ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

248 ಸೆಕ್ಯುರಿಟಿ ಏಜೆನ್ಸಿಗಳು ಅನಧಿಕೃತ!

ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ * ಏಜೆನ್ಸಿ ನವೀಕರಣಕ್ಕೆ ಹಿಂದೇಟು
Last Updated 12 ಮಾರ್ಚ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಖಾಸಗಿ ಹಾಗೂ ಸರ್ಕಾರೇತರ ವಲಯದಲ್ಲಿ ಭದ್ರತೆ ಜವಾಬ್ದಾರಿ ವಹಿಸಿಕೊಂಡಿರುವ  ಸೆಕ್ಯುರಿಟಿ ಏಜೆನ್ಸಿಗಳ ಪೈಕಿ 248 ಏಜೆನ್ಸಿಗಳು ಅನಧಿಕೃತವಾಗಿವೆ.

ಎಟಿಎಂ ಘಟಕಗಳಿಗೆ ಹಣ ತುಂಬುವ, ಅಪರಾಧ ಹಿನ್ನೆಲೆಯುಳ್ಳ ಹಾಗೂ ಅನುಮಾನಾಸ್ಪದ ಭದ್ರತಾ ಸಿಬ್ಬಂದಿ ಬಗ್ಗೆ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದುವರೆಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಅನಧಿಕೃತ ಏಜೆನ್ಸಿಗಳಿರುವುದು ಗೊತ್ತಾಗಿದೆ.

‘ಖಾಸಗಿ ಉದ್ಯಮ, ಕಚೇರಿ, ಅಪಾರ್ಟ್‌ಮೆಂಟ್‌ ಸಮುಚ್ಚಯ, ಶಾಲೆ–ಕಾಲೇಜು, ಮಾಲ್‌, ಸರ್ಕಾರೇತರ ಸಂಸ್ಥೆಗಳು, ಬ್ಯಾಂಕ್‌ಗಳಲ್ಲಿ ಲಕ್ಷಾಂತರ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ಪೂರ್ವಾಪರ ತಿಳಿದುಕೊಳ್ಳುತ್ತಿದ್ದೇವೆ. ಕೆಲ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಏಜೆನ್ಸಿಗಳೇ ಅನಧಿಕೃತವಾಗಿವೆ’ ಎಂದು ಐಎಸ್‌ಡಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಖಲೆ ಪ್ರಕಾರ ರಾಜ್ಯದಲ್ಲಿ 1,463 ಏಜೆನ್ಸಿಗಳು ನೋಂದಣಿಯಾಗಿವೆ. ಅವುಗಳ ಪೈಕಿ 200 ಏಜೆನ್ಸಿಗಳ ಪರವಾನಗಿ ಅವಧಿ 2016ರಲ್ಲಿ ಮುಕ್ತಾಯವಾಗಿದ್ದು, ಅವುಗಳು ಇದುವರೆಗೂ ನವೀಕರಣ ಮಾಡಿಸಿಕೊಂಡಿಲ್ಲ. ಜತೆಗೆ 48 ಏಜೆನ್ಸಿಗಳು ನೋಂದಣಿಯನ್ನೇ ಮಾಡಿಸಿಲ್ಲ. ಅವೆಲ್ಲವನ್ನೂ ಅನಧಿಕೃತ ಎಂದು ಪರಿಗಣಿಸಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದು ವಿವರಿಸಿದರು.

ಅಪರಾಧ ಘಟಿಸಿದರೆ ಪತ್ತೆ ಕಷ್ಟ: ‘ಅನಧಿಕೃತ ಸೆಕ್ಯುರಿಟಿ ಏಜೆನ್ಸಿಗಳ ಮೂಲಕ 30 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ಪೂರ್ವಾಪರ ಮಾಹಿತಿ ಯಾರಿಗೂ ಗೊತ್ತಿಲ್ಲ. ಏಜೆನ್ಸಿಗಳು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಇಂಥ ಏಜೆನ್ಸಿಗಳ ಸಿಬ್ಬಂದಿಯು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಅವರನ್ನು ಪತ್ತೆ ಹಚ್ಚುವುದು ಕಷ್ಟ. ಅವರ ವಿಳಾಸಗಳೂ ನಕಲಿಯಾಗಿರುತ್ತವೆ. ಅಂಥ ಹಲವು ಪ್ರಕರಣಗಳು ಇಂದಿಗೂ ತನಿಖೆ ಹಂತದಲ್ಲಿವೆ’ ಎಂದು ಹೇಳಿದರು.

ಐಎಸ್‌ಡಿ ಅಧಿಕಾರಿಗಳ ಹಿಂದೇಟು: ‘ಈಗಾಗಲೇ ನೋಂದಣಿಯಾಗಿರುವ 200 ಏಜೆನ್ಸಿಗಳು ಅಧಿಕೃತವಾಗಿವೆ. ಏಜೆನ್ಸಿಯ ಮಾಲೀಕರು ಎಲ್ಲ ದಾಖಲೆಗಳನ್ನು ಕೊಟ್ಟರೂ ನವೀಕರಣ ಮಾಡಿಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕರ್ನಾಟಕ ಸೆಕ್ಯುರಿಟಿ ಏಜೆನ್ಸಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎಂ. ಶಶಿಧರ್ ದೂರಿದರು.

‘ಭದ್ರತಾ ಸಿಬ್ಬಂದಿಯ ವೈದ್ಯಕೀಯ ಪ್ರಮಾಣ ಪತ್ರ, ಪೊಲೀಸರ ಪರಿಶೀಲನಾ ಪತ್ರ ಸೇರಿ ಸುಮಾರು 2 ಸಾವಿರ ಪುಟಗಳ ಅರ್ಜಿಯನ್ನು ಐಎಸ್‌ಡಿ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ವರ್ಷವಾದರೂ ನವೀಕರಣವಾಗಿಲ್ಲ.’

‘ಅರ್ಜಿ ತಿರಸ್ಕರಿಸಿದ್ದರೆ 30 ದಿನದೊಳಗೆ ಕಾರಣ ಸಮೇತ ಸ್ವೀಕೃತಿ ಪತ್ರ ಕೊಡಬೇಕು. ಅದ್ಯಾವುದನ್ನೂ ಅಧಿಕಾರಿಗಳು ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಯಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಏಜೆನ್ಸಿಗಳ ಬಗ್ಗೆ ಮಾಹಿತಿ ಪಡೆಯಲು ಬರುತ್ತಾರೆ. ತಮಗೆ ಸಂಬಂಧವಿಲ್ಲದ ಭವಿಷ್ಯ ನಿಧಿ ಹಾಗೂ ಆದಾಯ ತೆರಿಗೆ ದಾಖಲೆ ಕೇಳುತ್ತಾರೆ’ ಎಂದು ಶಶಿಧರ್‌ ಆರೋಪಿಸಿದರು.

‘ಕೆಲ ಏಜೆನ್ಸಿಗಳು ಅನಧಿಕೃತವಾಗಿ ಕೆಲಸ ಮಾಡುತ್ತಿವೆ. ಅವುಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಕಾನೂನುಬದ್ಧವಾಗಿ  ಸೇವೆ ಮುಂದುವರಿಸಲು ಅವಕಾಶವನ್ನೂ ನೀಡುತ್ತಿಲ್ಲ.’

‘ಗೃಹ ಸಚಿವ, ಕಾರ್ಮಿಕ ಸಚಿವ  ಹಾಗೂ ಐಎಸ್‌ಡಿ ಮುಖ್ಯಸ್ಥರಿಗೆ 10ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದೇವೆ.  ಅವರ ಪೈಕಿ ಗೃಹ ಸಚಿವರು ಮಾತ್ರ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ಪರವಾನಗಿ, ನವೀಕರಣ ಹೇಗೆ?
ಸೆಕ್ಯುರಿಟಿ ಏಜೆನ್ಸಿ ಆರಂಭಿಸುವ ವ್ಯಕ್ತಿಗಳು ಆಂತರಿಕ ಭದ್ರತಾ ಪಡೆಯ ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು.  

‘ಕಡಿಮೆ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಏಜೆನ್ಸಿ ತೆರೆಯಲು ₹5 ಸಾವಿರ, ಹೆಚ್ಚು ಜನಸಂಖ್ಯೆ ಇರುವ  ಜಿಲ್ಲೆಗೆ ₹15 ಸಾವಿರ ಹಾಗೂ ಇಡೀ ಕರ್ನಾಟಕದಲ್ಲಿ ಸೇವೆಗೆ ₹25 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಅದನ್ನು ಭರಿಸಿ ಅರ್ಜಿ ಸಲ್ಲಿಸುವ ವ್ಯಕ್ತಿಗಳ ಪೂರ್ವಾಪರ ಸಂಗ್ರಹಿಸಿ ಪರವಾನಗಿ ನೀಡುತ್ತೇವೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಭದ್ರತಾ ಸಿಬ್ಬಂದಿ ಎಸಗಿದ್ದ ಕೃತ್ಯಗಳು
*2015, ಮಾರ್ಚ್ 30:
ಅವೆನ್ಯೂ ರಸ್ತೆಯ ಎಟಿಎಂ ಘಟಕಕ್ಕೆ ಹಣ ತುಂಬಲು ಬಂದಿದ್ದ ವೇಳೆ, ‘ಬ್ರಿಂಕ್ಸ್‌ ಆರ್ಯ ಇಂಡಿಯಾ ಪ್ರೈ.ಲಿ’ನ ಚಾಲಕ ಜೇಮ್ಸ್‌ ಎಂಬುವನು  ₹ 65 ಲಕ್ಷ ಹಣದ ಸಮೇತ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದ.
*2015, ಅ.21: ‘ಬ್ರಿಂಕ್ಸ್‌ ಆರ್ಯ ಇಂಡಿಯಾ ಪ್ರೈ.ಲಿ’ (ಬಿಎಇಪಿಎಲ್) ಏಜೆನ್ಸಿಯ ಕಿರಿಯ ಎಂಜಿನಿಯರ್ ಜಗದೀಶ್ ಎಂಬಾತ, ಎಟಿಎಂಗೆ ತುಂಬಲು ಬ್ಯಾಂಕ್‌ಗಳಿಂದ ಸಂಗ್ರಹಿಸಿದ್ದ ಹಣದಲ್ಲಿ ₹ 50 ಲಕ್ಷ ಎಗರಿಸಿದ್ದ. ಎಂ.ಜಿ.ರಸ್ತೆಯಲ್ಲಿ ಈ ಘಟನೆ ನಡೆದಿತ್ತು.
*2016, ನ.23: ಸೆಕ್ಯುರ್ ಟ್ರಾನ್ಸಿಟ್’ ಏಜೆನ್ಸಿಯ ಚಾಲಕ ಡಾಮಿನಿಕ್‌ ರಾಯ್, ಎಟಿಎಂ ಘಟಕಗಳಿಗೆ ತುಂಬಬೇಕಿದ್ದ.
₹ 1.37 ಕೋಟಿ ನಗದು ಸಮೇತ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದ. ಉಪ್ಪಾರಪೇಟೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
*2016, ಡಿ.17: ‘ಸೆಕ್ಯುರ್ ವ್ಯಾಲ್ಯು’ ಏಜೆನ್ಸಿಯ ಚಾಲಕ ಅಸ್ಸಾಂನ ಸೀಬನ್‌ ಹುಸೇನ್ ಮುಜುಮ್ದಾರ್ (26) ಎಂಬಾತ ಮುರುಗೇಶ್‌ಪಾಳ್ಯದಲ್ಲಿ ಎಟಿಎಂ ಘಟಕಕ್ಕೆ ತುಂಬಲು ತಂದಿದ್ದ ₹ 20 ಲಕ್ಷ ನಗದು ಸಮೇತ ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಹಣದ ಟ್ರಂಕನ್ನು ಆಟೊದಲ್ಲಿ ಬಿಟ್ಟು ಹೋಗಿದ್ದ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT