ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಗುಣಮಟ್ಟ ಪರಿಶೀಲನೆಗೆ ಎಸ್‌ಒಪಿ ಜಾರಿ

Last Updated 14 ಮಾರ್ಚ್ 2017, 5:29 IST
ಅಕ್ಷರ ಗಾತ್ರ

ಕೋಲಾರ: ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡಲು ರಾಜ್ಯ ಸರ್ಕಾರ ಪ್ರಾಮಾಣಿಕ ಕಾರ್ಯಕಾರಿ ವಿಧಾನ (ಎಸ್‌ಒಪಿ) ರೂಪಿಸಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಈ ವಿಧಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಳ್ಳುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರಾಮಾಣಿಕ ಕಾರ್ಯಕಾರಿ ವಿಧಾನ ಕಾರ್ಯಗತಗೊಳಿಸಿದೆ.

ಸಾಮಾನ್ಯವಾಗಿ ಶಾಲೆಗಳಿಗೆ ಪೂರೈಕೆಯಾಗುವ ಕಳಪೆ ಗುಣಮಟ್ಟದ ಆಹಾರ ಪದಾರ್ಥ, ಅವುಗಳನ್ನು ಶೇಖರಿಸಿಡುವ ಸ್ಥಳ ಮತ್ತು ಅಡುಗೆ ಕೋಣೆಯಲ್ಲಿನ ಕೊಳಕು, ಅಡುಗೆಗೆ ಬಳಸುವ ಅಶುದ್ಧ ನೀರು ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಶಾಲೆಗಳಲ್ಲಿ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗುತ್ತದೆ.
ಇಂತಹ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆಯೇನೂ ಕಡಿಮೆ ಇಲ್ಲ. ಮತ್ತೆ ಕೆಲ ಶಾಲೆಗಳಲ್ಲಿ ವಿಷಾಹಾರ ಸೇವನೆಯಿಂದ ಮಕ್ಕಳು ಮೃತಪಟ್ಟ ಘಟನೆಗಳೂ ನಡೆದಿವೆ.

ಹೀಗಾಗಿ ಸರ್ಕಾರ ಬಿಸಿಯೂಟ ಯೋಜನೆ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಮಕ್ಕಳಿಗೆ ಊಟ ಬಡಿಸುವವರೆಗಿನ ಎಲ್ಲಾ ಹಂತಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಲು ಎಸ್‌ಒಪಿ ಸಹಕಾರಿಯಾಗಿದೆ.

ಬೆಂಗಳೂರಿನಲ್ಲಿ ಪರೀಕ್ಷೆ: ಎಸ್‌ಒಪಿಯ ಮೊದಲ ಹಂತದಲ್ಲಿ ಜಿಲ್ಲೆಯ 12 ಶಾಲೆಗಳಲ್ಲಿನ ಬೇಯಿಸಿದ ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆ ಮಾಡಿಸುವಂತೆ ಸರ್ಕಾರ ಆದೇಶಿಸಿದೆ.

ಒಟ್ಟಾರೆ ವರ್ಷದಲ್ಲಿ ಎರಡು ಬಾರಿ ಆಹಾರ ಪದಾರ್ಥಗಳ ಮಾದರಿ ಪರೀಕ್ಷೆ ಮಾಡಿಸುವಂತೆ ಆದೇಶದಲ್ಲಿ ತಿಳಿಸಿದೆ.

ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಜಿಲ್ಲೆಯ ಆಯ್ದ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ ಬೇಯಿಸಿದ ಆಹಾರ ಪದಾರ್ಥಗಳಾದ ಅನ್ನ ಮತ್ತು ಸಾರಿನ ಮಾದರಿಯನ್ನು ಸಂಗ್ರಹಿಸುತ್ತಾರೆ.

ಈ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ. ಅಧಿಕಾರಿಗಳು ಸಂಗ್ರಹಿಸಿದ ಆಹಾರ ಪದಾರ್ಥಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಕಳುಹಿಸುತ್ತಾರೆ. ಆ ಸಂಸ್ಥೆಯ ತಜ್ಞರು ಆಹಾರ ಪದಾರ್ಥ ಮಾದರಿಗಳ ಗುಣಮಟ್ಟ ಪರಿಶೀಲಿಸಿ ವರದಿ ನೀಡುತ್ತಾರೆ. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗೆ ತಗಲುವ ವೆಚ್ಚಕ್ಕಾಗಿ ಸರ್ಕಾರ ಜಿಲ್ಲೆಗೆ ವಿಶೇಷ ಅನುದಾನ ನೀಡಿದೆ.

2,047 ಶಾಲೆಗಳು: ಜಿಲ್ಲೆಯ 1,942 ಸರ್ಕಾರಿ ಶಾಲೆಗಳು ಹಾಗೂ 106 ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಜಾರಿಯಾಗಿದೆ.

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇದರಲ್ಲಿ ಸೇರಿವೆ. ಈ ಯೋಜನೆಯಡಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ಹಂತದವರೆಗಿನ 1,32,571 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ.

ಅಧಿಕಾರಿಗಳು ಜಿಲ್ಲೆಯ ಕೋಲಾರ ತಾಲ್ಲೂಕಿನ ಹರಟಿ ಮತ್ತು ಅಬ್ಬಣಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಕಳುಹಿಸಿದ್ದು, ಸದ್ಯದಲ್ಲೇ ಆ ಆಹಾರ ಪದಾರ್ಥಗಳ ಗುಣಮಟ್ಟದ ವರದಿ ಬರಲಿದೆ.

ಜಿಲ್ಲೆಯ ಅಧಿಕಾರಿಗಳು ಆ ವರದಿ ಆಧರಿಸಿ ಶಾಲೆಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಸುಧಾರಣೆ ಹಾಗೂ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಕ್ರಮ ಕೈಗೊಳ್ಳುತ್ತಾರೆ.

**

ವಿಸ್ತರಿಸಲು ಚಿಂತನೆ
ಸರ್ಕಾರ ಮಕ್ಕಳ ಸುರಕ್ಷತೆ ಹಾಗೂ ಮಕ್ಕಳಿಗ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ ಪ್ರಾಮಾಣಿಕ ಕಾರ್ಯಕಾರಿ ವಿಧಾನ ರೂಪಿಸಿದೆ. ಕೋಲಾರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಈ ವಿಧಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಈ ವಿಧಾನದ ಸಾಧಕ ಬಾಧಕಗಳನ್ನು ಅವಲೋಕಿಸಿ ರಾಜ್ಯದ ಇತರೆ ಜಿಲ್ಲೆಗಳಿಗೂ ಎಸ್‌ಒಪಿ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
–ಎಸ್‌.ಎನ್‌.ಕನ್ನಯ್ಯ, ಜಿಲ್ಲಾ ಮಧ್ಯಾಹ್ನ ಉಪಾಹಾರ ಯೋಜನೆ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT