ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮವ್ಯಾಧಿಗೆ ವಿದ್ಯಾರ್ಥಿಗಳು ಹೈರಾಣ!

ದುರಸ್ತಿ ಹಂತದಲ್ಲಿ ಜಿಲ್ಲೆಯ 32 ಹಾಸ್ಟೆಲ್‌ಗಳು!
Last Updated 13 ಮಾರ್ಚ್ 2017, 6:10 IST
ಅಕ್ಷರ ಗಾತ್ರ

ಯಾದಗಿರಿ: ತುಂಬಾ ಉರಿ, ಮೈಯೆಲ್ಲಾ ತುರಿಕೆ, ಸ್ವಲ್ಪ ಸೆಕೆಯಾದರೂ ಇಡೀ ದೇಹವೆಲ್ಲಾ ಕೆಂಡದಲ್ಲಿ ಬಿದ್ದಂತಹ ಅನುಭವವಾಗುತ್ತದೆ. ಸೆಕೆಗುಳ್ಳೆ ಇರಬೇಕು ಅಂದುಕೊಂಡಿದ್ವಿ. ಆದರೆ, ನಗರದ ಚರ್ಮರೋಗತಜ್ಞ ಚಂದ್ರಶೇಖರ್ ಪಾಟೀಲ ಇದು ನೀರಿನಿಂದ ಉಂಟಾಗಿರುವ ಚರ್ಮವ್ಯಾಧಿ ಎಂದು ಹೇಳಿದಾಗ ದಿಕ್ಕೇ ತೋಚದಂತಾಯಿತು...

ನಗರದ ಗಂಜ್‌ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿಯ ಹಾಸ್ಟೆಲ್‌ ವಿದ್ಯಾರ್ಥಿಗಳ ಸಂಕಷ್ಟದ ಮಾತುಗಳಿವು.

ಪಿಯುಸಿ, ಬಿಎ, ಬಿಎಸ್‌ಸಿ, ಬಿಕಾಂ ಅಧ್ಯಯನ ಮಾಡುವ ಪರಿಶಿಷ್ಟ ಜಾತಿಯ ಒಟ್ಟು 154 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಅವರಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಅನಿಲ್, ಮೌನಪ್ಪ, ಆಕಾಶ್, ಕೃಷ್ಣಮೂರ್ತಿ, ಅರವಿಂದ, ರಾಹುಲ, ರಾಜು, ರಾಜೇಶ್‌ ವಿದ್ಯಾರ್ಥಿಗಳ ಮೈತುಂಬಾ ಹುಣ್ಣಿನಂತಹ ಗುಳ್ಳೆಗಳು ಕಾಣಿಸಿಕೊಂಡಿದ್ದು, ಉರಿ, ತುರಿಕೆ, ನೋವಿನಿಂದ ನಿತ್ಯ ನರಳುತ್ತಿದ್ದಾರೆ.

ತಮಗೆ ಬಾಧಿಸುತ್ತಿರುವ ಚರ್ಮರೋಗಕ್ಕೆ ಸ್ನಾನಕ್ಕೆ ಬಳಸುವ ನೀರು ಕಾರಣ ಎಂಬುದಾಗಿ ವಿದ್ಯಾರ್ಥಿಗಳು ಹೇಳುತ್ತಾರೆ. ನಗರದ ಖಾಸಗಿ ಆಸ್ಪತ್ರೆಯ ಚರ್ಮರೋಗ ತಜ್ಞ ಚಂದ್ರಶೇಖರ್ ಪಾಟೀಲ ಬಳಿ ಈ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ನೀಡಿರುವ ತಜ್ಞವೈದ್ಯರು ಹಾಸ್ಟೆಲ್‌ ನೀರು ಬಳಕೆ ಮಾಡದಂತೆ ಸೂಚಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಆದರೆ, ಹಾಸ್ಟೆಲ್‌ ನೀರು ಬಿಟ್ಟರೆ ಬೇರೆ ದಾರಿಯಿಲ್ಲ. ಬಳಕೆ ಮಾಡುವ ನೀರಿನಲ್ಲಿ ಅರ್ಸೆನಿಕ್‌ ಅಂಶ ಯಥೇಚ್ಛವಾಗಿದೆ ಎನ್ನುತ್ತಾರೆ ಅವರು.

‘ಅರ್ಸೆನಿಕ್‌ ಯುಕ್ತ ನೀರು ಬಳಕೆಯಿಂದಾಗಿ ವಿದ್ಯಾರ್ಥಿಗಳ ಮೈಮೇಲೆಲ್ಲಾ ಕೆಂಪು ಗುಳ್ಳೆಗಳು ಮೂಡಿವೆ.  ಚರ್ಮವ್ಯಾಧಿ ಕೆಲ ವಿದ್ಯಾರ್ಥಿಗಳ ಮುಖಕ್ಕೂ, ಕಣ್ಣಿಗೂ ವ್ಯಾಪಿಸಿದೆ. ಬಡ ವಿದ್ಯಾರ್ಥಿಗಳು ಬಾಧಿಸುತ್ತಿರುವ ಚರ್ಮರೋಗಕ್ಕೆ ಚಿಕಿತ್ಸೆ ಪಡೆಯಲು  ಕಾಸಿಲ್ಲದೆ ಪರದಾಡುತ್ತಿದ್ದಾರೆ. ಉಚಿತ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಯಲ್ಲಿ ತಜ್ಞವೈದ್ಯರಿಲ್ಲ. ಹಾಗಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ವ್ಯಯಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾರ್ಷಿಕ ಪರೀಕ್ಷೆ ಎದುರಾಗಿರುವ ಇಂತಹ ಸಂದರ್ಭದಲ್ಲಿ ಚರ್ಮವ್ಯಾಧಿ ಹೈರಾಣಾಗಿಸಿದೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಗೆ ಗೋಳು ತೋಡಿಕೊಂಡರು. ಲಘು ಉಪಾಹಾರ ಇಲ್ಲ: ಬೆಳಿಗ್ಗೆ ಮತ್ತು ಸಂಜೆ ಟೀ ಜತೆಗೆ ಲಘು ಉಪಾಹಾರ ನೀಡಬೇಕು. ಆದರೆ, ಇಲ್ಲಿ ಲಘು ಉಪಾಹಾರ ನೀಡುತ್ತಿಲ್ಲ. ಗ್ರಂಥಾಲಯ ಕೂಡ ಇಲ್ಲ ಎಂದು ಹೇಳುತ್ತಾರೆ ವಿದ್ಯಾರ್ಥಿಗಳಾದ ಲಿಂಗಪ್ಪ, ಮರಿಲಿಂಗಪ್ಪ, ಬಸಲಿಂಗಪ್ಪ.

ಒಟ್ಟು 32 ಹಾಸ್ಟೆಲ್‌ಗಳು ದುರಸ್ತಿ
ಕುಡಿಯುವ ನೀರಿನ ಗುಣಮಟ್ಟ ಸರಿಯಿಲ್ಲ. ಕೊಳವೆಬಾವಿ ಮತ್ತು ಶುದ್ಧೀಕರಣಯಂತ್ರ ಬದಲಾಯಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಆದರೆ, ಎರಡು ವರ್ಷಗಗಳಿಂದ ಬಿಡಿಗಾಸು ಮಂಜೂರಾಗಿಲ್ಲ. ಅಲ್ಲದೇ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟು 40 ಹಾಸ್ಟೆಲ್‌ಗಳು ಇವೆ. ಅವುಗಳಲ್ಲಿ 32 ದುರಸ್ತಿಯಲ್ಲಿವೆ. ₹12 ಕೋಟಿ ವೆಚ್ಚದ ದುರಸ್ತಿ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಂದೆನವಾಜ್ ಹೇಳಿದರು.

ಕೆಟ್ಟಿರುವ ಶುದ್ಧೀಕರಣ ಯಂತ್ರ
ಹಾಸ್ಟೆಲ್‌ನಲ್ಲಿ ಅಳವಡಿಸಿರುವ ನೀರು ಶುದ್ಧೀಕರಣಯಂತ್ರ ಕೆಟ್ಟು ಆರು ವರ್ಷಗಳಾದರೂ ದುರಸ್ತಿ ಮಾಡಿಸಿಲ್ಲ. ಇದರಿಂದಾಗಿ ನೇರವಾಗಿ ಫ್ಲೋರೈಡ್‌ಯುಕ್ತ ಮತ್ತು ಅರ್ಸೆನಿಕ್ ವಿಷಕಾರಿ ಅಂಶ ಇರುವ ನೀರನ್ನೇ ಕುಡಿಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಪರಿಣಾಮವಾಗಿ ವಿದ್ಯಾರ್ಥಿಗಳ ಆರೋಗ್ಯ ಕೂಡ ಹದಗೆಟ್ಟಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ವಿದ್ಯಾರ್ಥಿಗಳು ಹಲವು ಬಾರಿ ಮನವಿ ಮಾಡಿದ್ದಾರೆ. ಪ್ರತಿಭಟನೆ ಕೂಡ ನಡೆಸಿದ್ದಾರೆ. ಆದರೂ, ಅಧಿಕಾರಿಗಳು ಸ್ಪಂದಿಸಿಲ್ಲ. ವಾರ್ಡನ್ ನೀಲಕಂಠಪ್ಪ ಬಬಲಾದಿಗೌಡ ಅವರ ಗಮನಕ್ಕೂ ತರಲಾಗಿದೆ. ಸಮಸ್ಯೆ ಆಲಿಸುವ ಬದಲು ಅವರು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.

ಸ್ಪಂದಿಸದ ಅಧಿಕಾರಿಗಳು
ಹಾಸ್ಟೆಲ್‌ನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸಣ್ಣಪುಟ್ಟ ದುರಸ್ತಿಗೂ ಇಲಾಖೆ ಗಮನಹರಿಸುವುದಿಲ್ಲ. ನೀರು ಪೂರೈಸುವ ಕೊಳವೆಬಾವಿ ಮೋಟರ್‌ ಮೂರುಸಲ ಸುಟ್ಟಿದೆ. ಒಮ್ಮೆ ಸುಟ್ಟರೆ ಕನಿಷ್ಠ ₹12 ಸಾವಿರ ದುರಸ್ತಿ ವೆಚ್ಚವಾಗುತ್ತದೆ ಎಂದು ಹಾಸ್ಟೆಲ್‌ ವಾರ್ಡನ್‌ ನೀಲಕಂಠಪ್ಪ ಬಬಲಾದಿಗೌಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT