ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಏನು ಧರ್ಮಾಧಿಕಾರಿಯೇ: ಸಿ.ಎಂ ಪ್ರಶ್ನೆ

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಬಜೆಟ್ ಮಂಡನೆಗೆ ಉಪಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಈ ವಿಷಯವಾಗಿ ಬಿಜೆಪಿ ಸುಮ್ಮನೇ ತಕರಾರು ತೆಗೆಯುತ್ತಿದೆ. ಪಂಚ ರಾಜ್ಯ ಚುನಾವಣೆ ಇದ್ದರೂ ಕೇಂದ್ರ ಸರ್ಕಾರವು ಬಜೆಟ್‌ ಮಂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯಡಿಯೂರಪ್ಪ ಮಾಡಿರುವ ಪಾಪದ ಕೆಲಸಗಳಿಗೆ ಮುಂದಿನ ಜನ್ಮದಲ್ಲೂ ಪ್ರಾಯಶ್ಚಿತ ಸಿಗುವುದಿಲ್ಲ. ಧರ್ಮ, ಅಧರ್ಮದ ಬಗ್ಗೆ ಮಾತನಾಡಲು ಅವರೇನು ಧರ್ಮಧಿಕಾರಿಯೇ’ ಎಂದು ಪ್ರಶ್ನಿಸಿದರು.

‘ಉಪಚುನಾವಣೆಯು ವೈಯಕ್ತಿಕ ಕಲಹವಲ್ಲ. ಶ್ರೀನಿವಾಸಪ್ರಸಾದ್‌ ದೊಡ್ಡ ನಾಯಕ. ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರೀಗ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ದಾರೆ. ಹೀಗಾಗಿ, ಕೋಮುವಾದಿ ಪಕ್ಷದ ವಿರುದ್ಧದ ಹೋರಾಟವಿದು’ ಎಂದರು.

‘ನಂಜನಗೂಡು ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ 9 ಬಾರಿ ಗೆಲುವು ಸಾಧಿಸಿದ್ದೇವೆ.  ಪ್ರಸಾದ್‌ ಕಾಂಗ್ರೆಸ್‌ನಿಂದಲೇ ಗೆದ್ದವರು. ಈ ಬಾರಿಯೂ ಕಾಂಗ್ರೆಸ್‌ ಗೆಲುವು ಖಚಿತ. ಉತ್ತರ ಪ್ರದೇಶದ ಫಲಿತಾಂಶ ನಂಜನಗೂಡಿನ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಹಾಗೇನಾದರೂ ಇದ್ದರೆ ಪಂಜಾಬ್ ಫಲಿತಾಂಶವೂ ಪರಿಣಾಮ ಬೀರಬೇಕಾಗುತ್ತದೆ’ ಎಂದು ಹೇಳಿದರು.

‘ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸುವ ಬಗ್ಗೆ ಹೈಕಮಾಂಡ್‌ ಸದ್ಯದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಗ್ಗೆ ನಾನು ಯಾವುದೇ ಘೋಷಣೆ ಮಾಡುವುದಿಲ್ಲ’ ಎಂದರು.

ಕೇಶವಮೂರ್ತಿ ಮಾತನಾಡಿ, ನಂಜನಗೂಡಿನಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದು ಜನ ಹೇಳುತ್ತಿದ್ದಾರೆ. ಅವರ ಒತ್ತಾಯದಿಂದ  ಸ್ಪರ್ಧಿಸುತ್ತಿದ್ದೇನೆ. ಎಚ್‌.ಡಿ.ಕುಮಾರಸ್ವಾಮಿ ಏನೇ ಹೇಳಿದರೂ ಅದು ನನಗೆ ಆಶೀರ್ವಾದವಿದ್ದಂತೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.
ಗುಂಡ್ಲುಪೇಟೆ ಕ್ಷೇತ್ರದ ಪಕ್ಷದ ಅಭ್ಯಥಿ೯ ಗೀತಾ ಮಹದೇವಪ್ರಸಾದ್‌ ಮಾತನಾಡಿ, ಪತಿ ಎಚ್‌.ಎಸ್‌.ಮಹದೇವಪ್ರಸಾದ್  ಮಾಡಿರುವ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಿದರೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.

ಉತ್ತರ ಪ್ರದೇಶದಲ್ಲಿ ಮಳೆ ಬಂದರೆ...

ಗುಂಡ್ಲುಪೇಟೆ: ‘ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಲೆಯು ಕರ್ನಾಟಕದ ಮೇಲೆ ಪ್ರಭಾವಬೀರುವುದಿಲ್ಲ. ಅಲ್ಲಿ ಮಳೆ ಬಂದರೆ ಇಲ್ಲಿ ಕೊಡೆ ಹಿಡಿಯಲು ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಭಾನುವಾರ ಇಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಎಸ್‌. ಯಡಿಯೂರಪ್ಪ 2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎನ್ನುತ್ತಾರೆ. ನಮ್ಮದು ‘ಮಿಷನ್‌ 150’ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಆಸೆ ಈಡೇರುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೀತಾ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ

ಗುಂಡ್ಲುಪೇಟೆ (ಚಾಮರಾಜನಗರ): ‘ಸಚಿವರಾಗಿದ್ದ ಎಚ್‌.ಎಸ್. ಮಹದೇವಪ್ರಸಾದ್‌ ಅವರ ಪತ್ನಿ ಗೀತಾ ಮಹದೇವಪ್ರಸಾದ್‌ ಅವರನ್ನೇ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಭಾನುವಾರ ಇಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹದೇವಪ್ರಸಾದ್‌ ಅವರ ನಿಧನದಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಗೀತಾ ಅವರು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ವಹಿಸಿರಲಿಲ್ಲ. ನಾವೇ ಒತ್ತಾಯಪೂರ್ವಕವಾಗಿ ಕಣಕ್ಕೆ ಇಳಿಸುತ್ತಿದ್ದೇವೆ. ಅವರ ಹೆಸರನ್ನು ಶಿಫಾರಸು ಮಾಡಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT