ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಸ್ಮಶಾನ ನಿರ್ಮಾಣಕ್ಕೆ ಯೋಜನೆ

₹1 ಕೋಟಿ ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಲು ಯೋಜನೆ
Last Updated 13 ಮಾರ್ಚ್ 2017, 5:52 IST
ಅಕ್ಷರ ಗಾತ್ರ

ಬೀದರ್: ನಗರಸಭೆ ಹೈದರಾಬಾದ್‌ ಕರ್ನಾಟಕದಲ್ಲೇ ಮೊದಲ ಬಾರಿಗೆ ನಗರದಲ್ಲಿ ಮಾದರಿ ಸ್ಮಶಾನ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದೆ. ಜೀವನದ ಅಂತ್ಯ ಕಂಡ ವ್ಯಕ್ತಿಗೆ ಕೊನೆಯ ಕ್ಷಣ ದಲ್ಲಾದರೂ ಗೌರವದಿಂದ ಹಾಗೂ ನೆಮ್ಮದಿಯಿಂದ ವಿದಾಯ ಹೇಳುವಂತಾಗಲು ಸ್ಮಶಾನಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

ಸ್ಮಶಾನಕ್ಕೆ ಬೇಲಿ ಹಾಕಿ ಉದ್ಯಾನ ನಿರ್ಮಾಣ ಮಾಡಲಿದೆ. ಸ್ಮಶಾನದ ಮಧ್ಯದಲ್ಲಿ 40X60 ಅಡಿಯ ಎರಡು ಕಟ್ಟೆಗಳನ್ನು ಕಟ್ಟಲಿದೆ. ಅದರ ಮೇಲೆ ಶವ ದಹಿಸಲು ಬಾಕ್ಸ್‌ ಮಾದರಿಯ ಕಬ್ಬಿಣದ ಪಟ್ಟಿಗಳನ್ನು ಜೋಡಣೆ ಮಾಡಲಿದೆ. ಇದರೊಳಗೆ  ಕಟ್ಟಿಗೆಗಳನ್ನು ಜೋಡಿಸಿಟ್ಟು ಅದರ ಮೇಲೆ ಶವ ಇಟ್ಟು ಸುಡುವ ವ್ಯವಸ್ಥೆ ಮಾಡಲಿದೆ. ಸ್ಮಶಾನದಲ್ಲೇ ಒಂದು ಶೆಡ್‌ ನಿರ್ಮಿಸಿ ಅಲ್ಲಿ ಕಟ್ಟಿಗೆ, ಕುಳ್ಳು, ಉಪ್ಪು ಹಾಗೂ ಸೀಮೆ ಎಣ್ಣೆ ಸಂಗ್ರಹಿಸಿ ಇಡಲು ನಿರ್ಧರಿಸಿದೆ.
 
ಸ್ಮಶಾನದಲ್ಲೇ ಚಿಕ್ಕದೊಂದು ಕಚೇರಿ ನಿರ್ಮಿಸಿ ಅಲ್ಲಿ ದೂರವಾಣಿ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ ನೋಂದಣಿ ಪುಸ್ತಕ ಇಟ್ಟು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾದ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ ದಾಖಲಿಸಿಕೊಳ್ಳಲು ಯೋಜನೆ ರೂಪಿಸಿದೆ. ಗುತ್ತಿಗೆ ಆಧಾರದ ಮೇಲೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಇದರ ನಿರ್ವಹಣೆ ಮಾಡಲಿರುವುದರಿಂದ ಸಂಬಂಧಿಗಳಿಗೂ ಮರಣ ದಾಖಲೆಗಳನ್ನು ಪಡೆಯಲು ಅನು ಕೂಲವಾಗಲಿದೆ.

ನಗರದಲ್ಲಿ ₹ 1 ಕೋಟಿ ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸುವ ಯೋಜನೆಯೂ ಇದೆ. ಆದರೆ ನಗರ ಪ್ರದೇಶದಲ್ಲಿ ವಾಸವಾಗಿರುವ ಬಹುತೇಕ ಸಮುದಾಯಗಳಲ್ಲಿ ಶವವನ್ನು ಹೂಳುವ ಪದ್ಧತಿ ಇದೆ. ವಿದ್ಯುತ್‌ ಚಿತಾಗಾರದ ಬಗೆಗೆ ಸಾರ್ವಜ ನಿಕರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪ್ರಾಯೋಗಿಕ ಹಂತದಲ್ಲಿ ಪ್ರಮುಖ ನಾಲ್ಕು ಸ್ಮಶಾನಗಳನ್ನು ಅಭಿವೃದ್ಧಿ ಪಡಿಸ ಲಾಗುವುದು. ಯಶಸ್ವಿಯಾದರೆ ಉಳಿದ ಸ್ಮಶಾನಗಳನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎನ್ನುತ್ತಾರೆ ನಗರಸಭೆಯ ಆಯುಕ್ತ ನರಸಿಂಹ ಮೂರ್ತಿ.

ಗುಂಪಾ ರಸ್ತೆಯ ಸ್ಮಶಾನಕ್ಕೆ ಆದ್ಯತೆ
ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸಮು ದಾಯಗಳಿಗೆ ಸೇರಿದ ಒಟ್ಟು 68 ಸ್ಮಶಾನಗಳಿವೆ.  ಈ ಪೈಕಿ 34 ಮುಸ್ಲಿಂರ,  26 ಹಿಂದೂಗಳ, 5 ಕ್ರೈಸ್ತರ ಹಾಗೂ ಮೂರು ಇತರೆ ಸಮುದಾಯಗಳ ಸ್ಮಶಾ ನಗಳಿವೆ. ಬಿವಿಬಿ ಕಾಲೇಜಿನ ಮುಂಭಾಗದಲ್ಲಿಯೇ ಅತಿಹೆಚ್ಚು ಶವಸಂಸ್ಕಾರ ನಡೆಯುತ್ತವೆ. ಮೊದಲ ಹಂತದಲ್ಲಿ ಗುಮ್ಮೆಕಾಲೊನಿಯ ಸ್ಮಶಾನ ಹಾಗೂ ಎಲ್ಲ ಸಮುದಾಯದವರೂ ಶವಗಳ ಅಂತ್ಯ ಸಂಸ್ಕಾರ ಮಾಡುವ ಸ್ಮಶಾನಗಳನ್ನು  ಅಭಿವೃದ್ಧಿ ಪಡಿಸಲು  ಉದ್ದೇಶಿಸಲಾಗಿದೆ.

ಸಹಾಯವಾಣಿಗೆ ಕರೆ ಮಾಡಿ
ಶವಸಾಗಣೆ ವಾಹನ ಬಂದರೆ ಅನು ಕೂಲವಾಗಲಿದೆ. ಸಾರ್ವಜನಿಕರು ನಗ ರಸಭೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ವಾಹನವು ನಿಗದಿತ ಸಮಯದಲ್ಲಿ ಮೃತಪಟ್ಟ ವ್ಯಕ್ತಿಯ ಮನೆಗೆ ಬಂದು ಶವ ಹೊತ್ತುಕೊಂಡು ಹೋಗಲಿದೆ. ಒಂದೇ ದಿನ 10 ಜನ ಮೃತಪಟ್ಟರೂ ಅವರಿಗೆ ಒಂದೊಂದು ಸಮಯ ನಿಗದಿಪಡಿಸಿ ಶವಸಾಗಿಸಲು ಅನುಕೂಲ ಮಾಡಿ ಕೊಡಲಾಗುವುದು ಎಂದು ನರಸಿಂಹ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT