ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಆಯ್ಕೆ ಹಾದಿ ಸುಲಭ

Last Updated 13 ಮಾರ್ಚ್ 2017, 5:11 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಗೆ ಭಾರಿ ಬಹುಮತ ಸಿಕ್ಕಿರುವುದರಿಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿವೃತ್ತಿಯ ನಂತರ ಆ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯೇ ಆಯ್ಕೆಯಾಗುವಂತೆ ಮಾಡುವುದು ಸುಲಭವಾಗಿದೆ.

ಬಿಜೆಪಿ ಬಳಿ ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರುವ ಸರಳ ಬಹುಮತಕ್ಕಿಂತ 17,500 ಎಲೆಕ್ಟೋರಲ್ ಮತಗಳು ಕಡಿಮೆ ಇವೆ. ತಮಿಳುನಾಡಿನ ಎಐಎಡಿಎಂಕೆ ಮತ್ತು ಒಡಿಶಾದ ಬಿಜೆಡಿ ಶಾಸಕರು ಹಾಗೂ ಸಂಸದರ ಬೆಂಬಲ ಪಡೆದರೆ ಆಯ್ಕೆ ಸುಲಭವಾಗಲಿದೆ.

ಲೋಕಸಭೆಯಲ್ಲಿ 281 ಸಂಸದರ ಬಹುಮತ ಬಿಜೆಪಿಗೆ ಇದ್ದರೂ ತನ್ನ ಅಭ್ಯರ್ಥಿಯ ಆಯ್ಕೆಗೆ ಇನ್ನೂ ಹೆಚ್ಚಿನ ಮತಗಳ ಅಗತ್ಯವಿತ್ತು. ಈಗ ಎರಡು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಬಹುಮತ ದೊರಕಿರುವುದರಿಂದ ರಾಷ್ಟ್ರಪತಿ ಹುದ್ದೆಗೆ ಪಕ್ಷ ಬಯಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ.

2017ರ ಜುಲೈ 25ಕ್ಕೆ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ಆಗಸ್ಟ್‌ ತಿಂಗಳಲ್ಲಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರ ಅಧಿಕಾರಾವಧಿಯೂ ಮುಗಿಯುತ್ತದೆ.

ಲೋಕಸಭೆಯ ಸದಸ್ಯರಲ್ಲದೆ 29 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೇರಿಯ ವಿಧಾನಸಭೆಯ ಸದಸ್ಯರು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ ಮತದಾರರು.

ಮಹಾರಾಷ್ಟ್ರ, ಗುಜರಾತ್, ಹರಿಯಾಣ, ಛತ್ತೀಸಗಡ, ಜಾರ್ಖಂಡ್‌, ಮಧ್ಯಪ್ರದೇಶ, ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಆಂಧ್ರಪ್ರದೇಶದಲ್ಲಿ ಟಿಡಿಪಿ ಜತೆ ಸೇರಿ ಸರ್ಕಾರ ರಚಿಸಿದೆ.

ಈಗ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಧಿಕಾರ ಹಿಡಿಯಲಿರುವುದರಿಂದ ರಾಷ್ಟ್ರಪತಿ ಹುದ್ದೆಗೆ ಪಕ್ಷ ಬಯಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸುಲಭವಾಗಲಿದೆ.

ದೇಶದ ವಿಧಾನಸಭೆಗಳ ಪೈಕಿ ಉತ್ತರಪ್ರದೇಶ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರು ಇರುವುದರಿಂದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯದ ಶಾಸಕರು ನಿರ್ಣಾಯಕ ಪಾತ್ರವಹಿಸುತ್ತಾರೆ. ಬಿಜೆಪಿಗೆ ಇಲ್ಲಿ ಭಾರಿ ಬಹುಮತ ದೊರಕಿರುವುದು ರಾಷ್ಟ್ರಪತಿ   ಆಯ್ಕೆಯನ್ನು ಸುಲಭಗೊಳಿಸಿದೆ.

ಬಿಜೆಪಿಯು ರಾಷ್ಟ್ರಪತಿ ಹುದ್ದೆಗೆ ಪಕ್ಷದ ಅಭ್ಯರ್ಥಿಯನ್ನು ಪರಿಗಣಿಸಿ, ಮಿತ್ರ ಪಕ್ಷಗಳು ಬಯಸಿದ ಅಭ್ಯರ್ಥಿಯನ್ನು ಉಪ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ರಾಷ್ಟ್ರಪತಿ ಆಯ್ಕೆ ಹೇಗೆ
* ಎಲೆಕ್ಟೋರಲ್ ಕಾಲೇಜ್ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ

* ಎಲೆಕ್ಟೋರಲ್‌ ಕಾಲೇಜ್‌ನಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯಗಳ ವಿಧಾನಸಭಾ ಸದಸ್ಯರು ಇರಲಿದ್ದಾರೆ

* ದೆಹಲಿ, ಪುದುಚೇರಿಯ ಶಾಸಕರೂ ಈ ಚುನಾವಣೆಯಲ್ಲಿ ಭಾಗವಹಿಸುತ್ತಾರೆ

* ಲೋಕಸಭೆ ಮತ್ತು ರಾಜ್ಯಸಭೆಯ ಒಬ್ಬ ಸದಸ್ಯರ ಮತ, 708 ಎಲೆಕ್ಟೋರಲ್‌ ಮತಗಳಿಗೆ ಸಮ

* ಆಯಾ ರಾಜ್ಯದ ಜನಸಂಖ್ಯೆಯನ್ನು ಆ ರಾಜ್ಯದ ಶಾಸಕರ ಸಂಖ್ಯೆಯಿಂದ ಭಾಗಿಸಬೇಕು. ಆಗ ಬಂದ ಶೇಷವನ್ನು 1,000ದಿಂದ ಪುನಃ ಭಾಗಿಸಿಬೇಕು. ಆಗ ದೊರೆಯುವ ಶೇಷವು ಆ ರಾಜ್ಯದ ಒಬ್ಬ ಶಾಸಕನ ಎಲೆಕ್ಟೋರಲ್‌ ಮತದ ಸಂಖ್ಯೆಯಾಗಿರುತ್ತದೆ


ಎಲೆಕ್ಟೋರಲ್‌ ಕಾಲೇಜ್‌
* 776 ಸಂಸತ್‌ ಸದಸ್ಯರು
* 4,120 ಎಲ್ಲಾ ರಾಜ್ಯಗಳ ಶಾಸಕರು

ಎಲೆಕ್ಟೋರಲ್ ಮತಗಳು
* 10.98 ಲಕ್ಷ ಎಲೆಕ್ಟೋರಲ್ ಕಾಲೇಜ್‌ನ ಒಟ್ಟು ಮತಗಳು

* 5.49 ಲಕ್ಷ ರಾಷ್ಟ್ರಪತಿ ಆಯ್ಕೆಗೆ ಬೇಕಿರುವ ಸರಳ ಬಹುಮತ

* 5.32 ಲಕ್ಷ ಬಿಜೆಪಿ ಬಳಿ ಇರುವ ಎಲೆಕ್ಟೋರಲ್ ಮತಗಳು

* 17,500 ಸರಳ ಬಹುಮತ ಸಾಧಿಸಲು ಬಿಜೆಪಿಗೆ ಬೇಕಿರುವ ಎಲೆಕ್ಟೋರಲ್‌ ಮತಗಳು

* 6.28 ಲಕ್ಷ ಎಐಎಡಿಎಂಕೆ ಮತ್ತು ಬಿಜೆಡಿ ಬೆಂಬಲ ಪಡೆದರೆ ಬಿಜೆಪಿಗೆ ದೊರೆಯಲಿರುವ ಒಟ್ಟು ಎಲೆಕ್ಟೋರಲ್ ಮತಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT