ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರೀ ಬಿಸಿಲ್ರೀ. ಮನೆಯಲ್ಲಿ ನೀರಿಲ್ಲ...’

ನಗರ ಸಂಚಾರ
Last Updated 13 ಮಾರ್ಚ್ 2017, 5:36 IST
ಅಕ್ಷರ ಗಾತ್ರ

ಹಾವೇರಿ: ಹಿರಿಯರ ತಲೆ ಮೇಲೆ ಶಾಲು, ಮಹಿಳೆಯರೂ ಹೊದ್ದ ಸೆರಗು, ಛತ್ರಿ ಹಿಡಿಯುವ ಯುವತಿಯರು, ಶಾಲಾ ಚೀಲವನ್ನೇ ತಲೆ ಮೇಲಿಡುವ ಮಕ್ಕಳು, ರಸ್ತೆ ಬದಿಯಲ್ಲಿ ಹೆಚ್ಚಿದ ಪಾನೀಯಗಳು, ‘ಕೋಲ್ಡ್’ ಕೇಳುವ ಗ್ರಾಹಕರು, ಕಲ್ಲಂಗಡಿ ಮತ್ತಿತರ ಹಣ್ಣಿನ ಬಂಡಿಗಳು, ನೆರಳಿನ ಕೊಡೆಗಳು, ಮಜ್ಜಿಗೆ ಮೊಸರಿಗೆ ಬೇಡಿಕೆ, ಕೂಲರ್–ಎ.ಸಿ.ಗೆ  ಮೊರೆ ಹೋಗುವ ಸಿರಿವಂತರು... ಅಬ್ಬಾ ಬಿಸಿಲು.

ಸತತ ಬರ, ಅಂತರ್ಜಲ ಕುಸಿತ, ನೀರಿನ ಹಾಹಾಕಾರದ ನಡುವೆ ಈ ಬಾರಿ ಅವಧಿ ಪೂರ್ವದಲ್ಲೇ ಬಿಸಿಲಿನ ಝಳವು ಹೆಚ್ಚಾಗುತ್ತಿದೆ. ಜನತೆ ಬಸವಳಿ ಯುವಂತಾಗಿದೆ. ಎಲ್ಲಿ ನೋಡಿದರೂ, ಎಲ್ಲರ ಉದ್ಘಾರವು ಒಂದೇ. ‘ಭಾರ್ರೀ ಬಿಸಿಲ್ರೀ. ಮನೆಯಲ್ಲಿ ನೀರಿಲ್ಲ... ಹೊರಗೆ ಹೋಗಂಗಿಲ್ಲ...’
ಈಗಾಗಲೇ ವಾತಾವರಣದ ಉಷ್ಣತೆಯು ಮನುಷ್ಯನ ದೇಹ (36 ಡಿಗ್ರಿ ಸೆಲ್ಸಿಯಸ್‌)ಕ್ಕಿಂತ ಹೆಚ್ಚಿದೆ. ತಾಪ ಮಾನ 38 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದೆ. ಶುಷ್ಕ ಹವೆ, ವಿಪರೀತ ಸೆಖೆ, ಬೆವರು, ನೀರಡಿಕೆ, ನಿತ್ರಾಣ, ಸುಸ್ತು ಹೆಚ್ಚಾಗುತ್ತಿದೆ. ಕೆಲವರಿಗೆ ಆಗಾಗ್ಗೆ ಆರೋಗ್ಯ ಸಮಸ್ಯೆಯೂ ಕಾಡಲು ಆರಂಭಿಸಿದೆ.

ಕೆಲ ದಿನಗಳಿಂದ ಗರಿಷ್ಠ ತಾಪ ಮಾನವು 38 ಡಿಗ್ರಿ ಸೆಲ್ಸಿಯಸ್ ಆಸು ಪಾಸಿನಲ್ಲಿದ್ದರೆ, ಕನಿಷ್ಠವೂ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಫೆಬ್ರುವರಿ ಯಲ್ಲೇ ಬಿಸಿಲಿನ ತೀವ್ರತೆ ಹೆಚ್ಚಿದೆ. ಮಾರ್ಚ್‌ ಆರಂಭದಲ್ಲೇ ಜನತೆ ಸುಸ್ತಾಗಿದ್ದು, ‘ಏಪ್ರಿಲ್‌‘– ‘ಮೇ’ ಹೇಗೆ? ಎಂಬ ಆತಂಕ ಕಾಡಿದೆ.

ಆರೋಗ್ಯ: ‘ಬಿಸಿಲಿಗೆ ಕೆಲವು ವೈರಸ್‌ ಗಳು ಜಾಗೃತಗೊಳ್ಳುವ ಕಾರಣ ವೈರಲ್ ಜ್ವರ, ಅಜೀರ್ಣ, ಆಮಶಂಕೆ, ಡಿ ಹೈಡ್ರೇ ಶನ್‌ (ದೇಹದಲ್ಲಿ ನೀರಿನಂಶ ಇಳಿಕೆ) ಕಾಡಬಹುದು’ ಎನ್ನುತ್ತಾರೆ ವೈದ್ಯರು.

‘ಆರೋಗ್ಯಕ್ಕೆ ಚಿಕಿತ್ಸೆಗಿಂತ ಮುಂಜಾಗ್ರತೆ ಮುಖ್ಯ. ನೀರು ಕಾಯಿಸಿ ಕುಡಿಯಬೇಕು. ಪ್ರಖರ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಆಹಾರದಲ್ಲಿ ದ್ರವ ಪದಾರ್ಥಗಳು ಹೆಚ್ಚಿರುವಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಡಾ. ಗುಹೇಶ್ವರ ಪಾಟೀಲ್.

ಕಾಯಿಸಿ ಆರಿಸಿ ಮಣ್ಣಿನ ಮಡಕೆ ಯಲ್ಲಿಟ್ಟು ನೀರು ಒಳ್ಳೆಯದು ಎಂಬುದು ಹಿರಿಯ ಮಾತು. ಅಂತೆಯೇ ಖಾದಿ, ಹತ್ತಿ ಬಟ್ಟೆಗಳು. ಚರ್ಮದ ಚಪ್ಪಲಿಗಳು ಕಾಲಿಗೆ ರಕ್ಷಣೆ ನೀಡುತ್ತವೆ. ಕಾಲಿಗೆ ನೀರು, ಕುಡಿಯಲು ಮಜ್ಜಿಗೆ ಅಥವಾ ಎಳನೀರು ಹೆಚ್ಚಾಗಿ ಬಳಸುತ್ತಾರೆ. ‘ಬಿಸಿಲು, ನೀರಿನ ಅಭಾವದ ಹಿನ್ನೆಲೆ ಯಲ್ಲಿ ಕಡ್ಡಾಯವಾಗಿ ಕ್ಲೋರಿನೇಶನ್‌ ಮಾಡಿದ, ಶುದ್ಧ, ಕುದಿಸಿ ಆರಿಸಿದ ನೀರು ಕುಡಿಯಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಮಾರುಕಟ್ಟೆ: ಬೇಸಿಗೆಯ ಝಳ ಹೆಚ್ಚಿದಂತೆ ಮಾರುಕಟ್ಟೆಯಲ್ಲಿ ಹಣ್ಣು ಗಳು, ಜ್ಯೂಸ್, ಐಸ್‌ಕ್ರೀಂ ಅಂಗಡಿಗಳು ಹೆಚ್ಚಾಗಿವೆ. ರಸ್ತೆ ಬದಿಗಳಲ್ಲಿ ಹಣ್ಣಿನ ಅಂಗಡಿಗಳು, ಬಂಡಿಗಳು ಬಂದಿವೆ. ಎಳನೀರಿಗೆ ಬೇಡಿಕೆ ಇದ್ದರೂ, ಪೂರೈಕೆ ಕೊರತೆ ಇದೆ. ಈ ನಡುವೆಯೇ ಸೋಡಾ, ಮಜ್ಜಿಗೆ ಮತ್ತಿತರ ಪಾನೀಯ ವ್ಯಾಪಾರ ಜೋರಾಗಿದೆ.  

ಗೃಹೋಪಯೋಗಿ ಮಳಿಗೆಯಲ್ಲಿ ಕೂಲರ್‌, ಏಸಿ, ಫ್ಯಾನ್‌ಗಳಿಗೆ ಬೇಡಿಕೆ ಶುರುವಾಗಿದೆ. ಬಟ್ಟೆ ಅಂಗಡಿಗಳಲ್ಲಿ ‘ಕಾಟನ್‌...’ ಕೇಳುತ್ತಾರೆ. ಔಷಧ ಮಳಿ ಗೆಗೆ ಬಂದು ಫೌಡರ್, ಲೋಷನ್, ಕ್ರೀಂ ಗಳನ್ನು ಕೇಳುವವರು ಹೆಚ್ಚಾಗಿದ್ದಾರೆ. ದ್ವಿಚಕ್ರ ವಾಹನದ ಬದಲಾಗಿ ಆಟೊ, ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ.

‘ಈಗ ಊಟ ಸೇರುವುದೇ ಇಲ್ಲ. ಏನಿದ್ದರೂ ನೀರಡಿಕೆ. ಮಧ್ಯಾಹ್ನ ಹೊರಗೆ ಹೋದರೆ ಸುಸ್ತು ಜಾಸ್ತಿ. ಹೀಗಾಗಿ ಮಧ್ಯಾಹ್ನದ ಅವಧಿಯಲ್ಲಿ ಮಾರುಕಟ್ಟೆ, ರಸ್ತೆಗಳೆಲ್ಲ ಬಿಕೋ ಎನ್ನುತ್ತವೆ. ಜನರೇ ವಿರಳ. ಆದಷ್ಟು ನೆರಳಲ್ಲಿ ಇರಲು ಜನ ಬಯಸುತ್ತಾರೆ. ಜನರ ಸಂಚಾರ, ವ್ಯಾಪಾರ ಮತ್ತೆ ಸಂಜೆಯೇ ಶುರುವಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ ಶಿವಸಾಲಿ.

**

ಬೇಸಿಗೆ ಸಂದರ್ಭದಲ್ಲಿ ಪಡುವಣ ಗಾಳಿಯೂ ಬೀಸಲು ಆರಂಭಿಸುತ್ತದೆ. ಆಗ ಬಿಸಿಲ ಝಳ ಸ್ವಲ್ಪ ಕಡಿಮೆಯಾಗುತ್ತದೆ. ಹೀಗಾಗಿ ಪಡುವಣ ಗಾಳಿಯ ನಿರೀಕ್ಷೆಯಲ್ಲಿದ್ದೇವೆ
–ನಿಂಗಪ್ಪ ಬಾರ್ಕಿ, ಹಿರಿಯ ನಾಗರಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT