ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಹೀಲಿಂಗ್ ಹುಚ್ಚಾಟಕ್ಕೆ ಬ್ರೇಕ್ ಯಾವಾಗ

ಹೆಲ್ಮೆಟ್‌ ಬಿಟ್ಟರೆ ಪೊಲೀಸರ ಕಣ್ಣಿಗೆ ಬೇರೆ ಕಾಣದು, ಅತಿವೇಗಕ್ಕೂ ಇಲ್ಲ ಕಡಿವಾಣ
Last Updated 13 ಮಾರ್ಚ್ 2017, 7:03 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಇರುವುದೇ ನಾಲ್ಕಾರು ಪ್ರಮುಖ ರಸ್ತೆಗಳು. ಈ ರಸ್ತೆಗಳಲ್ಲಿ ಕೆಲ ಪುಂಡರು, ಯುವಕರು ಬೈಕ್‌ಗಳಲ್ಲಿ ಆಡುವ ಹುಚ್ಚಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲ!

ತರಹೇವಾರಿ ಬೈಕ್‌ಗಳಲ್ಲಿ ರಸ್ತೆಗಳಲ್ಲಿ ಗೂಳಿಗಳಂತೆ ನುಗ್ಗಿಕೊಂಡು ಹೋಗುವುದು. ಹೋಗು ಹೋಗುತ್ತಿರುವಾಗಲೇ ಬ್ರೇಕ್ ಹಾಕಿ ಬೈಕ್‌ನ ಹಿಂದಿನ ವ್ಹೀಲ್ ಮೇಲಕ್ಕೆತ್ತಿ ಸರ್ಕಸ್ (ವ್ಹೀಲಿಂಗ್) ಮಾಡುವುದು. ಇತರೆ ವಾಹನ ಸವಾರರು, ಚಾಲಕರನ್ನು ಕಕ್ಕಾಬಿಕ್ಕಿಯಾಗಿಸುವುದು.

ಬಿ.ಎಚ್.ರಸ್ತೆ, ಎಸ್.ಎಸ್.ಪುರಂ, ಎಸ್.ಐ.ಟಿ ರಸ್ತೆ, ಕೋತಿ ತೋಪು, ಶಿರಾ ಗೇಟ್, ಬಟವಾಡಿ ಕುಣಿಗಲ್ ರಸ್ತೆ ಹೀಗೆ ಅನೇಕ ಕಡೆ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆಯುವವರಿಗೆ ಮೂಗುದಾರ ಹಾಕುವವರೇ ಇಲ್ಲ ಎಂಬಂತಾಗಿದೆ.

ಸಂಚಾರ ದಟ್ಟಣೆ ಹೆಚ್ಚು ಇರುವ ಸಮಯ ಅಂದರೆ ಬೆಳಿಗ್ಗೆ 9ರಿಂದ 11 ಗಂಟೆ, ಸಂಜೆ 5ರಿಂದ 8 ಗಂಟೆಯವರೆಗೆ ಇವರ ಹುಚ್ಚಾಟ ಹೇಳತೀರದು.
ಟ್ರಾಫಿಕ್ ಸಿಗ್ನಲ್, ಏಕಪಥ ಸಂಚಾರ, ಸಂಚಾರ ಠಾಣೆ ಪೊಲೀಸರು ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೇ. ಇದ್ಯಾವುದನ್ನು ಅವರಿಗೆ ಲೆಕ್ಕಕ್ಕಿಲ್ಲ.
ಕಿವಿ ತೂತು ಬೀಳುವಷ್ಟು ಹಾರ್ನ್ ಹಾಕುವುದು, ಹೆಚ್ಚು ಶಬ್ದ ಮಾಡುವ ಸೈಲನ್ಸ್ ಅಳವಡಿಸಿ ಎಕ್ಸಲರೇಟರ್ ಜಾಸ್ತಿ ಮಾಡಿ ಶಬ್ದ ಮಾಡುವುದು, ರಸ್ತೆಯಲ್ಲಿ ಅಕ್ಕಪಕ್ಕ ಹೋಗುವ ಇತರೆ ಪ್ರಯಾಣಿಕರಿಗೆ ಕಿರಿಕಿರಿಯಾಗುವಷ್ಟು ರೊಂಯ್ಯ ರೊಂಯ್ಯ... ಎನಿಸಿ ನಶೆಯಲ್ಲಿದ್ದವರಂತೆ ವರ್ತಿಸುತ್ತಾರೆ.

ಅದರಲ್ಲೂ ದ್ವಿಚಕ್ರವಾಹನದಲ್ಲಿ ವೃದ್ಧರು, ಮಕ್ಕಳನ್ನು ಕರೆದುಕೊಂಡು ಹೋಗುವಾಗ ಪಕ್ಕದಲ್ಲಿ ಕರ್ಕಶ ಶಬ್ದ ಮಾಡುತ್ತ ವ್ಹೀಲಿಂಗ್ ವೀರರ ವಾಹನ ನುಗ್ಗಿ ಬಿಟ್ಟರೆ ಹೌಹಾರಿ ಬಿದ್ದು ಬಿಡುವಂತಹ ಅಪಾಯ ಇದೆ.

ರಸ್ತೆಯಲ್ಲಿ ಇವರ ಹುಚ್ಚಾಟವನ್ನು ನೋಡಿದ ಸಾರ್ವಜನಿಕರ ಕಣ್ಣು ತಿರುಗಿ ಬೀಳುತ್ತಾರೆ.  ಇನ್ನು ಪೊಲೀಸರು ಇಂಥವರನ್ನು ನೋಡಿ ಗುರುತಿಸುವಷ್ಟರಲ್ಲಿ ನಾಗಾಲೋಟದಲ್ಲಿ ಜಿಗಿದು ಬಿಟ್ಟಿರುತ್ತಾರೆ. ಇಂಥವರನ್ನು ಹಿಡಿಯುವುದು ಪೊಲೀಸರಿಗೆ ಅಸಾಧ್ಯವಾಗಿ ಪರಿಗಣಿಸಿದೆ.

‘ನಗರದ ರಸ್ತೆಗಳಲ್ಲಿ ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಕೆಲಸ ಮಾಡಬೇಕು. ಅವುಗಳಲ್ಲಿ ದಾಖಲಾಗುವ ವ್ಹೀಲಿಂಗ್ ಹುಚ್ಚಾಟ ವೀರರ ವಾಹನ ಪತ್ತೆ ಆಗುತ್ತವೆ. ಗುರುತಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಂದಾಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಅಂತಹ ಪ್ರಯತ್ನ ಆಗುತ್ತಿಲ್ಲ’ ಎಂದು  ಹಿರಿಯ ನಾಗರಿಕರಾದ ಜಗದೀಶ್ ಹೇಳಿದರು.

ಟೀಕೆಗೆ ಗುರಿಯಾದ ಕೆಲಸ
ಹೆಲ್ಮೆಟ್ ಇಲ್ಲದವರಿಗೆ ದಂಡ ಹಾಕುವುದು, ಗಂಟೆ ಗಟ್ಟಲೆ ಸರಕು ವಾಹನ ನಿಲ್ಲಿಸಿ ತಪಾಸಣೆ ಮಾಡುವುದಷ್ಟೇ ಸಂಚಾರಿ ಪೊಲೀಸರು ತಮ್ಮ ಕೆಲಸ ಎಂದು ಕೊಂಡಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ.

ಸಿಗ್ನಲ್ ಜಂಪ್ ಮಾಡುವವರನ್ನು ಪೊಲೀಸರು ಹಿಡಿಯುವುದೇ ಇಲ್ಲ.  ಸಿಗ್ನಲ್‌ ಇರುವ  ಕಡೆ ಸಂಚಾರಿ ಪೊಲೀಸರು ಇದ್ದರೂ ಸಿಗ್ನಲ್‌  ಜಂಪ್‌ ಮಾಡಿ ಹೋಗುವವರನ್ನು ಹಿಡಿಯುವ ಅಥವಾ ಮುಂದಿನ ಸಿಗ್ನಲ್‌ನಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿಲ್ಲ. ಇನ್ನು  ವ್ಹೀಲಿಂಗ್ ಮಾಡುವವರು ಸಿಕ್ಕುತ್ತಾರೆಯೇ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಾಹನ ಜಪ್ತಿ ಮಾಡಿ ಕ್ರಮ
‘ವ್ಹೀಲಿಂಗ್ ಮಾಡುವವರು ಮೊದಲಿನಷ್ಟು ಇಲ್ಲ. ಇಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಎಸ್ಐಟಿ, ಕೋತಿತೋಪು ರಸ್ತೆಯಲ್ಲಿ ಇಂತಹ ಪ್ರಕರಣ ಹೆಚ್ಚು ಕಂಡು ಬರುತ್ತಿದ್ದವು. ಈಗ ಕಡಿಮೆ ಆಗಿವೆ’ ಎಂದು ಪಿಎಸ್ಐ ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನ ಜಪ್ತಿ ಮಾಡಿಕೊಳ್ಳುವುದು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ತೆಗೆಸಿ ಹಾಕುವುದು. ವ್ಹೀಲಿಂಗ್ ಮಾಡುವವರ ಸಂಬಂಧಿಕರನ್ನು ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸುವುದು ಮಾಡಿದ್ದೇವೆ. ಸಾರ್ವಜನಿಕರು ಮಾಹಿತಿ ನೀಡಿದರೆ ಕ್ರಮ ಜರುಗಿಸುತ್ತೇವೆ’ ಎಂದರು.

ಪೊಲೀಸರು ಕಡಿವಾಣ ಹಾಕಲಿ
ಪ್ರಮುಖ ರಸ್ತೆಗಳಲ್ಲಿ ಅತಿ ವೇಗದಿಂದ ಹೋಗುವ ಬೈಕ್, ಕಾರುಗಳಿಗೂ ಕಡಿವಾಣ ಇಲ್ಲವಾಗಿದೆ. ಇದರಿಂದಾಗಿ ಸಂಚಾರಿ ನಿಯಮ ಪಾಲಿಸುವವರು ಅಪಘಾತ ಮಾಡಿಕೊಳ್ಳುವ ಸಂಭವ ಹೆಚ್ಚುತ್ತಿದೆ ಎನ್ನುತ್ತಾರೆ ಸವಾರರು.

ರಸ್ತೆಗಳಲ್ಲಿ ಹೆಲ್ಮೆಟ್‌ ಇಲ್ಲದೆ ಓಡಾಡುವರ ಸಂಖ್ಯೆ  ಕಣ್ಣಿಗೆ ರಾಚಿದಂತೆ ಕಾಣುತ್ತದೆ ಎಂದು ಬೈಕ್‌ ಸವಾರರೊಬ್ಬರು  ಹೇಳಿದರು. ಹೆಲ್ಮೆಟ್‌ ಧರಿಸಲು ಉದಾಸೀನ  ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು  ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT