ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹುಣ್ಣಿಮೆ: ಯಲ್ಲಮ್ಮ ದರ್ಶನಕ್ಕೆ ಭಕ್ತರ ದಂಡು

ನಾಗಾವಿ ಕ್ಷೇತ್ರದಲ್ಲಿ ಸಂಭ್ರಮದ ಆಚರಣೆ; ಕಾಯಿ, ಕರ್ಪೂರ ಅರ್ಪಣೆ
Last Updated 13 ಮಾರ್ಚ್ 2017, 6:03 IST
ಅಕ್ಷರ ಗಾತ್ರ

ಚಿತ್ತಾಪುರ: ಹೋಳಿ ಹುಣ್ಣಿಮೆ ನಿಮಿತ್ತ ಭಾನುವಾರ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರ ನಾಗಾವಿ ಯಲ್ಲಮ್ಮನ ದರ್ಶನಕ್ಕೆಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಭಕ್ತಿ ಸಮರ್ಪಿಸಿದರು.

ಹೋಳಿ ಹುಣ್ಣಿಮೆಯ ದಿವಸ ಎಲ್ಲೆಡೆ ಯಲ್ಲಮ್ಮ ದೇವಿಯ ಪೂಜೆ, ಪ್ರಾರ್ಥನೆ, ಆರಾಧನೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ.  ಐಹುಣ್ಣಿಮೆಗೆಂದು ಸಿದ್ಧಪಡಿಸಿದ ನೈವೇದ್ಯ, ಕಾಯಿ,ಕರ್ಪೂರ ದೇವಿಗೆ ಅರ್ಪಸಿ ಭಕ್ತರು ಕೃತಾರ್ಥ ಭಾವನೆಯಿಂದ ಸಂತೃಪ್ತರಾಗುತ್ತಾರೆ.

ಪಟ್ಟಣದ ಜನತೆ ದೇವಿಯ ದರ್ಶನಕ್ಕೆಂದು ತಂಡೋಪ ತಂಡದಲ್ಲಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬೆಳಗ್ಗೆಯಿಂದ ಸಂಜೆವರೆಗೂ ಭಕ್ತರ ದಂಡು ಸಾಲಾಗಿ ದೇವಸ್ಥಾನದತ್ತ ಹೋಗುವುದು ದರ್ಶನ ಮಾಡಿ ಮರಳುವುದು ಕಂಡು ಬಂತು. ತಾಲ್ಲೂಕಿನ ಗ್ರಾಮಗಳಲ್ಲಿ ಬೆಳಗ್ಗೆಯಿಂದ ಮಹಿಳೆಯರು, ಮಕ್ಕಳು ಕೈಯಲ್ಲಿ ನೈವೇದ್ಯ, ಕಾಯಿಕರ್ಪೂರ ಹಿಡಿದುಕೊಂಡು ಯಲ್ಲಮ್ಮನ ಗುಡಿಯತ್ತ ಹೆಜ್ಜೆ ಹಾಕುವುದು ಸಾಮಾನ್ಯವಾಗಿತ್ತು.

ಗ್ರಾಮಗಳಲ್ಲಿ ಗಂಡ ಸತ್ತ ನಂತರ ಆಯಾ ಮನೆತನದ ಸಂಪ್ರದಾಯದಂತೆ ವಿಧವೆಯರು ಯಲ್ಲಮ್ಮನ ಪಾದ (ಪಾದ ರೂಪದ ಬಂಗಾರ ಪದಕ) ಧರಿಸುವರು.ಹೀಗೆ ಪಾದ ಧರಿಸಿರುವ ಮಹಿಳೆಯರು ಹೋಳಿ ಹುಣ್ಣಿಮೆ ದಿನ ಉಪವಾಸ ವ್ರತ ಕೈಗೊಂಡು ಮನೆಮನೆಗೆ ತೆರಳಿ ಯಲ್ಲಮ್ಮನ ಹೆಸರಲ್ಲಿ ಭೀಕ್ಷೆ (ದಾನ) ಬೇಡುತ್ತಾರೆ.  ಜನರು ಜೋಳ, ಅಕ್ಕಿ, ಹಣ ನೀಡಿ ಕಳಿಸಿ ದೇವಿಯ ಕೃಪೆಗೆ ಪಾತ್ರರಾದರು.

ದಿನವಿಡೀ ಉಪವಾಸ ಇದ್ದ ಮಹಿಳೆಯರು ಸಂಜೆವರೆಗೆ ಕೈಯಲ್ಲಿ ಹಡಲಗಿ ಹಿಡಿದುಕೊಂಡು ದಾನ ಬೇಡುತ್ತಾ ಮನೆಮನೆಗೆ ತಿರುಗುತ್ತಾರೆ. ಸೂರ್ಯಾಸ್ತದ ನಂತರ ಸ್ನಾನ ಮಾಡಿ ಯಲ್ಲಮ್ಮನ ಪೂಜೆಯ ನಂತರ ಉಪವಾಸ ವೃತ ಅಂತ್ಯಗೊಳಿಸುತ್ತಾರೆ. ಇದು ಈ ಭಾಗದ ಹೋಳಿ ಹಬ್ಬದ ವೈಶಿಷ್ಟ್ಯ.
ಗ್ರಾಮಗಳಲ್ಲಿ ಚಿಕ್ಕ ಮಕ್ಕಳು ಓಣಿಗೊಂದು ತಂಡ ರಚಿಸಿಕೊಂಡು ಹುಣ್ಣಿಮೆ ರಾತ್ರಿಯಲ್ಲಿ ಕಾಮ ದಹನ ಮಾಡಲೆಂದು ಬೊಬ್ಬೆ ಹಾಕುತ್ತಾ ಮನೆಮನೆಗೆ ತೆರಳಿ ಕುರುಳು, ಕಟ್ಟಿಗೆ ಸಂಗ್ರಹಿಸಿದರು.  ಹೋಳಿ ಹಬ್ಬದ ದಿವಸ ಬಣ್ಣದಾಟ ಆಡಲೆಂದು ಹಣ ಸಂಗ್ರಹಿಸಿ ಸಂಭ್ರಮಿಸಿದರು.

ಸೋಮವಾರ ನಡೆಯುವ ಹಬ್ಬದ ದಿನ ಬಣ್ಣದಾಟದಲ್ಲಿ ಮಿಂದೆದ್ದು ನಂತರ ಮೋಜು ಮಸ್ತಿಯ ಪಾರ್ಟಿ ಮಾಡಲು ಯುವಕರು ಹಣ ಹೊಂದಿಸಿ ಮದ್ಯಮಾಂಸದ ಊಟದ ಸಿದ್ಧತೆಯಲ್ಲಿ ತೊಡಗಿದ್ದರು. ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟಾಗದಿರಲಿ ಎಂದು ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಅಣಕು ಶವ, ಲೇಂಗಿ ಪದ: ಬಣ್ಣದಲ್ಲಿ ಮಿಂದೆದ್ದ ಜನರು
ಕಾಳಗಿ: 
ಗೋಟೂರ, ಕಣಸೂರ, ಕೊಡದೂರ, ಕರಿಕಲ್ಲು ತಾಂಡಾ ಇತರೆಡೆ ಭಾನುವಾರ ಹೋಳಿಹಬ್ಬ ಹಾಗೂ ಧುಲಾಂಡಿ (ಬಣ್ಣ ಎರೆಚುವ ಸಂಭ್ರಮ) ಆಚರಿಸಲಾಯಿತು.

ಹೋಳಿ ಹುಣ್ಣಿಮೆಯ ಶನಿವಾರ ರಾತ್ರಿ ಮುಖಂಡ ಜಯಶಂಕರ ಮಾಲಿ ಪಾಟೀಲ ನೇತೃತ್ವದಲ್ಲಿ ಹಲಗೆ, ಡೊಳ್ಳು, ಬಾಜಾ ಬಜಂತ್ರಿ ವಾದ್ಯಗಳೊಂದಿಗೆ ಹನುಮಾನ ಮಂದಿರ, ಬನಶಂಕರಿ ದೇವಾಲಯ, ಶಿವಬಸವೇಶ್ವರ ಹಿರೇಮಠ, ಮುತ್ಯಾನ ಕಟ್ಟೆ, ಪಲ್ಲೆಕಟ್ಟೆ, ಕಾಳಿಕಾದೇವಿ, ಮರಗಮ್ಮದೇವಿ ಮಂದಿರಕ್ಕೆ ತೆರಳಿದ ಜನರು ಆಯಾ ಸ್ಥಳದ ಆವರಣದಲ್ಲಿ ಜೋಡಿಸಿದ್ದ ಕಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ಕಾಮದಹನ ಮಾಡಿದರು.

ಮಹಿಳೆಯರು ಭಾನುವಾರ ಬೆಳಿಗ್ಗೆ ಕಾಮದಹನ ಸ್ಥಳಕ್ಕೆ ತೆರಳಿ ಕಡಲೆ, ಈರುಳ್ಳಿ, ಗೆಣಸು, ಕೊಬ್ಬರಿ ಹುರಿದುಕೊಂಡು ಬೆಂಕಿಯ ಕಿಚ್ಚು ಮನೆಗೆ ತಂದು ಒಲೆ ಹೊತ್ತಿಸಿದರು.

ಚಿಕ್ಕ ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಕರಿಕಲ್ಲು ತಾಂಡಾದ ಜನರು ಪೀರು ನಾಯಕ್ ಮನೆಗೆ ತೆರಳಿ ಅನಿತಾ ಸಂಜು ಜಾಧವ್‌ರ ಗಂಡು ಶಿಶುವಿನ ಮುಂಭಾಗದಲ್ಲಿ ಕಂಬಳಿ ಚಪ್ಪರಕ್ಕೆ ಕಟ್ಟಿಗೆಯಿಂದ ಹೊಡೆಯುವ ಮೂಲಕ ಸಂಭ್ರಮಿಸಿದರು.

ಸೇವಾಲಾಲ್ ಜಗದಂಬಾ ದೇವಸ್ಥಾನ ಮೈದಾನದಲ್ಲಿ ಸಜ್ಜಕ ಚರಗಿಯ ಗೂಟ ಕೀಳುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಹಿಳೆಯರಿಂದ ಹೊಡೆತ ತಿಂದು ಹೋಳಿಹಬ್ಬ ಆಚರಿಸಿದರು. ಮಹಿಳೆಯರು ಕೈ ಕೈ ಹಿಡಿದುಕೊಂಡು ಲೇಂಗಿ ಪದಗಳು ಹಾಡಿ ಕುಣಿದು ಕುಪ್ಪಳಿಸಿದರು.

ಅನೇಕರು ಆಪ್ತರ ಮನೆಗೆ ತೆರಳಿ ಚಿಕ್ಕಮಕ್ಕಳ ಕೊರಳಿಗೆ ಸಕ್ಕರೆ ಸರ ತೊಡಿಸಿದರು. ವಿವಿಧ ಗಲ್ಲಿಯ ಯುವಕರು ಅಣಕು ಶವ ಮಾಡಿ ಅತ್ತುಕರೆದು ಆಕರ್ಷಿಸಿದರು. ಬಣ್ಣದ ಮಡಿಕೆ ಒಡೆದು ಕುಣಿದು ಕುಪ್ಪಳಿಸಿದ ಯುವಕರು ಬಗೆ ಬಗೆಯ ವೇಷ ಧರಿಸಿ ನೋಡುಗರ ಗಮನ ಸೆಳೆದರು.

ಇನ್ನು ಕೆಲವರು ಭೂರಿ ಭೋಜನ ತಯಾರಿಸಿಕೊಂಡು ಊರಹೊರಗಿನ ತೋಟಗಳಿಗೆ ತೆರಳಿ ಊಟ ಮಾಡಿ ಕಾಲಕಳೆದರು. ಮತ್ತೆ ಕೆಲವರು ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಇಷ್ಟದ ಸ್ಥಳಗಳಿಗೆ ಹೋಗಿ ಕಾಲ ಕಳೆದರು.

ಗ್ರಾಮಗಳಲ್ಲಿ ಮಕ್ಕಳು ಓಣಿಗೊಂದು ತಂಡ ಕಟ್ಟಿಕೊಂಡು ಹುಣ್ಣಿಮೆ ರಾತ್ರಿಯೆಂದು ಕಾಮದಹಣ ಮಾಡಲೆಂದು ಬೊಬ್ಬೆ ಹಾಕುತ್ತಾರೆ. ಇದು ವಿಶಿಷ್ಟ ಆಗಿರುತ್ತದೆ.
- ರೇವಣಸಿದ್ದಪ್ಪ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT