ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗದ ಕೊರತೆ: ಕಾಣದ ವಸ್ತುಸಂಗ್ರಹಾಲಯ

Last Updated 13 ಮಾರ್ಚ್ 2017, 5:42 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ನೀವು ಮೊದಲೇ ಹೇಳೋದಲ್ಲವಾ, ಒಂದ್ಸಾರಿಯಾದರೂ ಆ ಜಾಗ ನೋಡಿ ಬರ್ತಿದ್ವಿ, ನಮ್ಮ ಮಕ್ಕಳಿಗಾದರೂ ತೋರಿಸುತ್ತಿದ್ವಿ’
ಕೋಟೆ ವೀಕ್ಷಿಸಿ ಹಂಪಿ ಕಡೆಗೆ ಮಕ್ಕಳನ್ನು ಕರೆದುಕೊಂಡು ಪ್ರವಾಸ ಹೊರಟಿದ್ದ ಉತ್ತರ ಕರ್ನಾಟಕದ ಶಿಕ್ಷಕರೊಬ್ಬರು, ಏನೋ ಮಿಸ್ ಮಾಡಿ ಕೊಂಡವರಂತೆ ಮಾತ ನಾಡುತ್ತಿದ್ದರು. ಆ ಶಿಕ್ಷಕರು  ಮಿಸ್‌ ಮಾಡಿದ್ದು ಬೇರೆ ಏನೂ ಅಲ್ಲ. ಅದು ಕೋಟೆನಾಡಿನ ಇತಿಹಾಸ ಪರಿಚಯಿಸುವ ‘ಪುರಾತತ್ವ ವಸ್ತುಸಂಗ್ರಹಾಲಯವನ್ನು !

ಚಿತ್ರದುರ್ಗಕ್ಕೆ ಬಂದು ಹೋಗುವ ಅನೇಕ ಪ್ರವಾಸಿಗರಿಗೆ ನಗರದ ರಂಗಯ್ಯನಬಾಗಿಲಿನ ಅಕ್ಕಪಕ್ಕದಲ್ಲಿರುವ  ಪುರಾತತ್ವ ಇಲಾಖೆಯ ಈ ವಸ್ತು ಸಂಗ್ರಹಾಲಯ ವೀಕ್ಷಣೆ ತಪ್ಪಿ ಹೋಗುತ್ತದೆ. ಇದಕ್ಕೆ ಕಾರಣ  ಪ್ರಚಾರದ ಕೊರತೆ; ದಾರಿ ತೋರುವ ಮಾರ್ಗಸೂಚಿ ಇಲ್ಲದ್ದು ಹಾಗೂ ಪುಟ್ಟ ಕೋಣೆಯಲ್ಲಿ ವಸ್ತು ಗಳನ್ನು ಜೋಡಿಸಿರುವುದು.

ಈ ವಸ್ತುಸಂಗ್ರಾಲಯವನ್ನು 1950ರಲ್ಲಿ  ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸ್ ಸ್ಥಾಪಿಸಿ­ದ್ದಾರೆ. ನಂತರ ಅವರ ಪುತ್ರ ಪಾಂಡುರಂಗ ಜೋಯಿಸ್ ನಿರ್ವಹಣೆಗೆ ಕೈಜೋಡಿಸಿದ್ದರು. ಅವರ ನಂತರದಲ್ಲಿ ವಸ್ತುಸಂಗ್ರಹಾಲಯ ಸ್ವಲ್ಪ ಕಳೆಗುಂದಿತು. ನಂತರ ಚಂದ್ರವಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆದ ಉತ್ಖನನದಿಂದ ಲಭ್ಯವಾದ ವಸ್ತುಗಳ ಸಂಖ್ಯೆ ಹೆಚ್ಚಿದ ಮೇಲೆ, ವಸ್ತುಸಂಗ್ರಹಾಲಯದ ಕೊಠಡಿ ಸಣ್ಣದಾಯಿತು. ಪರಿಣಾಮ   ಕಲ್ಲಿನ ಪ್ರತಿಮೆಗಳು ಬೀದಿ ಬದಿ ಪ್ರದರ್ಶನಕ್ಕಿಡುವ ಅನಿವಾರ್ಯತೆ ಒದಗಿ ಬಂದಿದೆ. ಇನ್ನು ಕೆಲವು ವಸ್ತುಗಳನ್ನು ಕಪಾಟುಗಳಲ್ಲಿ ಜೋಡಿಸುವಂತಹ ಪರಿಸ್ಥಿತಿ ಇದೆ. 

ಸಂಗ್ರಹಾಲಯದಲ್ಲಿ ಏನೇನಿದೆ:  ರಂಗಯ್ಯನಬಾಗಿಲ ಎರಡು ದ್ವಾರಕ್ಕೆ ಹೊಂದಿಕೊಂಡಿರುವ ಪುಟ್ಟ ಕೋಣೆಗಳಲ್ಲಿ ಇಪ್ಪತ್ತೊಂದು ವಿಧದ ಐತಿಹಾಸಿಕ ವಸ್ತುಗಳಿವೆ. ಶಾತವಾಹನರ ಕಾಲದಿಂದ ಪಾಳೇ ಗಾರರ ಕಾಲದವರೆಗೆ, ಬ್ರಿಟಿಷರ ಆಳ್ವಿಕೆ ಕಾಲದಿಂದ ರಾಜಮಹಾರಾಜರ ಆಡಳಿತದವರೆಗಿನ ಇತಿಹಾಸ ಪರಿಚಯಿಸುವ ವಸ್ತುಗಳಿವೆ. ಪಾಳೇ  ಗಾರರೋ ಅಥವಾ ಅದಕ್ಕಿಂತ ಹಿಂದಿನ ನಾಯಕರು ಬಳಸುತ್ತಿದ್ದರು ಎನ್ನಲಾದ ಉಕ್ಕಿನ ಕವಚ, ಫಿರಂಗಿ ಗುಂಡುಗಳು, ವಿಜಯನಗರ ಕಾಲದ ತಾಮ್ರ ನಾಣ್ಯಗಳು, ಗದೆ, ಕೊಡಲು, ಖಡ್ಗಗಳು, ಸಿಡಿಗುಂಡು (ಕಬ್ಬಿಣ), ಶಿಲಾ ಶಾಸನಗಳಿವೆ
ಮಾಸ್ತಿಕಲ್ಲು, ವೀರಗಲ್ಲು, ತಾಮ್ರ ಶಾಸನ, ಫಿರಂಗಿಗೆ ಬಳಸತ್ತಿದ್ದ ಕಲ್ಲಿನ ಗುಂಡುಗಳು, ಚಂದ್ರವಳ್ಳಿಯ ಉತ್ಖನನದಲ್ಲಿ ದೊರೆತ ಸೀಸ  ನಾಣ್ಯಗಳು, ಮೈಸೂರು ಒಡೆಯರ ಕಾಲ, ಈಸ್ಟ್‌ ಇಂಡಿಯಾ ಕಂಪೆನಿಯ ನಾಟ್ಯಗಳು, ಟಿಪ್ಪು ಉಲ್ತಾನ್ , ವಿಕ್ಟೋರಿಯಾ ಜಾರ್ಜ್‌ 45ರ ಕಾಲದ ನಾಣ್ಯಗಳು, ಶಿಲಾಯುಧಗಳು ಮ್ಯೂಸಿಯಂನಲ್ಲಿವೆ.

ತೆಲುಗು ಭಾಷೆಯ ರಾಮಾಯಣ, ಮಹಾಭಾರತ, ವಚನಭಾರತ, ಸಂಸ್ಕೃತ ಮಂತ್ರಗಳನ್ನೊಳಗೊಂಡ ತಾಳೆಗರಿ ಗಳಿವೆ. ದೇವನಾಗರಿ ಲಿಪಿಯಲ್ಲಿರುವ ಆಯುರ್ವೇದ ಮಾಹಿತಿಯ ಗ್ರಂಥಗಳಿವೆ. ಸಪ್ತಮಾತೃಕೆಯರ ಪಟ್ಟೆಗಳು, ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕರ ಛಾಯಾಚಿತ್ರಗಳು,  ಚಿತ್ರದುರ್ಗ ಪಾಳೇಯಗಾರರ ವಂಶಾವಳಿ, ಕೋಟೆ ಮತ್ತು ಪ್ರೇಕ್ಷಣೀಯ ಸ್ಥಳಗಳ ಮಾರ್ಗದರ್ಶನ ನೀಡುವ ನಕ್ಷೆಗಳಿವೆ ಎಂದು ರಾಜ್ಯ ಪುರಾತತ್ವ ಇಲಾಖೆ ಜಿಲ್ಲಾ ಉಪ ನಿರ್ದೇಶಕ  (ಉಸ್ತುವಾರಿ) ಪ್ರಹ್ಲಾದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

650 ಪುಸ್ತಕಗಳ ಗ್ರಂಥಾಲಯ : ವಸ್ತುಸಂಗ್ರಹಾಲಯದಲ್ಲಿ 650ಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯವಿದೆ. ಇತಿಹಾಸ ಸಂಶೋಧಕ ಬಿ.ಎಲ್.ರೈಸ್ ಕಾಲದ ಎಪಿಗ್ರಾಫಿ ಪುಸ್ತಕಗಳು, ಜನಪದ ಕೃತಿಗಳು, ರಾಜ್ಯ ಪುರಾತತ್ವ ಇಲಾಖೆಯ ಪುಸ್ತಕಗಳು, ವಿಜಯನಗರದ ಅರಸರು, ಕದಂಬರು, ಚಾಲುಕ್ಯರ ಕಾಲದ ಹಸ್ತಪ್ರತಿಗಳು ಸೇರಿದಂತೆ ಚಿತ್ರದುರ್ಗ ದಲ್ಲಿ ಆಳ್ವಿಕೆ ನಡೆಸಿದ ಪಾಳೇಗಾರರ ಕುರಿತು ಮಾಹಿತಿ ನೀಡುವ ಕೃತಿಗಳಿವೆ. ದುರ್ಗದ ಇತಿಹಾಸ ಅಧ್ಯಯನ ಮಾಡುವವರ ಪ್ರಬಂಧಗಳು, ಸಂಶೋಧನಾ ಲೇಖನಗಳ ನ್ನೊಳಗೊಂಡ ಪುಸ್ತಕಗಳಿವೆ.

‘ಸಾಕಷ್ಟು ವರ್ಣಚಿತ್ರಗಳಿವೆ. ಕಪ್ಪು ಬಿಳುಪಿನ ಛಾಯಾಚಿತ್ರಗಳಿವೆ. ಎಲ್ಲವನ್ನೂ ಪ್ರದರ್ಶಿಸಲು ಜಾಗವಿಲ್ಲ. ಎರಡೂ ಕೊಠಡಿಗಳು ಚಿಕ್ಕವಾಗಿದ್ದು, ಇರುವ ವಸ್ತುಗಳನ್ನು ಸಮರ್ಪಕವಾಗಿ ಜೋಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲವನ್ನೂ ಕಪಾಟಿನಲ್ಲಿಟ್ಟಿದ್ದೇವೆ’ ಎನ್ನುತ್ತಾರೆ ಪ್ರಹ್ಲಾದ್. 

ಕೋಟೆ ವೀಕ್ಷಿಸಿ ಬರುವವರಿಗೆ, ಅದರ ಇತಿಹಾಸವೂ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯಕ್ಕೆ ವಿಶಾಲ ಜಾಗಬೇಕು. ಇದಕ್ಕಾಗಿ ಪುರಾತತ್ವ ಇಲಾಖೆ  ಫಿಲ್ಟರ್‌ಹೌಸ್‌ ಬಿಟ್ಟುಕೊಡಲು ಕೇಳಿತ್ತು. ಆದರೆ ಅದಕ್ಕೆ ಕಾನೂನಿನ ತೊಡಕು ಎದುರಾಗಿದೆ.

‘ಫಿಲ್ಟರ್ ಹೌಸ್‌ ಜಾಗ ಕೊಟ್ಟರೆ ಉತ್ತಮ ಹಾಗೂ ಸುಸಜ್ಜಿತ ಮ್ಯೂಸಿಯಂ ಮಾಡುತ್ತೇವೆ. ವಿಶಾಲವಾದ ಜಾಗ ನೀಡಿದರೆ ಅದರಲ್ಲಿ ಅಂಗವಿಕಲರಿಗೆ, ಅಂಧರಿಗೆ ಚಿತ್ರದುರ್ಗ ತೋರಿಸುವಂತಹ ದೃಶ್ಯ ಹಾಗೂ ಶ್ರವ್ಯ ಮಾಧ್ಯಮ ವನ್ನೊಳಗೊಂಡ ಮ್ಯೂಸಿಯಂ ಮಾಡುತ್ತೇವೆ’ ಎನ್ನುತ್ತಾರೆ ಪ್ರಹ್ಲಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT