ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ರಜೆ, ಊರೇ ಖಾಲಿ !

ನಗರ ಸಂಚಾರ
Last Updated 13 ಮಾರ್ಚ್ 2017, 5:50 IST
ಅಕ್ಷರ ಗಾತ್ರ

ಬಾಗಲಕೋಟೆ: ನೆತ್ತಿ ಸುಡುವ ಬಿಸಿಲು, ಮುಚ್ಚಿದ ಅಂಗಡಿ ಸಾಲು, ಬಿಕೊ ಎನ್ನುವ ಮಾರುಕಟ್ಟೆ, ಆಗೊಮ್ಮೆ,ಈಗೊಮ್ಮೆ ಸಾಗುವ ವಾಹನಗಳ ಸದ್ದಿಗೆ ಜೀವ ಪಡೆಯುವ ರಸ್ತೆ, ದೂರದಲ್ಲೆಲ್ಲೊ ತಮಟೆಯ ಸದ್ದು. ಇದು ಕಳೆದೆರಡು ದಿನಗಳಿಂದ  ನಗರದ ಚಿತ್ರಣ..

ಹೋಳಿ ಹಬ್ಬದ ಸಂಭ್ರಮ ಗರಿಗೆದಿದ ಬೆನ್ನಲ್ಲೇ ನಗರದಲ್ಲಿ ಈಗ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದೆ. ಸಾಲು ರಜೆಗಳನ್ನು ‘ಪ್ರವಾಸ’ದಲ್ಲಿ ಕಳೆಯುವ ಉಮೇದಿನಲ್ಲಿ ಸ್ಥಳೀಯರು ಬಹು ಸಂಖ್ಯೆಯಲ್ಲಿ ಊರು ಬಿಟ್ಟಿದ್ದಾರೆ. ವರ್ತಕರು ಹಬ್ಬದ ಗೌಜಿನಲ್ಲಿರುವ ಕಾರಣ ಮಾರುಕಟ್ಟೆಯೂ ಸ್ತಬ್ಧವಾಗಿದೆ. ಇದರಿಂದ ಇಡೀ ಊರು ಬಿಕೊ ಎನ್ನುತ್ತಿದೆ.

ಬಣ್ಣದಲ್ಲಿ ಮಿಂದೇಳುವ ಸಡಗರದಲ್ಲಿರುವವರು ಮಾತ್ರ ಹಲಿಗೆ ಸದ್ದಿಗೆ ಕೈ ಜೋಡಿಸಿದ್ದಾರೆ. ಆಗಾಗ ಕಿವಿಗೆ ಬೀಳುವ ಈ ಸದ್ದು ಮಾತ್ರ ಊರಿನ ಜೀವಂತಿಕೆ ಬಿಂಬಿಸುತ್ತಿದೆ.

ಸಾಲು ಸಾಲು ರಜೆ: ‘ಹೋಳಿ ಹಬ್ಬದ ಕಾರಣ ನಗರದ ಬಹುತೇಕ ಶಾಲಾ–ಕಾಲೇಜುಗಳಿಗೆ ಸೋಮವಾರದಿಂದ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಜೊತೆಗೆ ಭಾನುವಾರದ ರಜೆ ಸೇರ್ಪಡೆಯಾಗಿದೆ. ಇನ್ನೊಂದೆಡೆ ಸರ್ಕಾರಿ ನೌಕರರಿಗೆ ಎರಡನೇ ಶನಿವಾರದ ರಜೆ ಸಿಕ್ಕಿದೆ. ಹೀಗಾಗಿ 4ರಿಂದ 5 ದಿನಗಳ ಹಬ್ಬದ ಸೂಟಿಗೆ ಬಹುತೇಕರು ಗೋವಾ, ಉತ್ತರ ಭಾರತದ ಯಾತ್ರಾ ಸ್ಥಳಗಳು, ಮುಂಬೈ, ಕೊಲ್ಹಾಪುರ, ಮೈಸೂರು ಭಾಗಕ್ಕೆ ಪ್ರವಾಸ ತೆರಳಿದ್ದಾರೆ. ಇನ್ನೂ ಕೆಲವರು ನೆಂಟರಿಷ್ಟರ ಊರುಗಳಿಗೆ ಹೋಗಿದ್ದು ಊರಿನಲ್ಲಿ ಜನರೇ ಇಲ್ಲ ಎಂಬಂತಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ’ ಎಂದು ನವನಗರದ ಕೊರಿಯರ್ ಸಂಸ್ಥೆಯ ಉದ್ಯೋಗಿ ವೀರಣ್ಣ ಬಿರಾದಾರ ಹೇಳುತ್ತಾರೆ.

ಮಾರುಕಟ್ಟೆಯೂ ಸ್ತಬ್ಧ: ಸದಾ ಜನರಿಂದ ಗಿಜಿಗುಡುತ್ತಿದ್ದ ಇಲ್ಲಿನ ವಲ್ಲಭಭಾಯಿ ವೃತ್ತದ ಮಾರುಕಟ್ಟೆ, ಬಸವೇಶ್ವರ ವೃತ್ತ, ವಿದ್ಯಾಗಿರಿಯ ಕಾಲೇಜು ವೃತ್ತ, ನವನಗರ ಬಸ್‌ ನಿಲ್ದಾಣ ಪ್ರದೇಶದಲ್ಲಿ ಈಗ ಜನರ ಓಡಾಟ ವಿರಳವಾಗಿದೆ. ಅಂಗಡಿ–ಮುಂಗಟ್ಟು ಬಾಗಿಲು ಹಾಕಿವೆ.

ಪ್ರವಾಸಿ ಸಂಸ್ಥೆಗಳಿಗೆ ಸುಗ್ಗಿ: ‘ಹೊಸ ವರ್ಷ, ಶಬರಿ ಮಲೆ ಯಾತ್ರೆ ಅವಧಿ ಬಿಟ್ಟರೆ ಬಾಗಲಕೋಟೆಯ ಟ್ರಾವೆಲ್ಸ್ ಸಂಸ್ಥೆಗಳಿಗೆ ಪ್ರತಿ ವರ್ಷ ಹೋಳಿ ಹುಣ್ಣಿಮೆ ಸಂದರ್ಭವೇ ಸುಗ್ಗಿಯ ಕಾಲ’ ಎನ್ನುತ್ತಾರೆ ವಿದ್ಯಾಗಿರಿಯ ಟ್ರಾವೆಲ್ಸ್ ಸಂಸ್ಥೆಯೊಂದರ ಪ್ರತಿನಿಧಿ ನಂದೀಶ ಹೊಸಮಠ.

ಸರ್ಕಾರಿ ನೌಕರರು ಮಾತ್ರವಲ್ಲ ವರ್ತಕರು, ವಿದ್ಯಾರ್ಥಿಗಳು, ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಅವಧಿಯಲ್ಲಿ ಪ್ರವಾಸಕ್ಕೆ ತೆರಳುತ್ತಾರೆ.

ಅವರವರ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಮೋಜು–ಮಸ್ತಿ ಮಾಡುತ್ತಾರೆ. ಚಾರ್‌ಧಾಮ ಯಾತ್ರೆ ಸೇರಿದಂತೆ ಉತ್ತರ ಭಾರತದ ಧಾರ್ಮಿಕ ಸ್ಥಳಗಳಿಗೆ ವಿಮಾನ ಹಾಗೂ ರೈಲಿನಲ್ಲಿ ಪ್ಯಾಕೇಜ್‌ ಪ್ರವಾಸಕ್ಕೂ ಮುಂಗಡ ಬುಕ್ಕಿಂಗ್‌ಗೆ ಆಗಿದೆ. ಆದರೆ ಹೆಚ್ಚಿನವರು ಗೋವಾಕ್ಕೆ ತೆರಳುತ್ತಾರೆ ಎಂದರು.

‘ಶಾಲಾ–ಕಾಲೇಜುಗಳಿಗೆ ರಜೆ ಸಿಗುವ ಕಾರಣ ಹಾಸ್ಟೆಲ್ ವಿದ್ಯಾರ್ಥಿಗಳೂ ಊರಿಗೆ ತೆರಳುತ್ತಾರೆ. ಹಾಗಾಗಿ ಇಲ್ಲಿನ ಕಾಲೇಜು ರಸ್ತೆಯಲ್ಲಿ ನಿತ್ಯ ಸಂಜೆ ಸೇರುವ ಜನ–ಜಂಗುಳಿ ಈ ಅವಧಿಯಲ್ಲಿ ಕಾಣುವುದಿಲ್ಲ’ ಎಂಬುದು ಶಿಕ್ಷಕ ಸಮೀರ್ ನಾಲಬಂದ್ ಅವರ ಅಭಿಮತ.

**
ಊರಿನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಈ ಬಾರಿ ತಡವಾಯಿತು..!

‘ಈ ಬಾರಿ ಹೋಳಿ ಆಚರಣೆಗೆ ಬರುವಂತೆ ಮನೆ ಮನೆಗೆ ತೆರಳಿ ಬಣ್ಣ ಕೊಟ್ಟು ಆಹ್ವಾನಿಸಿ ಹಬ್ಬದ ವೇಳೆ ಪ್ರವಾಸಕ್ಕೆ ತೆರಳಬೇಡಿ ಎಂದು ಮನವಿ ಮಾಡಲು ನಿರ್ಧರಿಸಿದ್ದೆವು. ಆದರೆ ಅದು ತಡವಾಗಿತ್ತು. ಕೆಲವರು ತಿಂಗಳು ಮೊದಲೇ ಪ್ರವಾಸಿ ವಾಹನ ಕಾಯ್ದಿರಿಸಿದ್ದ ಪರಿಣಾಮ ಊರು ಬಿಟ್ಟು ಹೋಗದಂತೆ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಬಾಗಲಕೋಟೆ ಹೋಳಿ ಉತ್ಸವ ಆಚರಣಾ ಸಮಿತಿ ಸದಸ್ಯ ಜಯಂತ ಕುರಂದವಾಡ.

‘ಊರಿನಲ್ಲಿ ಜನರಿದ್ದರೆ ಹಬ್ಬ ಕಳೆಗಟ್ಟುತ್ತದೆ. ಹಾಗಾಗಿ ಮುಂದಿನ ವರ್ಷ ಎರಡು ತಿಂಗಳು ಮೊದಲೇ ಆ ಪ್ರಕ್ರಿಯೆ ಆರಂಭಿಸಲಾಗುವುದು. ಅಷ್ಟೊತ್ತಿಗೆ ಸಮಿತಿಯ ನೋಂದಣಿ ಆಗಿರುತ್ತದೆ’ ಎಂದು ತಿಳಿಸಿದರು.

**

ಸಂಭ್ರಮ ಮಾಯ

‘ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಾಗಲಕೋಟೆ ಹಳೆಯ ನಗರ ಮುಳುಗಡೆಯಾಗುವುದಕ್ಕೆ ಮುನ್ನ ಹೋಳಿ ಕಳೆಗಟ್ಟುತ್ತಿತ್ತು. 5 ದಿನಗಳ ಊರಿನ ಹಬ್ಬದಂತೆ ಎಲ್ಲರೂ ಸಂಭ್ರಮಿಸುತ್ತಿದ್ದರು. ಮುಳುಗಡೆ  ನಂತರ ಊರು ಹರಿದುಹಂಚಿಹೋಗಿದೆ. ಇದರಿಂದ  ಸೊಗಡು ಕಳೆದುಕೊಂಡಿದೆ.  ಹಿಂದಿನ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದವು  ಎಂದು ನಂದೀಶ ಹೊಸಮಠ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT