ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕು ಹಸನಾದರೆ ದೇಶ ಅಭಿವೃದ್ಧಿ

ವೂಡೇ ಪಿ. ಕೃಷ್ಣ ಅಭಿಮತ
Last Updated 13 ಮಾರ್ಚ್ 2017, 6:36 IST
ಅಕ್ಷರ ಗಾತ್ರ

ಮಂಡ್ಯ: ‘ಬಡತನವು ದೇಶದ ಸಮಸ್ಯೆ ಆಗಿದೆ. ಅದರ ನಿರ್ಮೂಲನೆಗೆ ರೈತರ ಬದುಕು ಹಸನಾಗಬೇಕು ಎಂದು ಗಾಂಧೀಜಿ ಅವರು ಹೇಳಿದ್ದರು’ ಎಂದು ಚಿಂತಕ ವೂಡೇ ಪಿ. ಕೃಷ್ಣ ಹೇಳಿದರು.

ನಗರದ ಗಾಂಧಿ ಭವನದಲ್ಲಿ ದಿವಂಗತ ಎಸ್‌.ವಿಶ್ವನಾಥ್‌ ಸಂಸ್ಮರಣಾ ಸಮಿತಿ ಹಾಗೂ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ‘ಮಹಾತ್ಮರ ಬದುಕು’ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರ ಹೋರಾಟದ ಮಾರ್ಗಗಳು ಇಂದಿಗೂ ಪ್ರಸ್ತುತ ಆಗಿವೆ. ಬಡತನ ನಿವಾರಣೆ ಹಾಗೂ ರೈತರ ಬದುಕು ಹಸನುಗೊಳಿಸಲು ಅದೇ ಮಾರ್ಗದಲ್ಲಿ ಸಾಗಬೇಕಿದೆ ಎಂದರು.

‘ಗಾಂಧಿ ಅವರ ಬದುಕು ಪಾರದರ್ಶಕವಾಗಿತ್ತು. ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿಕೊಂಡ ಮಹಾನ್‌ ನಾಯಕ ಗಾಂಧೀಜಿ. ಬ್ರಿಟಿಷರು ನನ್ನ ದೇಶದಲ್ಲಿ ಇದ್ದುಕೊಂಡು ನನ್ನ ವಿರುದ್ಧ ಆದೇಶ ಮಾಡಲು ಬಿಡುವುದಿಲ್ಲ ಎಂದು ಧೈರ್ಯವಾಗಿ ಹೇಳುವ ಮೂಲಕ ಹೋರಾಟದ ಬಿಸಿ ಮುಟ್ಟಿಸಿದ್ದರು’ ಎಂದು ಸ್ಮರಿಸಿಕೊಂಡರು.

ಮಾತೃಭಾಷೆಗೆ ಹೆಚ್ಚು ಒತ್ತು ಕೊಟ್ಟರೆ ದೇಶ ಸಮೃದ್ಧಿ ಆಗುತ್ತದೆ. ಪ್ರತಿ ಯೊಬ್ಬರೂ ಭಾಷಾಭಿಮಾನ ಬೆಳೆಸಿ ಕೊಳ್ಳಬೇಕು. ವ್ಯವಹಾರ, ಮಾತು ಮಾತೃಭಾಷೆಯಲ್ಲಿರಬೇಕು. ಎಲ್ಲರೂ ಕನ್ನಡ ಭಾಷೆಯನ್ನು ಗೌರವಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಗಾಂಧಿವಾದಿ ದಿವಂಗತ ಎಸ್‌.ವಿಶ್ವನಾಥ್‌ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ನನಗೆ ಗೌರವ ತಂದು ಕೊಟ್ಟಿದೆ. ಇಂದು (ಭಾನುವಾರ) ಉಪ್ಪಿನ ಸತ್ಯಾಗ್ರಹ ನಡೆದ ದಿನವಾಗಿದೆ. ಈ ದಿನ ನನಗೆ ಗೌರವ ಸಿಕ್ಕಿರುವ ಸಂತೋಷ ತಂದಿದೆ’ ಎಂದರು.

‘ದಂಡಿ ಸತ್ಯಾಗ್ರಹ ಒಂದು ನೆನಪು’ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ  ಜಗದೀಶ್‌ಕೊಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಮೂಲಕ ಗಾಂಧೀಜಿ ಅವರು ಬ್ರಿಟಿಷರಿಗೆ ಭಯ ಹುಟ್ಟಿಸಿದ ಮಹಾನ್‌ ನಾಯಕರಾಗಿದ್ದರು. ಅಹಿಂಸಾ ಮಾರ್ಗ ಬೋಧಿಸುವ ಮೂಲಕ ಹಿಂಸೆ ತ್ಯಜಿಸಲು ಜನರಿಗೆ ತಿಳಿಹೇಳಿದ್ದರು ಎಂದರು.

ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ. ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ.ಬಿ. ಶಿವರಾಜು, ಕರ್ನಾಟಕ ಗೆಜೆಟಿಯರ್‌ ನಿವೃತ್ತ ಸಂಪಾದಕ ಎಸ್‌. ರಾಜೇಂದ್ರಪ್ಪ, ಗಾಂಧಿ ಚಿಂತಕ ವೇಮುಗಲ್‌ ಸೋಮಶೇಖರ್‌, ಸಾಗರದ ವೈ.ವ. ದಂತಿ, ಜಯಮ್ಮ ವಿಶ್ವನಾಥ್‌, ಜೆ.ವಿ. ಪೂರ್ಣಿಮಾ ಲಿಂಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT