ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿಯ ಕುರ್ಚಿ ರಿಪೇರಿ ಕಾಯಕ

ಅಂಗವಿಕಲರ ಆರ್ಥಿಕ ಸ್ವಾವಲಂಬನೆಗೆ ಮಾದರಿಯಾದ ಅಂಧ ಶ್ರಮಜೀವಿ
Last Updated 13 ಮಾರ್ಚ್ 2017, 5:39 IST
ಅಕ್ಷರ ಗಾತ್ರ

ಶಿವಮೊಗ್ಗ: ಕಣ್ಣು ಕಾಣಿಸದಿದ್ದರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು, ಇತರರ ಜೀವನಕ್ಕೂ ದಾರಿ ದೀಪವೆನಿಸಿದ್ದಾರೆ ನವುಲೆ ಬಡಾವಣೆ ತ್ರಿಮೂರ್ತಿ ನಗರದ ನಿವಾಸಿ ಮಲ್ಲೇಶಪ್ಪ.

ಮಲ್ಲೇಶಪ್ಪ ಸುಮಾರು 15 ವರ್ಷಗಳಿಂದ ಕುರ್ಚಿ ರಿಪೇರಿ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕಚೇರಿಗಳಲ್ಲಿ ಬಳಸುವ ‘ಎಸ್‌’ ಮಾದರಿ ಕುರ್ಚಿಗಳ ಫ್ರೇಮ್‌ಗೆ ವೈರ್ ಹಾಕುವುದು, ಕುಷನ್‌ ಹಾಕುವುದು, ಮರದ ಕುರ್ಚಿಗಳಿಗೆ ಪಾಲಿಶ್‌, ವೆಲ್ಡಿಂಗ್‌ ಕೆಲಸ ಮಾಡುತ್ತಾರೆ. ಇತರರಿಗೂ ಈ ಉದ್ಯೋಗದ ತರಬೇತಿ ನೀಡುತ್ತಿದ್ದಾರೆ.

ಈ ಕುರ್ಚಿ ರಿಪೇರಿ ಕೆಲಸದಲ್ಲಿ ಪತ್ನಿ ಮಂಜುಳಾ, ಸ್ನೇಹಿತ ಸುಂದರ್‌ ಸಾಥ್‌ ನೀಡುತ್ತಿದ್ದಾರೆ. ಮಲ್ಲೇಶಪ್ಪ ಅವರು ಹಲವು ಅಂಗವಿಕಲರಿಗೆ ತರಬೇತಿ ನೀಡುವ ಮೂಲಕ ಗೃಹ ಕೈಗಾರಿಕೆ ನಡೆಸಲು ಅವರ ಜೀವನಕ್ಕೂ ದಾರಿ ದೀಪವಾಗಿದ್ದಾರೆ.

ಈ ಹಿಂದೆ ಮಲ್ಲೇಶಪ್ಪ ಅವರ ಬಳಿ 30 ಕೆಲಸಗಾರರು ಕೆಲಸ ಮಾಡುತ್ತಿದ್ದರು. ಪ್ರಸ್ತುತ 10 ಜನ ಅಂಗವಿಕಲರು ಕಾರ್ಯನಿರ್ವಹಿಸುತ್ತಿದ್ದಾರೆ.
‘ಈಚಿನ ದಿನಗಳಲ್ಲಿ ಎಸ್‌ ಮಾದರಿ ಕುರ್ಚಿಗಳು ಕಡಿಮೆಯಾಗಿವೆ. ಈ ಕುರ್ಚಿಗಳು ರಿಪೇರಿಗೆ ಬಂದರೆ ಮಾತ್ರ ಕೆಲಸವಿರುತ್ತದೆ. ಒಂದು ಮರದ ಕುರ್ಚಿಯ ಫ್ರೇಮ್‌ಗೆ ವೈರ್ ಹಾಕಿದರೆ ₹ 150 ನೀಡುತ್ತಾರೆ. ಖರ್ಚೆಲ್ಲಾ ತೆಗೆದರೆ ₹ 60 ಉಳಿಯುತ್ತದೆ. ರಿವಲಿಂಗ್‌ ಕುರ್ಚಿ ಫ್ರೇಮ್‌ ಮಾಡಲು ₹ 175 ಖರ್ಚು ತಗಲುತ್ತದೆ. ಇದರಲ್ಲಿ ₹ 75 ಸಿಗುತ್ತದೆ. ರಿಪೇರಿ ಕೆಲಸ ಬಂದಲ್ಲಿ ಖುರ್ಚಿಗಳನ್ನು ಅಂಗವಿಕಲರ ಮನೆಗಳಿಗೆ ಕಳುಹಿಸಿಕೊಡುತ್ತಾರೆ. ತಮ್ಮ ಬಳಿ ಕಾರ್ಯ ನಿರ್ವಹಿಸುವವರಿಗೆ  ತಿಂಗಳಿಗೆ ₹ 2 ಸಾವಿರದಿಂದ ₹ 3 ಸಾವಿರ ದೊರೆಯುತ್ತದೆ. ನನಗೆ ₹ 500 ಉಳಿಯು
ತ್ತದೆ’ ಎಂದು ಮಲ್ಲೇಶಪ್ಪ ಮಾಹಿತಿ ನೀಡುತ್ತಾರೆ.

‘ಸರ್ಕಾರಿ ಕಚೇರಿ ಹಾಗೂ ಶಾಲಾ, ಕಾಲೇಜುಗಳಲ್ಲಿ ಹೆಚ್ಚಾಗಿ ಎಸ್ ಮಾದರಿಯ ವೈರ್ ಕುರ್ಚಿಗಳನ್ನು ಕಾಣಬಹುದು. ಫ್ರೇಮ್‌ಗಳಿಗೆ ವೈರ್ ಹಾಕಿಕೊಡಲು ಕುರ್ಚಿ ಕಳುಹಿಸಿಕೊಡುತ್ತಾರೆ. ಈಗ ಮಾರುಕಟ್ಟೆಯಲ್ಲಿ ಫೈಬರ್‌, ಪ್ಲಾಸ್ಟಿಕ್‌ ಕುರ್ಚಿಗಳು ಹೆಚ್ಚು ಬಳಕೆಯಲ್ಲಿವೆ. ಇವುಗಳಿಗಾದರೆ, ಹೆಚ್ಚಿನ ಸ್ಥಳದ ಅವಶ್ಯಕತೆ ಬೇಕಿಲ್ಲ. ಆದರೆ, ಮರದ ಮತ್ತು ಎಸ್ ಮಾದರಿ ಕುರ್ಚಿಗಳಿಗೆ ಹೆಚ್ಚು ಸ್ಥಳ ಅವಶ್ಯವಿರುವ ಕಾರಣ ಅವುಗಳನ್ನು ಖರೀದಿಸುವವರ ಸಂಖ್ಯೆ  ಕಡಿಮೆಯಾಗಿದೆ. ಹಾಗಾಗಿ ಕೆಲಸವೂ ಕಡಿಮೆ ಇದೆ’ ಎನ್ನುತ್ತಾರೆ ಅವರು.

ತಮ್ಮ ಜೀವನೋಪಾಯಕ್ಕಾಗಿ ಚಿಕ್ಕ ಹಿಟ್ಟಿನ ಗಿರಣಿ ಯಂತ್ರ ತಂದಿರಿಸಿದ್ದಾರೆ. ಅಂಗವಿಕಲರ ಜೀವನಕ್ಕೆ ಸಹಾಯವಾಗಲು ಮೇಣದ ಬತ್ತಿ, ಸೀಮೆಸುಣ್ಣ, ಕರ್ಪೂರ ತಯಾರಿಸುವ ತರಬೇತಿ ಕೇಂದ್ರ ಸ್ಥಾಪಿಸುವ ಚಿಂತನೆ ಮಲ್ಲೇಶಪ್ಪ ಅವರದ್ದು. ‘ಮಲ್ಲೇಶಪ್ಪ ಅವರು ಅಂಧರಾಗಿದ್ದರೂ ಅವರಂತೆ ಇರುವ ಅಂಗವಿಕಲರ ಜೀವನಕ್ಕೆ ಆಧಾರವಾಗಿದ್ದಾರೆ. ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅವರಿಗೆ ಕಷ್ಟವಿದ್ದರೂ ಬೇರೆಯವರಿಗೆ ನೆರವಾಗುತ್ತಿದ್ದಾರೆ’ ಎನ್ನುತ್ತಾರೆ ಅವರ ಸ್ನೇಹಿತ ಸುಂದರ್‌.

ಮಲ್ಲೇಶಪ್ಪ ಅವರಿಗೆ ನೆರವಾಗ ಬಯಸುವವರು ಮೊಬೈಲ್: 98456 50498 ಸಂಪರ್ಕಿಸಬಹುದು.
– ಅರ್ಚನಾ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT