ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ನೆಲೆ ಕಾಣದ ‘ಆದರ್ಶ’

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
‘ಸಂಸದರ ಆದರ್ಶ ಗ್ರಾಮ ಎಂದು ನಮ್ಮೂರು ಘೋಷಣೆಯಾಗಿ ಇಲ್ಲಿಗೆ ಎರಡು ವರ್ಷ. ಈ ಅವಧಿಯಲ್ಲೇ ಆರು ಮಂದಿ ಪಿಡಿಒಗಳು (ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ) ಬದಲಾಗಿದ್ದಾರೆ. ಹೀಗಾದರೆ ಯೋಜನೆ ಅನುಷ್ಠಾನಗೊಂಡು ಊರು ಉದ್ಧಾರ ಆಗೋದು ಯಾವಾಗ್ರೀ’ ಎಂದು ಪ್ರಶ್ನಿಸಿದರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಚೊಳಚಗುಡ್ಡದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ಬಡಿಗೇರ.
 
‘ಮೇಲಧಿಕಾರಿಗಳೊಂದಿಗೆ ಸರಿಬರುತ್ತಿಲ್ಲ ಎನ್ನುತ್ತಾ ಪಂಚಾಯ್ತಿಯಲ್ಲಿ ಪಿಡಿಒಗಳು ನಿಲ್ಲುತ್ತಿಲ್ಲ. ಮಹಿಳಾ ಅಧಿಕಾರಿಯೊಬ್ಬರು ಒಂದು ವಾರ ಮಾತ್ರ ಇದ್ದರು. ರಜೆ ಹಾಕಿ ಹೋದವರು ವರ್ಗಾವಣೆ ಪತ್ರ ಕೈಯಲ್ಲಿಟ್ಟುಕೊಂಡೇ ಬಂದಿದ್ದರು. ಈಗಲೂ ಪಂಚಾಯ್ತಿಗೆ ಪೂರ್ಣಪ್ರಮಾಣದ ಪಿಡಿಒ ಇಲ್ಲ. ಸಮೀಪದ ಹಳದೂರು ಪಂಚಾಯ್ತಿಯವರಿಗೆ ಇಲ್ಲಿನ ಹೆಚ್ಚುವರಿ ಕಾರ್ಯಭಾರ ಇದ್ದು, ವಾರದಲ್ಲಿ ಮೂರು ದಿನ ಬಂದು ಹೋಗುತ್ತಾರೆ.

ದೈನಂದಿನ ಕೆಲಸಗಳನ್ನು ಬಿಲ್ ಕಲೆಕ್ಟರ್‌ಗೆ ಹೇಳಿ ಮಾಡಿಸಬೇಕಿದೆ. ಇನ್ನು ಯೋಜನೆಗಳ ಬಗ್ಗೆ ಮುತುವರ್ಜಿ ವಹಿಸುವವರ್‍ಯಾರು’ ಎಂದು ಅಳಲು ತೋಡಿಕೊಂಡರು.
 
‘ನಮ್ಮೂರನ್ನು ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಗೆ ಸೇರಿಸಿದ್ದರಿಂದ ನಾವು ಪಡೆದದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ‘ಆದರ್ಶ ಗ್ರಾಮ’ ಯೋಜನೆಗೆ ಈ ಗ್ರಾಮ ಆಯ್ಕೆಯಾದ ಕಾರಣ ಬೇರೆ ಯೋಜನೆಗಳು ಊರಿಗೆ ಸಿಗುತ್ತಿಲ್ಲ’ ಎಂದು ಪಂಚಾಯ್ತಿ ಸದಸ್ಯ ಶರಣಯ್ಯ ಹಂಪಿಹೊಳಿಮಠ ಮುನಿಸು ತೋರಿದರು.
 
ಗದಗ–ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿರುವ ಚೊಳಚಗುಡ್ಡ ಮಲಪ್ರಭಾ ನದಿ ದಂಡೆಯಲ್ಲಿದೆ. ಬಾದಾಮಿ ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲಿ ಇದೂ ಒಂದು. ಖ್ಯಾಡ ಹಾಗೂ ನಾಗರಾಳ ಗ್ರಾಮಗಳು ಚೊಳಚಗುಡ್ಡ ಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. 
 
ಕಾರ್ಗಿಲ್ ಯುದ್ಧದ ವೇಳೆ ಹುತಾತ್ಮರಾದ ಯೋಧ ಸಂಗಯ್ಯ ಹಿರೇಮಠ ಅವರ ಕಾರಣಕ್ಕೆ ಆಗ ಚೊಳಚಗುಡ್ಡ ದೇಶದ ಗಮನ ಸೆಳೆದಿತ್ತು.   ಊರಿನಲ್ಲಿ ಈಗಲೂ 30ಕ್ಕೂ ಹೆಚ್ಚು ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಸಂಸದ ಪಿ.ಸಿ.ಗದ್ದಿಗೌಡರ ಅವರ ಹುಟ್ಟೂರು ಹೆಬ್ಬಳ್ಳಿಗೆ ಕೂಗಳತೆಯಲ್ಲಿದೆ. ಉತ್ತರ ಕರ್ನಾಟಕದ ಶಕ್ತಿ ದೇವತೆಯ ನೆಲೆ ಎನಿಸಿದ ಬನಶಂಕರಿ ಹಾಗೂ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನಗಳು 
 
ಇದೇ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಾರಣ ಈ ಗ್ರಾಮ ಗಮನ ಸೆಳೆಯುತ್ತದೆ. ತಮ್ಮ ಗ್ರಾಮಕ್ಕೆ ‘ಆದರ್ಶ’ದ ಕೋಡು ಮೂಡಲಿದೆ ಎಂಬುದು ಸ್ಥಳೀಯರ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಈ ಹಿಂದೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದವರು ಅನಾರೋಗ್ಯದಿಂದ ಸಾವಿಗೀಡಾದರು. ನಂತರ ಲಲಿತಾ ಬಡಿಗೇರ ಅಧ್ಯಕ್ಷರಾಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆದರೂ ಆದರ್ಶ ಗ್ರಾಮ ಯೋಜನೆ ಅನುಷ್ಠಾನದ ಬಗ್ಗೆ ಸಭೆ ನಡೆದಿಲ್ಲ ಎಂಬುದು ಸದಸ್ಯರ ಆರೋಪ.
 
‘ಇಲ್ಲ’ಗಳದ್ದೇ ಕಾರುಬಾರು
‘ಸಂಸದರು ತಮ್ಮ ಹುಟ್ಟೂರು ಹಾಗೂ ಪತ್ನಿಯ ತವರು ಹೊರತಾಗಿ ಕ್ಷೇತ್ರದ ಯಾವುದೇ ಗ್ರಾಮ ಆಯ್ದುಕೊಂಡು ಆದರ್ಶದ ನೆಲೆಗೆ ಕೊಂಡೊಯ್ಯಬಹುದಾಗಿದೆ. 2019ರ ವೇಳೆಗೆ 2,400 ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ, ಪ್ರಧಾನಿ ಆಶಯ ಬಾಗಲಕೋಟೆ ಕ್ಷೇತ್ರದ ವ್ಯಾಪ್ತಿಯ ಚೊಳಚಗುಡ್ಡದಲ್ಲಿ ಇನ್ನೂ ಈಡೇರಿಲ್ಲ.
 
ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಿಸಿಕೊಡಬೇಕೆಂದು ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ಏಕೆಂದರೆ ಆಸ್ಪತ್ರೆ ಮುಖ ಕಾಣಬೇಕಾದರೆ ತಾಲ್ಲೂಕು ಕೇಂದ್ರ ಬಾದಾಮಿ ಇಲ್ಲವೇ ಪಕ್ಕದ ಬೇಲೂರಿಗೆ ಹೋಗಬೇಕಿದೆ. ಶವ ಸಂಸ್ಕಾರಕ್ಕೆ ಊರಿನಲ್ಲಿ ಸ್ಮಶಾನ ಇಲ್ಲ. ದಾನಿಯೊಬ್ಬರು ಜಮೀನು ಕೊಟ್ಟಿದ್ದರೂ ಕೆಲವೊಮ್ಮೆ ಅದು ಅವರ ಮರ್ಜಿ ಅವಲಂಬಿಸಿದೆ.
 
‘ರುದ್ರಭೂಮಿಗೆ 4.5 ಎಕರೆ ಜಾಗ ಗುರುತಿಸಲಾಗಿದೆ.  ಆದರೆ ಖರೀದಿ ವೇಳೆ ಬೆಲೆ ನಿಗದಿ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಜಮೀನಿನ ಮಾಲೀಕರ ನಡುವೆ ಕಳೆದೊಂದು ದಶಕದಿಂದ ಹಗ್ಗ-ಜಗ್ಗಾಟ ಮುಂದುವರೆದಿದೆ. ಇದರಿಂದ ಹೊಳೆಯ ದಂಡೆ, ಹಳ್ಳದ ಸರಹದ್ದಿನಲ್ಲಿ ಶವಸಂಸ್ಕಾರ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ  ಶರಣಯ್ಯ.
 
2007 ಹಾಗೂ 2009ರಲ್ಲಿ ಮಲಪ್ರಭ ಮುನಿಸಿಕೊಂಡಾಗ ಚೊಳಚಗುಡ್ಡ ಒಳಗೊಂಡಂತೆ ಖ್ಯಾಡ ಹಾಗೂ ನಾಗರಾಳ ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿವೆ. ಗ್ರಾಮಸ್ಥರಿಗೆ ಆಗ ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಆಸರೆ ಮನೆ ಕಟ್ಟಿಸಿಕೊಡಲಾಗಿತ್ತು. ಆದರೆ ಆ ಮನೆಗಳನ್ನು ಗ್ರಾಮ ಇನ್ನೂ ಪಂಚಾಯ್ತಿಗೆ ವಹಿಸದಿರುವುದು ಅಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಗಿಲ್ಲ. 
 
‘ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ’ ಎಂಬುದು ಊರವರ ಪರಿಸ್ಥಿತಿ. ನದಿಯ ಫಾಸಲೆಯಲ್ಲಿದ್ದರೂ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ. ಹೆಚ್ಚಿನ ಮನೆಗಳಿಗೆ ನಲ್ಲಿ ಸಂಪರ್ಕ ಇದ್ದರೂ ನೀರು ಬರುವುದಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಐದು ಕೊಳವೆಬಾವಿಗಳು ಮೂರು ಹಳ್ಳಿಗಳ ದಾಹ ನೀಗಿಸುತ್ತಿವೆ.

ಇತ್ತೀಚೆಗೆ ಮಳೆ ಅಭಾವದಿಂದ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಅಷ್ಟಕ್ಕಷ್ಟೆ. ಜೊತೆಗೆ ಫ್ಲೋರೈಡ್ ಪ್ರಮಾಣದಿಂದ ಕುಡಿಯಲು ಬಳಕೆ ಮಾಡುವಂತಿಲ್ಲ. ಪಂಚಾಯ್ತಿ ಕಚೇರಿ ಪಕ್ಕದ ಶುದ್ಧ ನೀರಿನ ಘಟಕ ಈಗ ಊರಿನ ಕುಡಿಯಲು ನೀರಿನ ಮೂಲ. ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆ.
 
ಮಳೆಗಾಲದಲ್ಲಿ ಮೈದುಂಬಿ ನೆರೆ ರೂಪ ತಾಳಿ ಆಟಾಟೋಪ ಮಾಡುವ ಮಲಪ್ರಭೆಯ ನೀರನ್ನು ಸಮೀಪದ ದೊಡ್ಡವ್ವನ ಕೆರೆ ಇಲ್ಲವೇ ವೀರಭದ್ರೇಶ್ವರನ ಗುಡಿಯ ಕೆರೆಗೆ (ಈರಣ್ಣನ ಕೆರೆ) ತುಂಬಿಸಿ ಅದನ್ನು ಶುದ್ಧೀಕರಿಸಿ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕಿದೆ.
 
ಜೊತೆಗೆ ಬನಶಂಕರಿಯ ಹರಿದ್ರಾತೀರ್ಥ ಹೊಂಡ ಕಳೆದ ನಾಲ್ಕು ವರ್ಷಗಳಿಂದ ಬತ್ತಿದೆ. ಮಳೆಯ ಪ್ರಮಾಣ ಕುಂಠಿತ ಹಾಗೂ ಸರಸ್ವತಿ ಹಳ್ಳದ ಪಸೆ ಬತ್ತಿರುವುದು ಹೊಂಡದ ಈ ಸ್ಥಿತಿಗೆ ಕಾರಣವಾಗಿದೆ. ಮಲಪ್ರಭಾ ನದಿಯಿಂದ ಹೊಂಡ ತುಂಬಿಸುವ ಕಾರ್ಯ ನಡೆದರೆ ಅಂತರ್ಜಲ ಮಟ್ಟ ಹೆಚ್ಚಲಿದೆ ಎನ್ನುತ್ತಾರೆ ಸ್ಥಳೀಯರು.

ಅಂಗನವಾಡಿಗೆ ಹೊಸ ಕಟ್ಟಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ಥಿ ಮಾಡಬೇಕಿದೆ. ಸಂತೆ ಮೈದಾನ ಅಭಿವೃದ್ಧಿ, ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣ, ಊರಿನಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಡುವ ಜೊತೆಗೆ ಒಳಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಆದರ್ಶ ಗ್ರಾಮ ಯೋಜನೆಯಡಿ ಇಲ್ಲಿಯವರೆಗೆ ತಲಾ ಹದಿಮೂರು ಶೌಚಾಲಯಗಳನ್ನು ಒಳಗೊಂಡ ಏಳು ಗುಚ್ಛಗಳನ್ನು ನಿರ್ಮಿಸಲಾಗಿದೆ.

ಅದರಲ್ಲಿ ಐದು ಚೊಳಚಗುಡ್ಡದಲ್ಲಿ ಇವೆ. ಪ್ರವಾಸಿಗರ ಉಪಯೋಗಕ್ಕೆ ಒಂದು ಬನಶಂಕರಿ ದೇವಸ್ಥಾನದ ಬಳಿ ಇದ್ದರೆ, ಮತ್ತೊಂದು ಖ್ಯಾಡ ಗ್ರಾಮದಲ್ಲಿ ಬಳಕೆಯಾಗುತ್ತಿದೆ. ಊರಿನಲ್ಲಿ ಸಿ.ಸಿ ರಸ್ತೆ, ಗಟಾರ ನಿರ್ಮಿಸಿದ್ದರೂ ಅದಕ್ಕೆ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿಎ) ಅಡಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ.

‘₹2.80 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು  ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗೆ ಜಿಲ್ಲಾ ಪಂಚಾಯ್ತಿಗೆ ಕಳುಹಿಸಿದರೆ ಹಿಂದಿನ ಸಿಇಒ ವಾಪಸ್ ಕಳುಹಿಸಿದ್ದರು. ಊರಿನ ಅಗತ್ಯಗಳ ಈಡೇರಿಸಿಕೊಳ್ಳಲು ಉದ್ಯೋಗ ಖಾತರಿಯ ಕಡೆ ಬೆರಳು ತೋರಿಸುವುದು ಸರಿಯಲ್ಲ. ಅದು ಮೊದಲಿನಿಂದಲೂ ಇದೆ. ಜೊತೆಗೆ ಬೇರೆ ಪಂಚಾಯ್ತಿಗಳಲ್ಲೂ ಅನುಷ್ಠಾನಗೊಳ್ಳುತ್ತಿದೆ. ಹಾಗಿದ್ದ ಮೇಲೆ ಆದರ್ಶ ಗ್ರಾಮ ಪಂಚಾಯ್ತಿ ಎನಿಸಿದ ನಮ್ಮೂರಿಗೂ ಬೇರೆ ಗ್ರಾಮ ಪಂಚಾಯ್ತಿಗೂ ಏನು ವ್ಯತ್ಯಾಸವಿದೆ’ ಎಂದು ಪಂಚಾಯಿತಿ ಸದಸ್ಯ ಬಸಯ್ಯ ಪ್ರಶ್ನಿಸುತ್ತಾರೆ.

‘ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ದೀಪದ ವ್ಯವಸ್ಥೆ, ಸ್ವಚ್ಛತೆ, ಸಾರಿಗೆ ಸಂಪರ್ಕ, ಶೌಚಾಲಯ ಮತ್ತು ಒಳಚರಂಡಿ ಸೌಕರ್ಯ ಕಲ್ಪಿಸುವ ಜೊತೆಗೆ ಉದ್ಯೋಗಾವಕಾಶ ಕಲ್ಪಿಸಲು ಸಂಸದರು ಒತ್ತು ನೀಡಬೇಕಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ. ಎಂ.ಎಚ್‌. ಚಲವಾದಿ. ‘ಆದರ್ಶ ಗ್ರಾಮದಲ್ಲಿ ಶಿಕ್ಷಣ, ಆರ್ಥಿಕ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆದಿವೆ. ಶೌಚಾಲಯ ಕಟ್ಟಿಸಿದ್ದಾರೆ. ಉಳಿದಂತೆ ಯಾವುದೇ ಕಾರ್ಯ ಆಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಮೃತ್ಯುಂಜಯ ಹಿರೇಮಠ.

ಯೋಧರ ನೆಲೆ ಚೊಳಚಗುಡ್ಡ
ಚೊಳಚಗುಡ್ಡ ಮೊದಲಿನಿಂದಲೂ ಯೋಧರ ನೆಲೆ. ಮಹಾತ್ಮಾ ಗಾಂಧೀಜಿ ಅವರ ‘ಮಾಡು ಇಲ್ಲವೇ ಮಡಿ’ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಗ್ರಾಮದ ಸಿದ್ದಪ್ಪ ಮಾಳವಾಡ, ಶಂಕರಗೌಡ ಪಾಟೀಲ ಜೈಲುವಾಸಿಗಳಾಗಿದ್ದರು. ಮಹಾರುದ್ರಪ್ಪ ಪಟ್ಟಣಶೆಟ್ಟಿ, ಚಂದ್ರಶೇಖರಯ್ಯ ಶಿವಮಠ, ಚಿನ್ನಪ್ಪ ಗಂಗಾಲ ಕೂಡ ಅವರ ಬೆನ್ನಿಗೆ ನಿಂತಿದ್ದರು.

1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ವೇಳೆ ಹೊಳೆ ಆಲೂರ ಮತ್ತು ಲಖಮಾಪೂರ ರೈಲ್ವೆ ನಿಲ್ದಾಣಗಳಲ್ಲಿ ಹಳಿ ಕಿತ್ತು ಹಾಕಿದ್ದ ಸಿದ್ದಪ್ಪ ಮಾಳವಾಡ, ಮಹಾರುದ್ರಪ್ಪ ಪಟ್ಟಣಶೆಟ್ಟಿ, ಶಂಕರಗೌಡ ಪಾಟೀಲ ಬ್ರಿಟಿಷರ ಕೆಂಗಣ್ಣಿಗೂ ಗುರಿಯಾಗಿದ್ದರು. 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ  ಗ್ರಾಮದ ಶಿವಬಸಯ್ಯ ಬಸಯ್ಯ ಕುಲಕರ್ಣಿ ಹುತಾತ್ಮರಾದಾಗ ಅವರ ಬಗ್ಗೆ ರಚಿಸಿದ ಲಾವಣಿ, ಜನಪದ ಹಾಡುಗಳು ಮನೆ ಮನೆ ತಲುಪಿ ಮನಕಲಕಿದ್ದವು. ಶಿವಬಸಯ್ಯ ಅವರ ವೀರಗಲ್ಲನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ.
 
ತುಳಸಿ ಚೊಳಚಿಯಾದಾಗ...
ತುಳಸಿಗೆ ಈ ಭಾಗದ ಆಡು ಭಾಷೆಯಲ್ಲಿ ಚೊಳಚಿ ಎನ್ನುತ್ತಾರೆ. ಸುತ್ತಲಿನ ಗುಡ್ಡಗಳಲ್ಲಿ ತುಳಸಿಗಿಡಗಳು ಯಥೇಚ್ಚವಾಗಿ ಬೆಳೆಯುತ್ತಿದ್ದ ಕಾರಣ ಚೊಳಚಿಗುಡ್ಡ ಮುಂದೆ ಚೊಳಚಗುಡ್ಡ ಎಂದು ಬದಲಾಯಿತು. ಮಲಪ್ರಭೆಯ ಫಾಸಲೆಯಲ್ಲಿ ವರ್ಷವಿಡೀ ನೀರು ಹರಿಯುತ್ತಿದ್ದ ಸರಸ್ವತಿ ಹಳ್ಳ, ಬನಶಂಕರಿಯ ಹರಿದ್ರಾತೀರ್ಥ ಹಳ್ಳ ಚೊಳಚಗುಡ್ಡದ ಸಮೃದ್ಧಿಗೆ ಕಾರಣವಾಗಿವೆ.

ದೇವಸ್ಥಾನ ಹಾಗೂ ಊರಿನ ಸುತ್ತಲೂ ತೆಂಗು,ಕಂಗು, ಬಾಳೆ ತೊನೆಯಲು, ವೀಳ್ಯದೆಲೆ ಬಳ್ಳಿಗಳ ಬಳುಕಾಟಕ್ಕೆ ಇಂಬು ನೀಡಿವೆ.  ತೋಟಗಾರಿಕೆ ಬೆಳೆಗಳಿಗೆ ಹೆಸರಾಗಿರುವ ಈ ಊರಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಇಲ್ಲವೇ ತೋಟಗಾರಿಕೆ ಇಲಾಖೆಯವರು ಸಂಸ್ಕರಣಾ ಘಟಕಗಳು ಇಲ್ಲವೇ ಕೌಶಲ ಅಭಿವೃದ್ಧಿ ಕೇಂದ್ರ ತೆರೆದು ಊರಿನ ಮಕ್ಕಳಿಗೆ ಕೆಲಸ ಅಥವಾ ಶಿಕ್ಷಣ ಕೊಡಲಿ ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT