ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ನಿಲ್ದಾಣದ ಶೌಚಾಲಯ ಹರಾಜು

Last Updated 14 ಮಾರ್ಚ್ 2017, 5:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ನಗರಸಭೆ ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಶೌಚಾಲ ಯದ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ನಡೆಯಿತು. ಹರಾಜಿನಲ್ಲಿ ಎಚ್‌.ವಿ .ಶ್ರೀನಿವಾಸ್ ಎಂಬುವರು ₹ 6.6 ಲಕ್ಷಕ್ಕೆ ಶೌಚಾಲಯದ ವಾರ್ಷಿಕ ಗುತ್ತಿಗೆ ತಮ್ಮದಾಗಿಸಿಕೊಂಡರು.

ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ 13 ಜನರು ಭಾಗವಹಿಸಿದ್ದರು. ನಗರಸಭೆ ಕಂದಾಯ ಇಲಾಖೆ ಸಿಬ್ಬಂದಿ ₹ 3.50 ಲಕ್ಷದಿಂದ ಹರಾಜು ಕೂಗಲು ಆರಂಭಿ ಸಿದರು. ಬಿಡ್‌ದಾರರ ನಡುವೆ ಪೈಪೋಟಿ  ಕಂಡುಬಂತು. ಶ್ರೀನಿವಾಸ್ ಅವರು ₹ 6.6 ಲಕ್ಷಕ್ಕೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಯಾರೊಬ್ಬರೂ ಕೂಗಲಿಲ್ಲ. ಹೀಗಾಗಿ ಗುತ್ತಿಗೆ ಅಂತಿಮವಾಗಿ ಅವರ ಪಾಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಉಮಾಕಾಂತ್, ‘ನಿಲ್ದಾಣ ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಶೌಚಾಲಯ ಹರಾಜು ಹಾಕದ ಕಾರಣ ಆದಾಯ ನಷ್ಟವಾಗುತ್ತಿತ್ತು. ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅವರ ಆದೇಶದ ಮೆರೆಗೆ ಹರಾಜು ನಡೆಸಿದ್ದೇವೆ. ಹರಾಜಿನಲ್ಲಿ ತಲಾ ₹50 ಸಾವಿರ ಮುಂಗಡ ಠೇವಣಿ ಪಾವತಿಸಿ 13 ಬಿಡ್‌ದಾರರು ಭಾಗವಹಿಸಿದ್ದರು’ ಎಂದು ಹೇಳಿದರು.

‘ಅಂತಿಮವಾಗಿ ಕೂಗಿದ ಬಿಡ್‌ದಾರರಿಗೆ ವಾರದೊಳಗೆ ಹರಾಜು ಠೇವಣಿಯ ಪೂರ್ಣ ಮೊತ್ತವನ್ನು ಪಾವತಿಸುವಂತೆ ಹೇಳಲಾಗಿದೆ. ಶೌಚಾಲಯದ ಶುಚಿತ್ವ ಕಾಪಾಡಿಕೊಳ್ಳಬೇಕು. ಯಾರಿಗೂ ಉಪ ಗುತ್ತಿಗೆ ನೀಡಬಾರದು. ನೀರಿನ ತೆರಿಗೆ ಪಾವತಿಸಬೇಕು. ಶೌಚಾಲಯ ಕಟ್ಟಡಕ್ಕೆ ಹಾನಿ ಮಾಡ ಬಾರದು ಎಂಬ ಷರತ್ತುಗಳನ್ನು ಗುತ್ತಿಗೆ ದಾರನಿಗೆ ವಿಧಿಸಲಾಗಿದೆ’ ಎಂದು ತಿಳಿಸಿದರು.

(ಚಿಕ್ಕಬಳ್ಳಾಪುರ ನಗರಸಭೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಸೋಮವಾರ ನಡೆದ ಶೌಚಾಲಯದ ಹರಾಜು ಪ್ರಕ್ರಿಯೆ ದೃಶ್ಯ)

‘ಶೌಚಾಲಯದಲ್ಲಿ ಸಾರ್ವಜನಿಕರಿಗೆ ಮೂತ್ರ ವಿಸರ್ಜನೆಗೆ ಉಚಿತ ಅವಕಾಶವಿರುತ್ತದೆ. ಮಲ ವಿಸರ್ಜನೆ ಮಾತ್ರ ₹ 3 ಶುಲ್ಕ ನಿಗದಿಪಡಿಸಲಾಗಿದೆ. ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜಿಸಿ ಗಲೀಜು ಮಾಡುತ್ತಿದ್ದ ಕಾರಣ ನಿಲ್ದಾಣ ಹಿಂದುಗಡೆ ಭಾಗ ಪ್ರವೇಶಿಸಲಾಗದಂತೆ ತಂತಿ ಬೇಲಿ ಹಾಕಲಾಗಿದೆ. ಅದನ್ನು ಮಳಿಗೆ ಹರಾಜಿನ ಬಳಿಕ ತೆರವುಗೊಳಿಸಲಾಗುತ್ತದೆ’ ಎಂದರು.

‘ಖಾಸಗಿ ಬಸ್‌ ನಿಲ್ದಾಣದಲ್ಲಿ 45 ಮಳಿಗೆಗಳಿವೆ. ಆ ಪೈಕಿ 39 ಮಳಿಗೆಗಳನ್ನು ಈ ಹಿಂದೆ ಹಳೆ ಬಸ್‌ ನಿಲ್ದಾಣದಲ್ಲಿ ಮಳಿಗೆ ಬಾಡಿಗೆ ಪಡೆದಿದ್ದ ವರ್ತಕರಿಗೇ ನೀಡಲು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅವುಗಳನ್ನು ಬಿಟ್ಟು ಉಳಿಯುವ 6 ಮಳಿಗೆಗಳನ್ನು ಮಾತ್ರ ವಾರದೊಳಗೆ ಬಹಿರಂಗ ಹರಾಜು ಹಾಕಲಾಗುತ್ತದೆ’ ಎಂದು ಹೇಳಿದರು.

***

ನಗರಸಭೆಗೆ ಶೌಚಾಲಯದಿಂದ ವಾರ್ಷಿಕ ₹ 6.6 ಲಕ್ಷ ಆದಾಯ ಬರಲಿದೆ. ಇನ್ನು ಮಳಿಗೆಗಳ ಹರಾಜಿನಿಂದ ₹ 1 ಕೋಟಿ ವರೆಗೆ ಆದಾಯ ನೀರಿಕ್ಷೆಯಲ್ಲಿದ್ದೇವೆ.
-ಉಮಾಕಾಂತ್, ನಗರಸಭೆ ಆಯುಕ್ತ

**

ವಿರೋಧಿಸಿದವರೇ ಭಾಗವಹಿಸಿದರು! 
‘ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯವನ್ನು ಕಾನೂನು ಬಾಹಿರವಾಗಿ ಬಹಿರಂಗ ಹರಾಜು ಮಾಡಲಾಗುತ್ತಿದೆ. ಅದನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿ ನಗರಸಭೆಯ 31 ಸದಸ್ಯರು ಪೌರಾಡಳಿತ ಸಚಿವರಿಂದ ಹಿಡಿದು ಜಿಲ್ಲಾಧಿಕಾರಿ ವರೆಗೆ ಮಾರ್ಚ್‌ 10 ರಂದು ದೂರು ಸಲ್ಲಿಸಿದ್ದರು. ಆ ದೂರಿನ ಪತ್ರಕ್ಕೆ ಸಹಿ ಮಾಡಿದ್ದ 4ನೇ ವಾರ್ಡ್ ಸದಸ್ಯ ಎ.ಗಜೇಂದ್ರ ಅವರು ಕೂಡ ಶೌಚಾಲಯದ ಹರಾಜು ಪ್ರಕ್ರಿಯೆಲ್ಲಿ ಬಿಡ್‌ದಾರನಾಗಿ ಭಾಗವಹಿಸಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT