ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಭಾರತಿ ಆವರಣದಲ್ಲಿ ‘ಹಳೆ ಬೆಂಗಳೂರು’ ಸೃಷ್ಟಿ

ಕೆಂಪೇಗೌಡ ಅಧ್ಯಯನ ಕೇಂದ್ರ ಯೋಜನೆ
Last Updated 12 ಮಾರ್ಚ್ 2017, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣವಾಗಲಿದೆ ಕೆಂಪೇಗೌಡರ ಸಾಮ್ರಾಜ್ಯ. 16ನೇ ಶತಮಾನದ ಬೆಂಗಳೂರನ್ನು ಪುನರ್‌ಸೃಷ್ಟಿಸುವ ಕೆಲಸಕ್ಕೆ ಕೆಂಪೇಗೌಡ ಅಧ್ಯಯನ ಕೇಂದ್ರ ಅಡಿಯಿಟ್ಟಿದೆ.

ಕೆಂಪೇಗೌಡರ ಕುರಿತು ಸಮಗ್ರ ಸಂಶೋಧನೆ ಕೈಗೊಳ್ಳಲು ಜ್ಞಾನಭಾರತಿ ಆವರಣದ ಆಡಳಿತ ಕಟ್ಟಡದ ಎದುರು ಇರುವ ಮೂರು ಎಕರೆ ಜಾಗದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಭವನ ನಿರ್ಮಿಸಿಕೊಟ್ಟಿದೆ.

‘ಸದ್ಯ ಆ ಪ್ರದೇಶ ಸುತ್ತಮುತ್ತ 13 ಎಕರೆ ಜಾಗವಿದೆ. ಅದನ್ನು ಬಳಸಿಕೊಂಡು ‘ಬಯಲು ವಸ್ತು ಸಂಗ್ರಹಾಲಯ’ ಸ್ಥಾಪಿಸಲು ಯೋಜಿಸಲಾಗಿದೆ. ಅದಕ್ಕಾಗಿ ವಿಸ್ತೃತ ಯೋಜನಾ ವರದಿಯೂ (ಡಿಪಿಆರ್‌) ಸಿದ್ಧಗೊಳ್ಳುತ್ತಿದೆ’ ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಶೇಕ್‌ ಮಸ್ತಾನ್‌ ತಿಳಿಸಿದರು.

ಕೆಂಪೇಗೌಡರ ಕಾಲದಲ್ಲಿ ನಗರದಲ್ಲಿ ನಿರ್ಮಿಸಲಾಗಿದ್ದ ಅರಳೇಪೇಟೆ, ರಾಣಾಸಿಂಗ್‌ಪೇಟೆ, ಬಳೇಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಕಬ್ಬನ್‌ಪೇಟೆ, ತಿಗಳರ ಪೇಟೆ.... ಹೀಗೆ 22 ಪೇಟೆಗಳ ಮಾದರಿಗಳು ಈ ಬಯಲು ವಸ್ತುಸಂಗ್ರಹಾಲಯದಲ್ಲಿ ಕಾಣಸಿಗಲಿವೆ.

ಅಲ್ಲದೆ, ಆ ಕಾಲದ ಶಾಸನಗಳು, ಶಿಲ್ಪಕಲೆ, ಗೋಪುರಗಳು, ದೇವಸ್ಥಾನ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ 16ನೇ ಶತಮಾನದ ಕೆಂಪೇಗೌಡರ ನಗರವನ್ನು ಇಲ್ಲಿ ಮರುಸೃಷ್ಟಿಸಲಾಗುತ್ತದೆ.

‘ಬೆಂಗಳೂರು, ತುಮಕೂರು, ಕೋಲಾರ, ಮಾಗಡಿ, ನೆಲಮಂಗಲ, ಕನಕಪುರ... ಹೀಗೆ ಕೆಂಪೇಗೌಡರು ಆಳ್ವಿಕೆ ನಡೆಸಿದ ಪ್ರದೇಶಗಳ ಮಾದರಿ ನಿರ್ಮಿಸುವ ಆಲೋಚನೆಯೂ ಇದೆ. ಒಟ್ಟಿನಲ್ಲಿ ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುತ್ತೇವೆ’

‘ಇಲ್ಲೊಂದು ನೈಸರ್ಗಿಕವಾದ ಕೆರೆ, ಸಸ್ಯೋದ್ಯಾನ ನಿರ್ಮಿಸುವ ಚಿಂತನೆಯೂ ಇದೆ. ಈ ಯೋಜನೆಗೆ ₹10ರಿಂದ 15 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಬಾರಿಯ ಪಾಲಿಕೆ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ’  ‘ವಸ್ತು ಸಂಗ್ರಹಾಲಯ ನಿರ್ಮಿಸಲು ನೀಲನಕ್ಷೆ ರೂಪಿಸಲಾಗುತ್ತಿದೆ. ಈಗಾಗಲೇ ಮೂರ್ನಾಲ್ಕು ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ. ಶೀಘ್ರ ಯೋಜನೆ ಪ್ರಾರಂಭಿಸುತ್ತೇವೆ. ಈ ವರ್ಷದೊಳಗೆ ಅಲ್ಲೊಂದು ಪುರಾತನ ಬೆಂಗಳೂರನ್ನು ನೀವು ಕಾಣಬಹುದು’ ಎಂದು ಮಸ್ತಾನ್‌ ಅವರು  ತಿಳಿಸಿದರು.

ಸಂಶೋಧನಾ ಕೇಂದ್ರದ ಕಾರ್ಯ: ‘ಸಂಶೋಧನೆ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಐದು ವಿಷಯಗಳ ಕುರಿತು ಸಂಶೋಧನೆ ಪ್ರಾರಂಭವಾಗಿದೆ. ಮಾಗಡಿ ತಾಲ್ಲೂಕಿನಲ್ಲಿ ಕ್ಷೇತ್ರಕಾರ್ಯ  ನಡೆಯುತ್ತಿದೆ. ಕೆಂಪೇಗೌಡರ ಕಾಲದ ಪುಸ್ತಕಗಳ ಅನುವಾದ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಸ್ತಾನ್‌ ತಿಳಿಸಿದರು.

ಮುಖ್ಯಾಂಶಗಳು
* ಕೆಂಪೇಗೌಡರ ಕಾಲದ 22 ಪೇಟೆಗಳ ಮಾದರಿ ನಿರ್ಮಾಣ

* ಕೆರೆ, ಸಸ್ಯೋದ್ಯಾನ ನಿರ್ಮಾಣ
* ₹15 ಕೋಟಿಯಲ್ಲಿ  ಹಳೆ ಬೆಂಗಳೂರು ಸೃಷ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT