ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಮ್ಮದೇವಿ ಬ್ರಹ್ಮರಥೋತ್ಸವ

ಮಾರ್ಚ್ 16ರಿಂದ 23ರವರೆಗೆ ಉತ್ಸವ
Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಪ್ರೊ. ಹನಿಯೂರು ಚಂದ್ರೇಗೌಡ
ಸದಾ ಉಗ್ರರೂಪದಲ್ಲಿಯೇ ಕಾಣಿಸಿಕೊಳ್ಳುವ ಬಿಸಿಲಮ್ಮದೇವಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಸೌಮ್ಯಸ್ವರೂಪಿಯಾಗಿದ್ದಾಳೆ. ಸುಮಾರು 600 ವರ್ಷಗಳ ಇತಿಹಾಸವುಳ್ಳ ಈ ದೇವಿಗೀಗ ಬ್ರಹ್ಮರಥೋತ್ಸವದ ಸಂಭ್ರಮ. ಸುತ್ತಲಿನ 37 ಹಳ್ಳಿಗಳ ಆರಾಧ್ಯ ದೇವತೆಯಾಗಿರುವ ಈಕೆಯ ರಥೋತ್ಸವ ಇದೇ 16-23ರವರೆಗೆ ನಡೆಯಲಿದೆ.
 
ಮೊದಲ ದಿನ ಹವನ-ಹೋಮ, ಅಂಕುರಾರ್ಪಣೆ, ಹೂವಿನ ತೇರು, 17ರಂದು ಬಿಸಿಲಮ್ಮದೇವಿ ಮೆರವಣಿಗೆ ಹಾಗೂ ಮಹೋತ್ಸವ, 18ರಂದು ಹರಸೇವೆ, ಒಕ್ಕಲಮನೆಗಳಿಂದ ಪೂಜೆಸ್ವೀಕಾರ, ಕಿಚ್ಚುಹಾಯಿಸುವುದು- ಮಹಾಮಂಗಳಾರತಿ, ಪಂಜಿನ ಸೇವೆ ನಡೆದು ಆಕೆಯನ್ನು ಕರಗದ ಮನೆಯಲ್ಲಿ ಇಡುವ ಕಾರ್ಯಕ್ರಮ ನಡೆಯಲಿದೆ.

19ರಂದು ಅಕ್ಕೂರು ಗ್ರಾಮದಿಂದ ಬಿಸಿಲಮ್ಮದೇವಾಲಯಕ್ಕೆ ಮೆರವಣಿಗೆ ನೆರವೇರಲಿದ್ದು, 20ರಂದು ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಮರುದಿನ ಸಿಡಿ ಆಡುವುದು, ಉಯ್ಯಾಲೋತ್ಸವ, ಮುತ್ತಿನ ಪಲ್ಲಕ್ಕಿ ಮೆರವಣಿಗೆ; ಅನ್ನಸಂತರ್ಪಣೆ, 22ರಂದು ದೇವಿಗೆ ವಸಂತೋತ್ಸವ, ಮುತ್ತಿನ ಉಯ್ಯಾಲೋತ್ಸವ ನಡೆಯುತ್ತದೆ. ಮತ್ತೆ ಕರಗದ ಮನೆಗೆ ಬಿಸಿಲಮ್ಮದೇವಿಯನ್ನು ಕರೆತರುವ ಮೂಲಕ ಉತ್ಸವಕ್ಕೆ ತೆರೆ ಬೀಳುತ್ತದೆ. 
 
ಬಿಸಿಲಮ್ಮ ಎಂಬ ಹೆಸರು ಬರುವ ಹಿಂದೆ ಕುತೂಹಲ ಕಥನವಿದೆ. ಅದೇನೆಂದರೆ ಹಿಂದೆ ಮುಸಲ್ಮಾನ್ ದೊರೆಗಳು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುವ ಕಾರಣಕ್ಕೆ ಯಾವುದೇ ಗುಡಿ, ಗೋಪುರ ನಿರ್ಮಿಸಲು ಹಿಂದೇಟು ಹಾಕಲಾಗುತ್ತಿತ್ತು. ಈ ಬಿಸಿಲಮ್ಮದೇವಿಯ ವಿಗ್ರಹ ಇಟ್ಟ ಆ ವಿಶಾಲ ತೋಪಿನಲ್ಲಿ ಸುತ್ತಲೂ ನಾಲ್ಕು ಗೋಡೆ ನಿರ್ಮಿಸಿ, ಪೂಜಿಸಲಾಗುತ್ತಿತ್ತು. ಸದಾ ಬಿಸಿಲಿನಲ್ಲಿಯೇ ಇದ್ದು, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದ ಕಾರಣಕ್ಕೆ ಈ ಅಮ್ಮನಿಗೆ ಬಿಸಿಲಮ್ಮ ಎಂಬ ಹೆಸರು ಬಂದಿದೆ ಎನ್ನುವುದು ಸಂಶೋಧಕ ಡಾ. ಮಹೇಂದ್ರಕುಮಾರ್ ಅವರ ಅಭಿಮತ.
 
20 ಎಕರೆ ವಿಸ್ತೀರ್ಣದ ವಿಶಾಲ ತೋಪಿನಲ್ಲಿ ಬಿಸಿಲಮ್ಮದೇವಿಯ ದೇವಾಲಯ ಹರಡಿಕೊಂಡಿದೆ. ಪಕ್ಕದಲ್ಲಿಯೇ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ ಕಣ್ವ ನದಿ ತೀರವಿದೆ. ಅವರೇ ಸ್ಥಾಪಿಸಿದ ಶಿವ-ಗಣಪತಿಯ ವಿಗ್ರಹ, ಜನಪದ ಕತೆಯ ಪ್ರಕಾರ ತನ್ನ ಅಕ್ಕ ಕಬ್ಬಾಳಮ್ಮದೇವಿಯ ಶಾಪದಿಂದ ಕಲ್ಲುಗಳಾಗಿರುವ (ಬಿಸಿಲಮ್ಮದೇವಿಯ ಎಂಟು ಜನ ಮಕ್ಕಳಲ್ಲಿ ಒಬ್ಬನಾದ ಸಿಡಿರಣ್ಣ ಮಾತ್ರ ಬದುಕಿ, ಮಿಕ್ಕ ಏಳು ಜನರು ಕಲ್ಲುಗಳಾದುದರ ಹಿಂದೆ ಒಂದು ಕುತೂಹಲಕಾರಿ ಕತೆಯಿದೆ.
 
ಅದು ಉಗ್ರಸ್ವರೂಪಿಯಾದ ಕಬ್ಬಾಳಮ್ಮ ಬಿಸಿಲಮ್ಮದೇವಿಯ ಅಕ್ಕ. ಅವಳು ಬಂಜೆಯಾಗಿದ್ದು, ಒಮ್ಮೆ ಅವಳು ತಂಗಿ ಬಿಸಿಲಮ್ಮನ ಮನೆಗೆ ಬರುತ್ತಾಳೆ. ಆಗ ಬಂಜೆಯೂ ಉಗ್ರಸ್ವರೂಪಿಯಾದ ನನ್ನ ಅಕ್ಕ ಕಬ್ಬಾಳಮ್ಮ ಮಕ್ಕಳನ್ನು ಮುಟ್ಟಿದರೆ ಕೇಡಾಗುತ್ತದೋ ಭಯದಿಂದ ಮನೆಯಲ್ಲಿದ್ದ ಏಳು ಜನ ಮಕ್ಕಳನ್ನು ಬುಟ್ಟಿಯಲ್ಲಿಟ್ಟು, ಕಬ್ಬಾಳಮ್ಮನಿಗೆ ಹೊರಹೋಗಿದ್ದಾರೆ ಎನ್ನುತ್ತಾಳೆ.
 
ಬುಟ್ಟಿಯಲ್ಲಿ ಅವಿತಿಟ್ಟಿದ್ದನ್ನು ಕಂಡ ಕಬ್ಬಾಳಮ್ಮ ಕೋಪದಿಂದ, ಹೊರಗೆ ಆಟವಾಡಲು ಹೋಗಿರುವ ಮಗ ಬದುಕಲಿ, ಮಿಕ್ಕವರು ಕಲ್ಲಾಗಲಿ ಎಂದು ಶಾಪ ನೀಡುತ್ತಾಳೆ. ಅದರಂತೆ ಹೊರಗೆ ಹೋಗಿದ್ದ ಮಗ ಸಿಡಿರಣ್ಣ ಬದುಕಿದರೆ, ಬುಟ್ಟಿಯಲ್ಲಿಟ್ಟಿದ್ದ ಮಿಕ್ಕ 7 ಜನ ಮಕ್ಕಳು ಕಲ್ಲಾಗುತ್ತಾರೆ). ಈ ದೇಗುಲ ಚನ್ನಪಟ್ಟಣದಿಂದ 12 ಕಿ.ಮೀ ದೂರದಲ್ಲಿದ್ದು, ಚನ್ನಪಟ್ಟಣದಿಂದ ಹೊಂಗನೂರು ಮಾರ್ಗವಾಗಿ ಕೋಡಂಬಹಳಿಯಲ್ಲಿ ಇಳಿಯಬೇಕು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT