ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥ ಅಧಿಕಾರಿಗಳಿಗೆ ಪಾಲಿಕೆಯಿಂದಲೇ ಶ್ರೀರಕ್ಷೆ!

₹ 79 ಕೋಟಿ ವಸೂಲಿಗೆ ಸೂಚಿಸಿ ಮೂರು ವರ್ಷವಾದರೂ ಕ್ರಮವಿಲ್ಲ * ₹ 893 ಕೋಟಿ ವೆಚ್ಚದ ಮೇಲಿನ ಆಕ್ಷೇಪಕ್ಕೆ ಉತ್ತರವಿಲ್ಲ
Last Updated 12 ಮಾರ್ಚ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ₹ 79.53 ಕೋಟಿಯನ್ನು ಅಪವ್ಯಯ ಮಾಡಿರುವುದನ್ನು 2013–14ನೇ ಸಾಲಿನ ಲೆಕ್ಕಪರಿಶೀಲನಾ ವರದಿಯಲ್ಲೇ ಪತ್ತೆ ಹಚ್ಚಲಾಗಿದ್ದರೂ ಆ ಮೊತ್ತದ ವಸೂಲಾತಿಗಾಗಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಅಲ್ಲದೆ, ಬಿಬಿಎಂಪಿಯಿಂದ ಮಾಡಲಾದ ₹893.17 ಕೋಟಿ ವೆಚ್ಚದ ಕುರಿತಂತೆ ಅದೇ ಲೆಕ್ಕಪರಿಶೀಲನಾ ವರದಿಯಲ್ಲಿ ಆಕ್ಷೇಪ ಎತ್ತಲಾಗಿತ್ತು. ಆದರೆ, ಆ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯ ಲೆಕ್ಕಾಧಿಕಾರಿಯವರು ಅನುಪಾಲನಾ ವರದಿಯನ್ನು ಇನ್ನೂ ಸಲ್ಲಿಸಿಲ್ಲ.

ವಾರ್ಷಿಕ ಲೆಕ್ಕಪರಿಶೀಲನಾ ವರದಿ ಕೈಸೇರಿದ ಬಳಿಕ ಅದರಲ್ಲಿ ಉಲ್ಲೇಖಿಸಿದ ನ್ಯೂನತೆಗಳನ್ನು ಒಂದು ತಿಂಗಳಲ್ಲಿಯೇ ಸರಿಪಡಿಸಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸಿ, ಅನುಪಾಲನಾ ವರದಿಯನ್ನು ಸಲ್ಲಿಸಬೇಕೆನ್ನುವುದು ನಿಯಮ.

ನ್ಯೂನತೆ ಸರಿಪಡಿಸಲು ಸಕಾಲದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ  ವರ್ಗಾವಣೆ, ನಿವೃತ್ತಿ, ಮರಣ ಅಥವಾ ದಾಖಲೆಗಳ ನಶಿಸುವಿಕೆ – ಈ ಕಾರಣಗಳಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆಗದು. ಅಲ್ಲದೆ, ನಷ್ಟವಾಗಿರುವ ಮೊತ್ತವನ್ನು ವಸೂಲಿ ಮಾಡುವುದು ಕೂಡ ಕಷ್ಟ ಎಂದು ನಿಯಮದ ಹಿಂದಿರುವ ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

ಅನುಪಾಲನಾ ವರದಿ ಸಲ್ಲಿಸದಿದ್ದರೆ ಮುಖ್ಯ ಲೆಕ್ಕಾಧಿಕಾರಿ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ನಷ್ಟವಾಗಿರುವ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದೂ ನಿಯಮದಲ್ಲಿ ವಿವರಿಸಲಾಗಿದೆ.

ಆರ್‌ಟಿಐ ಸ್ಟಡಿ ಸೆಂಟರ್‌ನ ಬಿ.ಎಚ್‌. ವೀರೇಶ್‌ ಅವರು ಬಿಬಿಎಂಪಿಯಿಂದ ಪಡೆದಿರುವ ಮಾಹಿತಿಯಲ್ಲಿ, ‘2013–14ನೇ ಸಾಲಿನ ಲೆಕ್ಕಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದಂತೆ ಪಾಲಿಕೆಗೆ ನಷ್ಟವಾಗಿರುವ ಮೊತ್ತವನ್ನು ಇದುವರೆಗೆ ವಸೂಲಿ ಮಾಡಿಲ್ಲ ಹಾಗೂ ಆಕ್ಷೇಪಣಾ ಮೊತ್ತಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಕುರಿತು ಅನುಪಾಲನಾ ವರದಿಯನ್ನೂ ಸಲ್ಲಿಸಿಲ್ಲ’ ಎಂದು ತಿಳಿಸಲಾಗಿದೆ.

ಎಷ್ಟೊಂದು ಪ್ರಮಾದಗಳು!: ಬಜೆಟ್‌ನ ಅಂಕಿ ಅಂಶಗಳು ವಾಸ್ತವಕ್ಕೆ ದೂರವಾಗಿವೆ. ಅಂದಾಜು ಮಾಡಲಾಗಿದ್ದ ವರಮಾನದ ಶೇ 38ರಷ್ಟು ಮೊತ್ತವನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ವರಮಾನದ ನಿಖರ ಲೆಕ್ಕಾಚಾರ ಹಾಕದೆ, ಭಾರಿ ಪ್ರಮಾಣದ ಕಾಮಗಾರಿಗಳಿಗೆ ಮಂಜೂರಾತಿ ಪಡೆದಿದ್ದರಿಂದ ಪಾಲಿಕೆ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಯಾವ ಬ್ಯಾಂಕ್‌ಗಳಿಂದ, ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗಿದೆ ಎಂಬ ವಿವರ ಇಡದಿರುವ ಕುರಿತೂ ಆಕ್ಷೇಪ ಎತ್ತಲಾಗಿದೆ.

ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ:  ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವೀರೇಶ್‌ ಅವರು, ಆರ್ಥಿಕ ಅಶಿಸ್ತು ಪ್ರದರ್ಶಿಸಿ, ಪಾಲಿಕೆಗೆ ನಷ್ಟ ಉಂಟುಮಾಡಿರುವ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆದಾರರಿಗೆ ಹಣ ಪಾವತಿಸುವುದು ಮುಖ್ಯ ಲೆಕ್ಕಾಧಿಕಾರಿಯವರ ಜವಾಬ್ದಾರಿ. ಪ್ರತಿವರ್ಷ ಸರಾಸರಿ ₹ 3,000 ಕೋಟಿಯಷ್ಟು ಹಣವನ್ನು ಅವರು ಗುತ್ತಿಗೆದಾರರಿಗೆ ಬಿಡುಗಡೆ ಮಾಡುತ್ತಾರೆ. ಹಣ ಬಿಡುಗಡೆ ಮಾಡುವ ಮುನ್ನ ಬಿಲ್‌ ಪರಿಶೀಲನೆ ಮಾಡದೆ ಅವರು ದೊಡ್ಡ ಪ್ರಮಾದ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯ ಲೆಕ್ಕಾಧಿಕಾರಿಯವರ ಕಚೇರಿಯಲ್ಲಿ ಬಿಲ್‌ ಬಿಡುಗಡೆ ಮಾಡಿಸಲು ಗುತ್ತಿಗೆದಾರರು ಶೇ 1ರಷ್ಟು ಲಂಚವನ್ನು ಕೊಡಲೇಬೇಕು. ಕಾಮಗಾರಿಯಲ್ಲಿ ಅವ್ಯವಹಾರಗಳು ನಡೆದಿದ್ದರೆ ಅದರ ಪ್ರಮಾಣ ಶೇ 5ಕ್ಕೆ ಏರುತ್ತದೆ. ಈ ಕಚೇರಿಯೊಂದರಲ್ಲೇ ವಾರ್ಷಿಕ ₹30 ಕೋಟಿಯಷ್ಟು ಹಣ ಲಂಚದ ರೂಪದಲ್ಲಿ ಹೋಗುತ್ತದೆ. ಲಂಚ ಕೊಡಲು ಒಪ್ಪದಿದ್ದರೆ ಅಂತಹ ಗುತ್ತಿಗೆದಾರರ ಕಡತಗಳನ್ನು ತಾಂತ್ರಿಕ ಜಾಗೃತಿ ಕೋಶದಿಂದ ತನಿಖೆ ನಡೆಸಲು ಕಳುಹಿಸಲಾಗುತ್ತದೆ ಎಂದು ಬಿಬಿಎಂಪಿ ವ್ಯವಹಾರಗಳ ಮೇಲೆ ಒಳನೋಟ ಬೀರಿದ್ದಾರೆ.

ಮೂರು ವರ್ಷಗಳ ಹಿಂದಿನ ಅಕ್ರಮಗಳಿಗೆ ಕಾರಣವಾದ ಅಧಿಕಾರಿಗಳಲ್ಲಿ ಕೆಲವರು ನಿವೃತ್ತರಾಗಿದ್ದರೆ, ಇನ್ನು ಹಲವರು ಮಾತೃ ಇಲಾಖೆಗಳಿಗೆ ಮರು ವರ್ಗ ಆಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಅಧಿಕಾರವಿಲ್ಲ. ‘ನಮ್ಮಿಂದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಹೋದರೆ, ಅಲ್ಲಿಂದ ಸಂಬಂಧಿಸಿದ ಇಲಾಖೆಗೆ ಅದನ್ನು ಕಳುಹಿಸಲಾಗುತ್ತದೆ. ಈ ಪತ್ರ ವ್ಯವಹಾರಗಳೆಲ್ಲ ಮುಗಿದು ಕ್ರಮ ಕೈಗೊಳ್ಳುವ ಹೊತ್ತಿಗೆ ಅವರು ನಿವೃತ್ತರಾಗಿರುತ್ತಾರೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬಿಬಿಎಂಪಿಗೆ ನಷ್ಟ ಆಗಿದ್ದೇಕೆ?
ಬಿಬಿಎಂಪಿ ನಷ್ಟ ಅನುಭವಿಸಲು ಕಾರಣವಾದ ಅಂಶಗಳನ್ನು ಲೆಕ್ಕಪರಿಶೀಲನಾ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳು ಇಂತಿವೆ:

* ಪಾವತಿ ಮಾಡಲಾಗಿರುವ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಬಿಲ್‌ಗಳನ್ನು ಇಡದೇ ಇರುವುದು
* ಸರಬರಾಜು ಮಾಡಿದ ಸರಕುಗಳ ಕುರಿತು ದಾಸ್ತಾನು ಪುಸ್ತಕದಲ್ಲಿ ದೃಢೀಕರಣ ಮಾಡದಿದ್ದರೂ ಹಣ ಪಾವತಿಸಿರುವುದು
* ನಿಯಮ ಮೀರಿ ಪ್ರಯಾಣ ಭತ್ಯೆ ಮಂಜೂರು ಮಾಡಿರುವುದು
* ಲೆಕ್ಕಾಧಿಕಾರಿಗಳು ರದ್ದುಪಡಿಸಿದ್ದ ಚೆಕ್‌ಗಳನ್ನೇ ನಗದು ಮಾಡಿಕೊಂಡಿರುವುದು
* ಕಾನೂನು ಕೋಶದ ಮುಖ್ಯಸ್ಥರಿಗೆ ಹೆಚ್ಚುವರಿ ಮೊತ್ತ ಪಾವತಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT