ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ

ಪಟ್ಟಣ ಪಂಚಾಯ್ತಿ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಸವಿತಾ ಬಸವರಾಜು ಸೂಚನೆ
Last Updated 14 ಮಾರ್ಚ್ 2017, 5:40 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಪಟ್ಟಣದಲ್ಲಿ ನೈರ್ಮಲ್ಯ  ಸಂಬಂಧಿ ಕಾಮಗಾರಿ ಸರಿಯಾಗಿ ನಡೆಯದ ಕಾರಣ ನಗರದ ಸೌಂದರ್ಯ ಕೆಡುತ್ತಿದ್ದು, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು ಸೂಚಿಸಿದರು.

ಪಟ್ಟಣದ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚರಂಡಿಗಳಿಗೆ ಬ್ಲೀಚಿಂಗ್‌ ಪೌಡರ್‌ ಹಾಕಿರುವುದು, ಸೊಳ್ಳೆನಾಶಕ ಸಿಂಪಡಿಸಿರುವ ಬಗ್ಗೆ ಮಾಹಿತಿ ಕೊಟ್ಟಿಲ್ಲ. ನೈರ್ಮಲ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಅಧ್ಯಕ್ಷರಿಗೆ, ಸದಸ್ಯರಿಗೆ ಮಾಹಿತಿಯನ್ನೇ ಕೊಟ್ಟಿಲ್ಲ. ಟೆಂಡರ್‌ ಬಗ್ಗೆ ದಿನಪತ್ರಿಕೆಗಳ ಜಾಹೀರಾತು ನೋಡಿ ತಿಳಿದುಕೊಳ್ಳ ಬೇಕಾಗಿದೆ. ಇನ್ನು ಮುಂದೆ ನಮ್ಮ ಗಮನಕ್ಕೆ ತರದೆ ಯಾವುದೇ ಕಾಮಗಾರಿ ನಡೆಸಬಾರದು’ ಎಂದರು.

‘ಪಟ್ಟಣದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಶಿವಲಿಂಗಪ್ಪ ಬಡಾವಣೆ, ಪರಿಶಿಷ್ಟರ ಕಾಲೋನಿ, ಬಳೆಗಾರರ ಹಟ್ಟಿ, ಖಾಸಗಿ ಬಸ್‌ ನಿಲ್ದಾಣದ ಎದುರಿಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಮಂಜೂರಾತಿ ದೊರೆತಿದೆ. ನೀರಿನ ಘಟಕಗಳ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು. ಆಗ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಉಮೇಶ್‌ ಸಭೆಗೆ ಮಾಹಿತಿ ನೀಡಿದರು.

‘ಪಟ್ಟಣ ಪಂಚಾಯ್ತಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸಲು ₹ 4 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ಈಗ ಪಟ್ಟಣ ಪಂಚಾಯ್ತಿಯಲ್ಲಿ ₹1 ಕೋಟಿ ಹಣ ಇದ್ದು, ಉಳಿದ ಅನುದಾನ ಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ₹ 1.36 ಕೋಟಿ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗುವುದು. ಈ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಹಂಚಲಾಗುವುದು’ ಎಂದು ಮುಖ್ಯಾಧಿಕಾರಿ ಹೇಳಿದರು.
‘ಟ್ರಾನ್ಸ್‌ಫಾರ್ಮರ್‌ ತೊಂದರೆ ಯಿಂದ ಬೀದಿ ದೀಪಗಳು ಮತ್ತು ಮನೆಗಳ ವಿದ್ಯುತ್‌ ದೀಪಗಳು ಸುಟ್ಟು ಹೋಗುತ್ತಿವೆ. ಮೊದಲು ಟ್ರಾನ್ಸ್‌ ಫಾರ್ಮರ್‌ ಸರಿಪಡಿಸಿ, ಇಲ್ಲವೆ ಬದಲಿಸಿ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಹಬೀಬ್‌ ಒತ್ತಾಯಿಸಿದರು.

‘ಅಂಗವಿಕಲರಿಗೆ ಕೊಡುವ ಟ್ರೈಸಿಕಲ್‌ಗಳು ಸರಿಯಾಗಿ ಬಳಕೆ ಆಗುತ್ತಿಲ್ಲ. ಕೆಲವರು ವಾಹನದ ಗಾಲಿ ಬಿಚ್ಚಿ ಮೂಲೆಗೆ ತಳ್ಳಿದ್ದಾರೆ. ಕೆಲವು ವಾಹನಗಳಿಗೆ ನೋಂದಣಿಯೇ ಆಗಿಲ್ಲ. ಇಂತಹ ವಾಹನಗಳು ಅಪಘಾತಕ್ಕೆ ಈಡಾದರೆ ಯಾರು ಹೊಣೆ? ನಿತ್ಯ ಉಪಯೋಗಿಸುವಂತವರಿಗೆ ಮಾತ್ರ ವಾಹನ ಕೊಡಿ’ ಎಂದು ಹಬೀಬ್‌, ಕೆ.ಸಿ.ರಮೇಶ್‌  ಸದಸ್ಯರು ಸೂಚಿಸಿದರು.

ಪ್ರಸಕ್ತ ಸಾಲಿನ ಎಸ್‌ಎಫ್‌ಸಿ ಹಾಗೂ ಇತರೆ ಯೋಜನೆಯ ಟೆಂಡರ್‌ಗಳಿಗೆ ಅನುಮೋದನೆ, ಪಟ್ಟಣದ ವಿವಿಧ ಬಡಾವಣೆಯ ವಿದ್ಯುತ್‌ ಕಂಬಗಳನ್ನು ಬದಲಿಸಿ  ಹೊಸ ವಿದ್ಯುತ್‌ ಕಂಬಗಳನ್ನು ಅಳವಡಿಸುವುದು, ಹಾಲಿ ಇರುವ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲು ಹೊಸದಾಗಿ ವಿದ್ಯುತ್‌ ಕಂಬ, ಲೈನ್‌, ಟ್ರಾನ್ಸ್‌ ಫಾರ್ಮರ್‌ ಅಳವಡಿಸುವುದು, ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ ಹಾಗೂ 13ನೇ ಹಣಕಾಸು ಯೋಜನೆಯ ಮೂಲ ಅನುದಾನದಲ್ಲಿ ನಡೆಸುವ ಕಾಮಗಾರಿಗಳ ಟೆಂಡರ್‌ಗಳಿಗೆ ಅನುಮೋದನೆ ನೀಡುವುದು, ಆರೋಗ್ಯ ಶಾಖೆಗೆ ನೈರ್ಮಲ್ಯ ಸಾಮಗ್ರಿ ಖರೀದಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪಟ್ಟಣ ಪಂಚಾಯ್ತಿ ಸದಸ್ಯರಾದ ಮುರುಗೇಶ್‌, ಶಾರದಮ್ಮ ರುದ್ರಪ್ಪ, ಸವಿತಾ ನರಸಿಂಹ ಖಾಟ್ರೋತ್‌, ರಾಜಪ್ಪ, ಇಂದೂಧರ ಮೂರ್ತಿ, ಖಾದರ್‌, ಸಯೀದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT