ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳಲ್ಲಿ ಇಲ್ಲ ಸಿ.ಸಿ.ಟಿ.ವಿ ಕ್ಯಾಮೆರಾ

ಸಿಗದ ‘ನಿರ್ಭಯಾ ನಿಧಿ’: ಯೋಜನೆ ಕೈಬಿಟ್ಟ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
Last Updated 12 ಮಾರ್ಚ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಅನುದಾನ  ದೊರಕದ ಕಾರಣ ಬಿಎಂಟಿಸಿ ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ ಯೋಜನೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೈಬಿಟ್ಟಿದೆ.

2012ರ ಡಿಸೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ಯುವತಿಯ (ನಿರ್ಭಯಾ ಪ್ರಕರಣ) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಬಿಎಂಟಿಸಿ ಬಸ್‌ಗಳಲ್ಲೂ ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆದವು. ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣು ಇಡಲು ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಗೆ ಸಂಸ್ಥೆ 2014ರಲ್ಲಿ ನಿರ್ಧರಿಸಿತು. ಆರಂಭಿಕ ಹಂತದಲ್ಲಿ ₹4 ಕೋಟಿ ವೆಚ್ಚದಲ್ಲಿ 500 ಬಸ್‌ಗಳಲ್ಲಿ ಇದನ್ನು ಹಾಕಲಾಯಿತು.

ಈ ನಡುವೆ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ, ಜಿಪಿಎಸ್‌ ವ್ಯವಸ್ಥೆ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ  ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು 2016ರ ಏಪ್ರಿಲ್‌ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು.

ನಗರದಲ್ಲಿ 6,192 ಬಸ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಪ್ರತಿ ಬಸ್‌ಗೆ ಇದನ್ನು ಹಾಕಲು ₹68 ಸಾವಿರ (ಎರಡು ಕ್ಯಾಮೆರಾ, ಡಿವಿಆರ್‌, ಮೂರು ವರ್ಷಗಳ ನಿರ್ವಹಣಾ ವೆಚ್ಚ) ಬೇಕು. ಎಲ್ಲ ಬಸ್‌ಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಲು ಕನಿಷ್ಠ ₹40 ಕೋಟಿ ಅಗತ್ಯ ಇದೆ.

ಬಿಎಂಟಿಸಿ ಕಳೆದ ನಾಲ್ಕು ವರ್ಷಗಳಿಂದ ನಷ್ಟದ ಹಾದಿಯಲ್ಲಿದೆ. ಎಲ್ಲ ಬಸ್‌ಗಳಲ್ಲೂ ಸ್ವಂತ ಸಂಪನ್ಮೂಲದಿಂದ ಇದನ್ನು ಅನುಷ್ಠಾನ ಕಷ್ಟ. ‘ನಿರ್ಭಯಾ’ ಯೋಜನೆಯಡಿ ₹50 ಕೋಟಿ ನೀಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.

ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರನ್ನು ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ನಿಯೋಗವು 2016ರ ಡಿಸೆಂಬರ್‌ನಲ್ಲಿ ಭೇಟಿ ಮಾಡಿತು.

‘ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಕೆಯಿಂದ ಹೆಚ್ಚಿನ ಪ್ರಯೋಜನವೂ ಆಗುವುದಿಲ್ಲ. ಹೀಗಾಗಿ ನಿಮಗೆ ನೆರವು ನೀಡಲು ಸಾಧ್ಯವಿಲ್ಲ’ ಎಂದು ಅವರು ನಿರಾಕರಿಸಿದ್ದರು. ‘ಈ ಯೋಜನೆಯಡಿ ಲಿಂಗ ಸೂಕ್ಷ್ಮತೆ, ಮಹಿಳಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತೇವೆ. ಇದಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದೂ ಅವರು ಭರವಸೆ ನೀಡಿದ್ದರು.

‘ಇತ್ತೀಚಿನ ದಿನಗಳಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾಗಳ ನೆರವಿನಿಂದಲೇ. ಬಸ್‌ಗಳಲ್ಲಿ ಇವುಗಳನ್ನು ಹಾಕುವುದರಿಂದ ಮಹಿಳೆಯರಿಗೆ ಸುರಕ್ಷತಾ ಭಾವನೆ ಹೆಚ್ಚುತ್ತದೆ. ದುಷ್ಕರ್ಮಿಗಳಲ್ಲೂ ಭಯ ಮೂಡುತ್ತದೆ.    ಏಕಾಏಕಿ ಯೋಜನೆ ಕೈಬಿಟ್ಟಿರುವುದು ಸರಿಯಲ್ಲ. ಆದಾಯ ಸೋರಿಕೆಗೆ ಕಡಿವಾಣ ಹಾಕಿ ಸಂಪನ್ಮೂಲ ಕ್ರೋಡೀಕರಿಸಬಹುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸ್‌ ಸಲಹೆ ನೀಡುತ್ತಾರೆ.

‘ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ವರ್ತಿಸುವ ರೀತಿ, ಮಹಿಳೆಯರಿಗೆ ಪುರುಷ ಪ್ರಯಾಣಿಕರಿಂದ ಆಗುತ್ತಿರುವ ಕಿರುಕುಳ, ಮಹಿಳೆಯರಿಗೆ ಮೀಸಲಿಟ್ಟ ಸೀಟುಗಳಲ್ಲಿ ಪುರುಷ ಪ್ರಯಾಣಿಕರು ಕುಳಿತುಕೊಳ್ಳುವುದನ್ನು ಪತ್ತೆ ಹಚ್ಚಲು ಈ ಕ್ಯಾಮೆರಾಗಳು ನೆರವಾಗುತ್ತವೆ’ ಎಂದು ಅವರು ತಿಳಿಸುತ್ತಾರೆ.

‘ಕಳೆದ ವರ್ಷ ₹79 ಕೋಟಿ ವೆಚ್ಚದಲ್ಲಿ ಚತುರ ಸಾರಿಗೆ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ.  ಈ ವ್ಯವಸ್ಥೆಯ ಮೂಲಕ ಎಲ್ಲ ಬಸ್‌­ಗಳಿಗೂ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿ­­ಯಲ್ಲಿರುವ ನಿಯಂತ್ರಣಾ ಕೊಠಡಿಯಿಂದಲೇ ಮೇಲ್ವಿಚಾರಣೆ ನೋಡಿಕೊಳ್ಳಲಾಗುತ್ತಿದೆ. ಬಸ್‌­ಗಳಲ್ಲಿ ಆಗುವ ಕ್ಷಣಕ್ಷಣದ ಬೆಳವಣಿಗೆಗಳನ್ನು ನಿಯಂತ್ರಣ ಕೊಠಡಿಯಲ್ಲೇ ಇದ್ದುಕೊಂಡು ವೀಕ್ಷಿಸುತ್ತಿದ್ದೇವೆ. ಮೊಬೈಲ್‌ ಆ್ಯಪ್ ಅಭಿವೃದ್ಧಿ ಮಾಡಿದ್ದು, ಅದನ್ನು 55 ಸಾವಿರ ಪ್ರಯಾಣಿಕರು ಡೌನ್‌ಲೋಡ್‌ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ’ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘ಸಂಸ್ಥೆಯ ಸಂಪನ್ಮೂಲದಿಂದ ₹40 ಕೋಟಿ ಮೀಸಲಿಡಲು ಸಾಧ್ಯವಿಲ್ಲ. 3 ಸಾವಿರ ಹೊಸ ಬಸ್‌ಗಳ ಖರೀದಿಗಾಗಿ ರಾಜ್ಯ ಸರ್ಕಾರದಿಂದ ಅನುದಾನ ಕೇಳಿದ್ದೇವೆ. ಈ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲಿ ಮತ್ತೆ ಸಿ.ಸಿ.ಟಿ.ವಿ. ಕ್ಯಾಮೆರಾಕ್ಕೆ ಅನುದಾನ ಕೇಳುವುದು ಸರಿಯಾಗದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಬಸ್‌ನಲ್ಲಿ ದೌರ್ಜನ್ಯ ಪ್ರಕರಣಗಳು
* 2013ರ ಡಿಸೆಂಬರ್‌ನಲ್ಲಿ ಇಬ್ಬರು ಭೂತಾನ್‌ ಯುವತಿಯರ ಮೇಲೆ ಚಾಲಕ ಹಾಗೂ ನಿರ್ವಾಹಕ ದೌರ್ಜನ್ಯ.
* 2014ರ ಮಾರ್ಚ್‌ನಲ್ಲಿ ಚಾಮರಾಜಪೇಟೆಯಲ್ಲಿ ಯುವತಿ ಜತೆ ಚಾಲಕ ಅಸಭ್ಯ ವರ್ತನೆ ಹಾಗೂ ಹಲ್ಲೆ.
* 2016ರ ಫೆಬ್ರುವರಿಯಲ್ಲಿ ಯಲಹಂಕದಲ್ಲಿ ಚಾಲಕ ದೌರ್ಜನ್ಯ.
* 2017ರ ಜನವರಿ 13ರಂದು ಸುಬ್ರಹ್ಮಣ್ಯಪುರದ ಕದಿರೇನಹಳ್ಳಿ ಬಳಿ ಬಸ್‌ನಲ್ಲಿ ನಿರ್ವಾಹಕ ಕಿರುಕುಳ.

ಏನಿದು ನಿಧಿ?

ಮಹಿಳೆಯರ ಸುರಕ್ಷೆ ಹಾಗೂ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ 2013ರಲ್ಲಿ ‘ನಿರ್ಭಯಾ ನಿಧಿ’ ಸ್ಥಾಪಿಸಿತ್ತು. ಅದಕ್ಕೆ ಪ್ರತಿವರ್ಷ ತಲಾ ₹1 ಸಾವಿರ ಕೋಟಿ ಕೊಡಲಾಗಿದೆ. ಈ ವರ್ಷ ಬಜೆಟ್‌ನಲ್ಲಿ ಮತ್ತೆ ₹500 ಕೋಟಿ ನೀಡಲಾಗಿದೆ.

ಸಂಸ್ಥೆಯಲ್ಲಿ ದುಡ್ಡಿಲ್ಲ
ಕೇಂದ್ರ ಸರ್ಕಾರ ಅನುದಾನ ನಿರಾಕರಿಸಿದೆ. ನಮ್ಮಲ್ಲಿ ಅದಕ್ಕೆ ಬೇಕಾದಷ್ಟು ದುಡ್ಡಿಲ್ಲ. ಈಗಿರುವ ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ ಸಾಧ್ಯವಿಲ್ಲ. ಸಂಸ್ಥೆಯು ಈ ವರ್ಷ ಸಿ.ಸಿ.ಟಿ.ವಿ. ಕ್ಯಾಮೆರಾ ಹೊಂದಿರುವ 1,500 ಹೊಸ ಬಸ್‌ಗಳನ್ನು ಖರೀದಿ ಮಾಡಲಿದೆ.
–ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

ಅಂಕಿ ಅಂಶಗಳು

6,159 ಬಿಎಂಟಿಸಿ ಬಸ್‌ಗಳು

74,313 ದೈನಂದಿನ ಟ್ರಿಪ್‌ಗಳು

50.2ಲಕ್ಷ  ನಿತ್ಯದ ಪ್ರಯಾಣಿಕರು

500  ಬಸ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ

₹4 ಕೋಟಿ   ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಗೆ ಆಗಿರುವ ವೆಚ್ಚ

₹68 ಸಾವಿರ  ಪ್ರತಿ ಬಸ್‌ನಲ್ಲಿ ಸಿ.ಸಿ.ಟಿ.ವಿ. ಹಾಕಲು ತಗಲುವ ವೆಚ್ಚ

₹40 ಕೋಟಿ  ಈ ಯೋಜನೆಗೆ ಬೇಕಿರುವ ಒಟ್ಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT