ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶಾ ಕನ್ನಡದಲ್ಲೂ ನಟಿಸಬೇಕಂತೆ...

ಮಾಡೆಲ್‌ ಆಗಿ ಗುರುತಿಸಿಕೊಳ್ಳುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಈ ಚೆಲುವೆ
Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬಟ್ಟಲು ಕಂಗಳು, ಮಂದಸ್ಮಿತ ಚೆಲ್ಲಿದ ಮುಖ, ಹಾಲಲ್ಲಿ ಅದ್ದಿ ತೆಗೆದಂಥ ಮೈಬಣ್ಣ ಇಶಾ ತಲ್ವಾರ್‌ ಅವರದ್ದು. ಹಿಂದಿ, ತಮಿಳು, ಮಲಯಾಳ ಹಾಗೂ ತೆಲುಗು ಭಾಷೆಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿರುವ ಇಶಾ ತಮ್ಮ ಸೌಂದರ್ಯದಿಂದಷ್ಟೇ ಅಲ್ಲ ವಿಶೇಷ ಪ್ರತಿಭೆ ಹಾಗೂ ನೇರ ನುಡಿಯಿಂದ ಖ್ಯಾತರಾದವರು.
 
ನಟನೆಯಷ್ಟೇ ನೃತ್ಯವನ್ನೂ ಆರಾಧಿಸುವ ಇಶಾ ಸಮಕಾಲೀನ ನೃತ್ಯ ಪ್ರಕಾರ ಬಲ್ಲವರು. ಕಳೆದ ಎರಡು ವರ್ಷಗಳಿಂದ ಶಾಸ್ತ್ರೀಯ ನೃತ್ಯ ಕಥಕ್‌ ನೃತ್ಯವನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಮಾಡೆಲ್‌ ಆಗಿ ಗುರುತಿಸಿಕೊಳ್ಳುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಈ ಚೆಲುವೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸುವ ತವಕ ಅವರದು.
 
– ನಿಮ್ಮ ಸಿನಿಮಾ ಪ್ರಾಜೆಕ್ಟ್‌ಗಳ ಬಗೆಗೆ ಹೇಳಿ? 
ಹಿಂದಿ ಸಿನಿಮಾ. ಸದ್ಯದಲ್ಲೇ ತೆರೆಗೆ ಬರಲಿದೆ. ಅಕ್ಷತ್‌ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸೈಫ್‌ ಅಲಿ ಖಾನ್‌ ನಾಯಕನಾಗಿ ನಟಿಸಿದ್ದಾರೆ. ‘ಟ್ಯೂಬ್‌ಲೈಟ್‌’ ಎನ್ನುವ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಅದರಲ್ಲಿ ನನ್ನದು ಕೌಟುಂಬಿಕ ಪಾತ್ರ. ಕಬೀರ್‌ ಖಾನ್‌ ನಿರ್ದೇಶನ ಇದಕ್ಕಿದೆ. ಮಲಯಾಳ ಸಿನಿಮಾ ‘ಮುದ್ರಾ’ದಲ್ಲಿ ಮಾಡುತ್ತಿದ್ದೇನೆ. ಸದ್ಯದಲ್ಲೇ ಇನ್ನೂ ಕೆಲ ಸಿನಿಮಾಗಳಿಗೆ ಸಹಿ ಹಾಕಲಿದ್ದೇನೆ.
 
– ಮಾಡೆಲ್‌ ಆಗಿದ್ದವರು ಈಗ ಸಿನಿಮಾಕ್ಕೆ ಬಂದಿದ್ದೀರಿ. ಇಷ್ಟದ ಕ್ಷೇತ್ರ ಯಾವುದು?
ಮಾಡೆಲಿಂಗ್‌ ಸಿನಿಮಾ ಎರಡೂ ಇಷ್ಟ. ಇತ್ತೀಚೆಗೆ ಸಿನಿಮಾದಲ್ಲಿ ನಟಿಸುವುದು ಹೆಚ್ಚು ಖುಷಿ ನೀಡುತ್ತಿದೆ. 
 
–ನಿಮ್ಮ ಫಿಟ್‌ನೆಸ್‌ ಗುಟ್ಟೇನು?
ಅಷ್ಟಾಂಗ ಯೋಗ ನನ್ನ ಫಿಟ್‌ನೆಸ್‌ ಗುಟ್ಟು. ನೃತ್ಯ ಮಾಡುತ್ತೇನೆ. ಈ ಮೊದಲು ಸಮಕಾಲೀನ ನೃತ್ಯ ಕಲಿತಿದ್ದೇನೆ. ಟೆರೆನ್ಸ್‌ ಲೂಯಿಸ್‌ ಅವರ ನೃತ್ಯ ಶಾಲೆಯಲ್ಲಿ ಅಭ್ಯಸಿಸಿ ಬೆಲ್ಲಿ, ಜಾಜ್‌, ಹಿಪ್‌ಹಾಪ್‌, ಸಾಲ್ಸಾ ಮುಂತಾದ ನೃತ್ಯ ಮಾಡುತ್ತಿದ್ದೆ. ಇತ್ತೀಚೆಗೆ ಕಥಕ್‌ ಕಲಿಯುತ್ತಿದ್ದೇನೆ. ನೃತ್ಯ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ನೀಡುತ್ತದೆ.
 
–ಸಿನಿಮಾ ಹೇಗೆ ಆಯ್ದುಕೊಳ್ಳುತ್ತೀರಿ?
ಆಯ್ಕೆ ಮಾಡಿಕೊಳ್ಳುವಾಗ ಇಂಥದ್ದೇ ಕಾರಣ ಅಂತ ಇರುವುದಿಲ್ಲ. ಮನಸು ಒಪ್ಪುವ ಸಿನಿಮಾ ಮಾಡುತ್ತೇನೆ. ಕೆಲವೊಮ್ಮೆ ಕಥೆ ಕೇಳುತ್ತಿದ್ದಂತೆ ಈ ಸಿನಿಮಾದಲ್ಲಿ ನಾನು ಅಭಿನಯಿಸಬೇಕು ಎನಿಸುತ್ತದೆ. ಆಗ ಒಪ್ಪಿಕೊಳ್ಳುವೆ. ನಟನೆಗೆ ಪ್ರಾಧಾನ್ಯ ಇರುವ ಪಾತ್ರ ನನ್ನ ಆಯ್ಕೆ.
 
–ಇತ್ತೀಚೆಗೆ ಯಾವ ಸಿನಿಮಾ ನೋಡಿದಿರಿ?
ಮಾರ್ಟಿನ್‌ ಸ್ಕೊರ್ಸೆಸ್‌ ಅವರ ‘ಸೈಲೆನ್ಸ್‌’ ಸಿನಿಮಾ ನೋಡಿದೆ. ಸಿನಿಮಾ ನೋಡೋಕೆ ಅಷ್ಟೊಂದು ಸಮಯ ಸಿಗುವುದಿಲ್ಲ. ಯೋಗ, ನೃತ್ಯ, ಸಿನಿಮಾ ಚಿತ್ರೀಕರಣ, ಪ್ರಯಾಣ, ಮೀಟಿಂಗ್‌ಗಳಲ್ಲಿ ಹೆಚ್ಚಿನ ಸಮಯ ಕಳೆದುಹೋಗುತ್ತದೆ. 
 
– ನಟನೆ ಬಿಟ್ಟು ನಿಮ್ಮ ಇತರೆ ಹವ್ಯಾಸ?
ನೃತ್ಯ, ಪ್ರಯಾಣ ತುಂಬಾ ಇಷ್ಟ. ಸಿನಿಮಾಕ್ಕೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ. 
 
–ನಿಮ್ಮ ಕನಸಿನ ಪಾತ್ರ?
ಐತಿಹಾಸಿಕ ಸಿನಿಮಾ (ಪೀರಿಯಾಡಿಕಲ್‌) ಮಾಡಲು ತುಂಬಾ ಇಷ್ಟವಾಗುತ್ತದೆ. ಅದರಲ್ಲೂ ಅಂತಹ ಸಿನಿಮಾದಲ್ಲಿ ನೃತ್ಯಗಾರ್ತಿಯ ಪಾತ್ರ ಮಾಡಬೇಕು ಎಂಬ ಕನಸಿದೆ.
 
– ನಿಮಗೆ ಸಿಗುತ್ತಿರುವ ಪಾತ್ರಗಳ ಬಗೆಗೆ ಸಮಾಧಾನವಿದೆಯೇ?
ನಟನೆಗೇ ಹೆಚ್ಚು ಪ್ರಾಧಾನ್ಯವಿರುವ ಸಿನಿಮಾದಲ್ಲಿ ಕೆಲಸ ಮಾಡುವ ಆಸೆ ಇದೆ. ಬೇಗ ಅಂಥ ಪಾತ್ರ ಸಿಗುತ್ತದೆ ಎಂದುಕೊಳ್ಳುವೆ.
 
– ಕನ್ನಡದಲ್ಲಿ ನಟಿಸುವುದಿಲ್ಲವೇ?
ದಕ್ಷಿಣ ಭಾರತದ ಸಿನಿಮಾ ಪಟ್ಟಿಯಲ್ಲಿ ಅದೊಂದೇ ಭಾಷೆಯ ಸಿನಿಮಾ ನಾನು ಮಾಡದಿರುವುದು. ಕನ್ನಡದಲ್ಲಿ ಅಭಿನಯಿಸುವ ಆಸೆ ತುಂಬಾ ಇದೆ. ಅವಕಾಶಗಳೂ ಸಾಕಷ್ಟು ಬಂದಿದ್ದವು. ಆದರೆ ಮಾತುಕತೆ ಮುಂದುವರಿದಿಲ್ಲ. ಉತ್ತಮ ಅವಕಾಶ ಸಿಕ್ಕರೆ ಖಂಡಿತಾ ಕನ್ನಡದಲ್ಲೂ ಅಭಿನಯಿಸುತ್ತೇನೆ.
 
–ಬೆಂಗಳೂರು ಹೇಗನಿಸುತ್ತೆ?
ತುಂಬಾ ಇಷ್ಟ. ನಾನು ಹುಟ್ಟಿದ್ದು ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಬೆಂಗಳೂರು ಕೂಡ ಅದೇ ಆಪ್ತಭಾವ ನೀಡುತ್ತದೆ. ಇಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ.
 
–ನಿಮ್ಮ ಕುಟುಂಬದ ಬಗ್ಗೆ ಹೇಳಿ...
ನಾನು ಅಪ್ಪ– ಅಮ್ಮನ ಜೊತೆಗೇ ಇದ್ದೇನೆ. ಅವರ ಜೊತೆ ಸಮಯ ಕಳೆಯುವುದು ಖುಷಿ ಕೊಡುತ್ತದೆ.  ಹೆಚ್ಚು ಸಮಯ ಅವರ ಜೊತೆ ಇರಲು ಇಷ್ಟಪಡುತ್ತೇನೆ. ಮೊದಲೆಲ್ಲಾ ಅವರಿಂದ ತಪ್ಪಿಸಿಕೊಂಡು ಓಡುತ್ತಿದ್ದೆ. ಮಾಡೆಲಿಂಗ್‌ ಸಿನಿಮಾ ಎನ್ನುತ್ತಾ ನನ್ನದೇ ಜಗತ್ತಿನಲ್ಲೇ ಇದ್ದೆ. ಈಗ ಅವರು ಎಷ್ಟು ಮುಖ್ಯ ಎಂಬುದು ಅರಿವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT