ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಗಳತ್ತ ಒಲವು ತೋರದ ಮತದಾರ

Last Updated 12 ಮಾರ್ಚ್ 2017, 6:36 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಪಕ್ಷೇತರ ಅಭ್ಯರ್ಥಿಗಳನ್ನು ಹೆಚ್ಚು ನಿರ್ಲಕ್ಷಿಸಿದ್ದಾರೆ.  ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ಎದುರು ಮತದಾರರನ್ನು ಸೆಳೆಯುವಲ್ಲಿ ಪಕ್ಷೇತರರು  ವಿಫಲರಾಗಿದ್ದಾರೆ. 

ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಡೆದ ಸ್ಥಾನಗಳು ಮತ್ತು ಮತಗಳ ಹಂಚಿಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಆದರೆ ಮಣಿಪುರದಲ್ಲಿ ಮಾತ್ರ ಮತ ಹಂಚಿಕೆಯಲ್ಲಿ ಸುಧಾರಣೆಯಾಗಿದೆ. ಗೋವಾದಲ್ಲಿ ಅತಿ ಹೆಚ್ಚು ಅಂದರೆ, ಶೇ 11.1 ರಷ್ಟು ಮತ ಪಕ್ಷೇತರ ಅಭ್ಯರ್ಥಿಗಳಿಗೆ ದೊರಕಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದರ ಪ್ರಮಾಣ ಶೇ 16.6ರಷ್ಟಿತ್ತು. 2012ರಲ್ಲಿ 5 ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಮೂವರು ಮಾತ್ರ ಗೆಲುವು ಕಂಡಿದ್ದಾರೆ.

ಮಣಿಪುರದಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಮರು ಹಂಚಿಕೆ ಪ್ರಮಾಣ ಶೇ 3.3 ರಿಂದ 5.2ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿದ ಯಾವ ಅಭ್ಯರ್ಥಿಯೂ ಜಯಗಳಿಸಿರಲಿಲ್ಲ. ಈ ಚುನಾವಣೆಯಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವಿನ ಸವಿ ಸವಿದಿದ್ದಾರೆ.

ಉತ್ತರಾಖಂಡದಲ್ಲಿ ಶೇ 12.3ರಷ್ಟು ದಾಖಲಾಗಿದ್ದ ಮತಹಂಚಿಕೆ ಈ ಚುನಾವಣೆಯಲ್ಲಿ ಶೇ 10ಕ್ಕೆ ಇಳಿದಿದೆ. ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2012ರಲ್ಲಿ ಶೇ 4.13ರಷ್ಟು ಮತ ಪಡೆದಿದ್ದ ಪಕ್ಷೇತರರು, ಈ ಬಾರಿ ಶೇ 2.6ರಷ್ಟು ಮಾತ್ರ ಮತ ಗಳಿಸಿದ್ದಾರೆ.

ಪಂಜಾಬ್‌ನಲ್ಲಿ ಮತಹಂಚಿಕೆ ಶೇ 6.75 ರಿಂದ ಶೇ 2.1ಕ್ಕೆ ಕುಸಿದಿದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಪಕ್ಷಗಳ ಪೈಪೋಟಿ ಎದುರಿಸುವಲ್ಲಿ ಯಾರೂ ಯಶಸ್ವಿಯಾಗಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಯಾವ ಪಕ್ಷೇತರ ಅಭ್ಯರ್ಥಿಯೂ ಜಯಗಳಿಸಿರಲಿಲ್ಲ.

***

ಸೋತ ಮುಖ್ಯಮಂತ್ರಿಗಳು
ಎರಡು ಕ್ಷೇತ್ರಗಳಿಂದ ಸ್ಫರ್ಧಿಸಿದ್ದ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್‌ ಸೋತಿದ್ದಾರೆ. ಕಿಚ್ಚಾ ಕ್ಷೇತ್ರದಲ್ಲಿ ಬಿಜೆಪಿಯ ರಾಕೇಶ್ ಶುಕ್ಲಾ ಅವರು ರಾವತ್‌ ಅವರಿಗಿಂತ 60 ಮತಗಳಿಂದಷ್ಟೇ ಗೆಲುವು ಸಾಧಿಸಿದ್ದಾರೆ.

ಇನ್ನು ಹರಿದ್ವಾರ ಕ್ಷೇತ್ರದಲ್ಲಿ ಬಿಜೆಪಿಯ ಯತೀಶ್ವರಾನಂದ್ ಎದುರು ರಾವತ್ ಸುಮಾರು 9 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್‌ ಅವರು ಕಾಂಗ್ರೆಸ್‌ನ ದಯಾನಂದ ಸೊಪ್ಟೆ ಎದುರು ಸುಮಾರು 4 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT