ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ, ಮಣಿಪುರ ಗದ್ದುಗೆ ಗುದ್ದಾಟ

Last Updated 14 ಮಾರ್ಚ್ 2017, 3:48 IST
ಅಕ್ಷರ ಗಾತ್ರ

ನವದೆಹಲಿ: ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಗೋವಾ ಮತ್ತು ಮಣಿಪುರಗಳಲ್ಲಿ ಅಧಿಕಾರ ಗದ್ದುಗೆ ಏರುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಿಕ್ಕಾಟ ನಡೆಸುತ್ತಿವೆ. ಬಿಜೆಪಿಯು ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.ಮಣಿಪುರದಲ್ಲಿ ಎನ್‌. ಬಿರೇನ್‌ ಸಿಂಗ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ. ಸರ್ಕಾರ ರಚನೆಗೆ  ಹಕ್ಕು ಮಂಡಿಸಿರುವ  ಅವರು, ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರಿಂದ ಸರ್ಕಾರ ರಚನೆಗೆ ಆಹ್ವಾನ ಬರುವ ನಿರೀಕ್ಷೆಯಲ್ಲಿದ್ದಾರೆ.

ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ನ ನೇತೃತ್ವ ವಹಿಸಿರುವ ನಿರ್ಗಮಿತ ಮುಖ್ಯಮಂತ್ರಿ ಓಕ್ರಮ್‌ ಇಬೋಬಿ ಸಿಂಗ್‌ ಅವರು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಪ್ರತಿಪಾದಿಸಿದ್ದಾರೆ.ಆದರೆ, ಪ್ರಾದೇಶಿಕ ಪಕ್ಷಗಳು ತನಗೆ ಬೆಂಬಲ ನೀಡಿರುವ ಪತ್ರಗಳನ್ನು ಬಿಜೆಪಿಯು ಸಲ್ಲಿಸಿರುವುದರಿಂದ ರಾಜ್ಯಪಾಲರು ಸರ್ಕಾರ ರಚಿಸುವಂತೆ ಬಿಜೆಪಿಗೇ ಆಹ್ವಾನ ನೀಡುವ ಸಾಧ್ಯತೆ ಇದೆ.

‘ಎರಡನೇ ಸ್ಥಾನ ಪಡೆದಿರುವ ಪಕ್ಷಕ್ಕೆ ಸರ್ಕಾರ ರಚಿಸುವ ಹಕ್ಕಿಲ್ಲ. ಬಿಜೆಪಿಯು ಗೋವಾ ಮತ್ತು ಮಣಿಪುರಗಳಲ್ಲಿ ಫಲಿತಾಂಶಗಳನ್ನು ಬುಡಮೇಲು ಮಾಡುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸೋತಿರುವ ಕಾಂಗ್ರೆಸ್‌ ಎರಡೂ ರಾಜ್ಯಗಳಲ್ಲಿ ರಾಜ್ಯಪಾಲರ ಪಾತ್ರವನ್ನು ಪ್ರಶ್ನಿಸಿದೆ. ಗೋವಾ, ಮಣಿಪುರಗಳಲ್ಲಿ ಸರ್ಕಾರ ರಚಿಸಲು ಏಕೈಕ ದೊಡ್ಡ ಪಕ್ಷಕ್ಕೆ ಆಹ್ವಾನ ನೀಡಬೇಕಿತ್ತು ಎಂಬುದು ಅದರ ವಾದ.

‘ಸರಳ ಬಹುಮತಕ್ಕೆ ನಮಗೆ ಎರಡೇ ಸ್ಥಾನಗಳ ಕೊರತೆ ಇವೆ. ದೊಡ್ಡ ಪಕ್ಷಕ್ಕೆ ಮೊದಲು ಅವಕಾಶ ನೀಡಬೇಕು. ಇದು ರಾಜ್ಯಪಾಲರ ಅಸಾಮರ್ಥ್ಯವನ್ನು ತೋರಿಸುತ್ತದೆ’ ಎಂದು ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.

ತಿರುಗೇಟು: ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಬಿಜೆಪಿ, ಎರಡೂ ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರ ಬಲ ತನಗಿದೆ ಎಂದು ಹೇಳಿದೆ.
‘ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಬಹುತೇಕ ಶಾಸಕರು ಮೈತ್ರಿ ಮಾಡಿಕೊಂಡರೆ, ಮೈತ್ರಿ ಕೂಟದ ಮುಖಂಡನನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಮತ್ತು ಕಡಿಮೆ ಅವಧಿಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸುವ ಸಾಂವಿಧಾನಿಕ ಹಕ್ಕು ರಾಜ್ಯಪಾಲರಿಗೆ ಇದೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ನೆನಪಿಸಿದ ಒಮರ್‌: ಈ ಮಧ್ಯೆ, 2002ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹದೇ ಸನ್ನಿವೇಶ ನಿರ್ಮಾಣವಾಗಿದ್ದನ್ನು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮುಖಂಡ ಒಮರ್‌ ಅಬ್ದುಲ್ಲಾ ಕಾಂಗ್ರೆಸ್‌ಗೆ ನೆನಪಿಸಿದ್ದಾರೆ.

‘2002ರಲ್ಲಿ ರಾಜ್ಯದಲ್ಲಿ ಎನ್‌ಸಿ ಏಕೈಕ ದೊಡ್ಡ ಪಕ್ಷವಾಗಿತ್ತು. ಆದರೆ, ಕಾಂಗ್ರೆಸ್‌ ಮತ್ತು ಪಿಡಿಪಿ ಜಂಟಿಯಾಗಿ ಬಹುಮತಕ್ಕೆ ಬೇಕಾದಷ್ಟು ಶಾಸಕರನ್ನು ಹೊಂದಿದ್ದರಿಂದ ರಾಜ್ಯಪಾಲರು ಸರ್ಕಾರ ರಚನೆಗೆ ಅವರನ್ನು ಆಹ್ವಾನಿಸಿದ್ದರು’ ಎಂದು ಒಮರ್‌ ಹೇಳಿದ್ದಾರೆ.

ಕ್ಷಮೆ ಕೋರಿದ ದಿಗ್ವಿಜಯ್‌ ಸಿಂಗ್‌

ಗೋವಾದ ಪ್ರಾದೇಶಿಕ ಪಕ್ಷಗಳಾದ ಎಂಜಿಪಿ ಮತ್ತು ಜಿಎಫ್‌ಪಿ ಹಾಗೂ ಪಕ್ಷೇತರ ಶಾಸಕರ ಬೆಂಬಲ ಗಳಿಸಲು ಬಿಜೆಪಿ ‘ಹಣ ಬಲ’ ಬಳಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಗೋವಾ ಉಸ್ತುವಾರಿ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.‘ಜನರ ಬಲಕ್ಕಿಂತ ಹಣ ಬಲ ಗೆದ್ದಿದೆ. ಸರ್ಕಾರ ರಚನೆಗೆ ಬೇಕಾಗುವಷ್ಟು ಶಾಸಕರ ಬೆಂಬಲವನ್ನು ಒಟ್ಟುಗೂಡಿಸಲು ಸಾಧ್ಯವಾಗದಿರುವುದಕ್ಕೆ ಗೋವಾ ಜನತೆಯ ಕ್ಷಮೆ ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರಿಗೆ ಪತ್ರ

ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ತನ್ನನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿ ಗೋವಾ ಕಾಂಗ್ರೆಸ್‌, ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಪತ್ರ ಬರೆದಿದೆ.

ರಾಜೀನಾಮೆ

ಓಕ್ರಮ್‌ ಇಬೋಬಿ ಸಿಂಗ್‌ ಅವರು ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ. ಹೊಸ ಸರ್ಕಾರ ರಚನೆಗಾಗಿ ತಕ್ಷಣವೇ ರಾಜೀನಾಮೆ ನೀಡುವಂತೆ ಸಿಂಗ್‌ ಅವರಿಗೆ ರಾಜ್ಯಪಾಲರಾದ ನಜ್ಮಾ ಹೆಪ್ತುಲ್ಲಾ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT