ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದ ಬಾಲಾಂಜನೇಯ ಬ್ರಹ್ಮರಥೋತ್ಸವ

ಜಿಲ್ಲೆಯ ವಿವಿಧೆಡೆ ಜಾತ್ರಾ ಮಹೋತ್ಸವ, ಮನೆಯಲ್ಲಿ ಹಬ್ಬದ ವಾತಾವರಣ, ಭಕ್ತರಿಂದ ಹರಕೆ ಸಲ್ಲಿಕೆ
Last Updated 13 ಮಾರ್ಚ್ 2017, 7:07 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದಲ್ಲಿ ಭಾನುವಾರ ವರದ ಬಾಲಾಂಜನೇಯಸ್ವಾಮಿ ಬ್ರಹ್ಮ ರಥೋತ್ವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಥೋತ್ಸವ ಪ್ರಯುಕ್ತ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ ಕುಮಾರ್, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಸ್ಥಳೀಯ ಮುಖಂಡರು ರಥೋತ್ವದಲ್ಲಿ ಭಾಗವಹಿಸಿದ್ದರು.

ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಎತ್ತಿನ ಗಾಡಿಗಲ್ಲಿ ತರಲಾಗಿದ್ದ ಪಾನಕವನ್ನು ವಿತರಿಸಲಾಯಿತು. ವಿವಿಧ ಸಂಘ– ಸಂಸ್ಥೆಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸುಡು ಬಿಸಿಲಿನ ನಡುವೆಯೂ ಹೆಚ್ಚಿನ ಸಂಖ್ಯೆಯ ಜನರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಥಕ್ಕೆ ಬಾಳೆಹಣ್ಣು,  ಹಾಗೂ ದವನ ಎಸೆದು ಪುನೀತರಾದರು.

ಬಿಸಿಲಿನ ಬೇಗೆಯ ನಡುವೆ ಐಸ್‌ ಕ್ರೀಂ, ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿ ನಡೆಯಿತು. ಮಕ್ಕಳು ಬಲೂನ್‌ ಹಾಗೂ ಆಟಿಕೆಗಳನ್ನು ಖರೀದಿಸಿ ಖುಷಿಪಟ್ಟರು.

ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಪುರಿ, ಕಾರದಾಣಿ, ಬತ್ತಾಸು ಖರೀದಿಸಿ ಕೊಂಡೊಯ್ಯುವುದು ಸಾಮಾನ್ಯವಾಗಿ ಕಂಡುಬಂತು.

ಹೋಳಿ: ಪಟ್ಟಣದಲ್ಲಿ ಭಾನುವಾರ ಹೋಳಿ ಆಚರಿಸಲಾಯಿತು. ಯುವಕರ ಗುಂಪುಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು.

ಸೋಮೇಶ್ವರಸ್ವಾಮಿ ರಥೋತ್ಸವ:  ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇಗುಲದಲ್ಲಿನ ಶಿವ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಂಚಲಿಂಗ ಕ್ಷೇತ್ರದಲ್ಲಿ ನಡೆದ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಥೋತ್ಸವದ ಪ್ರಯುಕ್ತ ಸಾಂಸ್ಕೃತಕ ಕಾರ್ಯಕ್ರಮ ನಡೆಯಿತು.

ವಿವಿಧ ದೇವರ ರಥೋತ್ಸವ
ಮುಳಬಾಗಿಲು:
ಹೋಳಿ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹಲವೆಡೆ ವಿವಿಧ ದೇವರ ಬ್ರಹ್ಮರಥೋತ್ಸವ ನಡೆಯಿತು. ಕದರಿಪುರ ಕಂಬದ ಲಕ್ಷ್ಮಿನರಸಿಂಹಸ್ವಾಮಿ, ತಿರುಮನಹಳ್ಳಿ ವೇಣುಗೋಪಾಲಸ್ವಾಮಿ, ಮೋಪರಹಳ್ಳಿ ಗ್ರಾಮದ ಮಾರಿಮ್ಮದೇವಿ ಹಾಗೂ ದೇವರಾಯಸಮುದ್ರದ ಅಂಕಾಳಮ್ಮದೇವಿ ಬ್ರಹ್ಮ ರಥೋತ್ಸವ ಭಾನುವಾರ ವಿಜೃಭಣೆಯಿಂದ ನೆರವೇರಿತು.

ಕಂಬದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಅಂಗವಾಗಿ ಮೂರು ದಿನಗಳಿಂದ ಮೂಲದೇವರಿಗೆ ಪಂಚಾಮೃತ ಅಭಿಷೇಕ, ಮೂಲ ದೇವರಿಗೆ ಪೂಲಂಗಿ ಸೇವೆ, ಹೋಮ, ಧ್ವಜಾರೋಹಣ, ಕಲ್ಯಾಣೋತ್ಸವ, ಉತ್ಸವ ಮೂರ್ತಿಗಳಿಗೆ ತಿರುಮಂಜನ ಸೇವೆ ನಡೆದವು.
ತಾಲ್ಲೂಕಿನ ತಿರುಮನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಅದೇ ರೀತಿಯಾಗಿ ಮೋಪರಹಳ್ಳಿ ಗ್ರಾಮದ ಮಾರಿಯಮ್ಮ ದೇವಿ ಬ್ರಹ್ಮ ರಥೋತ್ಸವಕ್ಕೂ ಮುನ್ನ ಒಂಬ್ಬತ್ತು ದಿನಗಳ ಕಾಲ ದೇವಾಲಯದಲ್ಲಿ ಪೂಜೆಗಳು ನಡೆದವು.

ದೇವರಾಯಸಮುದ್ರ ಗ್ರಾಮದ ಹೊರ ವಲಯದಲ್ಲಿರುವ ಅಂಕಾಳಮ್ಮದೇವಿ ರಥೋತ್ಸವ ಮುನ್ನಾ ದಿನ ರಾತ್ರಿ ಕಲ್ಯಾಣೋತ್ಸವ ನಡೆಯಿತು.
ಬ್ರಹ್ಮ ರಥೋತ್ಸವಕ್ಕೆ ಬಂದಿದ್ದ ಭಕ್ತರು ರಥವನ್ನು ಎಳೆದು ಕೆಲವರು ತಮ್ಮ ಹರಕೆಗಳನ್ನು ತೀರಿಸಿಕೊಂಡರೆ, ಇನ್ನೂ ಕೆಲವರು ರಥದ ಮೇಲೆ             ಉಪ್ಪು, ಜೀರಿಗೆ, ಮೆಣಸು, ದವನ, ಬಾಳೆಹಣ್ಣು, ವಿವಿಧ ಬಗೆಯ ಹೂ ಚೆಲ್ಲಿ ಹಾಗೂ ಜೋಡಿ ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿಕೊಂಡರು.

ಇಲ್ಲಿನ ಬ್ರಹ್ಮ ರಥೋತ್ಸವಕ್ಕೆ ಬಂದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ತೀರ್ಥ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಡಿವೈಎಸ್‌ಪಿ ಪ್ರಭಾಕರ್ ಬಾಯಿರಿ, ಸರ್ಕಲ್ ಇನ್‌ಸ್ಪೆಕ್ಟರ್‌ ರಾಜಣ್ಣ, ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಬೈರಾ, ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟ್‌ರ್ ಬಿ.ಟಿ.ಗೋವಿಂದು ಅವರು ತಾಲ್ಲೂಕಿನ ಹಲವೆಡೆ ನಡೆದ ಬ್ರಹ್ಮ ರಥೋತ್ಸವಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT