ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಮಂಡನೆ ಬಳಿಕ ಖಾತಾ ಮೇಳ: ಮೇಯರ್‌

ತೆರಿಗೆ ಹೆಚ್ಚಳ ಬೇಡ, ಆದಾಯಕ್ಕೆ ಪರ್ಯಾಯ ಮೂಲ ಹುಡುಕಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಸಲಹೆ
Last Updated 13 ಮಾರ್ಚ್ 2017, 20:00 IST
ಅಕ್ಷರ ಗಾತ್ರ

ಬೆಂಗಳೂರು: ಹಕ್ಕುಪತ್ರ ಹೊಂದಿದ್ದರೂ ಖಾತಾ ಆಗದ ಕಾರಣ ನಗರದ ಲಕ್ಷಾಂತರ ಆಸ್ತಿಗಳಿಂದ ತೆರಿಗೆ ವಸೂಲಿ ಸಾಧ್ಯವಾಗುತ್ತಿಲ್ಲ. ಇಂತಹ ಆಸ್ತಿಗಳಿಗೆ ಖಾತಾ ನೀಡಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

‘ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಬಿಬಿಎಂಪಿಯ ಹಕ್ಕುಪತ್ರ ಹೊಂದಿದ್ದೂ ಖಾತಾ ಆಗದಿರುವ ಪ್ರಕರಣಗಳನ್ನು ಗುರುತಿಸಿ, ಅಂತಹವರಿಗೆ  ಖಾತಾ ಮಾಡಿಕೊಡಲು ವಿಶೇಷ ಅಭಿಯಾನ ನಡೆಸಲಿದ್ದೇವೆ. ಬಜೆಟ್‌ ಮಂಡನೆ ಮುಗಿದ ಬಳಿಕ ಪ್ರತಿ ತಿಂಗಳು ವಿಧಾನಸಭಾ ಕ್ಷೇತ್ರಗಳಲ್ಲಿ ಖಾತಾ ಮೇಳ ಹಮ್ಮಿಕೊಳ್ಳುತ್ತೇವೆ’ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದರು.

ಬಜೆಟ್‌  ತಯಾರಿಗೆ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆಯುವ ಸಲುವಾಗಿ ಸೋಮವಾರ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು. ಕೆಲವು ವಾರ್ಡ್‌ಗಳಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮಂಜೂರು ಮಾಡಿದ ನಿವೇಶನಗಳಲ್ಲಿ ವಾಸಿಸುತ್ತಿರುವ ಮಂದಿ ಈಗ ತೆರಿಗೆ ಪಾವತಿಸುವಷ್ಟು ಆರ್ಥಿಕವಾಗಿ ಸದೃಢರಾಗಿದ್ದಾರೆ.

ಈ ಪ್ರದೇಶಗಳಿಗೆ ಪಾಲಿಕೆಯಿಂದ ಮೂಲಸೌಕರ್ಯವನ್ನು ಒದಗಿಸಲಾಗಿದೆ. ತೆರಿಗೆ ಪಾವತಿಸಲು ಅವರು ಆಸಕ್ತರಾಗಿದ್ದಾರೆ. ಆದರೆ, ಖಾತಾ ಇಲ್ಲದ ಕಾರಣ ಅವರಿಂದ ತೆರಿಗೆ ವಸೂಲಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಾಲಿಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ ಎಂದು ಅನೇಕ ಸದಸ್ಯರು ಗಮನ ಸೆಳೆದರು. 

‘ಖಾತಾ ನೀಡಲು ಇರುವ ಅಡ್ಡಿಗಳ ನಿವಾರಣೆ ಬಗ್ಗೆ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯಲ್ಲಿ ಸಮಗ್ರವಾಗಿ ಚರ್ಚಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಮಂಡಿಸುತ್ತೇವೆ’ ಎಂದು ಮೇಯರ್‌ ತಿಳಿಸಿದರು.

ಆದಾಯಕ್ಕೆ ಪರ್ಯಾಯ ಮೂಲ ಹುಡುಕಿ: ತೆರಿಗೆ ಹೆಚ್ಚಳ ಮಾಡುವ ಬದಲು ಪರ್ಯಾಯ ಆದಾಯದ ಮೂಲಗಳನ್ನು ಹುಡುಕಬೇಕು. ತೆರಿಗೆ ಸೋರಿಕೆಯನ್ನು ತಡೆಯಬೇಕು ಎಂದು ಸದಸ್ಯರು ಸಲಹೆ ನೀಡಿದರು. 

ನಿರ್ಮಾಣೇತರ ಪ್ರದೇಶದ ವಾಣಿಜ್ಯ ಚಟುವಟಿಕೆ ಮೇಲೆ ಕಣ್ಣು: ನಗರದಲ್ಲಿ ಕೆಲವು ಬಹುಮಹಡಿ ಕಟ್ಟಡಗಳು ನಿರ್ಮಾಣೇತರ ಜಾಗವನ್ನು ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳುತ್ತಿವೆ. ಕೆಲವು ಕಟ್ಟಡಗಳ ಟೆರೇಸ್‌ಗಳು ಪಬ್‌ ಹಾಗೂ ಬಾರ್‌ಗಳಾಗಿ ಬಳಕೆ ಆಗುತ್ತಿವೆ.

ಕೆಲವೆಡೆ ಕಟ್ಟಡಗಳ ಮಾಲೀಕರು ಸೆಟ್‌ ಬ್ಯಾಕ್‌ ಜಾಗದಲ್ಲಿ ಐಸ್‌ಕ್ರೀಂ ಪಾರ್ಲರ್‌, ಸಣ್ಣ ಮಳಿಗೆ, ಜ್ಯೂಸ್‌ ಅಂಗಡಿಗಳಿಗೆ ಅವಕಾಶ ನೀಡುತ್ತಿದ್ದಾರೆ. ಇವುಗಳಿಂದ ಪಾಲಿಕೆಗೆ ಯಾವುದೇ ತೆರಿಗೆ ಬರುತ್ತಿಲ್ಲ ಎಂದು ಸದಸ್ಯರು ದೂರಿದರು.

ಬಹುಮಹಡಿ ಕಟ್ಟಡದ ನೆಲಮಹಡಿಯನ್ನು ವಾಹನ ನಿಲುಗಡೆಗೆ ಮೀಸಲಿಡಬೇಕು. ಆದರೆ, ಹೆಚ್ಚಿನ ಕಡೆ ಇದು ವಾಣಿಜ್ಯ ಚಟುವಟಿಕೆಗೆ ಬಳಕೆ ಆಗುತ್ತಿದೆ.  ಒಂದೋ ಅದಕ್ಕೆ ತೆರಿಗೆ ವಿಧಿಸಿ. ಅಥವಾ ಅವುಗಳಿಂದಲು ತೆರಿಗೆ ವಸೂಲಿ ಮಾಡಿ ಎಂದು ಕೆಲವರು  ಒತ್ತಾಯಿಸಿದರು.  

ಮಹಾಯೋಜನೆಯ ವಲಯ ನಿಯಮಗಳನ್ನು ಉಲ್ಲಂಘಿಸಿ ಅನ್ಯ ಚಟುವಟಿಕೆ ನಡೆಸುತ್ತಿದ್ದರೆ ಅದನ್ನು ಸಕ್ರಮಗೊಳಿಸಬೇಕು. ಇದರಿಂದ ಸಾಕಷ್ಟು ಆದಾಯ ಬರಲಿದೆ ಎಂಬ ಸಲಹೆಯೂ ವ್ಯಕ್ತವಾಯಿತು. 

ಮೆಟ್ರೊ ನಿಲ್ದಾಣಕ್ಕೂ ತೆರಿಗೆ ವಿಧಿಸಲು ಒತ್ತಾಯ: ಬೆಂಗಳೂರು ಮೆಟ್ರೊ ರೈಲು ನಿಗಮದವರು ಮಾರ್ಗದಲ್ಲಿ ಅಳವಡಿಸಿರುವ ಕಂಬಗಳಿಗೆ ಜಾಹೀರಾತು ಫಲಕ ಅಳವಡಿಸಲು ಅವಕಾಶ ಕಲ್ಪಿಸುತ್ತಿದ್ದಾರೆ. ಇದಕ್ಕೂ ತೆರಿಗೆ ವಿಧಿಸಬೇಕು. ಮೆಟ್ರೊ ಮಾರ್ಗಕ್ಕೂ ತೆರಿಗೆ ವಿಧಿಸಲು ಅವಕಾಶ ಇದೆ. 

ನಿಲ್ದಾಣಗಳಿಗಾದರೂ ತೆರಿಗೆ ವಿಧಿಸಲೇ ಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮೆಟ್ರೊ ನಿಲ್ದಾಣಗಳ ಬಳಿ ಖಾಸಗಿ ಸಹಭಾಗಿತ್ವದಲ್ಲಿ ವಾಹನ ನಿಲುಗಡೆ ತಾಣ ಅಭಿವೃದ್ಧಿಪಡಿಸಿ ಆದಾಯಗಳಿಸಬಹುದು ಎಂದು ಕೆಲವರು ಸಲಹೆ ನೀಡಿದರು.

ಪಾಲಿಕೆಯಿಂದ ಭೋಗ್ಯಕ್ಕೆ ಪಡೆದ ಆಸ್ತಿಗಳನ್ನು ವಾಣಿಜ್ಯ ಲಾಭ ಗಳಿಸಲು ಬಳಕೆ ಆಗುತ್ತಿವೆ. ಆಸ್ಪತ್ರೆ, ಶಾಲೆ ಅಥವಾ ಕಲ್ಯಾಣ ಮಂಟಪ ನಡೆಸಲು  ಪಾಲಿಕೆ ಆಸ್ತಿಗಳನ್ನು ತೀರಾ ಕಡಿಮೆ ಮೊತ್ತಕ್ಕೆ ಭೋಗ್ಯಕ್ಕೆ ನೀಡಲಾಗುತ್ತಿತ್ತು. ಈಗ ಯಾರೂ ಸಾರ್ವಜನಿಕರ ಹಿತಕ್ಕಾಗಿ ಆಸ್ಪತ್ರೆ, ಶಾಲೆಗಳನ್ನು ನಡೆಸುತ್ತಿಲ್ಲ.

ಭೋಗ್ಯದ ಅವಧಿ ಮುಗಿದ ಇಂಥಹ ಆಸ್ತಿ ಮರಳಿ ವಶಕ್ಕೆ ಪಡೆಯಬೇಕು ಅಥವಾ ಬಾಡಿಗೆ ಮೊತ್ತವನ್ನು ಹೆಚ್ಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪೇಯಿಂಗ್‌ ಗೆಸ್ಟ್‌ ಕಟ್ಟಡಗಳಿಗೆ ತೆರಿಗೆ ವಿಧಿಸುವ ಬಗ್ಗೆ ಪಾಲಿಕೆ ನೀತಿಯನ್ನು ರೂಪಿಸಬೇಕು ಎಂಬ ಸಲಹೆಯೂ ವ್ಯಕ್ತವಾಯಿತು.

‘4 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿಲ್ಲ’
‘ನಗರದಲ್ಲಿರುವ 4 ಲಕ್ಷ ಆಸ್ತಿಗಳು ಇನ್ನೂ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಈ ಪೈಕಿ ಖಾಲಿ ನಿವೇಶನಗಳು ಹಾಗೂ ಸರ್ಕಾರಿ ಕಚೇರಿಗಳು ಸೇರಿವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಮೊಬೈಲ್‌ನಲ್ಲಿ ತೆರಿಗೆ ವಿವರ: ನಗರದ ಯಾವ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಯಾರು ಸರಿಯಾಗಿ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಮಾಹಿತಿ ಯನ್ನು ಸಾರ್ವಜನಿಕರು ಇಂಟರ್ನೆಟ್‌ ಸಂಪರ್ಕ ಹೊಂದಿರುವ ಮೊಬೈಲ್‌ ಮೂಲಕವೂ ತಿಳಿದುಕೊಳ್ಳಬಹುದು ಎಂದು ಆಯುಕ್ತರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯ ಅಷ್ಟೂ ಆಸ್ತಿಗಳ ವಿವರಗಳನ್ನು  ಭೌಗೊಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಪೋರ್ಟಲ್‌ ಜೊತೆ ಜೋಡಿಸಿದ್ದೇವೆ.  ಇದರಲ್ಲಿ ಆಸ್ತಿ ತೆರಿಗೆ ಪಾವತಿಸಿದ ಆಸ್ತಿಗಳು ಹಸಿರು ಬಣ್ಣದಲ್ಲಿ ಹಾಗೂ ತೆರಿಗೆ ಬಾಕಿ ಇರುವ ಆಸ್ತಿಗಳು ಕೆಂಪುಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.

ಇದರಲ್ಲಿ 2008ರಿಂದ ಯಾವ ವರ್ಷದವರೆಗೆ ಆಸ್ತಿ ತೆರಿಗೆ ಪಾವತಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯ. ಪ್ರತಿ ವಾರ್ಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 100 ವ್ಯಕ್ತಿಗಳ ವಿವರಗಳೂ ಸಾರ್ವಜನಿಕರಿಗೆ ಲಭ್ಯ ಎಂದರು.

ಅಕ್ರಮ ಪತ್ತೆಗೆ ನೆರವಾಗಿ: ‘ಯಾವ ಆಸ್ತಿಯಲ್ಲಿ ವಾಣಿಜ್ಯ ಚಟುವಟಿಕೆಗೆ ಆಸ್ಪದ ಇದೆ, ಯಾವುದನ್ನು  ವಸತಿಗೆ ಮಾತ್ರ ಬಳಸಬೇಕು ಎಂಬ ವಿವರವೂ ಜಿಐಎಸ್‌ನಲ್ಲಿ ಅಳವಡಿಸಲಾಗಿದೆ.

ಸ್ವಯಂ ಘೋಷಿತ ಆಸ್ತಿ ತೆರಿಗೆ ನಮೂನೆಯಲ್ಲಿ ಆಸ್ತಿಯನ್ನು ವಸತಿ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ನೋಂದಾಯಿಸಿರುವ  ಮಾಲೀಕರು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದರೆ ಸಾರ್ವಜನಿಕರೇ ಅದನ್ನು ಪತ್ತೆ ಮಾಡಬಹುದು’ ಎಂದು ಆಯುಕ್ತರು ತಿಳಿಸಿದರು. ಅಕ್ರಮ ಜಾಹೀರಾತು ಫಲಕಗಳನ್ನು ಪತ್ತೆ ಹಚ್ಚುವ ಸಲುವಾಗಿ ಜಾಹಿರಾತುಗಳ ವಿವರಗಳನ್ನು ಜಿಐಎಸ್‌ ಪೋರ್ಟಲ್‌ ಜೊತೆ ಜೋಡಿಸಲಾಗುತ್ತದೆ ಎಂದರು.

ತೆರಿಗೆ ವಸೂಲಿ ಮಾಡದಿದ್ದರೆ ಅಧಿಕಾರಿ ವಜಾ: ಪಾಲಿಕೆಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಮಾಡದೇ ಇರುವುದಕ್ಕೆ ಯಾವುದೇ ಕಾರಣ ಇಲ್ಲ.  ತೆರಿಗೆ ಪಾವತಿ ಕುರಿತ ಎಲ್ಲ ವಿವರಗಳು ಅವರ ಬೆರಳ ತುದಿಯಲ್ಲೇ ಇವೆ.

ತೆರಿಗೆ ವಸೂಲಿಗೆ ಅವರು ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಬಹುದು. ಇದಕ್ಕೆ 15 ದಿನಗಳ ಒಳಗೆ ಸ್ಪಂದನೆ ಸಿಗದಿದ್ದರೆ ವಾರಂಟ್‌  ಜಾರಿ ಮಾಡಬಹುದು. ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರ ಚರಾಸ್ತಿಯನ್ನು ವಶಕ್ಕೆ ಪಡೆಯುವ ಅಧಿಕಾರವೂ ಅವರಿಗೆ ಇದೆ. ಇಷ್ಟೆಲ್ಲ ಸೌಲಭ್ಯ ಕೊಟ್ಟ ಬಳಿಕವೂ ತೆರರಿಗೆ ವಸೂಲಿ ಮಾಡದ ಅಧಿಕಾರಿಗಳನ್ನು ಮುಲಾಜಿಲ್ಲದೇ ವಜಾ ಮಾಡಬಹುದು ಎಂದು ಆಯುಕ್ತರು ಹೇಳಿದರು.

ಬಿಬಿಎಂಪಿ ಜಾಗದಲ್ಲಿ ವಿದ್ಯುತ್‌ ಪರಿವರ್ತಕ
ಬೆಂಗಳೂರು: 
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಬೆಸ್ಕಾಂನವರು ವಿದ್ಯುತ್‌ ಪರಿವರ್ತಕ ಅಳವಡಿಸುತ್ತಿದ್ದಾರೆ ಎಂದು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಬೆಸ್ಕಾಂಗೆ ಸಂಬಂಧಿಸಿದಂತೆ, ಜನರ ಕುಂದುಕೊರತೆ ಬಗ್ಗೆ ಚರ್ಚಿಸಲು ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಈ ವಿಷಯ ಪ್ರಸ್ತಾಪಿಸಿದರು.

ಬಹುಮಹಡಿ ಕಟ್ಟಡ ನಿರ್ಮಿಸುವಾಗ ಅದಕ್ಕೆ ವಿದ್ಯುತ್‌ ಪರಿವರ್ತಕ ಅಳವಡಿಸಲು ಅಗತ್ಯ ಇರುವ ಜಾಗವನ್ನೂ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ, ಹೆಚ್ಚಿನ ಕಡೆ ಖಾಸಗಿ ಕಟ್ಟಡಗಳ ವಿದ್ಯುತ್‌ ಪರಿವರ್ತಕವನ್ನು ಬಿಬಿಎಂಪಿ ಜಾಗದಲ್ಲೇ ಅಳವಡಿಸಲಾಗಿದೆ. ಇದಕ್ಕೆ ಬೆಸ್ಕಾಂನಿಂದ ಬಾಡಿಗೆ ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

‘ಪರೀಕ್ಷೆಗಳು ನಡೆಯುವ ಸಂದರ್ಭದಲ್ಲೂ ಪದೇ ಪದೇ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ’ ಎಂದು ಆಡಳಿತ ಪಕ್ಷದ ನಾಯಕ ಮೊಹಮ್ಮದ್‌ ರಿಜ್ವಾನ್‌ ನವಾಬ್‌  ದೂರಿದರು. ಬೇಸಿಗೆಯಲ್ಲಿ ವಿದ್ಯುತ್‌ ಕಡಿತ ಮುಂದುವರಿಸಿದರೆ ಕುಡಿಯುವ ನೀರು ಪೂರೈಕೆಗೂ ಸಮಸ್ಯೆ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸದಸ್ಯರ ಸಲಹೆಗಳು
‘ತೆರಿಗೆ ಪಾಲನ್ನು ಅಧಿಕಾರದಿಂದ ಕೇಳೋಣ’

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪಾಲಿಕೆ ವ್ಯಾಪ್ತಿಯ ಜನರು ಕಟ್ಟುವ  ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಹಾಗೂ ಸೇವಾ ತೆರಿಗೆಯಲ್ಲಿ  ನಿರ್ದಿಷ್ಟ ಪ್ರಮಾಣದ ಪಾಲನ್ನು ಪಾಲಿಕೆಯ ಅಭಿವೃದ್ಧಿ ಚಟುವಟಿಕೆಗೆ ನೀಡುವಂತೆ ಅಧಿಕಾರಯುತವಾಗಿ ಕೇಳಬೇಕು. ರಾಜ್ಯಸರ್ಕಾರಕ್ಕೆ ಶೇ 78ರಷ್ಟು ಆದಾಯ ಬರುತ್ತಿರುವುದು ಬೆಂಗಳೂರಿನಿಂದ.  ಮನೋರಂಜನಾ ತೆರಿಗೆ, ವೃತ್ತಿ ತೆರಿಗೆ ಹಾಗೂ ಐಷಾರಾಮಿ ತೆರಿಗೆಯನ್ನಾದರೂ ಬಿಬಿಎಂಪಿಗೆ ಸರ್ಕಾರ ಬಿಟ್ಟುಕೊಡಲಿ
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

*
‘ನಿತ್ಯ 25 ಮನೆಗಳನ್ನು ಪರಿಶೀಲಿಸಲಿ’
ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಯಾದ ಬಳಿಕ  ಮಾಲೀಕರು ನೀಡಿದ ವಿವರ ಸರಿ ಇದೆಯೇ ಎಂದು ಪರಿಶೀಲಿಸುವ ಕಾರ್ಯ ಒಮ್ಮೆಯೂ ನಡೆದೇ ಇಲ್ಲ. ಕಂದಾಯ ಅಧಿಕಾರಿಗಳು ದಿನಕ್ಕೆ 25 ಮನೆಗಳನ್ನಾದರೂ ಪರಿಶೀಲನೆ ನಡೆಸಿ ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಬಿ.ಎಸ್‌. ಸತ್ಯನಾರಾಯಣ, ಬಿಜೆಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT