.8%. ಜನಸಮುದಾಯದ ಅಸ್ತಿತ್ವದ ಪರಿವೆಯೇ ಇಲ್ಲದಂತೆ ವರ್ತಿಸುತ್ತಿರುವ ಪ್ರತಿಪಕ್ಷಗಳಿಗೆ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ  ದೊಡ್ಡ ಪಾಠವಾಗಬೇಕಿದೆ.

ಜನರ ನಾಡಿಮಿಡಿತವನ್ನು ಸರಿಯಾಗಿ ಅರಿತುಕೊಳ್ಳಬೇಕಾದ ಅಗತ್ಯವನ್ನೂ ಇದು ಸಾರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT