ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲೇ ಜೀವ ಜಲಕ್ಕೆ ಹಾಹಾಕಾರ

ನಗರ ಸಂಚಾರ
Last Updated 13 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ಗದಗ: ಮಾರ್ಚ್‌, ಏಪ್ರಿಲ್‌ ಮತ್ತು ಮೇ ಈ ಮೂರು ತಿಂಗಳು ಜಿಲ್ಲೆಯ ಜನತೆಗೆ ಕಡುಕಷ್ಟದ ದಿನಗಳು. ಹನಿ ನೀರಿಗೂ ಅಕ್ಷರಶಃ ಪರದಾಡಬೇಕಾದ ಪರಿಸ್ಥಿತಿ ಇಲ್ಲಿಯ ಜನರದ್ದು.

ರಕ್ತ ಬೇಕಾದರೂ ಕೊಟ್ಟೇವು, ನೀರು ಕೊಡೆವು ಎಂಬ ಮಾತಿನ ಸಾಕ್ಷಾತ್‌ ದರ್ಶನವಾಗುವುದು ಈ ಅವಧಿಯಲ್ಲೇ. ಬಡವರು, ಮಧ್ಯ ವರ್ಗದ ಗೃಹಣಿ ಯರು ಕೊಡಗಳಲ್ಲಿ ಸಂಗ್ರಹಿಸಿಟ್ಟಿರುವ ನೀರನ್ನು ಲೋಟದ ಲೆಕ್ಕದಲ್ಲಿ ಅಳೆದು, ತೂಗಿ ಖರ್ಚು ಮಾಡುವುದು, ಬೇಸಿಗೆ ಮುಗಿಯುವ ತನಕ ಮನೆಗೆ ಯಾರೂ ಅತಿಥಿಗಳು ಬಾರದಿರಲಿ ದೇವರೇ ಎಂದು ಕೈ ಮುಗಿಯುವುದು ಈ ಅವಧಿ ಯಲ್ಲೇ. ನೀರು ಮತ್ತು ಬಿಸಿಲಿನ ತಾಪದಿಂದಾಗಿ ನೌಕರ ವರ್ಗ ಈ ಮೂರು ತಿಂಗಳು ತಮ್ಮ ಕುಟುಂಬವನ್ನು ತಾತ್ಕಾಲಿಕವಾಗಿ ತಮ್ಮ ತಮ್ಮ ಊರಿಗೆ ಸ್ಥಳಾಂತರ ಮಾಡುತ್ತಾರೆ.

ಕಳೆದ ಬೇಸಿಗೆಯಲ್ಲಿ ಜಿಲ್ಲಾ ಕೇಂದ್ರ ಗದುಗಿನಲ್ಲೇ 42 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗಿತ್ತು. ಈಗಲೂ ಪರಿಸ್ಥಿತಿ ಹೆಚ್ಚೇನೂ ಸುಧಾರಿಸಿಲ್ಲ. ಕಳೆದ ಮೂರು ತಿಂಗಳಿಂದ ಸರಾಸರಿ 12ರಿಂದ 15 ದಿನಗಳಿಗೊಮ್ಮೆ ನೀರು ಪೂರೈಸಿದ್ದ ನಗರಸಭೆ, ಬೇಸಿಗೆ ಆರಂಭವಾದ  ಬೆನ್ನಲ್ಲೇ 20ರಿಂದ 25 ದಿನಗಳಿಗೊಮ್ಮೆ ನೀರು ಪೂರೈಸಲು ಹರಸಾಹಸ ಪಡುತ್ತಿದೆ.

ಗದಗ–ಬೆಟಗೇರಿ ನಗರಕ್ಕೆ, ಮುಂಡರಗಿಯ ಕೊರ್ಲಹಳ್ಳಿ ಬಳಿ ಹರಿದಿರುವ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ನದಿಪಾತ್ರ ಬತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಸದ್ಯ ಹಮ್ಮಿಗೆ ಬ್ಯಾರೇಜ್‌ನಿಂದ ನದಿಗೆ ನೀರು ಹರಿಸಿ, ಕೊರ್ಲಹಳ್ಳಿ ಜಲಾಗಾರ ದಲ್ಲಿ ಸಂಗ್ರಹ ವಾಗುವ ನೀರನ್ನು ಮೇಲೆ ತ್ತಲಾಗುತ್ತದೆ. ನಗರಕ್ಕೆ ನೀರು ಪೂರೈ ಸುವ ಡಂಬಳ ಬಳಿ ಇರುವ ಪಂಪ್‌ ಹೌಸ್‌ನಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳು ತ್ತಿರುವುದರಿಂದ ನೀರೆತ್ತುವ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಮೂರು ದಿನ ನೀರು ಬಂದರೆ, ನಂತರ ನಾಲ್ಕು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿರುತ್ತದೆ. ಸರಾಸರಿ 20 ದಿನಗಳು ಕಳೆಯುತ್ತಿದ್ದಂತೆ ಜನರು ನೀರು ಇಂದು, ಬರುತ್ತದೆ, ನಾಳೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.

ಕೊನೆಗೆ ಮನೆಯ ಸಂಪಿನ  ತಳಭಾಗದಲ್ಲಿರುವ ಕೊನೆಯ ಹನಿ ಖಾಲಿಯಾಗುವವರೆಗೆ ಕಾಯ್ದು, ನಂತರ ಅನಿವಾರ್ಯವಾಗಿ ₹ 300, ₹ 400 ಕೊಟ್ಟು ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತಾರೆ. ಟ್ಯಾಂಕರ್‌ ಮೂಲಕ ನೀರು ಹಾಕಿಸಿ ಕೊಂಡ ಮರು ದಿನವೇ ಕುಡಿಯುವ ನೀರು ಪೂರೈಕೆಯಾಗಿ ರುತ್ತದೆ. ಇದು ಕಳೆದ ಎರಡು ದಶಕಗಳಿಂದ ಜಿಲ್ಲಾ ಕೇಂದ್ರದ ಜನತೆ ಅನುಭವಿಸುತ್ತಿರುವ ನರಕಯಾತನೆ ಎನ್ನುತ್ತಾರೆ ನಗರದ ವಿವೇಕಾನಂದ ಬಡಾವಣೆಯ ನಿವಾಸಿ ಶಿವಪ್ಪ ನಡುವಿನಮನಿ.

ಜಿಲ್ಲಾ ಕೇಂದ್ರದ ಪರಿಸ್ಥಿತಿ ಹೀಗಾದರೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ಈ ಬೇಸಿಗೆಯಲ್ಲಿ ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿ ಸುತ್ತಿರುವ 104 ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದೆ.

ವಾಸ್ತವದಲ್ಲಿ ಈ ಅಂಕಿ ಅಂಶಕ್ಕಿಂತ ಎರಡು ಪಟ್ಟು ಗ್ರಾಮಗಳು ಅಂದರೆ ಜಿಲ್ಲೆಯಲ್ಲಿ 250 ರಿಂದ 300 ಗ್ರಾಮ ಗಳು ಕುಡಿಯುವ ನೀರಿನ ಭೀಕರ ಕ್ಷಾಮ ಎದುರಿಸುತ್ತಿವೆ ಎನ್ನುತ್ತಾರೆ ಟ್ಯಾಂಕರ್‌ ಮೂಲಕ ಮುಂಡರಗಿ ಭಾಗದ ಕೆಲವು ತಾಂಡಾ ಗಳಿಗೆ ನೀರು ಪೂರೈಸುತ್ತಿರುವ ಸರ್ಕಾರೇತರ ಸಂಸ್ಥೆಯೊಂದರ ಪ್ರತಿನಿಧಿ ಮಲ್ಲಿಕಾರ್ಜುನ.

‘ತುರ್ತು ಕುಡಿಯುವ ನೀರಿಗೆ ₹ 2.50 ಕೋಟಿ

ಗ್ರಾಮೀಣ ಕುಡಿಯುವ ನೀರು, ಬರ ನಿರ್ವಹಣೆ ಕಾಮಗಾರಿಯಡಿ  ತುರ್ತು ಕುಡಿಯುವ ನೀರು ಯೋಜ ನೆಗಳಿಗೆ  ಜಿಲ್ಲಾಡಳಿತಕ್ಕೆ  ₹ 2.50 ಕೋಟಿ  ಒದಗಿ ಸಲಾಗಿದ್ದು, ₹ 2.38 ಕೋಟಿ ಮೊತ್ತದಲ್ಲಿ ಎಲ್ಲ 78 ಕಾಮ ಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ಎದುರಿಸಬಹುದಾದ 104 ಹಳ್ಳಿಗಳನ್ನು ಗುರುತಿಸಲಾಗಿದ್ದು, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ.

ಜಿಲ್ಲಾಡಳಿತ ಅಂಕಿ ಅಂಶದ ಪ್ರಕಾರ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಗದಗ ತಾಲ್ಲೂಕಿ ನಲ್ಲಿ 11, ಮುಂಡರಗಿ ಯಲ್ಲಿ 10,  ನರಗುಂದದಲ್ಲಿ 20, ರೋಣದಲ್ಲಿ 21 ಹಾಗೂ ಶಿರಹಟ್ಟಿಯಲ್ಲಿ 15 ಕಾಮಗಾರಿಗಳು ಪೂರ್ಣಗೊಳಿಸ ಲಾಗಿದೆ.

ಟಾಸ್ಕ್ ಫೋರ್ಸ್ ಯೋಜನೆಯಡಿ 2016-–17 ರ ಸಾಲಿಗೆ ₹ 2 ಕೋಟಿ ಅನುದಾನದಲ್ಲಿ ಗುರಿ ಇದ್ದ 84 ಕಾಮಗಾರಿಗಳನ್ನು  ಪೂರ್ಣಗೊಳಿಸ ಲಾಗಿದ್ದು ₹1.42 ಕೋಟಿ ವೆಚ್ಚ ಮಾಡಲಾಗಿದೆ. ಅಧಿ ಕಾರಿಗಳು ತಮಗೆ ನೀಡಿದ ಗುರಿಗೆ ತಕ್ಕಂತೆ ಕಾಮಗಾರಿ ಪೂರ್ಣಗೊಳಿ ಸಿದ ವರದಿ ನೀಡಿದ್ದಾರೆ.

ಆದರೆ, ಕಾಗದಲ್ಲಿರುವುದಕ್ಕೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶ್ರೀಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಟಿ ಅವರೇ ಜಿಲ್ಲೆಯ ಹಲವು ಭಾಗಗಳಿಗೆ ಭೇಟಿ ನೀಡಿ ಖುದ್ದಾಗಿ ಬರ ನಿರ್ವಹಣೆ ಕಾಮಗಾರಿ ಪರಿಶೀಲಿಸಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.  ಗ್ರಾಮಿಣ ನೀರು ನೈರ್ಮಲ್ಯ ವಿಭಾಗದ ಕಾರ್ಯನಿರ್ವಹಣೆ ತೀವ್ರ ಬೇಸರ ತರಿಸಿದೆ. ಗ್ರಾಮಿಣಾ ಭಿವೃದ್ಧಿ ಇಲಾಖೆ ಯಿಂದ ತಂಡ ಕಳುಹಿಸಿ ಎಲ್ಲ ಕಾಮ ಗಾರಿಗಳ ಪರಿಶೀಲನೆ ನಡೆಸಲು ಶಿಫಾರಸು ಮಾಡಿದ್ದಾರೆ.

ಕಾಮಗಾರಿ ಪೂರ್ಣ
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ₹ 4.70 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ 303 ಕಾಮಗಾರಿಗಳ ಪೈಕಿ 282 ಕಾಮಗಾರಿ ಪೂರ್ಣ ಗೊಂಡಿದ್ದು ₹ 3.99 ಕೋಟಿ  ವೆಚ್ಚವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಮನೋಜ್‌ ಜೈನ್‌.

**

ಅವಳಿ ನಗರಕ್ಕೆ ಸಗಟು ಕುಡಿವ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ  ಶೇ 98 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ  ಶೀಘ್ರ ಮಾಡಲಾಗುವುದು
–ಮನ್ಸೂರ ಅಲಿ, 
ನಗರಸಭೆ  ಪೌರಾಯುಕ್ತ

**

ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ನಗರದಲ್ಲಿ ಬಿಸಿಲು ಮತ್ತು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಮೂರು ತಿಂಗಳು ಹೆಂಡತಿ ಮಕ್ಕಳನ್ನು ಊರಿಗೆ ಕಳುಹಿಸಿ ಬರುತ್ತೇನೆ
–ಕೇಶವ ವಿಟ್ಲ, 
ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT