ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಕ್ಕಿ: ಒತ್ತುವರಿ ತೆರವುಗೊಳಿಸಿದರೆ ಸಾಕೇ?

Last Updated 14 ಮಾರ್ಚ್ 2017, 5:04 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಯೊಳಗೆ ಕಳೆ ಗಿಡಗಳದ್ದೇ ಸಾಮ್ರಾಜ್ಯ, ಅಲ್ಲಲ್ಲಿ ಮಾಂಸದ ತ್ಯಾಜ್ಯ, ಬೆಟ್ಟದಂತೆ ಬಿದ್ದಿರುವ ಕಟ್ಟಡಗಳ ಅವಶೇಷ, ವ್ಯಾಪಕವಾಗುತ್ತಿರುವ ನೊರೆ ಸಮಸ್ಯೆ, ಊರಿಡೀ ಸೊಳ್ಳೆ ಕಾಟ...

ಇದು ಸಾರಕ್ಕಿ ಕೆರೆಯ ದಯನೀಯ ಸ್ಥಿತಿ. ಕೆರೆ ತನ್ನ ಒಡಲೊಳಗೆ ಕಶ್ಮಲದ ಪಿಡುಗನ್ನು ಇಟ್ಟುಕೊಂಡು ವಿಷ ಕಾರುತ್ತಿದೆ. ಎಲ್ಲೆಡೆ ಘನತ್ಯಾಜ್ಯ ತುಂಬಿದ್ದು, ಜೊಂಡು ಬೆಳೆದಿರುವುದರಿಂದ ನೀರಿದೆ ಎಂಬುದೇ ಗೊತ್ತಾಗು­ವುದಿಲ್ಲ. ದುರ್ನಾತ ಬೀರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಹೈಕೋರ್ಟ್‌ ನಿರ್ದೇಶನದ ಮೇರೆಗೆ ನಗರ ಜಿಲ್ಲಾಡಳಿತವು 2015ರ ಏಪ್ರಿಲ್‌ನಲ್ಲಿ (16ರಿಂದ 24ರ ವರೆಗೆ) ಕಾರ್ಯಾಚರಣೆ ನಡೆಸಿ ಕೆರೆಯ ಒತ್ತುವರಿ ತೆರವು ಮಾಡಿತ್ತು. ಇದರಲ್ಲಿ 178 ವಾಸದ ಮನೆಗಳು, 18 ಅಂಗಡಿಗಳು, 7 ವಸತಿ ಸಂಕೀರ್ಣಗಳು ಸೇರಿದ್ದವು. ಕೆಲವು ಕಟ್ಟಡಗಳನ್ನು ಸಂಪೂರ್ಣ ನೆಲಸಮ ವಾಗಿದ್ದರೆ, ಇನ್ನು ಕೆಲವು ಭಾಗಶಃ ಧ್ವಂಸಗೊಂಡಿದ್ದವು. 15 ಕಟ್ಟಡಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಕೆರೆಯಂಗಳದಲ್ಲಿದ್ದ ಮೈದಾನದಲ್ಲೇ ಪೆಂಡಾಲ್‌ ಹಾಕಿಸಿ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿದ್ದರು. ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಅಧಿಕಾರಿಗಳು ಘೋಷಿಸಿದ್ದರು.

ಪ್ರಭಾವಿಗಳಿಂದ ಕಟ್ಟಡ ಮರು ನಿರ್ಮಾಣ: ಈ ‘ಮಹಾ ಕಾರ್ಯಾಚರಣೆ’ ಮುಗಿದು ಎರಡು ವರ್ಷಗಳು ಕಳೆದಿವೆ. ಮನೆ ಕಳೆದುಕೊಂಡ ಬಡವರು ನೆಲೆ ಅರಸಿ ಬೇರೆ ಕಡೆ ಹೋಗಿದ್ದಾರೆ. ಕೆಲವರು ಭಯದಿಂದ ಕಟ್ಟಡಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಪ್ರಭಾವಿಗಳ ಕಟ್ಟಡಗಳು ಮತ್ತೆ ಮೇಲಕ್ಕೆ ಎದ್ದಿವೆ. ಪುರವಂಕರ ಅಪಾರ್ಟ್‌ಮೆಂಟ್‌ ಸಮುಚ್ಚಯದ ತಡೆಗೋಡೆಯೂ ಮತ್ತಷ್ಟು ಎತ್ತರಕ್ಕೆ ಏರಿದೆ. ಕೆರೆ ಮಾತ್ರ ‘ಪತನಗೊಂಡ ಸಾಮ್ರಾಜ್ಯ’ದಂತೆ ಕಾಣುತ್ತಿದೆ.

ಡಂಪಿಂಗ್‌ ಯಾರ್ಡ್‌: ಸುಮಾರು 300 ಲೋಡ್‌ ಕಟ್ಟಡ ತ್ಯಾಜ್ಯಗಳನ್ನು ಕೆರೆಯಂಗಳದಲ್ಲಿ ಸುರಿಯಲಾಗಿದ್ದು, ಇದು ಡಂಪಿಂಗ್‌ ಯಾರ್ಡ್‌ನಂತೆ ಕಾಣುತ್ತಿದೆ. ಅಕ್ರಮ ರಸ್ತೆಗಳ ವಿಸ್ತೀರ್ಣ ಮತ್ತಷ್ಟು ಹಿಗ್ಗಿದೆ. ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ 12 ದೇವಸ್ಥಾನಗಳಲ್ಲಿ ಘಂಟಾನಾದ ಮತ್ತಷ್ಟು ಜೋರಾಗಿದೆ. ‘ಒತ್ತುವರಿ ತೆರವುಗೊಳಿಸಿದರೆ ಸಾಕೇ’ ಎಂಬುದು ಹೆಚ್ಚಿನ ನಿವಾಸಿಗಳ, ಹೋರಾಟಗಾರರ ಪ್ರಶ್ನೆ.

‘ಒತ್ತುವರಿ ತೆರವು ಹೆಸರಿನಲ್ಲಿ ಅಧಿಕಾರಿಗಳು ನಡೆಸಿದ್ದು ಜಾತ್ರೆಯನ್ನು. ಅವರು ಅರೆಬರೆ ಕೆಲಸವಷ್ಟೇ ಮಾಡಿದರು. ಸಾಕಷ್ಟು ಪ್ರಖ್ಯಾತಿಯನ್ನೂ ಪಡೆದರು. ಬಳಿಕ ಮತ್ತೊಂದು ಕೆರೆಯನ್ನು ಹುಡುಕಿ ಹೊರಟರು. ಮತ್ತೆ ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ ಎಂಬುದು ನಿವಾಸಿಗಳಿಗೆ ಗೊತ್ತಾಯಿತು. ಯಾವುದೇ ಅಂಜಿಕೆ ಇಲ್ಲದೆ ಕೆಲವರು ಮನೆಗಳನ್ನು ನಿರ್ಮಿಸಿದರು. ಇದು ಮತ್ತಷ್ಟು ಹದಗೆಡಲಿದೆ. ಉದ್ಧಾರ ಆಗಲ್ಲ ಬಿಡಿ’ ಎಂದು ಸ್ಥಳೀಯ ನಿವಾಸಿಗಳು ನೋವಿನಿಂದ ಹೇಳುತ್ತಾರೆ. ‘ಇಲ್ಲೇ ನೋಡಿ, ಸಮೀಪದಲ್ಲೇ 10 ಮನೆಗಳು ಹೊಸ ರೂಪ ಪಡೆದಿವೆ’ ಎಂದೂ ತೋರಿಸುತ್ತಾರೆ. ‘ಕೆರೆ ಉಳಿಯುತ್ತಾ’ ಎಂದು ಪ್ರಶ್ನಿಸಿದರೆ, ‘ಈಗ ಅದು ಎಲ್ಲಿ ಉಂಟಪ್ಪ, ನಿನಗೇನು ಹುಚ್ಚಾ’ ಎಂದು ಮರುಪ್ರಶ್ನಿಸುತ್ತಾರೆ.

ನಯಾಪೈಸೆ ಕೆಲಸ ಆಗಿಲ್ಲ:‘ಜಿಲ್ಲಾಡಳಿತ ಒತ್ತುವರಿ ತೆರವು ಮಾಡಿ ಇದನ್ನು ಬಿಡಿಎಗೆ ಹಸ್ತಾಂತರ ಮಾಡಿತು. ಬಿಡಿಎ ಅಧಿಕಾರಿಗಳು ₹14 ಕೋಟಿಯ ಯೋಜನೆಯ ಕಡತ ಹಿಡಿದುಕೊಂಡು ಒಂದು ವರ್ಷ ವ್ಯರ್ಥ ಕಾಲಹರಣ ಮಾಡಿದರು. ಬಳಿಕ ದುಡ್ಡಿಲ್ಲ ಎಂಬ ನೆಪ ಒಡ್ಡಿ ಕೈಚೆಲ್ಲಿದರು. ಈಗ ಇದು ಬಿಬಿಎಂಪಿ ಸ್ವಾಧೀನದಲ್ಲಿದೆ. ಇಲ್ಲಿಯ ವರೆಗೆ ನಯಾಪೈಸೆ ಕೆಲಸ ಆಗಿಲ್ಲ’ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆಯ ಈಶ್ವರಪ್ಪ ಮಡಿವಾಳಿ ದೂರುತ್ತಾರೆ.

‘2016ರ ಆಗಸ್ಟ್‌ನಲ್ಲಿ ಜೋರು ಮಳೆ ಬಂದು ಅಕ್ಕಪಕ್ಕದ ಮನೆಗಳು ಜಲಾವೃತಗೊಂಡವು. ಆಗ ಅಧಿಕಾರಿಗಳು  ಎರಡು ಕಡೆಗಳಲ್ಲಿ ಕೋಡಿ ಒಡೆಸಿದರು. ಗಡಿಬಿಡಿಯಲ್ಲಿ ತೂಬು ನಿರ್ಮಾಣ ನೆಪದಲ್ಲಿ ಅಲ್ಪಸ್ವಲ್ಪ ಕಾಮಗಾರಿ ಮಾಡಿದರು. ಮಣ್ಣನ್ನು ಕೆರೆಯೊಳಗೆ ಸುರಿದರು. ಇದರಿಂದಾಗಿ ಕೆರೆಯ ನೀರೆಲ್ಲ ಬತ್ತಿ ಹೋಗಿದೆ. ಮತ್ತೆ ಈ ಕಡೆಗೆ ತಲೆ ಹಾಕಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಆರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಮಾಡಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಅಧಿಕಾರಿಗಳು ಯೋಜನೆ ರೂಪಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕೊನೆಗೆ ಕೆರೆ ಉಳಿಯುವುದು ಹತ್ತಿಪ್ಪತ್ತು ಎಕರೆಯಲ್ಲಿ ಮಾತ್ರ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಒತ್ತುವರಿ ತೆರವು ಮಾಡಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಅರ್ಧ ಕೆರೆಯನ್ನು ವ್ಯಾಪಿಸಿರುವ ಹುಲ್ಲಿನ ಗಿಡ, ಕಳೆಗಳನ್ನು ತೆಗೆದು ಶುದ್ಧ ನೀರು ನಿಲ್ಲುವಂತೆ ಮಾಡಬೇಕು. ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು’ ಎಂದು ಸ್ಥಳೀಯ ನಿವಾಸಿ ಮೋಹನ್‌ ಸಲಹೆ ನೀಡುತ್ತಾರೆ.

ಕುಗ್ಗಿದ ಕೆರೆ ಗಾತ್ರ: ‘ಸಾರಕ್ಕಿಯ ಒತ್ತುವರಿ 30–40 ವರ್ಷಗಳಿಂದ ನಿರಂತರವಾಗಿ ನಡೆದಿದೆ. ದಶಕಗಳ ಹಿಂದೆಯೇ ಕೆರೆಯೊಳಗೆ ಬಿಬಿಎಂಪಿ ರಸ್ತೆ ನಿರ್ಮಿಸಿದೆ. ಇದರಿಂದ ಭೂಗಳ್ಳರಿಗೆ ಉತ್ತೇಜನ ಸಿಕ್ಕಿತು. 2000ರ ನಂತರ ಸುತ್ತಮುತ್ತ ಬಹುಮಹಡಿ ಕಟ್ಟಡಗಳು ತಲೆ ಎತ್ತಿದವು.   ಇದರಿಂದಾಗಿ ಕೆರೆ ಕಲುಷಿತಗೊಳ್ಳುತ್ತಾ ಬಂತು. ಕೆರೆ ತ್ಯಾಜ್ಯದ ಗುಂಡಿಯಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳೀಯ ನಿವಾಸಿಗಳು.

‘ಜಿಲ್ಲಾಡಳಿತ 1993ರಲ್ಲಿ ಸಮೀಕ್ಷೆ ನಡೆಸಿದಾಗ ಇದರ ವಿಸ್ತೀರ್ಣ 78.24 ಎಕರೆ ಇತ್ತು. 2001ರಲ್ಲಿ ವಿಸ್ತೀರ್ಣ 74 ಎಕರೆಗೆ ಇಳಿದಿತ್ತು. 2013ರಲ್ಲಿ ಸಮೀಕ್ಷೆ ನಡೆಸಿದಾಗ  ವಿಸ್ತೀರ್ಣ 40 ಎಕರೆಗೆ ಕುಸಿದಿತ್ತು. ಒಂದೆರಡು ವರ್ಷಗಳಿಂದ ಕೆರೆಯ ದಂಡೆಯ ಮೇಲೆ ಮಣ್ಣು ಸುರಿದು ಮುಚ್ಚಲಾಗುತ್ತಿದೆ. ಸಂರಕ್ಷಣಾ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಡೆಯದಿದ್ದರೆ ಕೆಲವೇ ವರ್ಷಗಳಲ್ಲಿ ಆ ಜಾಗಗಳಲ್ಲೂ ಮನೆಗಳು ತಲೆ ಎತ್ತಲಿವೆ’ ಎಂದು ಅವರು ಎಚ್ಚರಿಸುತ್ತಾರೆ.

ಜಲಮಂಡಳಿಗೆ ಮತ್ತಷ್ಟು ಜಾಗ: ಕೆರೆಯಂಗಳದೊಳಗೆ ಪಂಪ್‌ಹೌಸ್‌ ನಿರ್ಮಾಣಕ್ಕೆ ಈ ಹಿಂದೆ ಜಲಮಂಡಳಿಗೆ 1 ಎಕರೆ 15 ಗುಂಟೆ ಜಾಗ ನೀಡಲಾಗಿತ್ತು. 30 ಗುಂಟೆಯಲ್ಲಿ ಪಂಪ್‌ಹೌಸ್ ನಿರ್ಮಿಸಿದೆ. ಉಳಿದ ಜಾಗದಲ್ಲಿ ಮಣ್ಣು ಸುರಿದು ಬೇಲಿ ಹಾಕಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮತ್ತೆ 2 ಎಕರೆ 20 ಗುಂಟೆಯನ್ನು ನೀಡಲಾಗಿದೆ. ಕೆರೆಯ ಒಂದು ಪಾರ್ಶ್ವದಲ್ಲಿ ಜಲಮಂಡಳಿ ‘ಇಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತದೆ. ಅತಿಕ್ರಮ ಪ್ರವೇಶ ನಿಷಿದ್ಧ’ ಎಂದು ಫಲಕ ಹಾಕಿದೆ. ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಇಲ್ಲೂ ನೊರೆ ಕಾಟ: ‘ಈಗ ಕೆರೆಯಲ್ಲಿರುವುದು ಕೊಳಚೆ ನೀರು ಮಾತ್ರ. ಕಳೆದ ವರ್ಷದಿಂದ ನೊರೆ ಸಮಸ್ಯೆಯೂ ಕಾಣಿಸಿಕೊಂಡಿದೆ. ಜೋರು ಗಾಳಿ ಬಂದಾಗ ನೊರೆ ಹಾರಿ ರಸ್ತೆಗೆ ಬರುತ್ತದೆ. ಇದು ಮತ್ತೊಂದು ಬೆಳ್ಳಂದೂರು ಆಗಲಿದೆ’ ಎಂದು ಸ್ಥಳೀಯ ನಿವಾಸಿ ಜಗದೀಶ್‌ ಎಚ್ಚರಿಸುತ್ತಾರೆ.
‘ಜಲಮಂಡಳಿ ಪಂಪ್‌ಹೌಸ್‌ ನಿರ್ಮಾಣಕ್ಕೆ ಮೂರು ವರ್ಷ ತೆಗೆದುಕೊಂಡಿತು. ಎಸ್‌ಟಿಪಿ ನಿರ್ಮಾಣ ಮಾಡುವ ಹೊತ್ತಿಗೆ ಎಲ್ಲವೂ ನಾಶವಾಗಿರುತ್ತದೆ’ ಎಂದು ಹೇಳುತ್ತಾರೆ.

ಬೇಡಿಕೆಗಳೇನು?
* ಸುತ್ತಮುತ್ತಲಿನ ಕಟ್ಟಡಗಳಿಂದ ಕೆರೆಗೆ ಕೊಳಚೆ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
* ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ಕೆರೆಗೆ ಸುರಿಯುವವರ ಮೇಲೆ ದಂಡ ವಿಧಿಸಬೇಕು.
* ಕೆರೆಯೊಳಗೆ ನಿರ್ಮಿಸಿರುವ ರಸ್ತೆಯನ್ನು ಮುಚ್ಚಬೇಕು.
* ಭವಿಷ್ಯದಲ್ಲಿ ಒತ್ತುವರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಕೆರೆ ಅಭಿವೃದ್ಧಿಗೆ ಟೆಂಡರ್‌
₹6 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೆ ಟೆಂಡರ್‌ ಕರೆದಿದ್ದೇವೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸುತ್ತೇವೆ. ಈ ಮೊತ್ತದಲ್ಲಿ  ಹೂಳೆತ್ತುವ ಕಾಮಗಾರಿ ಹಾಗೂ ಕಾಲುವೆಗಳ  ನಿರ್ಮಾಣ ಮಾಡುತ್ತೇವೆ. 2017ರ ಮಾರ್ಚ್‌ ತಿಂಗಳೊಳಗೆ ಕೆಲಸ ಪೂರ್ಣಗೊಳಿಸುತ್ತೇವೆ. ಅದರ ಸಂಪೂರ್ಣ ಪುನರುಜ್ಜೀವನ ಮಾಡಲು ಇನ್ನೂ ₹10 ಕೋಟಿ ಬೇಕು.
–ಕೆ.ವಿ. ರವಿ, ಕಾರ್ಯನಿರ್ವಾಹಕ ಎಂಜಿನಿಯರ್‌, ಬಿಬಿಎಂಪಿ ಕೆರೆ ವಿಭಾಗ

ಎಂಜಿನಿಯರ್‌ಗಳು ಎಲ್ಲಿ?

ನಗರದ 108 ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ  ಎಂಜಿನಿಯರ್‌ಗಳನ್ನು ನಿಯೋಜಿಸಿ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‌ಸಿಡಿಎ)  ಆದೇಶ ಹೊರಡಿಸಿತ್ತು. ಸಾರಕ್ಕಿಯ ಹೊಣೆಯನ್ನು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಅರಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ವಹಿಸಲಾಗಿದೆ. ಕೆರೆ ಅಭಿವೃದ್ಧಿಗೆ ಯೋಜನೆಯೇನು ಎಂದು ಅವರನ್ನು ಪ್ರಶ್ನಿಸಿದರೆ, ‘ನಾವು ಕೆರೆಯ ಮೇಲ್ವಿಚಾರಣೆ ಮಾಡುವವರು. ಒತ್ತುವರಿಯಾಗದಂತೆ ನಿಗಾ ವಹಿಸುತ್ತೇವೆ’ ಎಂದು ಉತ್ತರಿಸಿದರು. ‘ಒತ್ತುವರಿಯಿಂದಾಗಿ ಕೆರೆಯ ವಿಸ್ತೀರ್ಣ ಕುಗ್ಗುತ್ತಿದೆ. ಆದರೆ, ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಂಡ ಉದಾಹರಣೆ ಇಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ನೀವೂ ಪ್ರತಿಕ್ರಿಯಿಸಿ
ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ, ಸಮನ್ವಯ ಕೊರತೆಯಿಂದಾಗಿ ಸಾರಕ್ಕಿ ಕೆರೆ ಸ್ಥಿತಿ ದಯನೀಯವಾಗಿದೆ. ಅಭಿವೃದ್ಧಿಯ ಯಾವ ಸೂಚನೆಗಳು ಕಾಣುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರೂ ಪ್ರತಿಕ್ರಿಯಿಸಬಹುದು. bangalore@prajavani.co.in ಅಥವಾ 9513322930 (ವಾಟ್ಯಆ್ಯಾಪ್‌) ಮೂಲಕ ಅನಿಸಿಕೆ ಕಳುಹಿಸಬಹುದು.

* ಜನ ಏನಂತಾರೆ

ಸಾರಕ್ಕಿ ಸಂರಕ್ಷಣೆಗಾಗಿ ಐದಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಜಲಮೂಲದ ಪುನರುಜ್ಜೀವನಕ್ಕಾಗಿ ಹೈಕೋರ್ಟ್‌ ಮೊರೆ ಹೋಗಿದ್ದೆವು. ಒತ್ತುವರಿ ತೆರವುಗೊಳಿಸಿ ವರ್ಷದೊಳಗೆ ಪುನರುಜ್ಜೀವನ ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆ ಬಳಿಕ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿತ್ತು. ಮತ್ತೆ ಅದನ್ನು ಮರೆತೇಬಿಟ್ಟರು. ಈಗ ಕೆರೆ ಸ್ಥಿತಿ ಮತ್ತಷ್ಟು ದಯನೀಯವಾಗಿದೆ. ಅರ್ಧ ಕೆರೆ ಮುಚ್ಚಿ ಹೋಗಿದೆ. ಅದರ ಸ್ಥಿತಿ ನೋಡುವಾಗ ಕಣ್ಣೀರು ಬರುತ್ತದೆ. ನಮ್ಮದು ವ್ಯರ್ಥ ಹೋರಾಟ ಎಂಬ ಭಾವ ಮೂಡುತ್ತಿದೆ. ಎಲ್ಲಿದೆ ₹2 ಸಾವಿರ ಕೋಟಿಯ ಆಸ್ತಿ.

-ಈಶ್ವರಪ್ಪ ಮಡಿವಾಳಿ, ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆ

ಕೆರೆಯ ಈಶಾನ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿ 33 ಅಡಿ ಅಗಲದ ರಾಜಕಾಲುವೆಗಳು ಇರಬೇಕಿತ್ತು.  ಎರಡೂ ಕಡೆ ಒತ್ತುವರಿ ಆಗಿರುವುದರಿಂದ ರಾಜಕಾಲುವೆಗಳು ಮಾಯವಾಗಿವೆ.

-ಗಂಗಾಧರ್‌, ಸ್ಥಳೀಯ ನಿವಾಸಿ

ಸುತ್ತಮುತ್ತ ತಲೆ ಎತ್ತಿರುವ ಅಪಾರ್ಟ್‌­ಮೆಂಟ್‌­ಗಳಿಂದ ಕೊಳಚೆ ನೀರು ನೇರವಾಗಿ ಕೆರೆ ಸೇರುತ್ತಿದೆ. ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.

-ವೆಂಕಟೇಶ್‌, ಸ್ಥಳೀಯ ನಿವಾಸಿ

ಸಾರಕ್ಕಿಗೆ ನಿತ್ಯ ಲಕ್ಷಾಂತರ ಲೀಟರ್‌ ಕೊಳಚೆ ನೀರು ಸೇರುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿಯೂ ಕಲುಷಿತ ನೀರು ಬರುತ್ತಿದೆ.
-ಅಂದಾನಯ್ಯ, ಉದ್ಯಮಿ

ಅಧಿಕಾರಿಗಳು ಕಾರ್ಯಾಚರಣೆ ಹೆಸರಿನಲ್ಲಿ ನಾಟಕ ಮಾಡಿದ್ದಾರೆ. ತಡೆಬೇಲಿ ನಿರ್ಮಾಣ ಹೊರತುಪಡಿಸಿ ಮತ್ಯಾವ ಕಾಮಗಾರಿಯೂ ನಡೆದಿಲ್ಲ. ಕೆಲವು ವರ್ಷಗಳ ಹಿಂದೆ ಇಲ್ಲಿಗೆ ನೂರಾರು ಹಕ್ಕಿಗಳು ಬರುತ್ತಿದ್ದವು. ಈಗ ಒಂದೇ ಒಂದು ಹಕ್ಕಿ ಕಾಣುವುದಿಲ್ಲ. ಹಂದಿಗಳ ವಾಸಸ್ಥಾನ ಆಗಿದೆ.
-ಉಮೇಶ್, ಗುತ್ತಿಗೆದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT