ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ

Last Updated 13 ಮಾರ್ಚ್ 2017, 7:01 IST
ಅಕ್ಷರ ಗಾತ್ರ

ದೇವನಹಳ್ಳಿ: ಕರ್ಕಶ ಶಬ್ದದೊಂದಿಗೆ ಕಲ್ಲು ಕತ್ತರಿಸುವ  ಯಂತ್ರಗಳು ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕವುಂಟು ಮಾಡಿದೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ರೀತಿಯ ಕೈಗಾರಿಕಾ ವಲಯ ಸ್ಥಾಪನೆಯಾಗಿಲ್ಲ. ಸಾದಹಳ್ಳಿ ಕಲ್ಲುಗಣಿಗೆ ಕೆಲವರಿಗೆ ಸೀಮಿತ ಪ್ರಮಾಣದಲ್ಲಿ ಇಂತಿಷ್ಟು ಟನ್ ಲೆಕ್ಕದಲ್ಲಿ ಮಾತ್ರ ಕೆಲವು ಷರತ್ತಿನ ನಿಬಂಧನೆ ವಿಧಿಸಿ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಹೊರತುಪಡಿಸಿದರೆ, ಕಲ್ಲು ಕತ್ತರಿಸುವ ಯಂತ್ರಕ್ಕೆ ಅನುಮತಿ ನೀಡದಿದ್ದರೂ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿ ರಾಜಾರೋಷವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಲ್ಲು ಕತ್ತರಿಸುವ ಯಂತ್ರ ಘಟಕ ಆರಂಭಿಸಲು ಜಾಗ ಭೂ ಪರಿವರ್ತನೆಯಾಗಬೇಕು. ಪರಿಸರ ಹಾಗೂ ಗಣಿ ಇಲಾಖೆ ಅನುಮತಿ ನೀಡಬೇಕು, ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಬೇಕು. ಅಲ್ಲದೆ, ಹಸಿರು ವಲಯ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿಲ್ಲ. ಆದರೆ, ಕಲ್ಲುಗಣಿಗಾರಿಕೆಯಿಂದ ಜಾನುವಾರು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ  ಬೀರಿದೆ.

ಇದರೊಂದಿಗೆ ಪರಿಸರಕ್ಕೆ ಧಕ್ಕೆ ಮಾಡುವ ಹುನ್ನಾರಕ್ಕೆ ಕಲ್ಲು ಕತ್ತರಿಸುವ ಯಂತ್ರ ಮಾಫಿಯಾ ಮುಂದಾಗಿದೆ ಎಂಬುದು ಗ್ರಾಮಸ್ಥರ ದೂರು.
ತಾಲ್ಲೂಕಿನ ಪೂಜನಹಳ್ಳಿ, ಉಗನವಾಡಿ, ದೇವಗಾನಹಳ್ಳಿ, ಅರದೇಶನಹಳ್ಳಿ, ಚೌಡಹಳ್ಳಿ, ಕುಂದಾಣ ಸುತ್ತಮುತ್ತ, ಜ್ಯೋತಿಪುರ, ಕೆಂಪತಿಮ್ಮನಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಲ್ಲು ಕತ್ತರಿಸುವ ಯಂತ್ರ   ಈಗಾಗಲೇ ಕಾರ್ಯಾರಂಭ ಮಾಡಿ, ನಾಲ್ಕಾರು ವರ್ಷ ಉರುಳಿವೆ. ಇದರ ಜತೆಗೆ ಕಾರಹಳ್ಳಿ ಮುದ್ದನಾಯಕನಹಳ್ಳಿ ಸುತ್ತಮುತ್ತ ನಡೆಯುತ್ತಿದೆ. ಪ್ರಸ್ತುತ ಮಾಯಸಂದ್ರ ಗ್ರಾಮದಲ್ಲಿಯೇ ಘಟಕ ಆರಂಭಕ್ಕೆ ಕಟ್ಟಡ ಕಾಮಗಾರಿ ಮುಗಿದಿದ್ದು ಯಂತ್ರ ಜೋಡಣೆಗೆ ಮಾಲೀಕರು ಮುಂದಾಗಿದ್ದಾರೆ. 

ನುಮತಿ ನೀಡಬಾರದೆಂದು ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಜಿಲ್ಲಾಧಿಕಾರಿ, ಪರಿಸರ ಇಲಾಖೆ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ದೂರು ನೀಡಲಾಗಿದೆ.

ಕೆಲ ತಿಂಗಳ ಹಿಂದೆ ಜ್ಯೋತಿಪುರ ಸೇರಿದಂತೆ ವಿವಿಧೆಡೆ ಇರುವ ಘಟಕದ ಮೇಲೆ ದಾಳಿ ನಡೆಸಿದ ಗಣಿ ಇಲಾಖೆ ಅಧಿಕಾರಿಗಳು, ₹5ರಿಂದ 40 ಲಕ್ಷದವರೆವಿಗೂ ದಂಡ ವಸೂಲಿ ಮಾಡಿದ್ದರು. ಜತೆಗೆ ಘಟಕ ಮುಚ್ಚುವಂತೆ ತಾಕೀತು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಅಕ್ರಮ ಸಂಪತ್ತು ಲೂಟಿ ಮತ್ತೊಂದೆಡೆ ಗ್ರಾಮದ ಸ್ಥಳೀಯರಿಗೆ ದೂಳು ಹಾಗೂ ತ್ಯಾಜ್ಯದಿಂದ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ. ಸ್ಥಳೀಯರ ಪ್ರತಿಭಟನೆ ಆಕ್ರೋಶದ ನಡುವೆ ಬೆಟ್ಟಲಸೂರಿನ ಕಲ್ಲುಗಣಿ ಮತ್ತು  ಕಲ್ಲು ಕತ್ತರಿಸುವ ಘಟಕ ಒಂದು ವರ್ಷದಿಂದ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯ ಅಕ್ರಮ ಕಲ್ಲುಗಣಿಗಾರಿಕೆ  ಮಾಫಿಯಾಗಳು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರಾದ ಚಪ್ಪರದ ಕಲ್ಲು ಎಂ.ಮುನಿಯಪ್ಪ ಮತ್ತು ಚಿಕ್ಕಾಂಜಿನಪ್ಪ ದೂರಿದ್ದಾರೆ.

**

ಒಂದು ಘಟಕ ಸ್ಥಗಿತಗೊಳಿಸುವಂತೆ ಮಾಡುವಿಕೆ ನಮ್ಮ ಕಳಕಳಿಯಲ್ಲ, ತಾಲ್ಲೂಕಿನ ಕೊಯ್ಲು ಘಟಕಕ್ಕೆ ಕಡಿವಾಣ ಬೇಕು ಎಂಬುದು ನಮ್ಮ ಉದ್ದೇಶ.
–ನಟರಾಜ್‌ ಮತ್ತು ಮುನಿಯಪ್ಪ, ದೂರುದಾರರು

*

–ವಡ್ಡನಹಳ್ಳಿ ಭೋಜ್ಯಾನಾಯ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT