ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ಪಥದ ಬೆಂಗಳೂರು–ಮೈಸೂರು ಹೆದ್ದಾರಿ ಶೀಘ್ರ

Last Updated 13 ಮಾರ್ಚ್ 2017, 7:04 IST
ಅಕ್ಷರ ಗಾತ್ರ

ಬಿಡದಿ: ‘ಮುಂದಿನ ದಿನಗಳಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಆರು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಲಿದೆ’ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಇಲ್ಲಿ ಸರ್ವಿಸ್ ರಸ್ತೆ, ಫುಟ್‌ಪಾತ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಇದಕ್ಕಾಗಿ ₹4,500 ಕೋಟಿ ವೆಚ್ಚದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಬೈಪಾಸ್ ರಸ್ತೆಗಳು ನಿರ್ಮಾಣವಾಗುವುದರಿಂದ ಪಟ್ಟಣ ವ್ಯಾಪ್ತಿಯ ಹೆದ್ದಾರಿ ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಒಳಪಡಲಿದೆ. ಹೀಗಾಗಿ ಈ ರಸ್ತೆಗಳನ್ನು ನೂರಾರು ಕೋಟಿ ವೆಚ್ಚದಲ್ಲಿ ನಗರಸಭೆ ಅಭಿವೃದ್ಧಿ ಪಡಿಸಲು ಕಷ್ಟ. ಈಗಾಗಲೇ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರಿಂದಾಗಿ ಈಗಲೇ ಹೆದ್ದಾರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

‘ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ 7 ಮೀಟರ್ ಸರ್ವಿಸ್ ರಸ್ತೆ, ಫುಟ್‌ಪಾತ್‌ ರಸ್ತೆ ಹಾಗೂ ಚರಂಡಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಸುಗಮ ಸಂಚಾರ ವ್ಯವಸ್ಥೆ, ಅಪಘಾತದ ಪ್ರಮಾಣಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.

‘ಕಾಮಗಾರಿ ನಡೆಯುವ ವೇಳೆ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯುವ ಅವಶ್ಯಕತೆ ಇಲ್ಲ. ಸಂಸದ, ಶಾಸಕರು, ಸಚಿವರು ಕರೆ ಮಾಡಿದರು ಎಂದು ತಲೆಬಾಗುವ ಅವಶ್ಯಕತೆ ಇಲ್ಲ’ ಎಂದು ತಿಳಿಸಿದರು.

ಅಭಿನಂದನೆ: ‘ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಸಂಪುಟದಲ್ಲಿ ಕ್ರಿಯಾಶೀಲ ಮತ್ತು ತ್ವರಿತವಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಸಚಿವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇವರ ಬಳಿ ಯಾವ ಪಕ್ಷದ ಸಂಸದರು ಹೋದರೂ ಸಂಪೂರ್ಣ ಸಹಕಾರ ನೀಡುತ್ತಾರೆ. ಹೆದ್ದಾರಿ ಅಭಿವೃದ್ಧಿ ಬೇಡಿಕೆಗೆ ಸಂಬಂಧಿಸಿದಂತೆ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ಮೊದಲ ಅಭಿನಂದನೆಗಳು’ ಎಂದು ತಿಳಿಸಿದರು.

ಚಾಲನೆ: ಒಟ್ಟು ₹68 ಕೋಟಿ  ವೆಚ್ಚದ ಬಿಡದಿ ಮತ್ತು ರಾಮನಗರ ಪಟ್ಟಣ ವ್ಯಾಪ್ತಿಯಲ್ಲಿ ಬೆಂಗಳೂರು–-ಮೈಸೂರು ರಾಷ್ಟ್ರೀಯ ಹೆದ್ದಾರಿ ಎನ್‍ಎಚ್-275ನ ಸರ್ವಿಸ್ ರಸ್ತೆ, ಫುಟ್‌ಪಾತ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ₹14.54 ಕೋಟಿ ವೆಚ್ಚದಲ್ಲಿ 1.8 ಕಿ.ಮೀ ವ್ಯಾಪ್ತಿಯ 12 ಮೀಟರ್ ಅಗಲದ ಸರ್ವಿಸ್‌ ರಸ್ತೆ ಹಾಗೂ ರಾಮನಗರ ವ್ಯಾಪ್ತಿಯಲ್ಲಿ ₹52 ಕೋಟಿ ವೆಚ್ಚದಲ್ಲಿ 6 ಕಿ.ಮೀನ ಹೆದ್ದಾರಿಯ ಎರಡೂ ಬದಿಯಲ್ಲಿ 28 ಮೀಟರ್ ಅಗಲದ ಸರ್ವಿಸ್ ರಸ್ತೆ, ಫುಟ್‌ಪಾತ್‌ ರಸ್ತೆ, ಹಾಗೂ ಚರಂಡಿ (ಯುಟಿಲಿಟಿ ಡಕ್) ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಮುಂದಿನ ವಾರ ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ₹45 ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

ಕ್ಷದ ಮುಖಂಡರು ಬಿಡದಿ ಹಾಗು ರಾಮನಗರದ ಅಭಿವೃದ್ಧಿಗೆ ರಸ್ತೆ, ಬೈಪಾಸ್, ರಸ್ತೆ ವಿಸ್ತರಣೆ,  ತ್ಯಾಜ್ಯ ವಿಲೇವಾರಿ  ಘಟಕ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಂಸದರ ಮುಂದಿಟ್ಟರು.

ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜು, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್, ಎಂಇಐ ಅಧ್ಯಕ್ಷ ಶೇಷಾದ್ರಿ ಶಶಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ರಾಮನಗರ ನಗರಸಭೆ ಅಧ್ಯಕ್ಷ ಪಿ. ರವಿ ಕುಮಾರ್, ಉಪಾಧ್ಯಕ್ಷೆ ಸಮೀನಾತಾಜ್‌, ಆಯುಕ್ತ ಕೆ. ಮಾಯಣ್ಣಗೌಡ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಶಿವಕುಮಾರ್‌, ಮುಖಂಡ ಎಲ್‌. ಚಂದ್ರಶೇಖರ್‌ ಇತರರು ಇದ್ದರು.

**

ರಸ್ತೆ ಒತ್ತುವರಿಯನ್ನು ತೆರವುಗೊಳಿಸಲು ನಗರಸಭೆ, ಪೊಲೀಸರ ಸಹಕಾರ ಪಡೆದು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು.
–ಡಿ.ಕೆ. ಸುರೇಶ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT