ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ-ಪ್ರಗತಿಪರ ಒಲವುಗಳ ಮುಖಾಮುಖಿ

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹಿಂದುತ್ವ ಎಂಬ ಮತೀಯ ಪರಿಕಲ್ಪನೆಗೆ ಮುಖಾಮುಖಿಯಾಗುವ ಇತರ ಮತೀಯ ಕಲ್ಪನೆಗಳು ಇವೆ. ಮತಾಂಧತೆಗೆ ಮತಾಂಧತೆಯೇ ಮದ್ದಾಗಲಾರದು. ಮತಾಂಧತೆಗೆ ವಿರುದ್ಧವಾಗಿರುವುದು ಭಾಗಶಃ ಎಡಪಂಥೀಯ ಒಲವು ಇರುವ ಕೊಂಚ ಪ್ರಗತಿಪರ ನೆಲೆಗಳು. ಇವು ಅಲ್ಪಸಂಖ್ಯಾತರ ಮತಾಂಧತೆಯನ್ನು ಮೌನವಾಗಿಯೂ, ಬಹುಸಂಖ್ಯಾತರ ಮತಾಂಧತೆಯನ್ನು ಕಟುವಾಗಿಯೂ ವಿರೋಧಿಸುತ್ತಿರುವುದು ವರ್ತಮಾನದ ಚಿತ್ರಣ.

ಆದರೆ ಈ ವಿರೋಧದ ವಿನ್ಯಾಸಗಳು ವಾಸ್ತವದ ಅನುಭವಕ್ಕಿಂತ ಹೆಚ್ಚಾಗಿ ಸೈದ್ಧಾಂತಿಕ ಅಂಶಗಳನ್ನು ಮಾತ್ರ ಪರಿಗಣಿಸುತ್ತಿವೆ. ಅಂದರೆ, ಹಿಂದೂ ಅನ್ನುವುದನ್ನು ವೈದಿಕ ಸಿದ್ಧಾಂತವನ್ನಾಗಿ ಪರಿಗಣಿಸುತ್ತಿರುವುದು ಇದರ ಲಕ್ಷಣ. ವೈಚಾರಿಕವಾಗಿ ಇದು ಸರಿಯಾಗಿಯೇ ಇರಬಹುದು. ಆದರೆ ಅದು ವಾಸ್ತವದ ಅನುಭವವಲ್ಲ.

ಹಿಂದೂ ಅನ್ನುವುದು ವೈದಿಕ ವ್ಯಾಪ್ತಿಯನ್ನಷ್ಟೆ ಹೊಂದಿರುವುದಾದರೆ ಮುಸ್ಲಿಮರಿಗೆ ಅಲ್ಪಸಂಖ್ಯಾತರೆಂಬ ಅಸ್ತಿತ್ವವೇ ಇರುವುದಿಲ್ಲ. ವೈದಿಕರ ಹೊರತಾಗಿಯೂ ಇರುವ ಎಲ್ಲ ಜಾತಿಯವರನ್ನೂ ಹಿಂದೂ ಎಂದು ಭಾವಿಸಿದಾಗಲೇ ಮುಸ್ಲಿಮರಿಗೆ ಅಲ್ಪಸಂಖ್ಯಾತರೆಂಬ ಅಸ್ತಿತ್ವ ಉಳಿದುಕೊಳ್ಳುತ್ತದೆ. ಇದೇ ವಾಸ್ತವದ ಅನುಭವ ಕೂಡ.

ವಾಸ್ತವದ ಅನುಭವಕ್ಕೆ ಹೆಚ್ಚು ಒತ್ತು ಕೊಡದ ಪ್ರಗತಿಪರ ನೆಲೆಗಳು ಜಾತಿವಾದವನ್ನೂ, ಕೋಮುವಾದವನ್ನೂ ಒಟ್ಟಾಗಿಯೇ ನಿರ್ವಹಿಸಲು ಹೊರಡುತ್ತವೆ. ಕೋಮುವಾದದಲ್ಲಿ ಜಾತಿವಾದದ ಅಲೆಗಳು ಇರಬಹುದು. ಆದರೆ ಅವೆರಡೂ ಒಂದೇ ಅಲ್ಲ. ಹಿಂದೂಗಳೆಲ್ಲರೂ ಹಿಂದುತ್ವವಾದಿಗಳಾಗಿರುವುದಿಲ್ಲ. ಆದರೆ ಹಿಂದೂಗಳೆಲ್ಲರೂ ಯಾವುದಾದರೊಂದು ಜಾತಿಯವರೇ ಆಗಿರುತ್ತಾರೆ. ತಾನು ಹುಟ್ಟಿದ ಜಾತಿಯ ಕಾರಣದಿಂದ ಅನುಭವಿಸುವ ಅನುಕೂಲ ಮತ್ತು ಅನನುಕೂಲವನ್ನು ಅನುಭವಿಸಿಯೇ ಇರುತ್ತಾರೆ.

ಜಾತಿಯ ಕಾರಣದ ಅನುಭವವನ್ನು ಮೀರಿ ನಿಂತವರು ಕೂಡ ಆ ಅನುಭವವನ್ನು ಪಡೆದ ಮೇಲೆಯೇ ಮೀರಿ ನಿಂತಿರುತ್ತಾರೆ. ಜಾತಿಯ ವ್ಯಾಪ್ತಿ ಹಿಂದುತ್ವವಾದಕ್ಕಿಂತ ದೊಡ್ಡದು. ಹಾಗಿರುವಾಗ ಹಿಂದುತ್ವವನ್ನು ಟೀಕಿಸಲು ಜಾತೀಯತೆಯನ್ನು ಟೀಕಿಸುವುದಕ್ಕೆ ಬಳಸುವ ಪದಗಳನ್ನು ಬಳಸಿದಂತೆಲ್ಲ, ಹಿಂದುತ್ವವಾದದ ಮೇಲಿನ ಟೀಕೆ ಹಿಂದೂಗಳ ಮೇಲಿನ ಟೀಕೆಯಾಗಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ.

ಈ ಸಮಸ್ಯೆಯನ್ನು ಸಮರ್ಥಿಸಿಕೊಳ್ಳಲು ಹಿಂದೂ ಎಂದರೆ ‘ವೈದಿಕ’ ಅಷ್ಟೆ ಎಂದು ವಾದ ಮಾಡಬಹುದು. ಆದರೆ ಆ ವಾದಕ್ಕೆ ವಾಸ್ತವದ ಅನುಭವವಾಗುವ ಶಕ್ತಿ ಇಲ್ಲ.

ಜಾತಿವಾದಕ್ಕೂ ಹಿಂದುತ್ವವಾದಕ್ಕೂ ಪ್ರಧಾನವಾದ ಒಂದು ವ್ಯತ್ಯಾಸವಿದೆ. ಹಿಂದುತ್ವವಾದ ರಾಷ್ಟ್ರೀಯತೆಯನ್ನು ಗಾಢವಾಗಿ ಹಂಬಲಿಸುತ್ತದೆ. ಆದರೆ ಜಾತಿವಾದ ರಾಷ್ಟ್ರೀಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಈ ಸಮಸ್ಯೆ ಒಂದು ರೀತಿಯಲ್ಲಿ ಎರಡು ಅಲಗಿನ ಕತ್ತಿಯಿದ್ದಂತೆ. ಅದು ಹಿಂದುತ್ವವಾದಿಗಳನ್ನೂ ಇರಿಯುತ್ತದೆ, ಪ್ರಗತಿಪರ ಒಲವಿನವರನ್ನೂ ಇರಿಯುತ್ತದೆ. 

ಹಿಂದುತ್ವವಾದಿಗಳನ್ನು ಹೇಗೆ ಇರಿಯುತ್ತದೆ ಎಂದರೆ, ಹಿಂದೂ ಸಮಾವೇಶದಲ್ಲಿ ‘ನಾವೆಲ್ಲ ಒಂದು’ ಎಂದು ಕೂಗುವ ಹಿಂದುತ್ವವಾದಿಗಳ ನಡುವೆ ಅಷ್ಟೇ ಒಗ್ಗಟ್ಟಿನಿಂದ ವೈವಾಹಿಕ ಸಂಬಂಧಗಳು ಏರ್ಪಡುವುದಿಲ್ಲ. ವೈವಾಹಿಕ ಸಂಬಂಧದ ವಿಚಾರಕ್ಕೆ ಬಂದಾಗ ಜಾತಿ ಕ್ರಿಯಾಶೀಲವಾಗುತ್ತದೆ. ಇದಕ್ಕೆ ಕಾರಣ ಇಷ್ಟೆ: ಹಿಂದೂ ಸಮಾವೇಶಕ್ಕೆ ಬಂದಾಗ ಧಾರ್ಮಿಕ ರಾಷ್ಟ್ರೀಯತೆಯ ಪ್ರಜ್ಞೆ ಕ್ರಿಯಾಶೀಲವಾಗಿರುತ್ತದೆ. ವಿವಾಹದ ವಿಚಾರಕ್ಕೆ ಬಂದಾಗ ರಾಷ್ಟ್ರೀಯತೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾತಿಯ ಪ್ರಜ್ಞೆ ಕ್ರಿಯಾಶೀಲವಾಗಿರುತ್ತದೆ.

ಪ್ರಗತಿಪರ ಒಲವಿರುವವರನ್ನು ಈ ಸಮಸ್ಯೆ ಹೇಗೆ ಇರಿಯುತ್ತದೆ ಎಂದರೆ, ಜಾತೀಯತೆಗೆ ಮುಖಾಮುಖಿಯಾಗುವಾಗ ಹಿಂದೂ ಎನ್ನುವುದು ವೈದಿಕ ತತ್ವಜ್ಞಾನ ಎಂಬ ವೈಚಾರಿಕ ಸಂಗತಿಯನ್ನು ಹೇಳಲೇ ಬೇಕಾಗುತ್ತದೆ. ಆದರೆ ಇದು ವಾಸ್ತವದ ಅನುಭವವಲ್ಲ. ಆಗ ಪ್ರತಿಪಾದಿಸಲಾಗುವ ವಾದಗಳು ಜನರನ್ನು ತಲುಪಲು ದುರ್ಬಲವಾಗುತ್ತವೆ.

ಅಂದರೆ ಬ್ರಾಹ್ಮಣ ವೈಚಾರಿಕತೆಯನ್ನು ಇಡೀ ರಾಷ್ಟ್ರದ ಮೇಲೆ ಹೇರುವುದೇ ಹಿಂದುತ್ವದ ಗೋಪ್ಯ ಕಾರ್ಯಸೂಚಿ ಎಂಬ ವಾದವನ್ನು ಸಾಬೀತು ಮಾಡಲು ಕಷ್ಟವಾಗುತ್ತದೆ. ಏಕೆಂದರೆ ಕಾರ್ಯಸೂಚಿ ಗೋಪ್ಯವಾಗಿದೆ ಎಂದಮೇಲೆ ಅದರ ಸ್ವರೂಪ ಇಂಥದ್ದೇ ಎಂದು ಸಾಬೀತು ಮಾಡಲು ಆಗುವುದಿಲ್ಲ. ಬದಲು ಗುಮಾನಿ ಪಡಬಹುದು ಅಷ್ಟೆ. ಈ ಗುಮಾನಿಯನ್ನು ಜನರು ಒಪ್ಪಬೇಕಾದರೆ ಅದು ಸಾರ್ವತ್ರಿಕ ಅನುಭವವಾಗಬೇಕಾಗುತ್ತದೆ.

ಗುಜರಾತಿನಲ್ಲೋ, ಜಾರ್ಖಂಡ್‌ನಲ್ಲೋ ಮೇಲು ಜಾತಿಯವರು ಕೆಳಜಾತಿಯವರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣವನ್ನು ಜಾತಿವಾದವನ್ನು ಖಂಡಿಸಲು ಬಳಸುವುದು ಸುಲಭ. ಆದರೆ ಕೋಮುವಾದವನ್ನು ಖಂಡಿಸಲು ಇಂಥ ಪ್ರಕರಣವನ್ನು ಬಳಸಬೇಕಾಗಿದ್ದರೆ ಕೆಳಜಾತಿಯವರ ಮೇಲೆ ದೌರ್ಜನ್ಯ ನಡೆಸಿದವರೆಲ್ಲರೂ ಬ್ರಾಹ್ಮಣರು ಮತ್ತು ಅವರೆಲ್ಲರೂ ಹಿಂದುತ್ವವಾದಿಗಳೇ ಆಗಿದ್ದು ಹಿಂದುತ್ವವಾದದ ರಾಷ್ಟ್ರೀಯ ನೆಲೆಗಳು ಸಮಗ್ರವಾಗಿ ಇದನ್ನು ಬೆಂಬಲಿಸಿವೆ ಎಂಬುದನ್ನು ಅರ್ಥ ಮಾಡಿಸಿದಾಗ ಮಾತ್ರ ಜಾತಿವಾದವನ್ನು ಮರುಸ್ಥಾಪಿಸುವುದಕ್ಕಾಗಿಯೇ ಹಿಂದುತ್ವವಾದ ತಲೆ ಎತ್ತಿದೆ ಎಂದು ಜನ ಒಪ್ಪಲು ಸಾಧ್ಯ. ಆದರೆ ಈ ವಾದ ಸಾರ್ವತ್ರಿಕ ಅನುಭವವಲ್ಲ. ಆದ್ದರಿಂದ ಈ ರೀತಿಯ ವಾದ ದುರ್ಬಲವಾಗುತ್ತದೆ.

ಸಾಂಸ್ಕೃತಿಕ ಚಲನೆ ಸಾಮಾನ್ಯವಾಗಿ ಮೇಲು ಜಾತಿಯವರಲ್ಲಿ ಕೆಳಮುಖವಾಗಿಯೂ, ಕೆಳ ಜಾತಿಯವರಲ್ಲಿ ಮೇಲ್ಮುಖವಾಗಿಯೂ ಇರುತ್ತದೆ. ಆಗ ಏನಾಗುತ್ತದೆ? ಒಬ್ಬ ದಲಿತ, ಪ್ರಗತಿಪರ ವಿಚಾರವಂತರೊಂದಿಗೆ ವೇದಿಕೆಯಲ್ಲಿ ಕುಳಿತುಕೊಳ್ಳಬೇಕಾದರೆ ಒಂದೋ ಅವನು ಕವಿ, ಚಿಂತಕ, ಸಾಹಿತಿ ಆಗಬೇಕು. ಅಥವಾ ಜನಪ್ರತಿನಿಧಿ ಆಗಬೇಕು. ಅಥವಾ ಉನ್ನತ ಅಧಿಕಾರಿಯಾಗಬೇಕು.

ಇದು ಯಾವುದೂ ಇಲ್ಲದ ಅವಿದ್ಯಾವಂತ ದಲಿತ ಯುವಕನಿಗೆ ಪ್ರಗತಿಪರರ ಭಾಷಣವನ್ನು ಕೇಳಲು ಮಾತ್ರ ಅವಕಾಶವಿದೆಯೆ ಹೊರತು ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಆದರೆ ಹಿಂದುತ್ವವಾದಿ ಸಂಘಟನೆಯು ಒಬ್ಬ ಅವಿದ್ಯಾವಂತ ದಲಿತ ಯುವಕನಿಗೆ ಒಂದು ಗ್ರಾಮದ ಉಸ್ತುವಾರಿಯ ಅಧಿಕಾರವನ್ನು ಕೊಟ್ಟು ವೇದಿಕೆಯಲ್ಲಿ ಸ್ಥಾನವನ್ನು ಕೊಡಬಲ್ಲುದು.

ಸಾಮಾಜಿಕ ಸ್ಥಾನಮಾನದ ಮಾನವ ಸಹಜ ಹಂಬಲ ಅವನಿಗೆ ಅಲ್ಲಿ ಈಡೇರುತ್ತದೆ. ಮುಂದೆ ಎಂದೋ ಹಿಂದೂ ರಾಷ್ಟ್ರ ನಿರ್ಮಾಣವಾದಾಗ ಇದೇ ಜನರು ಅವನ ಮೇಲೆ ದೌರ್ಜನ್ಯ ನಡೆಸಲಿದ್ದಾರೆ ಎಂದರೆ ಈ ಕ್ಷಣದ ಅವನ ಆತ್ಮ ಸಮ್ಮಾನವನ್ನು ಕಳೆದುಕೊಳ್ಳಲು ಅವನು ತಯಾರಿರುತ್ತಾನಾ? ಮನುಸ್ಮೃತಿಯಲ್ಲಿ ಏನೆಲ್ಲ ಹೇಳಿದೆ ಎಂದು ವಿವರಿಸಿದರೆ, ‘ಅದನ್ನೆಲ್ಲ ಓದಿದ ನಂತರವೇ ನಾನು ಯಾರೊಂದಿಗೆ ಹೋಗಬೇಕೆಂಬ ನಿರ್ಧಾರಕ್ಕೆ ಬರಲಿದ್ದೇನೆ’ ಎಂದು ತೀರ್ಮಾನಿಸುತ್ತಾನಾ?

ಹಿಂದುತ್ವವಾದಿಗಳಲ್ಲಿಯೂ, ಪ್ರಗತಿಪರ ಒಲವಿರುವವರಲ್ಲಿಯೂ ಸಮಾನವಾಗಿ ಕಾಣುವ ಒಂದು ಅಂಶವಿದೆ. ದಲಿತರೂ ಹಿಂದೂಗಳೇ ಎನ್ನುವ ಹಿಂದುತ್ವವಾದಿ ವ್ಯವಸ್ಥೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣವನ್ನು ಖಂಡಿಸಲು ಹೋಗುವುದಿಲ್ಲ. ‘ನಾವದನ್ನು ಸಮರ್ಥಿಸುವುದಿಲ್ಲ’ ಎನ್ನುವುದಷ್ಟೇ ಉತ್ತರವಾಗಿರುತ್ತದೆ. ಸಮರ್ಥಿಸದೆ ಇದ್ದ ಮಾತ್ರಕ್ಕೆ ಖಂಡಿಸಿದ ಹಾಗೆ ಆಗುವುದಿಲ್ಲ. ಪ್ರಗತಿಪರ ಒಲವು ಉಳ್ಳವರು ಹಿಂದುತ್ವವಾದಿಗಳನ್ನು ಕಟುವಾಗಿ ಖಂಡಿಸಬಲ್ಲರು. ಆದರೆ ಅಲ್ಪಸಂಖ್ಯಾತರಲ್ಲೂ ಇರುವ ಮತಾಂಧ ತಂಡಗಳನ್ನು ಖಂಡಿಸಲಾರರು.

ಕೆಲವೊಮ್ಮೆ ಸಭೆ ಮಾಡಲು ಜನ ಇಲ್ಲದೆ ಇದ್ದಾಗ ಅಲ್ಪಸಂಖ್ಯಾತ ಮತೀಯ ತಂಡಗಳೇ ಪ್ರಗತಿಪರ ರೂಪಧಾರಿಗಳಾಗಿ ಪ್ರಗತಿಪರ ಸಮಾವೇಶದಲ್ಲಿ ಪಾಲುದಾರರೂ ಆಗಿರುತ್ತಾರೆ! ಏಕೆಂದರೆ ಇಲ್ಲಿ ತಮ್ಮ ಮತಾಂಧತೆಯ ಬಗ್ಗೆ ಖಂಡನೆ ಇರುವುದಿಲ್ಲ ಎಂದು ಅವರಿಗೆ ಗೊತ್ತಿರುತ್ತದೆ.

ಈ ಬಗ್ಗೆ ಪ್ರಗತಿಪರ ಒಲವಿರುವವರನ್ನು ಕೇಳಿದರೆ, ನಾವು ಅಲ್ಪಸಂಖ್ಯಾತರಲ್ಲಿರುವ ಮತಾಂಧರನ್ನು ಸಮರ್ಥಿಸುವುದಿಲ್ಲ ಎಂಬ ಉತ್ತರ ಬರುತ್ತದೆ. ಸಮರ್ಥಿಸಲಿಲ್ಲ ಎಂದ ಮಾತ್ರಕ್ಕೆ ಖಂಡಿಸಿದಂತಾಗುವುದಿಲ್ಲ. ಒಟ್ಟಿನಲ್ಲಿ ಈ ಮುಖಾಮುಖಿಗಳು ಜನಕರನ್ನು ಗೊಂದಲದಲ್ಲಿ ಕೆಡಹುವ ವ್ಯವಹಾರವಾಗುತ್ತಿವೆಯೇ ಹೊರತು ಸಾಮಾಜಿಕ ಅರಿವನ್ನು ಬೆಳೆಸುವ ಕೆಲಸವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT