ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ವರ್ಷಗಳ ನಂತರ 75 ಮಳಿಗೆ ವಶಕ್ಕೆ

Last Updated 14 ಮಾರ್ಚ್ 2017, 5:34 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಸಂತೆ ಮೈದಾನದಲ್ಲಿ ನಿರ್ಮಿಸಿದ್ದ 75 ಮಳಿಗೆಗಳನ್ನು 17 ವರ್ಷದ ಬಳಿಕ ಪುರಸಭೆ ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಪುರಸಭೆ ವತಿಯಿಂದ ಪಟ್ಟಣದ ಸಂತೆ ಮೈದಾನದಲ್ಲಿ 10ನೇ ಹಣಕಾಸು ಯೋಜನೆಯಡಿ 1999ರಲ್ಲಿ 25 ಹಾಗೂ 2000ರಲ್ಲಿ 50 ಮಳಿಗೆ ನಿರ್ಮಾಣ ಮಾಡಿ, ಅಂದಿನ ಉಪಾವಿಭಾಗಾಧಿಕಾರಿ ಬಿ.ಬಿ.ಕಾವೇರಿ  ಸಮ್ಮುಖದಲ್ಲಿ  ಹರಾಜು ಪ್ರಕ್ರಿಯೆ ನಡೆಸಿ ಬಾಡಿಗೆಗೆ ನೀಡಲಾಗಿತ್ತು. ಮಳಿಗೆ ಪಡೆದವರು ಮುಂಗಡ ಪಾವತಿಸಿ ದಾಖಲೆ ಪತ್ರ ಸಿದ್ಧಪಡಿಸಿಕೊಳ್ಳಲು ನಿರಾಸಕ್ತಿ ತೋರಿದರೆ, ಅಧಿಕಾರಿಗಳು ಬಾಡಿಗೆ ಕರಾರು ಪತ್ರ ಮಾಡಿಕೊಳ್ಳಲು ನಿರಾಸಕ್ತಿ ತೋರಿದ ಪರಿಣಾಮ ಇಂದು ಅತಂತ್ರ ಸ್ಥಿತಿ ತಲುಪಿದೆ.

ಮುಂಗಡ ಹಣ ಪಾವತಿ ಮಾಡಿದ ಬಾಡಿಗೆದಾರರು ಕೆಲ ಸದಸ್ಯರ ಕುಮ್ಮಕ್ಕಿನಿಂದ ಮೂಲ ಸೌಕರ್ಯ ನೀಡುವವರೆಗೂ ಬಾಡಿಗೆ ಪಾವತಿ ಮಾಡುವುದಿಲ್ಲವೆಂದು ತಕಾರಾರು ತೆಗೆದು, ಬಾಡಿಗೆ ಪಾವತಿಸದೇ ಮುಂದುವರಿದಿದ್ದರು. ಕೆಲವರು ಅನಧಿಕೃತವಾಗಿ ಮಳಿಗೆಗಳನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದರು. ಈ ರೀತಿ ಬೆಳವಣಿಗೆ ಸುಮಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಪರಿಶೀಲಿಸಿ ಮಳಿಗೆ ವಶಕ್ಕೆ ಪಡೆಯುವಂತೆ ಪುರಸಭೆ ಸದಸ್ಯ ಸತೀಶ್ ಈಚೆಗೆ ಆಗ್ರಹಿಸಿದ್ದರು.

ಆ ಹಿನ್ನೆಲೆಯಲ್ಲಿ ಈಚೆಗೆ ಸಭೆ ನಡೆಸಿದ ಮುಖ್ಯಾಧಿಕಾರಿ ಪಂಕಜಾ ಮಾತನಾಡಿ, ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಾಚರಣೆ ಮಾಡಲಾಗುತ್ತಿಲ್ಲ. ಅಲ್ಲದೇ ಕೆಲ ಸದಸ್ಯರ ಮಧ್ಯಪ್ರವೇಶದಿಂದಾಗಿಯೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸಭೆಗೆ ತಿಳಿಸಿದರು.

ಸದಸ್ಯರಾರು ಮಧ್ಯಪ್ರವೇಶಿಸುವುದಿಲ್ಲ. ಬೀಗ ಜಡಿದು ಪುರಸಭೆ ವಶಕ್ಕೆ ಪಡೆಯಬಹುದು ಎಂದು ಸರ್ವ ಸದಸ್ಯರ ಒಮ್ಮತ ಸೂಚಿಸಿದ ಮೇರೆಗೆ ಸೋಮವಾರ ಮಳಿಗೆಗಳನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ಮಳಿಗೆ ಬಾಡಿಗೆದಾರರು ವಿರೋಧ ವ್ಯಕ್ತಪಡಿಸಿದರಾದರೂ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಮಳಿಗೆಗಳಿಗೆ ಬೀಗ ಹಾಕಿದರು. 
ಮಳಿಗೆ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿಸಿ, ಮಳಿಗೆ ವಿಲೇವಾರಿ ಮಾಡಲಾಗುತ್ತದೆ ಎಂದು ಪಂಕಜಾ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT