ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸದ ಕಲಿಕೆ ಹಾಗೂ ಶೈಕ್ಷಣಿಕ ರಂಗಭೂಮಿ

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದಲ್ಲಿ ‘ಶೈಕ್ಷಣಿಕ ರಂಗಭೂಮಿ’ ಕುರಿತಂತೆ ಇತ್ತೀಚೆಗೆ ಒಂದು ಸಮಾಲೋಚನಾ ಸಭೆ ನಡೆಯಿತು. ಶಿಕ್ಷಣ ಹಾಗೂ ರಂಗಭೂಮಿ ಎರಡೂ ಕ್ಷೇತ್ರಗಳಲ್ಲಿ ನುರಿತ ತಜ್ಞರು ಅಲ್ಲಿ ಸೇರಿದ್ದರು. ಮಕ್ಕಳು, ಅದರಲ್ಲೂ ತಳಸಮುದಾಯಗಳ ಮಕ್ಕಳು ನಲಿನಲಿಯುತ್ತ ಕಲಿಯುವಂತೆ ಮಾಡುವಲ್ಲಿ ರಂಗಭೂಮಿ ವಹಿಸುತ್ತಿರುವ ಹಾಗೂ ವಹಿಸಬಹುದಾದ ಪಾತ್ರ ಕುರಿತಂತೆ ಮಹತ್ತರವಾದ ಚರ್ಚೆ ನಡೆಯಿತು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ವಿಶೇಷವಾಗಿ ಯುರೋಪಿನ ದೇಶಗಳಲ್ಲಿ  ಶೈಕ್ಷಣಿಕ ರಂಗಭೂಮಿ ಕ್ಷೇತ್ರದಲ್ಲಿ ನಡೆದಿರುವ ಮಹತ್ತರವಾದ ಪ್ರಯೋಗಗಳ ಪ್ರಸ್ತಾಪವಾಯಿತು. ಅಲ್ಲಿನ ಸರ್ಕಾರಗಳು, ಸಾರ್ವಜನಿಕ ಸಂಸ್ಥೆಗಳ ಸಹಯೋಗದೊಂದಿಗೆ ಶೈಕ್ಷಣಿಕ ರಂಗಭೂಮಿ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಕೊಂಡಾಡಲಾಯಿತು.

ಇಲ್ಲಿ, ನಮ್ಮದೇ ರಾಜ್ಯದಲ್ಲಿ ಕಳೆದ ಕೆಲವು ದಶಕಗಳಲ್ಲಿ ಈ  ಕ್ಷೇತ್ರದಲ್ಲಿ ಆಗಿರುವ ಮಹತ್ತರವಾದ ಬೆಳವಣಿಗೆಗಳನ್ನು ಸಹ ಗುರುತಿಸಲಾಯಿತು. ಜೊತೆಗೆ, ಶೈಕ್ಷಣಿಕ ರಂಗಭೂಮಿಯನ್ನು ಮುಂದೊತ್ತುವಲ್ಲಿ ಕರ್ನಾಟಕದ ವಿವಿಧ ರಂಗತರಬೇತಿ ಶಾಲೆಗಳು ವಹಿಸುತ್ತಿರುವ ಪಾತ್ರವನ್ನು ಹೊಗಳಲಾಯಿತು.

ಇನ್ನು ಕರ್ನಾಟಕ ಸರ್ಕಾರದ ಪಾತ್ರ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ತರಬೇಕೆಂದು ತಜ್ಞರು ಒಕ್ಕೊರಲಿನಿಂದ ನಿರ್ಣಯಿಸಿದರು. ಇದು ಹಿನ್ನೆಲೆ.

ಈ ಹಿನ್ನೆಲೆಯಲ್ಲಿ ನಾನು ಪ್ರಸ್ತಾಪಿಸ ಬಯಸುವುದು, ತಳಸಮುದಾಯಗಳ ಮಕ್ಕಳ ಶಾಲೆಗಳ ಬಗ್ಗೆ. ತಳ ಸಮುದಾಯದ ಮಕ್ಕಳಿಗೆ ಸಹಜವಾಗಿಯೇ ರಂಗಪ್ರತಿಭೆ ಹೆಚ್ಚಿರುತ್ತದೆ, ನೀರೊಳಗಣ ಮೀನಿನಂತೆ ಅವು ರಂಗಭೂಮಿಯಲ್ಲಿ ವಿಹರಿಸಬಲ್ಲವು ಎಂಬುದು ನಮಗೆಲ್ಲ ತಿಳಿದಿರುವ ಸಂಗತಿ.

ಅತ್ತಕಡೆ, ಅಧಿಕೃತ ಶಿಕ್ಷಣ ವ್ಯವಸ್ಥೆಯೆಂಬುದು ಈ ಮಕ್ಕಳಿಗೆ ಬಲವಂತದ ಮಾಘಸ್ನಾನವಾಗಿದೆ ಎಂಬುದೂ  ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ಆದರೆ ನಮಗೆ ಅಷ್ಟಾಗಿ ತಿಳಿಯದ ಒಂದು ಸಂಗತಿಯಿದೆ. ಇತ್ತೀಚಿನ ದಶಕಗಳಲ್ಲಿ, ದೇಶದಾದ್ಯಂತ ರಂಗ ತರಬೇತಿ ಶಾಲೆಗಳಿಗೆ ತಳಸಮುದಾಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಮೀಸಲಾತಿಯ ಹಂಗಿರದೆ ಬರುತ್ತಿದ್ದಾರೆ. ಮಾತ್ರವಲ್ಲ, ಹಾಗೆ ಒಳಬಂದವರು ತುಂಬ ಯಶಸ್ವಿಯಾಗಿ ಹೊರಬೀಳುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಹೀಗೆ ಒಮ್ಮೆ ಪ್ರವೇಶ ಪಡೆಯುವ ತಳಸಮುದಾಯದ ವಿದ್ಯಾರ್ಥಿಗಳು ನಂತರದಲ್ಲಿ ಕ್ಲಿಷ್ಟ ಬೌದ್ಧಿಕ ಕ್ಷೇತ್ರಗಳನ್ನೂ  ಪ್ರವೇಶಿಸಬಲ್ಲವರಾಗಿದ್ದಾರೆ. ಇದು ಒಂದು ಮಹತ್ತರವಾದ ಬೆಳವಣಿಗೆಯಾಗಿದೆ.

ತಳಸಮುದಾಯದ ಮಕ್ಕಳು ಯಾವ ಬಾಗಿಲಿನಿಂದ ಕಲಿಕೆಯ ಕ್ಷೇತ್ರವನ್ನು ಪ್ರವೇಶಿಸಬಯಸುವರು ಎಂಬುದರ ಸ್ಪಷ್ಟ ಸೂಚನೆ ಇದಾಗಿದೆ. ಮೊರಾರ್ಜಿ ದೇಸಾಯಿ ಶಾಲೆ ಹಾಗೂ ರಾಣಿ ಚೆನ್ನಮ್ಮ ಶಾಲೆ ಎಂಬ ಹೆಸರಿನ ವಸತಿ ಶಾಲೆಗಳು ಕರ್ನಾಟಕದಾದ್ಯಂತ ಹರಡಿಕೊಂಡಿವೆ. ಇವು ತಳಸಮುದಾಯದ ಮಕ್ಕಳಿಗೆಂದೇ ಮೀಸಲಾಗಿರುವ ವಸತಿ ಶಾಲೆಗಳು.

ವಸತಿ ಶಾಲೆಗಳಿಗೆ ಸೇರಿಸಲಾದ ಮಗುವು ಆರಂಭದಲ್ಲಿ ದೊಡ್ಡಿಗೆ ದೂಡಿದ  ಕರುವಿನಂತಾಡುತ್ತದೆ. ಒಮ್ಮೆಗೇ ಮನೆಯವರಿಂದ ಬೇರ್ಪಡುವ ಮಗುವಿಗೆ ಖಿನ್ನತೆ ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಳಸಮುದಾಯಗಳ ಮಕ್ಕಳು ಸಹ ಈ ಪ್ರಕ್ರಿಯೆಯಿಂದ ಹೊರತಲ್ಲ. ವಸತಿ ಶಾಲೆಯಾದ್ದರಿಂದ ಮಗುವು ಹಗಲು– ರಾತ್ರಿ ಎನ್ನದೆ ಶಾಲೆಯಲ್ಲಿ ದಿನ ದೂಡಬೇಕಾಗಿರುತ್ತದೆ.

ಮಕ್ಕಳ ಇಪ್ಪತ್ತನಾಲ್ಕು ಗಂಟೆಗಳನ್ನು ನಿಭಾಯಿಸಬೇಕಿರುವ ಶಿಕ್ಷಕರು, ಬೇರೆ ದಾರಿ ತೋರದೆ ಮೂರೂ ಹೊತ್ತು ಪಠ್ಯಾಧಾರಿತ ಶಿಕ್ಷಣದ ಗದಾಪ್ರಹಾರ ಮಾಡುವ ಸಾಧ್ಯತೆ ಇರುತ್ತದೆ. ಮೊದಲೇ ತಂದೆ ತಾಯಿಯಿಂದ ಬೇರ್ಪಟ್ಟು ನಲುಗಿರುವ ಮಗುವು ಲಿಖಿತ ಪಠ್ಯಗಳೆಂಬ ಕಬ್ಬಿಣದ ಕಡಲೆಯನ್ನು ಜಗಿದು ಮತ್ತಷ್ಟು ನಲುಗಿಬಿಡುತ್ತದೆ. ಅನಕ್ಷರತೆಯ ಒಡಲಿನಿಂದ ಬಂದವರು ಅವರು. ಅವರ ಪರಿಸ್ಥಿತಿಯು ಶ್ರೀಮಂತ ಮಕ್ಕಳಿಗಿಂತ ಮಿಗಿಲಾದ ಸೂಕ್ಷ್ಮ ನಿರ್ವಹಣೆಯನ್ನು ಬಯಸುವಂತಹದ್ದು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹಲವು ವರ್ಷ ಪಾಠ ಮಾಡಿದ ಅನುಭವವಿರುವ ರಂಗತಜ್ಞ ಸಾಸ್ವೆಹಳ್ಳಿ ಸತೀಶ್, ಸರ್ಕಾರಿ ಶಾಲೆಯೊಂದರಲ್ಲಿ  ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿರುವ ರಂಗತಜ್ಞ ಕೊಟ್ರೇಶ್, ಸರ್ಕಾರಿ  ಶಾಲೆಯಲ್ಲಿ ರಂಗಶಿಕ್ಷಕರಾಗಿ ಕೆಲಸ ಮಾಡಿರುವ ರಂಗತಜ್ಞ ಶಶಿಧರ ಬಾರಿಘಾಟ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇಣುಗೋಪಾಲ್... ಹೀಗೆ ಅನೇಕರು ಸಾಣೇಹಳ್ಳಿಯ ಸಮಾಲೋಚನೆಯಲ್ಲಿ ಈ ಬಗ್ಗೆ ಮಾತನಾಡಿದರು.

ಇವರು ಹಾಗೂ ಇವರಂತೆಯೇ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ರಂಗಭೂಮಿಯ ಪ್ರಯೋಗ ನಡೆಸಿದ ಹಲವರ ಅಭಿಪ್ರಾಯ ಏಕರೂಪದ್ದಾಗಿದೆ. ಶೈಕ್ಷಣಿಕ ರಂಗಭೂಮಿಯ ಅಳವಡಿಕೆಯಿಂದಾಗಿ ಮಕ್ಕಳು ಶಾಲೆಗೆ ಸಂತೋಷದಿಂದ ಹೊಂದಿಕೊಳ್ಳುತ್ತವೆ. ಒಮ್ಮೆ ಹೊಂದಿಕೊಂಡ ನಂತರ ಅಧಿಕೃತ ಪಠ್ಯಗಳಿಗೂ ಹೊಂದಿಕೊಳ್ಳುತ್ತವೆ. ಶೈಕ್ಷಣಿಕ ರಂಗಭೂಮಿ ಕಾರ್ಯಕ್ರಮದಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಶಾಲೆಯ ಫಲಿತಾಂಶ ಹಾಳಾಗುವ ಬದಲು ಉತ್ತಮಗೊಂಡಿದೆ ಎಂದು ಅವರೆಲ್ಲ ಅಭಿಪ್ರಾಯಪಟ್ಟರು.

‘ಶೈಕ್ಷಣಿಕ ರಂಗಭೂಮಿಯೆಂದರೆ ಕೇವಲ ನಾಟಕ ಆಡುವುದಲ್ಲ, ಸಂಹವನದ ಆಟ ಆಡುವುದು. ಮಕ್ಕಳು ಮಕ್ಕಳೊಡನೆ ಬೆರೆತಾಡುವ ಪ್ರಕ್ರಿಯೆ ಅದು’ ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದರು.

ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಈ ಬಗ್ಗೆ ಗಮನಹರಿಸಿಯಾರು ಎಂದು ನಾವು ಆಶಿಸುತ್ತೇವೆ. ಮೊರಾರ್ಜಿ ದೇಸಾಯಿ ಹಾಗೂ ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ರಂಗಶಿಕ್ಷಕರ ಆಯ್ಕೆಯಾಗಲಿ. ಕಾಯಂ ಶಿಕ್ಷಕರ ಆಯ್ಕೆ ತತ್‌ಕ್ಷಣದಲ್ಲಿ ಕಷ್ಟಕರ ಎಂದಾದರೆ ತಾತ್ಕಾಲಿಕ ಶಿಕ್ಷಕರ ಆಯ್ಕೆಯಾಗಲಿ.

ಶೈಕ್ಷಣಿಕ ರಂಗಭೂಮಿ ಅಳವಡಿಕೆಯ ವೈಜ್ಞಾನಿಕ ಪ್ರಯೋಗವು ಈ ವಸತಿ ಶಾಲೆಗಳಲ್ಲಿ ಆರಂಭವಾಗಲಿ. ಮಹತ್ತರವಾದ ಈ ಪ್ರಯೋಗವು ರಂಗ ತಜ್ಞರು, ತಜ್ಞ ರಂಗಸಂಸ್ಥೆಗಳು, ಶಿಕ್ಷಣವೇತ್ತರನ್ನು ಒಳಗೊಳ್ಳಲಿ.

ಸಾಣೇಹಳ್ಳಿ ರಂಗಶಿಕ್ಷಣ ಕೇಂದ್ರವು ಈಗಾಗಲೇ ಈ ದಿಕ್ಕಿನಲ್ಲಿ ಚಿಂತಿಸುತ್ತಿದೆ. ಸಾಣೇಹಳ್ಳಿಯ ರಂಗಶಾಲೆಯ ಸಂಸ್ಥಾಪಕರಾದ ಪಂಡಿತಾರಾಧ್ಯ ಸ್ವಾಮಿಗಳು ಶೈಕ್ಷಣಿಕ ರಂಗಭೂಮಿಯ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.

ಸರ್ಕಾರಗಳು ತಳಸಮುದಾಯಗಳ ಮಕ್ಕಳಿಗೆ ಶಾಲೆ ಕಟ್ಟಿಕೊಟ್ಟರೆ ಸಾಲದು, ಮಕ್ಕಳ ಮನಸ್ಸನ್ನು ಮುದಗೊಳಿಸಬೇಕು. ಹಾಗೆ ಮಾಡಿದರೆ ಮಾತ್ರ ಅಂಬೇಡ್ಕರ್ ಕನಸು ನನಸಾಗಬಲ್ಲದು. ಹಾಗೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT