ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಇಡಿ ಪರದೆಯಲ್ಲೇ ಸ್ವಾಮಿ ದರ್ಶನ ಪಡೆಯಿರಿ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ನಾಳೆ *ಜಾತ್ರೆಗೆ ಸಕಲ ಸಿದ್ಧತೆ * ಭಕ್ತರ ಸಹಕಾರಕ್ಕೆ ಮನವಿ * ಭದ್ರತೆಗೆ 2 ಸಾವಿರ ಮಂದಿ ಪೊಲೀಸರು
Last Updated 14 ಮಾರ್ಚ್ 2017, 5:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಕ್ಷಾಂತರ ಭಕ್ತರು ಸೇರುವ ನಾಯಕನಹಟ್ಟಿ ಗುರುತಿಪ್ಪೇಸ್ವಾಮಿ ಜಾತ್ರೆಗೆ ನಾಯಕನಹಟ್ಟಿ ಪಟ್ಟಣದಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ತಿಂಗಳಿಗೆ ಮುನ್ನವೇ ಜಿಲ್ಲಾಡಳಿತ, ಪಟ್ಟಣ ಪಂಚಾಯ್ತಿ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿವೆ. ಕೊಟ್ಟೂರೇಶ್ವರ ಜಾತ್ರೆಯಲ್ಲಿ ಸಂಭವಿಸಿದ ಅವಘಡದಿಂದ, ಜಿಲ್ಲಾಡಳಿತ ಮತ್ತಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲ ಸಿದ್ಧತೆಗಳ ಜತೆಗೆ ಎಷ್ಟೇ ಭಕ್ತರ ಸಹಕರಿಸಿದರೆ ಸುಗಮವಾಗಿ ರಥೋತ್ಸವ ನಡೆಯುತ್ತದೆ ಎಂಬುದು ಜಿಲ್ಲಾಡಳಿತ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ರೆ ಸಿದ್ಧತೆ ಕುರಿತು ಉಪವಿಭಾಗಾ ಧಿಕಾರಿ ಟಿ.ರಾಘವೇಂದ್ರ ಅವರೊಂದಿಗೆ ‘ಪ್ರಜಾವಾಣಿ’ ಮಾತುಕತೆ ನಡೆಸಿದೆ. ಮಾತುಕತೆಯ ಪೂರ್ಣಪಾಠ ಇಲ್ಲಿದೆ.

ಕೊಟ್ಟೂರೇಶ್ವರ ಜಾತ್ರೆಯಲ್ಲಿ ಅವಘಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹೇಗಿದೆ ?
ರಥವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಸಹಕಾರದೊಂದಿಗೆ ರಥದ ಭದ್ರತೆ ಬಗ್ಗೆ ಪರೀಕ್ಷಿಸಲಾಗಿದೆ. ಭಕ್ತರು ದೂರದಿಂದಲೇ ರಥೋತ್ಸವ, ಪೂಜಾ ವಿಧಾನಗಳು, ಮುಕ್ತಬಾವುಟ ಹರಾಜು ಪ್ರಕ್ರಿಯೆ ವೀಕ್ಷಿಸಲು ಅನುಕೂಲವಾಗುವಂತೆ ಮೂರು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾ­ಗಿದೆ. ಪಾದಗಟ್ಟೆ, ಹೈಮಾಸ್ಕ್‌ ದೀಪದ ಪಕ್ಕ ಮತ್ತು ತೇರಿನಿಂದ ಮುಂದುಗಡೆ ಪರದೆಯ ಮೇಲೆ ರಥೋತ್ಸವ ಚಟುವಟಿಕೆಗಳು ನೇರ ಪ್ರಸಾರವಾಗುತ್ತದೆ. ಇದರಿಂದ ರಥದ ಬಳಿಗೆ ಭಕ್ತರು ಬರುವುದನ್ನು ನಿಯಂತ್ರಿಸಿ, ನೂಕು ನುಗ್ಗಲಾಗುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ.

ಸುರಕ್ಷತೆ, ಭದ್ರತೆ ದೃಷ್ಟಿಯ ಸಿದ್ಧತೆಗಳು ಏನೇನು ?
ಹೊರಮಠ ದೇವಾಲಯಕ್ಕೆ ಶಾಶ್ವತವಾಗಿ 8 ಸಿ.ಸಿ.ಟಿ.ವಿ  ಕ್ಯಾಮೆರಾಗಳನ್ನು ಹಾಕಿಸಲಾಗುತ್ತಿದೆ. ರಥೋತ್ಸವದ ಸಂದರ್ಭದಲ್ಲಿ  ಕಳ್ಳತನ, ನೂಕುನುಗ್ಗಲು, ಗಲಾಟೆಗಳು ಸೇರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ತೇರು ಬೀದಿಯಿಂದ ಪಾದಗಟ್ಟೆಯವರೆಗೂ 12 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹಾಕಿಸಲಾಗಿದೆ. ರಥೋತ್ಸ­ವದ ವೇಳೆ ತೇರಿನ ಬಳಿ ಬ್ಯಾರಿಕೇಡ್ ವ್ಯವಸ್ಥೆ. ಕೊಬ್ಬರಿ ಸುಡುವ ಜಾಗದಲ್ಲಿ ಎತ್ತರದ ಮಣ್ಣು ಹಾಕಿಸಿ  ತಡೆ ಗೋಡೆ ನಿರ್ಮಿಸಲಾಗುತ್ತದೆ. ಪಟ್ಟಣದ ಹಲವೆಡೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದೇವೆ. ಭದ್ರತೆಗಾಗಿ 2 ಸಾವಿರ ಪೊಲೀಸರ ನಿಯೋಜನೆಯಾಗಿದೆ. ಬಂದೋಬಸ್ತ್‌ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದೆ.

ಪಾರ್ಕಿಂಗ್ ವ್ಯವಸ್ಥೆ ಹೇಗೆ,  ಮಾರ್ಗಸೂಚಿ ವಿವರ ಎಲ್ಲಿದೆ ?
ಚಳ್ಳಕೆರೆ ಹಾಗೂ ಚಿತ್ರದುರ್ಗ ಮಾರ್ಗಗಳಲ್ಲಿ ಬರುವ ಬಸ್‌ಗಳಿಗೆ ಏಕಾಂತಮಠದ ಬಳಿ, ದಾವಣಗೆರೆಯಿಂದ ಬರುವ ಬಸ್‌ಗಳಿಗೆ ಚಿಕ್ಕಕೆರೆಯ ಆವರಣ, ಬಳ್ಳಾರಿ ಕಡೆಯಿಂದ ಬರುವವರಿಗೆ ಕೆಇಬಿ ವೃತ್ತದ ಬಳಿ ನಿಲ್ದಾಣಗಳ ವ್ಯವಸ್ಥೆ ಮಾಡಿದ್ದೇವೆ. ಈ ತಾತ್ಕಾಲಿಕ ನಿಲ್ದಾಣಗಳ ಪಕ್ಕದಲ್ಲೇ ಕಾರು, ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.  ಇತರೆ ವಾಹನಗ­ಳನ್ನು ಪಟ್ಟಣ ಒಳಗಡೆ ಪ್ರವೇಶ ನಿಷೇಧ  ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಪಟ್ಟಣದ ಹೊರಭಾಗದಲ್ಲಿರುವ 10 ಕಡೆಗಳಲ್ಲಿ ಈ ಮಾರ್ಗಸೂಚಿ ಫ್ಲೆಕ್ಸ್‌ ಗಳನ್ನು ಹಾಕಿಸಿದ್ದೇವೆ. ಇದರಲ್ಲಿ ರಥೋತ್ಸವ ನಡೆ­ಯುವ ಜಾಗ, ಎಲ್ಲೆಲ್ಲಿ ಮೊಬೈಲ್‌ ಟಾಯ್ಲೆಟ್‌ಗಳಿವೆ. ಆಸ್ಪತ್ರೆ, ಆಂಬ್ಯುಲೆನ್ಸ್, ಅಗ್ನಿ ಶಾಮಕದಳ, ಪೊಲೀಸ್ ಸಹಾಯವಾಣಿ, ನಿಯಂತ್ರಣ ಕೊಠಡಿ, ಚೆಕ್‌ಪೋಸ್ಟ್‌ಗಳು, ಕುಡಿಯುವ ನೀರಿನ ಕೊಳವೆಬಾವಿಗಳ ಮಾಹಿತಿ, ಹೀಗೆ ಹಲವು ಸೇವೆಗಳನ್ನು ಗುರುತಿಸಿದ್ದೇವೆ. ಎಲ್‌ಇಡಿ ಪರದೆಗಳಿವೆ ಎಂಬ ಮಾಹಿತಿಯನ್ನು ತೋರಿಸಲಾಗಿದೆ. ಪಟ್ಟಣಕ್ಕೆ ಪ್ರವೇಶಿಸುವವರಿಗೆ ಈ ಫ್ಲೆಕ್ಸ್‌ಗಳು ದಾರಿ ತೋರಿಸುತ್ತವೆ. ಜಾತ್ರೆ ನಡೆಯುವ ಸ್ಥಳ ಸೂಚಿಯಾಗಿ ದೊಡ್ಡ ಬಲೂನ್ ಗಳನ್ನು  ಹಾರಿಸಲಾಗುತ್ತದೆ.

ಕುಡಿಯುವ ನೀರು ಹಾಗೂ ಸ್ವಚ್ಛತಾ ಕಾರ್ಯ ಹೇಗೆ ಸಾಗಿದೆ?
ನಾಯಕನಹಟ್ಟಿಯ ಸುತ್ತಮುತ್ತ ನೀರಿನ ಮೂಲಗಳನ್ನು ಗುರ್ತಿಸಲಾಗಿದೆ. ದೊಡ್ಡಕೆರೆ, ಚಿಕ್ಕಕೆರೆ, ಖಾಸಗಿಯವರ ಜಮೀನು ಸೇರಿ 15ಕ್ಕೂ ಹೆಚ್ಚಿನ ಕೊಳವೆ ಬಾವಿಗಳನ್ನು ಬಳಸುತ್ತಿದ್ದೇವೆ.ಸುಮಾರು 75ಕ್ಕೂ ಹೆಚ್ಚು ಟ್ಯಾಂಕರ್‌ಗಳ ಮೂಲಕ ನಿರಂತರ­ವಾಗಿ ನೀರು ಪೂರೈಕೆ ಮಾಡು ತ್ತೇವೆ.  ಮೇಲ್ವಿಚಾರಣೆಗೆ ರಾಜಸ್ವೀ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ 11 ಗ್ರಾಮ­ಲೆಕ್ಕಿ­ಗರು ಹಾಗೂ 13 ಗ್ರಾಮ ಸಹಾಯಕರ ತಂಡ ರಚಿಸಲಾಗಿದೆ. ಸಂಸದರ ಅನುದಾನದಲ್ಲಿ ನಾಲ್ಕು ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 15 ದಿನಗಳಿಂದ ಪಟ್ಟಣದ ಪ್ರಮುಖ ರಸ್ತೆ, ಬಸ್‌ನಿಲ್ದಾಣಗಳು, ಖಾಲಿ ಜಾಗಗಳು, ಶಾಲಾ ಆವರಣಗಳು ಸೇರಿದಂತೆ ಎಲ್ಲಾ ಕಡೆ ಸ್ವಚ್ಛಗೊಳಿಸಲಾಗಿದೆ. ರಸ್ತೆ ಚರಂಡಿಗಳಿಗೆ ಡಿಡಿಟಿ ಪುಡಿ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಲಾಗಿದೆ.

ದೀಪಾಲಂಕಾದಂತಹ ವಿಶೇಷತೆ  ಏನು ?
ಪ್ರತಿವರ್ಷ ಜಾತ್ರೆಯಲ್ಲಿ ದೀಪಾ ಲಂಕಾರ ಕುರಿತು ದೂರುಗಳಿದ್ದವು. ಈ ವರ್ಷ ಏಕಾಂತಮಠದಿಂದ ಒಳಮಠ ದೇವಾಲಯದ­ವರೆಗೂ  ಗಂಗಯ್ಯನ ಹಟ್ಟಿಯಿಂದ ಪಾದಗಟ್ಟೆಯವರೆಗೂ, ತಳಕು ರಸ್ತೆಯ ಐಟಿಐ ಕಾಲೇಜಿನಿಂದ ಅಂಬೇಡ್ಕರ್ ವೃತ್ತದವರೆಗೂ ಬೀದಿದೀಪ, ದೀಪದ ಸರಗಳು  ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ರಸ್ತೆ ಬದಿಯ ಮರಗಳಿಗೆ ದೀಪದ ಸರಗಳ ಅಲಂಕಾರ ಮಾಡಿಸುತ್ತಿದ್ದೇವೆ. ಗೋಪುರಗಳು, ದೇವಾಲಯದ ಆವರಣ, ಗುಮ್ಮಟ ಅಲಂಕಾರ ಸೇರಿದಂತೆ ಪಟ್ಟಣದ ಎಲ್ಲಾ ಕಡೆ ದೀಪಾಂಲಕಾರಕ್ಕೆ ಒತ್ತು ನೀಡುವ ಮೂಲಕ ಬೆಳಕಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಿದ್ದೇವೆ.

ಸುಗಮ ರಥೋತ್ಸವಕ್ಕೆ ನಿಮ್ಮ ಸಲಹೆ ಏನು ?
ಬರವಿದ್ದರೂ ಜಾತ್ರೆಯನ್ನು ಅದ್ಧೂರಿ ಯಾಗಿ ನಡೆಸುವ ಇಚ್ಛೆ ಭಕ್ತರದ್ದು. ಹಾಗೆಯೇ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿ ಕೊಳ್ಳಬೇಕೆಂಬುದು ನಮ್ಮ ಗುರಿ. ಅದಕ್ಕೆ ಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಭಕ್ತರು ಜಿಲ್ಲಾಡಳಿತ ನೀಡುವ ಸೌಲಭ್ಯಗಳನ್ನು ಅರಿತುಕೊಂಡು ಸಹಕಾರ ನೀಡಿದರೆ, ರಥೋತ್ಸವ ಸುಗಮವಾಗಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT